![]() |
| ಮರಳಿನಲ್ಲಿ ಮೂಡಿದ ಕೃಷ್ಣಾರ್ಜುನರು |
ಮೈಸೂರು ಎಂದರೆ ಪಾರಂಪರಿಕತೆ, ಸಂಸ್ಕೃತಿ ಮತ್ತು ಕಲೆಯ ಸಂಕೇತ. ಅರಮನೆಗಳ ವೈಭವ, ಮೃಗಾಲಯದ ವೈವಿಧ್ಯ, ವಸ್ತುಸಂಗ್ರಹಾಲಯಗಳ ಸಂಪತ್ತು, ದಸರಾ ಉತ್ಸವದ ಜಂಬೂ ಸವಾರಿ – ಇವೆಲ್ಲವೂ ಮೈಸೂರನ್ನು ಪ್ರವಾಸಿಗರ ಸ್ವರ್ಗವನ್ನಾಗಿ ಮಾಡಿವೆ. ಇಂತಹ ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವಿಶಿಷ್ಟ ತಾಣವೆಂದರೆ ಮರಳು ಶಿಲ್ಪಕಲಾ ವಸ್ತುಸಂಗ್ರಹಾಲಯ.
ಸಾಮಾನ್ಯವಾಗಿ ಮರಳು ಶಿಲ್ಪಗಳನ್ನು ನಾವು ಸಮುದ್ರ ತೀರಗಳಲ್ಲಿ ಅಥವಾ ತಾತ್ಕಾಲಿಕ ಪ್ರದರ್ಶನಗಳಲ್ಲಿ ಮಾತ್ರ ನೋಡುತ್ತೇವೆ. ಆದರೆ ಮೈಸೂರಿನಲ್ಲಿ ಮರಳಿನಿಂದಲೇ ಶಾಶ್ವತವಾಗಿ ನಿರ್ಮಿಸಲಾದ ಶಿಲ್ಪಗಳನ್ನು ನೋಡಲು ಸಾಧ್ಯವಾಗಿರುವುದು ಒಂದು ಅಪರೂಪದ ಅನುಭವ. ಈ ವಿಶಿಷ್ಟ ವಸ್ತುಸಂಗ್ರಹಾಲಯವು ಭಾರತದ ಮೊದಲ ಮರಳು ಶಿಲ್ಪಕಲಾ ಮ್ಯೂಸಿಯಂ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಈ ಮ್ಯೂಸಿಯಂ ಮೈಸೂರಿನ ಚಾಮುಂಡಿ ಬೆಟ್ಟದ ಪಾದದಲ್ಲಿ, ಕೆ.ಸಿ. ಬಡಾವಣೆಯಲ್ಲಿ ಸ್ಥಾಪನೆಯಾಗಿದ್ದು ಪ್ರವಾಸಿಗರಿಗೆ ವಿಭಿನ್ನ ಕಲಾ ಲೋಕವನ್ನು ಪರಿಚಯಿಸುತ್ತದೆ.
![]() |
| ತಾಯಿಯ ಮಮತೆ |
ಕಲಾವಿದೆ ಎಂ.ಎನ್. ಗೌರಿ- ಮರಳಿನಲ್ಲಿ ಕನಸು ಮೂಡಿಸಿದ ಕಲಾವಿದೆ
ಈ ವಿಶಿಷ್ಟ ಮ್ಯೂಸಿಯಂನ ನಿರ್ಮಾತೃ ಖ್ಯಾತ ಮರಳು ಕಲಾವಿದೆ ಎಂ.ಎನ್. ಗೌರಿ. ಇವರ ಕಲಾಜೀವನವೇ ಪ್ರೇರಣಾದಾಯಕ. ಯಾವುದೇ ಗುರುಗಳ ಮಾರ್ಗದರ್ಶನವಿಲ್ಲದೇ, ಅಂತರ್ಜಾಲದ ಸಹಾಯದಿಂದಲೇ ಮರಳು ಶಿಲ್ಪಕಲೆ ಕಲಿತು ಅವರು ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ.ಏಕಲವ್ಯನಂತೆ ಸ್ವತಃ ಅಭ್ಯಾಸ ಮಾಡಿ, ಮರಳನ್ನು ಕಲೆಯಾಗಿ ರೂಪಿಸಿದ ಗೌರಿ ಇಂದು ದೇಶದ ಪ್ರಮುಖ ಮರಳು ಕಲಾವಿದರಲ್ಲಿ ಒಬ್ಬರಾಗಿದ್ದಾರೆ.
