ಜಾತ್ರೆಗಳ ತೊಟ್ಟಿಲು ವಿಜಯಪುರ ಸಿದ್ಧೇಶ್ವರ ಜಾತ್ರೆ

ವಿಜಯಪುರದ ಸಿದ್ದೇಶ್ವರ ದೇವಸ್ಥಾನ
ವಿಜಯಪುರದ ಸಿದ್ದೇಶ್ವರ ದೇವಸ್ಥಾನ
ವಿಜಯಪುರ — ಬಸವಾದಿ ಶರಣ ಪರಂಪರೆಗೆ ಜೀವ ತುಂಬಿದ ಪುಣ್ಯಭೂಮಿ. ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಇಲ್ಲಿ ನಡೆಯುವ ಸಿದ್ದೇಶ್ವರ ಜಾತ್ರೆ ಉತ್ತರ ಕರ್ನಾಟಕದ ಅತಿ ದೊಡ್ಡ ಧಾರ್ಮಿಕ–ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ನೂರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಜಾತ್ರೆಗೆ “ಜಾತ್ರೆಗಳ ಜಾತ್ರೆ, ಜಾತ್ರೆಗಳ ತೊಟ್ಟಿಲು” ಎಂಬ ಹೆಗ್ಗಳಿಕೆ ದೊರೆತಿದೆ.

ಮಕರ ಸಂಕ್ರಾಂತಿ ಹತ್ತಿರವಾಗುತ್ತಿದ್ದಂತೆ ವಿಜಯಪುರ ನಗರವೇ ಒಂದು ವಿಭಿನ್ನ ಸಂಭ್ರಮಕ್ಕೆ ತಯಾರಾಗುತ್ತದೆ. ಮುಸ್ಸಂಜೆಯ ಹೊತ್ತಿನಲ್ಲಿ ಸಿದ್ದೇಶ್ವರ ಮಂದಿರ ದೀಪಾಲಂಕಾರದಿಂದ ಹೊಳೆಯುವ ಕ್ಷಣದಿಂದಲೇ ಜಾತ್ರೆಗೆ ಅಧಿಕೃತ ಚಾಲನೆ ಸಿಗುತ್ತದೆ. ಆ ದಿನದಿಂದ ನಗರ ನಿದ್ರೆ ಮರೆತು ಉತ್ಸವದಲ್ಲಿ ತೊಡಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಿಂದಲೂ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಾರೆ. ಸಿದ್ದರಾಮನ ದರ್ಶನ, ಸಂಕಷ್ಟ ನಿವಾರಣೆ ಮತ್ತು ಜಾತ್ರೆಯ ವೈಭವ ನೋಡುವ ಆಸೆ ಪ್ರತಿಯೊಬ್ಬರಲ್ಲೂ ಜೀವಂತವಾಗಿರುತ್ತದೆ.

ಸಿದ್ದೇಶ್ವರ ಮಂದಿರದ ಸುತ್ತಮುತ್ತ ನೂರಾರು ಅಂಗಡಿಗಳ ಸಾಲು, ಸಿಹಿತಿನಿಸುಗಳ ಪರಿಮಳ, ಮಕ್ಕಳ ಆಟಿಕೆಗಳು, ಮನೋರಂಜನಾ ಆಟಗಳು, ಸಂಗೀತ ಹಾಗೂ ನಾಟಕ ಪ್ರದರ್ಶನಗಳು — ಇವೆಲ್ಲ ಜಾತ್ರೆಯ ಸಂಭ್ರಮವನ್ನು ಇನ್ನಷ್ಟು ರಂಗೇರಿಸುತ್ತವೆ.

ಜಾತ್ರೆಯ ವ್ಯವಸ್ಥೆ ಮತ್ತು ದನಗಳ ಜಾತ್ರೆ

1918ರಿಂದ ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿಯ ಮೇಲ್ವಿಚಾರಣೆಯಲ್ಲಿ ಜಾತ್ರೆ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತಿದೆ. ಶಿವಲಿಂಗಗಳಿಗೆ ಮಹಾಭಿಷೇಕ, ನಂದಿಧ್ವಜ ಮೆರವಣಿಗೆ, ಮದ್ದು ಸುಡುವ ಕಲಾತ್ಮಕ ಪ್ರದರ್ಶನಗಳು ಮತ್ತು ಜಾನಪದ ಕಲಾವಿದರ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸುತ್ತವೆ.

