| ರೈಲ್ವೆ ಮ್ಯೂಸಿಯಂನಲ್ಲಿರುವ ಮೀಟರ್ ಗೇಜ್ ಎಂಜಿನ್ |
ಭಾರತದಲ್ಲಿ ರೈಲ್ವೆಯ ಪಯಣ ಆರಂಭವಾದದ್ದು 1853ರ ಏಪ್ರಿಲ್ 16ರಂದು. ಮುಂಬೈ ಮತ್ತು ಥಾಣೆ ನಡುವೆ ಮೊದಲ ರೈಲು ಸಂಚಾರ ಆರಂಭವಾದಾಗಿನಿಂದಲೇ ಭಾರತೀಯ ರೈಲ್ವೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಸುಮಾರು 170 ವರ್ಷಗಳ ಇತಿಹಾಸವಿರುವ ಭಾರತೀಯ ರೈಲ್ವೆ ಇಂದು ಬುಲೆಟ್ ಟ್ರೈನ್, ವೇಗದ ರೈಲುಗಳು ಮತ್ತು ಆಧುನಿಕ ತಂತ್ರಜ್ಞಾನಗಳತ್ತ ಸಾಗುತ್ತಿದೆ. ಈ ದೀರ್ಘ ಇತಿಹಾಸವನ್ನು ಹತ್ತಿರದಿಂದ ತಿಳಿದುಕೊಳ್ಳಬೇಕೆಂದರೆ ನೀವು ಮೈಸೂರಿನಲ್ಲಿರುವ ರೈಲ್ವೆ ವಸ್ತುಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ನೀಡಬೇಕು.
| ಮ್ಯೂಸಿಯಂನಲ್ಲಿರುವ ಹಳೆಯ ರೈಲುಗಳು |
ದೇಶದ ಎರಡನೇ ರೈಲ್ವೆ ಮ್ಯೂಸಿಯಂ
ಮೈಸೂರಿನ ರೈಲ್ವೆ ನಿಲ್ದಾಣದ ಸಮೀಪ, ಕೆಆರ್‌ಎಸ್ ರಸ್ತೆಯಲ್ಲಿರುವ ರೈಲ್ವೆ ಮ್ಯೂಸಿಯಂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಇದು ಭಾರತದ ಎರಡನೇ ರೈಲ್ವೆ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೊದಲನೆಯದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರೈಲ್ವೆ ಮ್ಯೂಸಿಯಂ.
1979ರಲ್ಲಿ ದಕ್ಷಿಣ ರೈಲ್ವೆಯ ವಿಭಾಗೀಯ ಮ್ಯಾನೇಜರ್ ಆಗಿದ್ದ ಪಿ.ಎಂ.ಜೋಸೆಫ್ ಅವರ ಪ್ರಯತ್ನದಿಂದ ಈ ಮ್ಯೂಸಿಯಂ ಸ್ಥಾಪನೆಯಾಯಿತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ವಸ್ತುಸಂಗ್ರಹಾಲಯ ಇಂದು ಹಲವು ಆಕರ್ಷಣೆಗಳನ್ನು ಒಳಗೊಂಡ ದೊಡ್ಡ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ.
ಇದನ್ನೂ ಓದಿ: ಚುಕುಬುಕು ರೈಲಿನ ಇತಿಹಾಸ ಹೇಳುವ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ
| ನೂರು ವರ್ಷಗಳ ಇತಿಹಾಸ ಹೊಂದಿರುವ ಕ್ರೇನ್ |
ಮ್ಯೂಸಿಯಂ ಪ್ರವೇಶದ ವಿಶೇಷತೆ
ಮ್ಯೂಸಿಯಂ ಪ್ರವೇಶಿಸಿದ ಕ್ಷಣದಲ್ಲೇ ನಿಮಗೆ ವಿಭಿನ್ನ ಅನುಭವ ದೊರೆಯುತ್ತದೆ. ರೈಲಿನ ಹಳೆಯ ಭಾಗಗಳನ್ನು ಬಳಸಿಕೊಂಡು ನಿರ್ಮಿಸಿರುವ ಎರಡು ಯಂತ್ರಮಾನವ ಕಲಾಕೃತಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ.
ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಟಿಕೆಟ್ ಕೌಂಟರ್ ಕೂಡ ಹಳೆಯ ರೈಲು ಎಂಜಿನ್ ಡಬ್ಬಿಯ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದು ಮ್ಯೂಸಿಯಂಗೆ ಬಂದ ಪ್ರವಾಸಿಗರಲ್ಲಿ ಕುತೂಹಲ ಮೂಡಿಸುತ್ತದೆ.
![]() |
| ರೈಲು ಉಪಕರಣಗಳನ್ನು ಬಳಸಿ ತಯಾರಿಸಿರುವ ಕಲಾಕೃತಿಗಳು! |
ಹಳೆಯ ರೈಲು ಎಂಜಿನ್‌ಗಳ ಅದ್ಭುತ ಸಂಗ್ರಹ
ಈ ಮ್ಯೂಸಿಯಂನಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಬಳಸಿದ ರೈಲು ಎಂಜಿನ್‌ಗಳನ್ನು ನೋಡಬಹುದು.
ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ YP 2511 ಮೀಟರ್ ಗೇಜ್ ಎಂಜಿನ್ 1963ರಲ್ಲಿ ನಿರ್ಮಾಣಗೊಂಡಿದೆ. ಇದು ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತಿಯಾಯಿತು. ಆ ಕಾಲದಲ್ಲಿ ಈ ಎಂಜಿನ್ ನಿರ್ಮಾಣ ವೆಚ್ಚ ಕೇವಲ ₹57,791 ಎಂಬ ಮಾಹಿತಿ ನೋಡಿ ಪ್ರವಾಸಿಗರು ಆಶ್ಚರ್ಯಪಡುತ್ತಾರೆ.
![]() |
| ಹಳೆಯ ರೈಲೊಂದರ ಬೋಗಿ |
ಇದನ್ನೂ ಓದಿ: ಮೈಸೂರು ಮರಳು ಶಿಲ್ಪ ಮ್ಯೂಸಿಯಂ; ಸೃಜನಶೀಲತೆಯ ಅದ್ಭುತ ಲೋಕ
| ಹಳೆಯ ಕಾಲದ ಗೂಡ್ಸ್ ರೈಲಿನ ಬೋಗಿ |
ಆಸ್ಟಿನ್ ರೈಲು ಕಾರ್- ಮ್ಯೂಸಿಯಂನ ವಿಶೇಷ ಆಕರ್ಷಣೆ
ಮ್ಯೂಸಿಯಂನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಆಸ್ಟಿನ್ ರೈಲು ಕಾರ್ 1920ರಲ್ಲಿ ನಿರ್ಮಿಸಲಾಯಿತು. ಸಾಮಾನ್ಯವಾಗಿ ರಸ್ತೆ ಮೇಲೆ ಓಡಾಡುತ್ತಿದ್ದ ಕಾರನ್ನು ನಂತರ ರೈಲು ಅಧಿಕಾರಿಯೊಬ್ಬರು ಅದನ್ನು ಹಳಿಗಳ ಮೇಲೆ ಓಡಾಡುವಂತೆ ಪರಿವರ್ತಿಸಿದರು.
ಕಾರಿನ ಟೈರ್‌ಗಳನ್ನು ತೆಗೆದು ಅದರ ಬದಲು ರೈಲು ಚಕ್ರಗಳನ್ನು ಅಳವಡಿಸಿ ಅದನ್ನು 'ರೈಲ್ ಕಾರ್' ಆಗಿ ಬಳಸಲಾಗುತ್ತಿತ್ತು. ಇಂತಹ ಅಪರೂಪದ ವಾಹನವನ್ನು ಹತ್ತಿರದಿಂದ ನೋಡುವ ಅವಕಾಶ ಮೈಸೂರಿನ ರೈಲ್ವೆ ಮ್ಯೂಸಿಯಂನಲ್ಲಿ ಸಿಗುತ್ತದೆ.
