![]() |
| ಬಿಜಾಪುರ ಆದಿಲ್ ಶಾಹಿ ಕೋಟೆಯ ಹೊರಗೋಡೆ |
ವಿಜಯಪುರ ನಗರವನ್ನು ಅಲಂಕರಿಸಿರುವ ಕೋಟೆ ಕೇವಲ ಒಂದು ರಕ್ಷಣಾ ಗೋಡೆಯಲ್ಲ. ಅದು ಒಂದು ಕಾಲದಲ್ಲಿ ದಖ್ಖನ್ ಪ್ರದೇಶದಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದ ಆದಿಲ್ ಶಾಹಿ ಸಾಮ್ರಾಜ್ಯದ ಶೌರ್ಯ, ಆಡಳಿತ ಸಾಮರ್ಥ್ಯ ಮತ್ತು ವಾಸ್ತುಶಿಲ್ಪದ ಅದ್ಭುತತೆಗೆ ಸಾಕ್ಷಿಯಾಗಿ ನಿಂತಿದೆ. ವಿಜಯಪುರ ಕೋಟೆ ಕೇವಲ ಒಂದು ಕೋಟೆಯಲ್ಲ; ಅದು ಮಧ್ಯಯುಗೀನ ದಖ್ಖನ್ ರಾಜಕೀಯ ಇತಿಹಾಸದ ಜೀವಂತ ದಾಖಲೆಯಾಗಿದೆ.
![]() |
| ಕೋಟೆಯ ಗೋಡೆ ಮೇಲೆ ಬೆರಣಿ ತಟ್ಟಿರುವುದು |
ಆದಿಲ್ ಶಾಹಿ ಸಾಮ್ರಾಜ್ಯದ ಉದಯ
ಕ್ರಿ.ಶ. 1490ರಲ್ಲಿ ಬಹಮನಿ ಸಾಮ್ರಾಜ್ಯ ವಿಭಜನೆಯಾದ ನಂತರ ದಖ್ಖನ್ ಪ್ರದೇಶದಲ್ಲಿ ಐದು ಸ್ವತಂತ್ರ ರಾಜ್ಯಗಳು ಉದಯವಾದವು. ಅವುಗಳಲ್ಲಿ ವಿಜಯಪುರದ ಆದಿಲ್ ಶಾಹಿ ರಾಜ್ಯವೂ ಒಂದು ಪ್ರಮುಖ ಸಾಮ್ರಾಜ್ಯವಾಗಿತ್ತು. ಸುಮಾರು ಎರಡು ಶತಮಾನಗಳ ಕಾಲ, ಅಂದರೆ ಕ್ರಿ.ಶ. 1490ರಿಂದ 1686ರವರೆಗೆ ಆದಿಲ್ ಶಾಹಿ ಸುಲ್ತಾನರು ವಿಜಯಪುರವನ್ನು ಆಳಿದರು.
ಇತಿಹಾಸಕಾರರ ಪ್ರಕಾರ ವಿಜಯಪುರದ ಕೋಟೆಯ ಮೂಲ ನಿರ್ಮಾಣ ಬಹಮನಿ ಕಾಲದಲ್ಲೇ ಆರಂಭವಾಗಿದ್ದು, ನಂತರ ಆದಿಲ್ ಶಾಹಿ ಸುಲ್ತಾನರು ಅದನ್ನು ವಿಸ್ತರಿಸಿ ಅತ್ಯಂತ ಬಲಿಷ್ಠ ಕೋಟೆಯಾಗಿ ರೂಪಿಸಿದರು. ಈ ಕಾರಣದಿಂದ ಕೋಟೆಯಲ್ಲಿನ ಕೆಲವು ಭಾಗಗಳಲ್ಲಿ ಬಹಮನಿ ಕಾಲದ ವಾಸ್ತುಶಿಲ್ಪದ ಗುರುತುಗಳು ಕಂಡುಬರುತ್ತವೆ.
