![]() |
| ಮೈಸೂರಿನ ಅಲೋಕ ಅರಮನೆ |
'ರಾಜಕುಮಾರ' ಚಿತ್ರದ ಈ ಹಾಡು ಕೇಳಿದಾಗ ಹಲವರ ಮನಸ್ಸಿನಲ್ಲಿ ಮೂಡುವ ಮೊದಲ ದೃಶ್ಯವೆಂದರೆ ವೃದ್ಧಾಶ್ರಮದ ಆ ಭಾವನಾತ್ಮಕ ಕ್ಷಣಗಳು. ಆ ದೃಶ್ಯಗಳು ಎಲ್ಲಿ ಚಿತ್ರೀಕರಣಗೊಂಡವು ಎಂಬ ಕುತೂಹಲ ಬಹಳ ಜನರಿಗೆ ಇರುತ್ತದೆ.
ಆ ವೃದ್ಧಾಶ್ರಮದ ದೃಶ್ಯಗಳಿಗೆ ಜೀವ ತುಂಬಿದ ಸ್ಥಳವೇ ಮೈಸೂರಿನ ಸಮೀಪದಲ್ಲಿರುವ ಅಲೋಕ ಅರಮನೆ (Aloka Palace) ಅಥವಾ ಯಲವಾಲಾ ರೆಸಿಡೆನ್ಸಿ ಎಂದೂ ಕರೆಯಲ್ಪಡುವ ಈ ಐತಿಹಾಸಿಕ ಕಟ್ಟಡ.
![]() |
| ಮೈಸೂರಿನ ಅಲೋಕ ಅರಮನೆ ವಿಹಂಗಮ ನೋಟ |
ಅಲೋಕ ಅರಮನೆಯ ನಿಜವಾದ ಇತಿಹಾಸ
ಅಲೋಕ ಅರಮನೆ ಕೇವಲ ಸಿನೆಮಾ ಲೊಕೇಶನ್ ಅಲ್ಲ, ಅದು 200 ವರ್ಷಗಳಿಗಿಂತಲೂ ಹಳೆಯ ಇತಿಹಾಸ ಹೊಂದಿರುವ ಮಹತ್ವದ ಕಟ್ಟಡವಾಗಿದೆ. 1806ರಲ್ಲಿ, Arthur Cole ಎಂಬ ಇಂಗ್ಲಿಷ್ ಅಧಿಕಾರಿಯಿಂದ ಈ ಅರಮನೆ ನಿರ್ಮಿಸಲಾಯಿತು.ಅದೇ ಸಮಯದಲ್ಲಿ ಮೈಸೂರು ರಾಜ್ಯವನ್ನು ಆಳುತ್ತಿದ್ದ ಮುಮ್ಮಡಿ ಕೃಷ್ಣರಾಜ್ ಒಡೆಯರ್ ಅವರ ಕಾಲದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದ್ದು, ಇದು ರಾಜರು ಮತ್ತು ಅವರ ಅತಿಥಿಗಳಿಗೆ ಬೇಟೆ ಮಂದಿರ (hunting lodge) ಆಗಿ ಬಳಸಲ್ಪಡುತ್ತಿತ್ತು.
ನಗರದ ಗದ್ದಲದಿಂದ ದೂರ, ಹಸಿರು ಪ್ರಕೃತಿಯ ನಡುವೆ ಇರುವ ಈ ಅರಮನೆ ರಾಜರಿಗೆ ವಿಶ್ರಾಂತಿ ಮತ್ತು ಬೇಟೆಯ ಅನುಭವಕ್ಕಾಗಿ ಸೂಕ್ತ ಸ್ಥಳವಾಗಿತ್ತು.