![]() |
| ಆಸ್ಟಿನ್ ರೈಲು ಕಾರ್ |
ಶತಮಾನ ಹಳೆಯ ಯಂತ್ರೋಪಕರಣಗಳು
ಮ್ಯೂಸಿಯಂನಲ್ಲಿ ಕೇವಲ ರೈಲು ಎಂಜಿನ್‌ಗಳಷ್ಟೇ ಅಲ್ಲ, ಹಳೆಯ ರೈಲ್ವೆ ಉಪಕರಣಗಳ ಸಂಗ್ರಹವೂ ಇದೆ.
ಇಲ್ಲಿರುವ ಕೆಲವು ವಿಶೇಷ ವಸ್ತುಗಳು:
1885ರಲ್ಲಿ ನಿರ್ಮಾಣವಾದ ಕೈಚಾಲಿತ ಕ್ರೇನ್
1934ರಲ್ಲಿ ತಯಾರಾದ ಹಬೆ ನೀರು ಪಂಪ್
ಹಳೆಯ ಮಾದರಿ ರೈಲ್ವೆ ಸಿಗ್ನಲ್‌ಗಳು
ಹಳೆಯ ರೈಲು ಹಳಿಗಳು
ರೈಲು ಸಂಜ್ಞಾ ವ್ಯವಸ್ಥೆಗಳು
ಈ ವಸ್ತುಗಳ ಮುಂದೆ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದ್ದು, ಅವುಗಳ ಇತಿಹಾಸ ಮತ್ತು ಬಳಕೆಯ ಕುರಿತು ವಿವರಿಸಲಾಗಿದೆ.
| 1934ರಲ್ಲಿ ತಯಾರಾದ ಹಬೆ ನೀರು ಪಂಪ್ |
ಮಕ್ಕಳಿಗೆ ಮಿನಿ ರೈಲು ಆಕರ್ಷಣೆ
ಮ್ಯೂಸಿಯಂನಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ಬ್ಯಾಟರಿ ಚಾಲಿತ ಮಿನಿ ರೈಲು ವ್ಯವಸ್ಥೆ ಇದೆ. ಈ ಮಿನಿ ರೈಲಿನಲ್ಲಿ ಕುಳಿತು ಮ್ಯೂಸಿಯಂ ಆವರಣವನ್ನು ಸುತ್ತುವ ಅನುಭವ ಮಕ್ಕಳಿಗೆ ತುಂಬಾ ಖುಷಿ ನೀಡುತ್ತದೆ. ಕುಟುಂಬ ಸಮೇತ ಬಂದ ಪ್ರವಾಸಿಗರಿಗೆ ಇದು ಪ್ರಮುಖ ಮನರಂಜನೆಯಾಗಿದೆ. ಸುತ್ತಲೂ ಹಸಿರು ಗಾರ್ಡನ್‌ಗಳು, ಚಂದದ ಪರಿಸರ- ಈ ರೈಡ್ ಒಂದು ಚಿಕ್ಕ ಪ್ರಯಾಣದಂತೆ ಅನಿಸುತ್ತದೆ.![]() |
| ಮಕ್ಕಳ ಆಟಿಕೆ ರೈಲು |
ಚಾಮುಂಡಿ ಗ್ಯಾಲರಿ- ರೈಲ್ವೆ ಇತಿಹಾಸದ ಕಣಜ
ಮ್ಯೂಸಿಯಂ ಆವರಣದಲ್ಲಿರುವ ಚಾಮುಂಡಿ ಗ್ಯಾಲರಿ ಇತಿಹಾಸಪ್ರಿಯರ ಆಕರ್ಷಣೆಯ ಪ್ರಮುಖ ಕೇಂದ್ರವಾಗಿದೆ. ಈ ಗ್ಯಾಲರಿಯಲ್ಲಿ ರೈಲ್ವೆಯ ಆರಂಭಿಕ ದಿನಗಳಿಂದ ಇಂದಿನ ಆಧುನಿಕ ರೈಲು ವ್ಯವಸ್ಥೆಯವರೆಗೆ ನಡೆದ ಬೆಳವಣಿಗೆಯನ್ನು ಚಿತ್ರಗಳು ಮತ್ತು ವಿವಿಧ ದಾಖಲೆಗಳ ಮೂಲಕ ವಿವರಿಸಲಾಗಿದೆ.