2014ರಲ್ಲಿ ಅವರು ತಮ್ಮ ಕನಸನ್ನು ಸಾಕಾರಗೊಳಿಸಿ ಮೈಸೂರಿನಲ್ಲಿ ಈ ಮರಳು ಶಿಲ್ಪಕಲಾ ವಸ್ತುಸಂಗ್ರಹಾಲಯವನ್ನು ಆರಂಭಿಸಿದರು. ಸುಮಾರು 100ಕ್ಕೂ ಹೆಚ್ಚು ಟ್ರಕ್‌ಗಳಷ್ಟು ಮರಳನ್ನು ಬಳಸಿಕೊಂಡು, ಅನೇಕ ತಿಂಗಳ ಪರಿಶ್ರಮದಿಂದ ಈ ಕಲಾ ಲೋಕವನ್ನು ನಿರ್ಮಿಸಲಾಗಿದೆ. ಇಂದು ಇಲ್ಲಿ 150ಕ್ಕೂ ಹೆಚ್ಚು ಮರಳು ಶಿಲ್ಪಗಳು ಪ್ರದರ್ಶನಕ್ಕೆ ಇವೆ. ಅವುಗಳನ್ನು ಸುಮಾರು 16 ವಿಭಿನ್ನ ಪರಿಕಲ್ಪನೆಗಳ ಆಧಾರದ ಮೇಲೆ ರೂಪಿಸಲಾಗಿದೆ.
ಇದನ್ನೂ ಓದಿ: ಮೈಸೂರು ಕಪ್ಪೆಚಿಪ್ಪು ಕಲಾಕೃತಿಗಳ ಮ್ಯೂಸಿಯಂ
![]() |
| ಕಲಾವಿದೆ ಎಂ.ಎನ್.ಗೌರಿ |
ಮರಳಿನಲ್ಲಿ ಮೂಡಿದ ಕಲ್ಪನೆಯ ಲೋಕ
ಈ ವಸ್ತುಸಂಗ್ರಹಾಲಯದ ಪ್ರಮುಖ ವಿಶೇಷತೆ ಎಂದರೆ ಇಲ್ಲಿ ಪ್ರದರ್ಶನದಲ್ಲಿರುವ ಎಲ್ಲಾ ಕಲಾಕೃತಿಗಳು ಮರಳು, ನೀರು ಮತ್ತು ಸ್ವಲ್ಪ ಅಂಟು ಬಳಸಿ ಮಾಡಲ್ಪಟ್ಟಿವೆ. ಶಿಲ್ಪಗಳು ಮಳೆ ಮತ್ತು ಬಿಸಿಲಿನಿಂದ ಹಾನಿಯಾಗದಂತೆ ಅವುಗಳ ಮೇಲೆ ವಿಶೇಷ ಚಪ್ಪರವನ್ನು ನಿರ್ಮಿಸಲಾಗಿದೆ.
