![]() |
| ಮುದ್ಗಲ್ ಕೋಟೆ ವಿಹಂಗಮ ನೋಟ |
ದೋಆಬ್ ಪ್ರದೇಶದ ಮಹತ್ವ
ಮಧ್ಯಕಾಲೀನ ಇತಿಹಾಸದಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ನಡುವಿನ ಫಲವತ್ತಾದ ಭೂಭಾಗವನ್ನು “ದೋಆಬ್” ಎಂದು ಕರೆಯಲಾಗುತ್ತಿತ್ತು. ‘ದೋಆಬ್’ ಅಂದರೆ ಎರಡು ನದಿಗಳ ಮಧ್ಯದ ಪ್ರದೇಶ. ಈ ಸಂಪನ್ನ ಪ್ರದೇಶದ ಪ್ರಮುಖ ಪಟ್ಟಣವಾಗಿದ್ದ ಮುದಗಲ್ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿತ್ತು.
ಇದನ್ನೂ ಓದಿ: ಮೊಹರಂ ನಮ್ಮ ನಾಡಿನ ಸಾಮರಸ್ಯದ ಜೀವಂತ ಸಂಸ್ಕೃತಿ
![]() |
| ಮುದ್ಗಲ್ ಕೋಟೆಯ ಮೇಲಿನ ಚಾರ್ ಮಿನಾರ್ ಶೈಲಿಯ ರಚನೆ |
ಸ್ಥಾಪನೆ ಮತ್ತು ಪ್ರಾರಂಭಿಕ ಇತಿಹಾಸ
ಈ ಕೋಟೆಗೆ ಸಾವಿರ ವರ್ಷಗಳ ಇತಿಹಾಸವಿದೆ. ದೇವಗಿರಿ ಯಾದವರ ಕಾಲದಲ್ಲಿ, ಕ್ರಿ.ಶ. 1053ರಲ್ಲಿ ಈ ಭಾಗದ ಜಮೀನ್ದಾರ ಮುದ್ದಪ್ಪ ರೆಡ್ಡಿ ಕೋಟೆಯನ್ನು ಕಟ್ಟಿಸಿದನೆಂದು ತಿಳಿದುಬರುತ್ತದೆ. ನಂತರ ಇದು ಚಾಲುಕ್ಯರು ಹಾಗೂ ಹೋಯ್ಸಳರ ಅಧೀನಕ್ಕೆ ಸೇರಿತು. 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಕೋಟೆಯನ್ನು ವಶಪಡಿಸಿಕೊಂಡರು. ಬಳಿಕ ಅದು ವಿಜಯನಗರ ಸಾಮ್ರಾಜ್ಯದ ಕೈಗೆ ಹೋಯಿತು.
![]() |
| ಮುದ್ಗಲ್ ಕೋಟೆಯ ಮೇಲೆ ಇರುವ ತೋಪು |
ಆದಿಲ್ ಶಾಹಿ ಕಾಲ ಮತ್ತು ತಾಳಿಕೋಟೆ ಯುದ್ಧ
ಬಹಮನಿ ಸಾಮ್ರಾಜ್ಯ ಐದು ಭಾಗಗಳಾಗಿ ವಿಭಜನೆಯಾದ ನಂತರ ಮುದಗಲ್ ಕೋಟೆ ವಿಜಯನಗರ ಮತ್ತು ಬಿಜಾಪುರ ಆದಿಲ್ ಶಾಹಿಗಳ ನಡುವಿನ ಸಂಘರ್ಷದ ಕೇಂದ್ರವಾಯಿತು. 1565ರ ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸೋತು, ಕೋಟೆ ಆದಿಲ್ ಶಾಹಿಗಳ ವಶಕ್ಕೆ ಸೇರಿತು. ಅವರು ಇದನ್ನು 'ಕಿಲ್ಲಾ' ಎಂದು ಕರೆಯುತ್ತಿದ್ದರು.
ಕೋಟೆಯ ರಚನೆ
ಮುದಗಲ್ ಕೋಟೆ ಎರಡು ಸುತ್ತಿನ ಕೋಟೆಯಾಗಿದ್ದು, ಆಯತಾಕಾರದ ವಿನ್ಯಾಸವನ್ನು ಹೊಂದಿರುವ ಈ ಕೋಟೆಯನ್ನು ಬಯಲುಭೂಮಿ ಹಾಗೂ ಬೆಟ್ಟದ ಮೇಲೆಯೇ ಚತುರತೆಯಿಂದ ನಿರ್ಮಿಸಲಾಗಿದೆ. ಸುಮಾರು 1919 ಅಡಿ ಉದ್ದವಿರುವ ಈ ಕೋಟೆಗೆ 24 ಅಡಿ ಎತ್ತರದ ಬಲಿಷ್ಠ ಗೋಡೆ ಇದ್ದು, 40 ಅಡಿ ಎತ್ತರ ಮತ್ತು 160 ಅಡಿ ಅಗಲದ ಒಟ್ಟು 16 ಭವ್ಯ ಬುರುಜುಗಳು ಅದರ ರಕ್ಷಣೆಗೆ ನಿಂತಿವೆ.