ನಗರದ ಹೊರವಲಯದ ತೊರವಿ ಬಳಿ ಸುಮಾರು 25 ಎಕರೆ ವಿಸ್ತೀರ್ಣದಲ್ಲಿ ನಡೆಯುವ ದನಗಳ ಜಾತ್ರೆ ಈ ಭಾಗದ ರೈತರ ಆರ್ಥಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ತೊರವಿ ಮೈದಾನದಲ್ಲಿ ಸದೃಢ ಮೈಕಟ್ಟುಳ್ಳ ದೇಸಿ ರಾಸುಗಳು ಕಣ್ಣಿಗೆ ಹಬ್ಬವಾಗುತ್ತವೆ. 30 ಸಾವಿರ ರೂಪಾಯಿಯಿಂದ ಆರಂಭವಾಗುವ ದನಗಳ ಬೆಲೆ 5 ರಿಂದ 10 ಲಕ್ಷ ರೂಪಾಯಿವರೆಗೂ ಹೋಗುತ್ತದೆ. ದಿನವೂ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಯುತ್ತದೆ ಎನ್ನುವುದು ಈ ಜಾತ್ರೆಯ ಆರ್ಥಿಕ ಮಹತ್ವವನ್ನು ಸೂಚಿಸುತ್ತದೆ.

ಇದನ್ನೂ ಓದಿ: ವಿಜಯಪುರ ಶ್ರೀ ಸಿದ್ದೇಶ್ವರ ಜಾತ್ರೆ; ನಂದಿಕೋಲು ಮೆರವಣಿಗೆ ಮಹತ್ವ

ವಿಜಯಪುರ ಸಿದ್ದೇಶ್ವರ ದನದ ಜಾತ್ರೆ
ವಿಜಯಪುರದ ತೊರವಿ ಮೈದಾನದಲ್ಲಿ ನಡೆಯುವ ದನದ ಜಾತ್ರೆಯ ದೃಶ್ಯ

ಸೊನ್ನಲಾಪುರದ ಸಿದ್ಧರಾಮರು

ಈ ಮಹೋತ್ಸವದ ಕೇಂದ್ರಬಿಂದು ಸಿದ್ಧರಾಮ. 12ನೇ ಶತಮಾನದ ಸಮಾಜ ಸುಧಾರಕರಾದ ಸಿದ್ಧರಾಮರು ಬಸವಣ್ಣನವರ ಸಮಕಾಲೀನರು. ವಚನ ಪರಂಪರೆಯಲ್ಲಿ ಶೂನ್ಯ ಸಿಂಹಾಸನದ ಅನುಭಾವಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಅವರು ಜನಸಾಮಾನ್ಯರ ನೋವು–ನಲಿವುಗಳಿಗೆ ಸ್ಪಂದಿಸಿದ ಮಹಾನ್ ಶರಣರು.

ಅಲ್ಲಮಪ್ರಭುದೇವರಿಂದ ಪರೀಕ್ಷಿತರಾಗಿ, ಚೆನ್ನಬಸವಣ್ಣನವರಿಂದ ದೀಕ್ಷೆ ಪಡೆದ ಸಿದ್ಧರಾಮರು ಮಹಾ ಶಿವಯೋಗಿಯಾಗಿ ವಚನ ಚಳುವಳಿಗೆ ಶಕ್ತಿ ತುಂಬಿದರು.

ಶರಣ ಸಿದ್ದೇಶ್ವರ
ಶರಣ ಸಿದ್ದೇಶ್ವರರು ಭಕ್ತರಿಗೆ ಸಂದೇಶ ನೀಡುತ್ತಿರುವುದು

ಸಿದ್ಧರಾಮರು ಸಿದ್ದೇಶ್ವರರಾದ ಕಥೆ

ಸುಮಾರು 850 ವರ್ಷಗಳ ಹಿಂದೆ ಸೊನ್ನಲಾಪುರ (ಇಂದಿನ ಸೊಲ್ಲಾಪುರ)ದಲ್ಲಿ ಸುಗ್ಗಲಾದೇವಿ ಮತ್ತು ಮುದ್ದಗೊಂಡ ದಂಪತಿಗಳಿಗೆ ಕಾರಣಿಕ ಶಿಶುವಾಗಿ ಸಿದ್ಧರಾಮರು ಜನಿಸಿದರು. ಬಾಲ್ಯದಿಂದಲೇ ಮೌನಸ್ವಭಾವ ಹೊಂದಿದ್ದ ಅವರು ಶಿವಲಿಂಗ ಪೂಜೆಯಲ್ಲಿ ನಿರತರಾಗಿದ್ದರು. ದನ ಕಾಯುವ ಮೂಲಕ ಜೀವನ ಸಾಗಿಸುತ್ತಿದ್ದರು.