![]() |
| ಜಗತ್ತಿನ ವಿವಿಧ ಬುಡಕಟ್ಟು ಸಮುದಾಯಗಳು |
ಮ್ಯೂಸಿಯಂ ಒಳಗೆ ಪ್ರವೇಶಿಸಿದ ಕ್ಷಣದಲ್ಲೇ ಸುಮಾರು 15 ಅಡಿ ಎತ್ತರದ ಪರಿಸರ ಸ್ನೇಹಿ ಗಣೇಶನ ಶಿಲ್ಪ ನಿಮ್ಮ ಗಮನ ಸೆಳೆಯುತ್ತದೆ. ಅದರ ಪಕ್ಕದಲ್ಲೇ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ, ಜೊತೆಗೆ ಲಾಫಿಂಗ್ ಬುದ್ಧನ ಶಿಲ್ಪಗಳು ಕಣ್ಮನ ಸೆಳೆಯುತ್ತವೆ. ಇಲ್ಲಿನ ಶಿಲ್ಪಗಳು ಕೇವಲ ಕಲಾತ್ಮಕತೆಯ ಪ್ರದರ್ಶನ ಮಾತ್ರವಲ್ಲ, ಅವುಗಳಲ್ಲಿ ಭಾರತದ ಸಂಸ್ಕೃತಿ, ಧರ್ಮ, ಪ್ರಕೃತಿ ಮತ್ತು ಮಾನವ ಜೀವನದ ವಿವಿಧ ಅಂಶಗಳು ಪ್ರತಿಬಿಂಬಿಸುತ್ತವೆ.
![]() |
| ಮರಳಿನಲ್ಲಿ ಮೂಡಿದ ವನ್ಯಜೀವಿಗಳ ಕಲಾಕೃತಿ |
ಸಂಸ್ಕೃತಿ, ಧರ್ಮ ಮತ್ತು ಪ್ರಕೃತಿಯ ಸಂಗಮ
ಈ ಮರಳು ಶಿಲ್ಪಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಬೌದ್ಧ ಧರ್ಮಗಳಿಗೆ ಸಂಬಂಧಿಸಿದ ವಿವಿಧ ಕಲಾಕೃತಿಗಳ ಮೂಲಕ ಕೋಮುಸೌಹಾರ್ದತೆಯ ಸಂದೇಶವನ್ನು ಸಾರುತ್ತವೆ. ಇಲ್ಲಿ ಮೈಸೂರು ದಸರಾ ವೈಭವ, ಸಿಂಹಾಸನದಲ್ಲಿ ಆಸೀನರಾದ ಶ್ರೀಕಂಠದತ್ತ ಒಡೆಯರ್, ಮಹಾಭಾರತ ಯುದ್ಧದ ಸಂದರ್ಭದಲ್ಲಿ ಕೃಷ್ಣ ಮತ್ತು ಅರ್ಜುನರು ಆಸೀನರಾಗಿರುವ ರಥ, ಡಿಸ್ನಿಲ್ಯಾಂಡ್ ಪಾತ್ರಗಳು, ಜಲಚರ ಜೀವಿಗಳು, ರಾಶಿಚಕ್ರ, ಪುರಾತನ ನಾಗರಿಕತೆಗಳು, ಬುಡಕಟ್ಟು ಜನಾಂಗಗಳು, ಸಾಂತಾಕ್ಲಾಸ್ ಮತ್ತು ಕ್ರಿಸ್ಮಸ್ ಮರ, ವಿಂಟೇಜ್ ಕಾರು ಹಾಗೂ ಭೂತಪ್ರೇತಗಳ ಲೋಕವನ್ನು ಚಿತ್ರಿಸುವ ಶಿಲ್ಪಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಮಹಾಭಾರತದ ಯುದ್ಧಭೂಮಿಯಲ್ಲಿ ಕೃಷ್ಣನು ಅರ್ಜುನನಿಗೆ ಉಪದೇಶ ನೀಡುತ್ತಿರುವ ರಥದ ಶಿಲ್ಪವನ್ನು ನೋಡಿದಾಗ ಅದು ಮರಳಿನಿಂದ ನಿರ್ಮಿಸಲ್ಪಟ್ಟಿದೆ ಎಂಬುದೇ ನಂಬಲು ಕಷ್ಟವಾಗುತ್ತದೆ.