ಹೊರಕೋಟೆಯನ್ನು ದಪ್ಪ ಕಲ್ಲುಗಳಿಂದ ನಿರ್ಮಿಸಿದ್ದರೆ, ಒಳಕೋಟೆಯನ್ನು ಸಣ್ಣ ಕಲ್ಲುಗಳಿಂದ ಕಟ್ಟಲಾಗಿದ್ದು, ಎರಡರ ಮಧ್ಯೆ ಸ್ವಲ್ಪ ಅಂತರವನ್ನು ಬಿಡಲಾಗಿದೆ. ಕೋಟೆಯ ಮುಂಭಾಗದಲ್ಲಿ ಸುಮಾರು 300 ಅಡಿ ಅಗಲ ಮತ್ತು 10 ಅಡಿ ಆಳದ ಕಂದಕವಿದ್ದು, ವೈರಿಗಳು ಒಳನುಗ್ಗದಂತೆ ನೀರಿನಲ್ಲಿ ಮಸಳೆಗಳನ್ನು ಬಿಡುತ್ತಿದ್ದರು ಎನ್ನಲಾಗುತ್ತದೆ.
ಇದನ್ನೂ ಓದಿ: ಬಿಜಾಪುರ ಆದಿಲ್ ಶಾಹಿ ಕಾಲದ ಭವ್ಯ ಕೋಟೆಯ ಇತಿಹಾಸ
![]() |
| ಮುಳ್ಳಿನ ಬಾಗಿಲು (ಕಾಟಿ ದರ್ವಾಜಾ) |
ಪ್ರವೇಶ ದ್ವಾರಗಳು
ಕೋಟೆಗೆ ಎರಡು ಭವ್ಯ ಪ್ರವೇಶ ದ್ವಾರಗಳಿವೆ:1. ಕಾಟೆ ದರ್ವಾಜಾ (ಮುಳ್ಳುಗಸಿ)
ಪೂರ್ವ ದಿಕ್ಕಿನ ಈ ದ್ವಾರ ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿದೆ. ದೊಡ್ಡ ಮರದ ಕದಗಳ ಮೇಲೆ ಮುಳ್ಳಿನ ಆಕಾರದ ಕಬ್ಬಿಣದ ಮೊಳೆಗಳನ್ನು ಅಳವಡಿಸಲಾಗಿದೆ. ಆನೆಗಳು ಗುದ್ದಿದರೂ ಮುರಿಯದಷ್ಟು ಗಟ್ಟಿಯಾಗಿವೆ.2. ಫತೇ ದರ್ವಾಜಾ (ವಿಜಯದ ಹೆಬ್ಬಾಗಿಲು)
ಉತ್ತರ ದಿಕ್ಕಿನ ಈ ದ್ವಾರ 1565ರ ತಾಳಿಕೋಟೆ ಯುದ್ಧದ ನಂತರ ಆದಿಲ್ ಶಾಹಿಗಳು ಪ್ರವೇಶಿಸಿದ ಕಾರಣ “ಫತೇ” ಎಂಬ ಹೆಸರು ಪಡೆದಿತು. ಆದಿಲ್ ಶಾಹಿ ಅಧಿಕಾರಿ ಮಲಿಕ್ ಮುರಾದ್ ಖಾನ್ ಇದನ್ನು ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ. ಈ ದ್ವಾರ ನಾಲ್ಕು ಬಾಗಿಲುಗಳನ್ನು ಒಳಗೊಂಡಿದೆ.![]() |
| ಮುದಗಲ್ ಕೋಟೆಯ ಕಾವಲು ಗೋಪುರ |
ಮಲಿಕ್ ಮುರಾದ್ ಖಾನ್ ಮತ್ತು ಕನ್ನಡ ಶಾಸನಗಳು
ಮುದಗಲ್ ಕೋಟೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಸನಗಳು ಮಲಿಕ್ ಮುರಾದ್ ಖಾನ್‌ಗೆ ಸಂಬಂಧಿಸಿದವು. ವಿಶೇಷವೆಂದರೆ ಅವನ ಬಿರುದುಗಳು ಕನ್ನಡದಲ್ಲೇ ಕೆತ್ತಲ್ಪಟ್ಟಿವೆ.ಅವನ ಕೆಲವು ಬಿರುದುಗಳು: ಗಡಿನಾಡ ಕೆಂಪು ಹೆಬ್ಬುಲಿ, ಅರಿಗಳ ಹೃದಯಶೂಲ, ಅರಿರಾಯ ಮಾನಮರ್ದನ, ಏಕಾಂಗಿವೀರ, ಬತ್ತೀಸಾಯುಧ ಶೂರ, ರಣರಂಗಧೀರ ಇತ್ಯಾದಿ. ಇವು ಅವನ ಶೌರ್ಯ ಮತ್ತು ಅಧಿಕಾರವನ್ನು ತೋರಿಸುತ್ತವೆ.