ಒಮ್ಮೆ ಅಡವಿಯಲ್ಲಿ ದನ ಕಾಯುತ್ತಿದ್ದಾಗ, ಜಂಗಮ ರೂಪದಲ್ಲಿ ಶ್ರೀಶೈಲದ ಮಲ್ಲಯ್ಯ ಸಿದ್ಧರಾಮರ ಮುಂದೆ ಪ್ರತ್ಯಕ್ಷನಾದನು. ಸಿದ್ಧರಾಮರು ಆ ಜಂಗಮನಿಗೆ ತಮ್ಮ ಬಳಿ ಇದ್ದ ಹುರಿದ ಸೀತನಿ ಉಪ್ಪಿಟ್ಟನ್ನು ನೀಡಿದರು. ನಂತರ ಮೊಸರನ್ನ ತರಲು ಮನೆಗೆ ಹೋದಾಗ ಜಂಗಮ ಅಲ್ಲಿ ಕಾಣೆಯಾಗಿದ್ದ. ಬಳಿಕ “ಮಲ್ಲಯ್ಯ, ಮಲ್ಲಯ್ಯ” ಎಂದು ಕೂಗುತ್ತ ಶ್ರೀಶೈಲಕ್ಕೆ ಹೊರಟಿದ್ದ ಜಂಗಮರ ಗುಂಪು ಸಿದ್ಧರಾಮರನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು.

ಶ್ರೀಶೈಲದಲ್ಲಿ ಶಿವಲಿಂಗವನ್ನು ನೋಡಿದರೂ ಅವರಿಗೆ ಸಮಾಧಾನ ಸಿಗಲಿಲ್ಲ. ಕೊನೆಗೆ ದುಃಖದಿಂದ ಪ್ರಪಾತದ ಬಳಿ ನಿಂತಾಗ ಜಂಗಮ ತನ್ನ ನಿಜಸ್ವರೂಪವನ್ನು ತೋರಿಸಿ, “ನಿನ್ನಿಂದ ಲೋಕಕಲ್ಯಾಣವಾಗಬೇಕು. ನೀನು ಸೊನ್ನಲಾಪುರವನ್ನು ಅಭಿನವ ಶ್ರೀಶೈಲವನ್ನಾಗಿ ಮಾಡು” ಎಂದು ಆಶೀರ್ವದಿಸಿದನು. ಈ ಘಟನೆ ಸಿದ್ಧರಾಮರ ಬದುಕಿನ ದಿಕ್ಕನ್ನೇ ಬದಲಿಸಿತು.
ಇದನ್ನೂ ಓದಿ: ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ

ಸೇವೆಯಿಂದ ಸಾಧನೆಗೆ

ಶಿವಸಾಕ್ಷಾತ್ಕಾರದ ನಂತರ ಸಿದ್ಧರಾಮರು ಸೊನ್ನಲಾಪುರಕ್ಕೆ ಮರಳಿ ಜನಸೇವೆಗೆ ತೊಡಗಿದರು. ಬರಗಾಲಪೀಡಿತ ಪ್ರದೇಶಗಳಲ್ಲಿ ಕೆರೆ–ಕಟ್ಟೆಗಳನ್ನು ನಿರ್ಮಿಸಿ ನೀರಾವರಿ ವ್ಯವಸ್ಥೆ ಮಾಡಿದರು. ರೈತರ ಬಂಧುವಾಗಿ ನಿಂತರು. “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸೇವೆಯನ್ನೇ ಸಾಧನೆ ಎಂದು ತೋರಿಸಿದರು.

ಆ ಕಾಲದ ರಾಜ ನನ್ನಪ್ಪನ ರಾಣಿ ಚಮಲಾದೇವಿಗೆ ಕನಸಿನಲ್ಲಿ ಶಿವನ ದರ್ಶನವಾಗಿ ಸಿದ್ಧರಾಮರಿಗೆ ಭೂದಾನ ಮಾಡಬೇಕು ಎಂಬ ದಿವ್ಯಾಜ್ಞೆ ದೊರೆಯಿತು. ರಾಜ–ರಾಣಿ ಭೂಮಿಯನ್ನು ದಾನವಾಗಿ ನೀಡಿದ ಬಳಿಕ, ಸಿದ್ಧರಾಮರು ಅಲ್ಲಿಗೆ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಪುಣ್ಯಕ್ಷೇತ್ರವನ್ನಾಗಿ ರೂಪಿಸಿದರು.