![]() |
| ಮೈಸೂರಿನ ಅಲೋಕ ಅರಮನೆ |
ಯಲವಾಲಾ ಪ್ರದೇಶದ ಹಸಿರು ವಾತಾವರಣ
ಅಲೋಕ ಅರಮನೆ ಮೈಸೂರಿನ ಯಲವಾಲಾ ಪ್ರದೇಶದಲ್ಲಿ, ಸುಮಾರು 500ಕ್ಕೂ ಹೆಚ್ಚು ಎಕರೆಗಳ ಹಸಿರು ವೃಕ್ಷವಲಯದ ಮಧ್ಯದಲ್ಲಿ ಇದೆ. ಇಂದಿಗೂ ಈ ಪ್ರದೇಶವು ನೈಸರ್ಗಿಕ ಸೌಂದರ್ಯದಿಂದ ತುಂಬಿಕೊಂಡಿದ್ದು, ಚಿತ್ರಕರಣಗಳಿಗೆ ಅತ್ಯುತ್ತಮ ಲೊಕೇಶನ್ ಆಗಿದೆ.ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವುದರಿಂದ ಇಲ್ಲಿ ಶಾಂತ ವಾತಾವರಣವಿದೆ. ಇದೇ ಕಾರಣಕ್ಕೆ ಚಿತ್ರರಂಗದವರು ಈ ಸ್ಥಳವನ್ನು ಹೆಚ್ಚು ಮೆಚ್ಚುತ್ತಾರೆ.
![]() |
| ಮೈಸೂರಿನ ಅಲೋಕ ಅರಮನೆ ಹತ್ತಿರ ಇರುವ ಬಿದಿರು ವನ |
ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಅಧೀನಕ್ಕೆ
ಈ ಅರಮನೆಯು ಕಾಲಕ್ರಮೇಣ ಹಲವು ಹಂತಗಳಲ್ಲಿ ವಿಭಿನ್ನ ಬಳಕೆಗಳನ್ನು ಕಂಡಿದೆ. ಒಂದು ಕಾಲದಲ್ಲಿ ಇದು ಜವಾಹರ್ ನವೋದಯ ವಿದ್ಯಾಲಯವಾಗಿ ಕಾರ್ಯನಿರ್ವಹಿಸಿ, ವಿದ್ಯಾರ್ಥಿಗಳ ವಾಸಸ್ಥಳ ಹಾಗೂ ಶಿಕ್ಷಣ ಕೇಂದ್ರವಾಗಿಯೂ ಸೇವೆ ಸಲ್ಲಿಸಿತು. ನಂತರ ಇದು ಪಂಚಾಯತ್ ಅಭಿವೃದ್ಧಿ ಇಲಾಖೆಯ ಅಧೀನಕ್ಕೆ ಬಂದು, ಪ್ರಸ್ತುತ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿದೆ.ಚಿತ್ರರಂಗದ ಅಚ್ಚುಮೆಚ್ಚಿನ ಲೊಕೇಶನ್
ಮೈಸೂರು ಎಂದಾಕ್ಷಣ ಅರಮನೆಗಳು ನೆನಪಾಗುತ್ತವೆ. ಅಲೋಕ ಅರಮನೆ ಕೂಡ ಚಿತ್ರರಂಗದ ಪ್ರಮುಖ ಚಿತ್ರೀಕರಣ ಸ್ಥಳವಾಗಿದೆ. ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಅನೇಕ ಖ್ಯಾತ ನಟರ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಕನ್ನಡ ಚಿತ್ರಗಳ ಜೊತೆಗೆ ತಮಿಳು, ತೆಲುಗು, ಹಿಂದಿ ಭಾಷೆಗಳ ಚಿತ್ರಗಳಿಗೂ ಇದು ಪ್ರಮುಖ ಲೊಕೇಶನ್ ಆಗಿದೆ.ಚಿತ್ರಗಳಲ್ಲಿ ಈ ಅರಮನೆ ಆಸ್ಪತ್ರೆ, ಮನೆ, ವೃದ್ಧಾಶ್ರಮ, ನ್ಯಾಯಾಲಯ, ಜೈಲು ಹಾಗೂ ಆಡಳಿತ ಕಚೇರಿಯಂತೆ ವಿವಿಧ ರೂಪಗಳಲ್ಲಿ ಕಾಣಿಸಿಕೊಂಡಿದ್ದು, ಒಂದೇ ಸ್ಥಳದಲ್ಲಿ ಇಷ್ಟೊಂದು ವಿಭಿನ್ನ ಸೆಟ್ಟಿಂಗ್‌ಗಳನ್ನು ಸೃಷ್ಟಿಸಲು ಸಾಧ್ಯವಾಗುವುದು ಇದರ ದೊಡ್ಡ ವಿಶೇಷತೆಯಾಗಿದೆ.
![]() |
| ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರದ ದೃಶ್ಯ |