ಇಲ್ಲಿ ಹಳೆಯ ರೈಲ್ವೆ ಛಾಯಾಚಿತ್ರಗಳು, ಕಪ್ಪುಬಿಳುಪು ಚಿತ್ರಗಳು, ರೈಲ್ವೆ ದಾಖಲೆಗಳು, ಹಳೆಯ ಟಿಕೆಟ್‌ಗಳು, ಅಂಚೆ ಚೀಟಿಗಳು ಮತ್ತು ನಾಣ್ಯಗಳು ಪ್ರದರ್ಶನದಲ್ಲಿವೆ. ಈ ಎಲ್ಲ ವಸ್ತುಗಳನ್ನು ಗಮನಿಸುತ್ತಾ ಸಾಗಿದಾಗ, ನಾವು ಕಾಲಯಂತ್ರದಲ್ಲಿ ಹಿಂದಕ್ಕೆ ಪ್ರಯಾಣ ಮಾಡಿ ರೈಲ್ವೆಯ ಹಳೆಯ ದಿನಗಳನ್ನು ನೋಡುತ್ತಿರುವಂತ ಅನುಭವವಾಗುತ್ತದೆ.
| ರೈಲು ಸಿಗ್ನಲ್ ವ್ಯವಸ್ಥೆಯ ಉಪಕರಣಗಳು |
ಶ್ರೀರಂಗ ಪೆವಿಲಿಯನ್- ರಾಜಮರ್ಯಾದೆಯ ರೈಲು
ಪ್ರವೇಶ ದರ :
- ಹಿರಿಯರು: ಸುಮಾರು ₹50
- ಮಕ್ಕಳು: ಸುಮಾರು ₹30
ಮಿನಿ ರೈಲು ಸವಾರಿ ಹಾಗೂ ಕೆಲವು ವಿಶೇಷ ಚಟುವಟಿಕೆಗಳಿಗೆ ಹೆಚ್ಚುವರಿ ಶುಲ್ಕ ಇರಬಹುದು.
ಇದನ್ನೂ ಓದಿ: ಮೈಸೂರು ವ್ಯಾಕ್ಸ್ ಮ್ಯೂಸಿಯಂ; ಸಂಗೀತ ಲೋಕ ಪರಿಚಯಿಸುವ ಅದ್ಭುತ ತಾಣ
![]() |
| ಮ್ಯೂಸಿಯಂನಲ್ಲಿರುವ ರೈಲಿನೊಂದಿಗೆ ಯುವಕ |
ಮೈಸೂರಿಗೆ ಹೋದರೆ ತಪ್ಪದೇ ಭೇಟಿ ಕೊಡಿ
ಮೈಸೂರಿಗೆ ಭೇಟಿ ನೀಡುವವರು ಸಾಮಾನ್ಯವಾಗಿ ಅರಮನೆ, ಮೃಗಾಲಯ ಮತ್ತು ಚಾಮುಂಡಿ ಬೆಟ್ಟ ನೋಡುತ್ತಾರೆ. ಆದರೆ ರೈಲ್ವೆ ಇತಿಹಾಸವನ್ನು ತಿಳಿದುಕೊಳ್ಳಲು ಆಸಕ್ತಿ ಇರುವವರು ಮೈಸೂರಿನ ರೈಲ್ವೆ ಮ್ಯೂಸಿಯಂಗೆ ತಪ್ಪದೇ ಭೇಟಿ ನೀಡಬೇಕು.
ಇಲ್ಲಿ ನೋಡಬಹುದಾದ ಹಳೆಯ ಎಂಜಿನ್‌ಗಳು, ರೈಲು ಬೋಗಿಗಳು ಮತ್ತು ಉಪಕರಣಗಳು ಭಾರತೀಯ ರೈಲ್ವೆಯ ದೀರ್ಘ ಇತಿಹಾಸವನ್ನು ನಮ್ಮ ಮುಂದೆ ಜೀವಂತವಾಗಿ ತೋರಿಸುತ್ತವೆ. ಚುಕುಬುಕು ಬಂಡಿಯ ಕಥೆಯನ್ನು ಹತ್ತಿರದಿಂದ ಅನುಭವಿಸಲು ಈ ಮ್ಯೂಸಿಯಂ ಒಂದು ಅದ್ಭುತ ತಾಣವಾಗಿದೆ.