ಇದನ್ನೂ ಓದಿ: ಬಿಜಾಪುರ ಆದಿಲ್ ಶಾಹಿ ಕಾಲದ ತೋಪುಗಳು
![]() |
| ಬಿಜಾಪುರ ಕೋಟೆಯ ಬುರುಜ್ (ಕಾವಲು ಗೋಪುರ) |
ಆದರೆ ವಿಜಯಪುರದ ಸುತ್ತಮುತ್ತ ಶಕ್ತಿಶಾಲಿ ರಾಜ್ಯಗಳು ಇದ್ದುದರಿಂದ ನಿರಂತರ ಯುದ್ಧಗಳ ಭೀತಿ ಇತ್ತು. ವಿಜಯನಗರ ಸಾಮ್ರಾಜ್ಯ, ಮರಾಠರು, ಮೊಗಲ್ ಸಾಮ್ರಾಜ್ಯ ಸೇರಿದಂತೆ ಹಲವು ದಾಯಾದಿ ರಾಜ್ಯಗಳು ದಾಳಿ ಮಾಡುವ ಸಾಧ್ಯತೆ ಇದ್ದ ಕಾರಣ, ಸುಲ್ತಾನರು ತಮ್ಮ ರಾಜಧಾನಿಯನ್ನು ರಕ್ಷಿಸಲು ಬಲಿಷ್ಠ ಕೋಟೆಯನ್ನು ನಿರ್ಮಿಸಿದರು.
![]() |
| ಕೋಟೆಯ ಕಂದಕದಲ್ಲಿ ಕೊಳಚೆ ನೀರು ತುಂಬಿಕೊಂಡಿರುವುದು |
ವಿಜಯಪುರ ಕೋಟೆಯ ವೈಭವ
ವಿಜಯಪುರ ಕೋಟೆ ಭಾರತದ ದೊಡ್ಡ ಕೋಟೆಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೋಟೆಯ ವಿನ್ಯಾಸ ಧೀರ್ಘವೃತ್ತಾಕಾರದಲ್ಲಿದ್ದು ಅದರ ಸುತ್ತಳತೆ ಸುಮಾರು 10 ಕಿಲೋಮೀಟರ್‌ಗಳಷ್ಟು ಇದೆ. ಕೋಟೆಯ ಪೂರ್ವ ಮತ್ತು ಪಶ್ಚಿಮ ಗೋಡೆಗಳ ನಡುವಿನ ದೂರವೇ ಸುಮಾರು 4 ಕಿಲೋಮೀಟರ್ ಇದ್ದು ಅದರ ವಿಶಾಲತೆಯನ್ನು ಊಹಿಸಬಹುದು.
![]() |
| ಕೋಟೆಯ ಗೋಡೆಗಳ ಭಾಗ ಅಲ್ಲಲ್ಲಿ ಕುಸಿದಿದೆ! |
![]() |
| ಬುರುಜ್ (ಕಾವಲು ಗೋಪುರ) |
![]() |
| ಶಹಾಪುರ ಗೇಟ್ |
ಕೋಟೆಯೊಳಗಿನ ಅದ್ಭುತ ಸ್ಮಾರಕಗಳು
ವಿಜಯಪುರ ಕೋಟೆಯ ಒಳಗೆ ಅನೇಕ ಐತಿಹಾಸಿಕ ಸ್ಮಾರಕಗಳು ಇವೆ. ವಿಶ್ವಪ್ರಸಿದ್ಧ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಜಾಮಾ ಮಸೀದಿ, ಬಾರಾ ಕಾಮಾನ್, ಗಗನ್ ಮಹಲ್ ಮತ್ತು ಮೆಹ್ತರ್ ಮಹಲ್, ಜೋಡ್ ಗುಮ್ಮಟ ಸೇರಿದಂತೆ ಹಲವಾರು ವಾಸ್ತುಶಿಲ್ಪ ನಿದರ್ಶನಗಳು ಕೋಟೆಯೊಳಗೇ ನಿರ್ಮಾಣಗೊಂಡಿವೆ. ಇವುಗಳ ಜೊತೆಗೆ ಸುಲ್ತಾನರು ಕಟ್ಟಿಸಿದ ಕೆರೆಗಳು ಮತ್ತು ಜಲವ್ಯವಸ್ಥೆಯ ಕಟ್ಟಡಗಳೂ ಇಲ್ಲಿ ಕಂಡುಬರುತ್ತವೆ. ಇದರಿಂದ ವಿಜಯಪುರ ಕೋಟೆ ಕೇವಲ ಯುದ್ಧ ರಕ್ಷಣೆಗೆ ಮಾತ್ರವಲ್ಲ, ರಾಜಧಾನಿಯ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿತ್ತೆಂಬುದು ಸ್ಪಷ್ಟವಾಗುತ್ತದೆ.