![]() |
| ಮುದ್ಗಲ್ ಕೋಟೆಯಲ್ಲಿ ಕಂಡು ಬಂದ ಕನ್ನಡ ಶಾಸನ |
ಶಿಲ್ಪಕಲೆಯ ವೈಭವ: ಒಳಕೋಟೆಯಲ್ಲಿ ದೇವಸ್ಥಾನ, ಮಸೀದಿ, ದರ್ಗಾ, ಮೊಗಸಾಲೆ ಹಾಗೂ ಉಬ್ಬು ಶಿಲ್ಪಗಳು ಕಂಡುಬರುತ್ತವೆ.
ಅಗಸಿ ಮಂಟಪದ 12 ಕಂಬಗಳಲ್ಲಿ ಅತ್ಯಂತ ನಾಜೂಕಾದ ಉಬ್ಬು ಕೆತ್ತನೆಗಳಿವೆ. ಗಿಳಿ, ಸಿಂಹ, ಜಿಂಕೆ, ನವಿಲು, ಆನೆ, ಕುದುರೆ, ಹಾವು, ದ್ವಾರಪಾಲಕರು, ಗಣೇಶ, ಗೋವರ್ಧನಧಾರಿ ಕೃಷ್ಣ, ವಿಷ್ಣು ಮತ್ತು ಶಿಲಾಬಾಲಕಿಯರ ಶಿಲ್ಪಗಳು ಕಾಣುತ್ತವೆ. ಇಲ್ಲಿನ ಶಿಲ್ಪಗಳು ಜನರ ಜೀವನಶೈಲಿ, ಸಂಪ್ರದಾಯ, ಉಡುಗೆ-ತೊಡುಗೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ.
ಶಾಸನಗಳ ವೈಶಿಷ್ಟ್ಯ: ಕೋಟೆಯ ಗೋಡೆಗಳ ಮೇಲೆ ಕನ್ನಡ, ಸಂಸ್ಕೃತ, ತೆಲುಗು, ಪರ್ಷಿಯನ್, ಅರೇಬಿಕ್ ಹಾಗೂ ಗುಜರಾತಿ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಶಾಸನಗಳು ಕಂಡುಬಂದಿವೆ. ಇದು ಕೋಟೆಯ ಬಹುಸಾಂಸ್ಕೃತಿಕ ಇತಿಹಾಸಕ್ಕೆ ಸಾಕ್ಷಿ.
ಇದನ್ನೂ ಓದಿ: ಬೀದರ್ ಕೋಟೆ: ಯುದ್ಧತಂತ್ರ, ವಾಸ್ತುಶಿಲ್ಪ ಮತ್ತು ಅಜೇಯತೆ
![]() |
| ಮುದ್ಗಲ್ ಕೋಟೆ ಹೊರಗೋಡೆ |
ದಿಡ್ಡಿ ಬಾಗಿಲುಗಳು
ಮುಖ್ಯ ದ್ವಾರಗಳು ಮುಚ್ಚಿದ ಸಂದರ್ಭಗಳಲ್ಲಿ ಬಳಸುವ ಉದ್ದೇಶದಿಂದ ಕೋಟೆಯಲ್ಲಿ ಗುಪ್ತ ದ್ವಾರಗಳನ್ನು (ದಿಡ್ಡಿ ಬಾಗಿಲುಗಳು) ನಿರ್ಮಿಸಲಾಗಿದ್ದು, ಅವುಗಳಲ್ಲಿ ದಕ್ಷಿಣ ದಿಕ್ಕಿನಲ್ಲಿ 4, ಪಶ್ಚಿಮ ದಿಕ್ಕಿನಲ್ಲಿ 5, ಉತ್ತರ ದಿಕ್ಕಿನಲ್ಲಿ 2 ಮತ್ತು ಪೂರ್ವ ದಿಕ್ಕಿನಲ್ಲಿ 3 ದ್ವಾರಗಳಿದ್ದು, ಈ ಎಲ್ಲಾ ದಿಡ್ಡಿ ಬಾಗಿಲುಗಳು ಅರ್ಧವೃತ್ತಾಕಾರದ ಗೋಡೆಗಳ ಹಿಂದೆ ಚತುರತೆಯಿಂದ ಮರೆಮಾಡಲ್ಪಟ್ಟಿದ್ದವು.![]() |
| ಮುದ್ಗಲ್ ಕೋಟೆ ಗೋಡೆ ಮೇಲೆ ಕಂಡು ಆನೆ ಮತ್ತು ಹುಲಿ ಕಾದಾಟದ ಚಿತ್ರ |