ಇದನ್ನೂ ಓದಿ: ಸಂಗೀತ ಲೋಕ ಪರಿಚಯಿಸುವ ಮೈಸೂರು ವ್ಯಾಕ್ಸ್ ಮ್ಯೂಸಿಯಂ
![]() |
| ಪುರಾಣಗಳ ಪಾತ್ರಗಳು ಜೀವ ತಳೆದಾಗ.. |
ಮರಳು ಶಿಲ್ಪ ರಚನೆ – ಸುಲಭವಲ್ಲ
ಮರಳು ಶಿಲ್ಪ ನಿರ್ಮಾಣವು ಸಾಮಾನ್ಯ ಕೆಲಸವಲ್ಲ. ಇದರಲ್ಲಿ ಮರಳಿನ ಗುಣಮಟ್ಟ, ಕಣಗಳ ಗಾತ್ರ ಮತ್ತು ತೇವಾಂಶ ಪ್ರಮುಖ ಪಾತ್ರವಹಿಸುತ್ತವೆ. ಶಿಲ್ಪವನ್ನು ರಚಿಸುವ ಸಂದರ್ಭದಲ್ಲಿ ಕಲಾವಿದರಿಗೆ ಹಲವು ಸವಾಲುಗಳು ಎದುರಾಗುತ್ತವೆ. ಸರಿಯಾದ ಮರಳಿನ ಆಯ್ಕೆ ಮಾಡುವುದು, ನೀರಿನ ಪ್ರಮಾಣವನ್ನು ಸಮತೋಲನದಲ್ಲಿಡುವುದು, ಶಿಲ್ಪ ಕುಸಿಯದಂತೆ ರೂಪಿಸುವುದು ಹಾಗೂ ತೇವ ಮತ್ತು ಗಾಳಿಯಿಂದ ಅದನ್ನು ರಕ್ಷಿಸುವುದು ಬಹಳ ಕಷ್ಟಕರವಾದ ಕೆಲಸಗಳು. ಶಿಲ್ಪ ನಿರ್ಮಾಣವಾದ ನಂತರ ಅದರ ನಿರ್ವಹಣೆಯೂ ಸವಾಲಿನಿಂದ ಕೂಡಿದೆ. ಇಲಿ, ಇರುವೆ, ವಿವಿಧ ಕೀಟಗಳು ಹಾಗೂ ತೇವಾಂಶದಿಂದ ಶಿಲ್ಪಗಳನ್ನು ಕಾಪಾಡುವುದು ದೊಡ್ಡ ಸವಾಲಾಗಿರುತ್ತದೆ. ಆದರೂ ತಮ್ಮ ಕಲೆಯ ಮೇಲಿರುವ ಅಪಾರ ಪ್ರೀತಿ ಮತ್ತು ಸಮರ್ಪಣೆಯಿಂದ ಕಲಾವಿದೆ ಗೌರಿ ಈ ಮರಳು ಕಲಾಕೃತಿಗಳನ್ನು ಅತ್ಯಂತ ಸಂರಕ್ಷಿಸುತ್ತಿದ್ದಾರೆ.