![]() |
| ವಿಜಯಪುರದ ಬಾರಿಷ್ ಪುರದಲ್ಲಿರುವ ಬಿಜಾಪುರ ಕೋಟೆಯ ಮಾದರಿ |
ಕೋಟೆಯ ಪ್ರವೇಶದ್ವಾರಗಳು
ವಿಜಯಪುರ ಕೋಟೆಗೆ ಐದು ಪ್ರಮುಖ ಪ್ರವೇಶದ್ವಾರಗಳಿವೆ. ಉತ್ತರದಲ್ಲಿ ಬಹಮನಿ ದರ್ವಾಜಾ, ವಾಯುವ್ಯದಲ್ಲಿ ಶಹಾಪುರ ದರ್ವಾಜಾ, ದಕ್ಷಿಣದಲ್ಲಿ ಮನಗೂಳಿ ದರ್ವಾಜಾ, ಪೂರ್ವದಲ್ಲಿ ಅಲ್ಲಾಪುರ ದರ್ವಾಜಾ ಮತ್ತು ಪಶ್ಚಿಮದಲ್ಲಿ ಮೆಕ್ಕಾ ದರ್ವಾಜಾ ಎಂಬುವು ಅವುಗಳಲ್ಲಿ ಪ್ರಮುಖವಾದವು.
ದರ್ವಾಜಾ ಎಂದರೆ ಪ್ರವೇಶದ್ವಾರ ಎಂಬ ಅರ್ಥ. ಪ್ರತಿಯೊಂದು ದ್ವಾರದ ಅಕ್ಕಪಕ್ಕದಲ್ಲಿ ಬಲಿಷ್ಠ ಬುರುಜ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದ ಶತ್ರುಗಳು ದ್ವಾರಗಳ ಮೂಲಕ ಒಳನುಗ್ಗದಂತೆ ರಕ್ಷಣಾ ವ್ಯವಸ್ಥೆ ಮಾಡಲಾಗಿತ್ತು.
![]() |
| ಮನಗೂಳಿ ಅಗಸಿ (ಫತೇಹ್ ದರ್ವಾಜಾ) |
ಮೊಗಲ್ ಸಾಮ್ರಾಟ ಔರಂಗಜೇಬ್ ವಿಜಯಪುರದ ಮೇಲೆ ದಾಳಿ ಮಾಡಿದಾಗ ಈ ದ್ವಾರವನ್ನು ಒಡೆಯಲು ಸಾಧ್ಯವಾಗಲಿಲ್ಲವೆಂದು ಹೇಳಲಾಗುತ್ತದೆ. ನಂತರ ಕೋಟೆಯ ಬೇರೆ ಭಾಗವನ್ನು ಒಡೆದು ಒಳಗೆ ಪ್ರವೇಶಿಸಿ, ಒಳಗಿನಿಂದಲೇ ಈ ದ್ವಾರವನ್ನು ತೆರೆಸಿಕೊಂಡ ನಂತರವೇ ಅವನು ಕೋಟೆಗೆ ಪ್ರವೇಶಿಸಿದನೆಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ನಂತರ ಈ ದ್ವಾರಕ್ಕೆ 'ಫತೇಹ್ ದರ್ವಾಜಾ' ಎಂಬ ಹೆಸರು ನೀಡಲಾಯಿತು.