ಶರಣ ಸಿದ್ದೇಶ್ವರರು
ಶರಣ ಸಿದ್ದೇಶ್ವರರನ್ನು ಭೇಟಿ ಆದ ಅಲ್ಲಮಪ್ರಭುಗಳು

ವಚನ ಪರಂಪರೆ ಮತ್ತು ಲಿಂಗೈಕ್ಯ

ಸಿದ್ಧರಾಮರ ಕೀರ್ತಿಗೆ ಆಕರ್ಷಿತರಾಗಿ ಅಲ್ಲಮಪ್ರಭುದೇವರು ಸೊನ್ನಲಾಪುರಕ್ಕೆ ಆಗಮಿಸಿ, ದೇಹದೊಳಗೇ ದೇವಾಲಯವಿದೆ ಎಂಬ ಜ್ಞಾನೋದಯ ಮಾಡಿದರು. ನಂತರ ಅವರನ್ನು ಕಲ್ಯಾಣಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸಿದ್ಧರಾಮರ ವಿಚಾರಗಳು ವಚನಗಳಾಗಿ ರೂಪುಗೊಂಡವು. ಚೆನ್ನಬಸವಣ್ಣನವರನ್ನು ಗುರುವಾಗಿ ಸ್ವೀಕರಿಸಿದ ಸಿದ್ಧರಾಮರು ಕಪಿಲ ಸಿದ್ಧಮಲ್ಲಿಕಾರ್ಜುನ ಅಂಕಿತದಲ್ಲಿ ವಚನಗಳನ್ನು ರಚಿಸಿದರು.

ಕಲ್ಯಾಣದಿಂದ ಮರಳಿ ಸೊಲ್ಲಾಪುರದಲ್ಲಿ ನೆಲೆಸಿದ್ದ ಸಿದ್ಧರಾಮರು ಅಲ್ಲಿಯೇ ಲಿಂಗೈಕ್ಯರಾದರು. ಕಾಲಕ್ರಮೇಣ ಅವರು ಸಿದ್ದೇಶ್ವರ ಎಂಬ ದೈವಸ್ವರೂಪವಾಗಿ ಭಕ್ತರ ಹೃದಯದಲ್ಲಿ ನೆಲೆಸಿದರು.
ಇದನ್ನೂ ಓದಿ: ವಿಶ್ವಗುರು ಬಸವಣ್ಣನ ಜನ್ಮಸ್ಥಳ ಬಾಗೇವಾಡಿ ಹೇಗಿದೆ ಗೊತ್ತಾ?

ವಿಜಯಪುರದ ಮನೆಯ ಹಬ್ಬ

ಇಂದು ಸಿದ್ದೇಶ್ವರ ಜಾತ್ರೆ ವಿಜಯಪುರ ಜಿಲ್ಲೆಯ ಪ್ರತಿಯೊಬ್ಬರ ಮನೆಯ ಹಬ್ಬವಾಗಿದೆ. “ಎಂಥ ಕಷ್ಟ ಬಂದರೂ ಸಿದ್ದರಾಮನೆಂದು ನೆನೆದರೆ ಬೆಟ್ಟದಂತ ಕಷ್ಟ ಕರಗುತ್ತದೆ” ಎಂಬ ನಂಬಿಕೆ ಜನಮನದಲ್ಲಿ ಆಳವಾಗಿ ಬೇರುಬಿಟ್ಟಿದೆ. ಕಾಯಕವೇ ಕೈಲಾಸ, ಸೇವೆಯೇ ಶಿವಪೂಜೆ ಎಂಬ ಸಿದ್ಧರಾಮರ ತತ್ವ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.

ಹೀಗಾಗಿ ಸಿದ್ದೇಶ್ವರ ಜಾತ್ರೆ ಕೇವಲ ದೇವಾಲಯದ ಉತ್ಸವವಲ್ಲ — ಅದು ಭಕ್ತಿ, ಸೇವೆ ಮತ್ತು ಸಮಾನತೆಯ ಸಂದೇಶ ಸಾರುವ ಮಹೋತ್ಸವ.

ನವೀನ ಹಳೆಯದು