![]() |
| ಮೈಸೂರು ದಸರಾ ಸಡಗರ |
ಪ್ರವಾಸಿಗರಿಗೆ ಸಲಹೆಗಳು
ಪ್ರವಾಸಿಗರ ಅನುಕೂಲಕ್ಕಾಗಿ ಈ ಮ್ಯೂಸಿಯಂ ಪ್ರತಿದಿನ ಬೆಳಿಗ್ಗೆ 8:30ರಿಂದ ಸಂಜೆ 6:30ರವರೆಗೆ ತೆರೆದಿರುತ್ತದೆ. ಮ್ಯೂಸಿಯಂ ಭೇಟಿ ನೀಡುವಾಗ ಕೆಲವು ಸಲಹೆಗಳು:ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಭೇಟಿ ನೀಡುವುದು ಉತ್ತಮ
ಫೋಟೋಗ್ರಫಿಗೆ ಇದು ಅತ್ಯುತ್ತಮ ಸ್ಥಳ
ಮಕ್ಕಳಿಗೆ ಕಲಾ ಮತ್ತು ಸಂಸ್ಕೃತಿಯ ಪರಿಚಯ ನೀಡಲು ಉತ್ತಮ ತಾಣ
ಚಾಮುಂಡಿ ಬೆಟ್ಟದ ಪ್ರವಾಸದೊಂದಿಗೆ ಇದನ್ನು ಸೇರಿಸಬಹುದು
ಸಂರಕ್ಷಣೆಗೆ ಸರ್ಕಾರದ ಸಹಾಯ ಅಗತ್ಯ
ಮರಳು ಶಿಲ್ಪಗಳನ್ನು ಸಂರಕ್ಷಿಸುವುದು ತುಂಬಾ ಕಷ್ಟಕರವಾದ ಕೆಲಸ. ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ.
ಈ ಕಾರಣದಿಂದ ಕಲಾವಿದೆ ಗೌರಿ ಸರ್ಕಾರವು ಈ ಮ್ಯೂಸಿಯಂ ನಿರ್ವಹಣೆಯನ್ನು ವಹಿಸಿಕೊಳ್ಳಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಇದುವರೆಗೆ ಸರ್ಕಾರದಿಂದ ಸ್ಪಷ್ಟ ಪ್ರತಿಕ್ರಿಯೆ ದೊರೆತಿಲ್ಲ.
ಸರ್ಕಾರದ ಸಹಾಯ ದೊರೆತರೆ ಈ ಕಲಾ ವಸ್ತುಸಂಗ್ರಹಾಲಯ ಇನ್ನಷ್ಟು ಅಭಿವೃದ್ಧಿ ಹೊಂದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.
![]() |
| ಸಾಂತಾಕ್ಲಾಸ್ |
ಮೈಸೂರಿಗೆ ಹೋದರೆ ತಪ್ಪದೇ ನೋಡಬೇಕಾದ ತಾಣ
ಮೈಸೂರಿಗೆ ಪ್ರವಾಸಕ್ಕೆ ಹೋಗುವವರು ಸಾಮಾನ್ಯವಾಗಿ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಬ್ರಿಂದಾವನ ಗಾರ್ಡನ್‌ಗಳನ್ನು ನೋಡುತ್ತಾರೆ. ಆದರೆ ನಿಮ್ಮ ಪ್ರವಾಸ ಪಟ್ಟಿಯಲ್ಲಿ ಮರಳು ಶಿಲ್ಪಕಲಾ ವಸ್ತುಸಂಗ್ರಹಾಲಯವನ್ನು ಸೇರಿಸಿಕೊಳ್ಳುವುದನ್ನು ಮರೆತಬೇಡಿ.
ಮರಳಿನ ಕಣಗಳಿಂದ ಮೂಡಿದ ಈ ಕಲಾಕೃತಿಗಳು ನಿಮ್ಮನ್ನು ಆಶ್ಚರ್ಯಪಡಿಸುವುದಷ್ಟೇ ಅಲ್ಲ, ಕಲೆಯ ಮಹತ್ವವನ್ನು ಮನದಟ್ಟು ಮಾಡುತ್ತವೆ. ಮರಳು ಎಂದರೆ ಸಾಮಾನ್ಯವಾಗಿ ಪಾದಗಳ ಕೆಳಗೆ ಇರುವ ಮಣ್ಣು. ಆದರೆ ಕಲಾವಿದರ ಕೈಯಲ್ಲಿ ಅದು ಕಲಾಕೃತಿಯಾಗಿ ರೂಪುಗೊಳ್ಳುವಾಗ, ಅದು ಮಾನವ ಸೃಜನಶೀಲತೆಯ ಅದ್ಭುತ ಸಾಕ್ಷಿಯಾಗುತ್ತದೆ.