ಕ್ರಿ.ಶ. 1686ರಲ್ಲಿ ಔರಂಗಜೇಬ ವಿಜಯಪುರವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ಆದಿಲ್ ಶಾಹಿ ಸಾಮ್ರಾಜ್ಯದ ಅಂತ್ಯವಾಯಿತು. ಇದರೊಂದಿಗೆ ವಿಜಯಪುರದ ರಾಜಕೀಯ ಪ್ರಾಬಲ್ಯ ನಿಧಾನವಾಗಿ ಕುಸಿಯತೊಡಗಿತು.
![]() |
| ಬಡಿ ಕಮಾನ್ |
ಅರಕಿಲ್ಲ – ಕೋಟೆಯೊಳಗಿನ ಕೋಟೆ
ವಿಜಯಪುರ ಕೋಟೆಯೊಳಗೆ ಮತ್ತೊಂದು ಸಣ್ಣ ಕೋಟೆಯೂ ಇದೆ. ಇದನ್ನು 'ಅರಕಿಲ್ಲ' ಎಂದು ಕರೆಯಲಾಗುತ್ತದೆ. ಈ ಭಾಗದಲ್ಲಿ ಸುಲ್ತಾನರ ಅರಮನೆಗಳು ಮತ್ತು ರಾಜಪರಿವಾರದ ವಾಸಸ್ಥಾನಗಳು ಇದ್ದವು.
ಇದು ರಾಜಕುಟುಂಬದ ಸುರಕ್ಷಿತ ಪ್ರದೇಶವಾಗಿದ್ದು, ಸಾಮಾನ್ಯ ಜನರಿಗೆ ಇಲ್ಲಿ ಪ್ರವೇಶ ಇರಲಿಲ್ಲ. ಯುದ್ಧದ ಸಮಯದಲ್ಲಿ ರಾಜಪರಿವಾರವನ್ನು ರಕ್ಷಿಸಲು ಈ ಒಳಕೋಟೆಯನ್ನು ನಿರ್ಮಿಸಲಾಗಿತ್ತು.
ಕೋಟೆಯ ಬುರುಜ್‌ಗಳ ಮೇಲೆ ತೋಪುಗಳನ್ನು ಇರಿಸಲಾಗುತ್ತಿತ್ತು. ಒಂದು ಕಾಲದಲ್ಲಿ ಯುದ್ಧಭೂಮಿಯಲ್ಲಿ ಮದ್ದುಗುಂಡುಗಳನ್ನು ನುಂಗುತ್ತಾ ಬೆಂಕಿ ಉಗುಳುತ್ತಿದ್ದ ಈ ತೋಪುಗಳು ಇಂದು ಕೋಟೆಯ ಮೇಲೆ ಮೌನವಾಗಿ ಇತಿಹಾಸವನ್ನು ನೆನಪಿಸುತ್ತಿವೆ.
![]() |
| ಪಸರಿ ಕಮಾನ್ |
![]() |
| ಕೋಟೆ ಗೋಡೆ ಮೇಲಿರುವ ಸಿಂಹಗಳ ಶಿಲ್ಪಗಳು |
ನಿರ್ಲಕ್ಷ್ಯದಿಂದ ಕುಸಿಯುತ್ತಿರುವ ಕೋಟೆಗಳು
ವಿಜಯಪುರದ ಜನರಿಗೆ ಈ ಕೋಟೆಗಳ ಬಗ್ಗೆ ಅಪಾರ ಅಭಿಮಾನ ಇದ್ದರೂ ಅವುಗಳನ್ನು ಸರಿಯಾಗಿ ಸಂರಕ್ಷಿಸುವಲ್ಲಿ ಸಾಕಷ್ಟು ಸವಾಲುಗಳಿವೆ. ಕೆಲವು ಭಾಗಗಳಲ್ಲಿ ಕೋಟೆಯ ಗೋಡೆಗಳು ಕುಸಿದು ಹೋಗಿವೆ. ಮೇಲ್ಭಾಗದ ದಪ್ಪವಾದ ಕಲ್ಲುಗಳು ಉರುಳಿ ಬಿದ್ದಿರುವುದೂ ಕಾಣುತ್ತದೆ. ಕೋಟೆಯ ಸುತ್ತಮುತ್ತಲಿನ ಕೆಲವು ಪ್ರದೇಶಗಳು ಅಸ್ವಚ್ಛತೆಯಿಂದ ಕೂಡಿವೆ. ಕೆಲವು ಕಡೆಗಳಲ್ಲಿ ಆಧುನಿಕ ಕಟ್ಟಡಗಳು ಮತ್ತು ಧಾರ್ಮಿಕ ರಚನೆಗಳು ನಿರ್ಮಾಣಗೊಂಡಿದ್ದು ಕೋಟೆಯ ಮೂಲ ರೂಪಕ್ಕೆ ಧಕ್ಕೆಯಾಗುತ್ತಿದೆ.
![]() |
| ಕೋಟೆಯ ಸುತ್ತಮುತ್ತ ಗಿಡ ಗಂಟಿ ಬೆಳೆದಿರುವುದು |
ಇತ್ತೀಚಿನ ವರ್ಷಗಳಲ್ಲಿ ಪುರಾತತ್ವ ಇಲಾಖೆ ಮತ್ತು ಸ್ಥಳೀಯ ಆಡಳಿತ ಕೋಟೆಯ ಕೆಲವು ಭಾಗಗಳಲ್ಲಿ ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ವಿಜಯಪುರ ಕೋಟೆಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಆದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜೀರ್ಣೋದ್ಧಾರ ಮತ್ತು ಸಂರಕ್ಷಣೆ ಅಗತ್ಯವಾಗಿದೆ. ಕೋಟೆಯ ಗೋಡೆಗಳನ್ನು ಪುನರ್‌ನಿರ್ಮಿಸುವುದು, ಕಂದಕಗಳನ್ನು ಸ್ವಚ್ಛಗೊಳಿಸುವುದು ಮತ್ತು ಅನಧಿಕೃತ ಒತ್ತುವರಿಗಳನ್ನು ತಡೆಯುವುದು ಅತ್ಯಂತ ಮುಖ್ಯವಾಗಿದೆ.
![]() |
| ಆದಿಲ್ ಶಾಹಿ ಕಾಲದ ಕೋಟೆಯ ಅವಶೇಷ |
ಇತಿಹಾಸ ಉಳಿಸುವ ಜವಾಬ್ದಾರಿ
ವಿಜಯಪುರ ಕೋಟೆ ಕೇವಲ ಒಂದು ಪುರಾತನ ಕಟ್ಟಡವಲ್ಲ. ಅದು ದಖ್ಖನ್ ಪ್ರದೇಶದ ಮಧ್ಯಯುಗೀನ ಇತಿಹಾಸವನ್ನು ಪ್ರತಿಬಿಂಬಿಸುವ ಮಹತ್ವದ ಸ್ಮಾರಕವಾಗಿದೆ.
ಈ ಕೋಟೆ ಆದಿಲ್ ಶಾಹಿ ಸಾಮ್ರಾಜ್ಯದ ಶೌರ್ಯ, ತಂತ್ರಜ್ಞಾನ ಮತ್ತು ವಾಸ್ತುಶಿಲ್ಪದ ಅದ್ಭುತತೆಯನ್ನು ನಮಗೆ ನೆನಪಿಸುತ್ತದೆ. ಆದ್ದರಿಂದ ಈ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಸರಿಯಾದ ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡಿದರೆ ವಿಜಯಪುರ ಕೋಟೆ ಮುಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣವಾಗುವುದಲ್ಲದೆ, ಇತಿಹಾಸ ಅಧ್ಯಯನಕ್ಕೆ ಮಹತ್ವದ ಕೇಂದ್ರವಾಗುವ ಸಾಧ್ಯತೆಯಿದೆ.













