ಸರಳ ಸಂತ, ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಬದುಕು ಹೀಗಿತ್ತು!

siddaganga shree shivakumara swamjiji
ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ಸಿದ್ದಗಂಗಾ ಶ್ರೀಗಳು
2019ರ ಜನವರಿ 21ರಂದು ಶತಮಾನ ಕಂಡ ಮಹಾಸಂತ, ಸಿದ್ಧಗಂಗಾ ಮಠದ ಪೂಜ್ಯ ಶಿವಕುಮಾರ ಸ್ವಾಮೀಜಿ ಅವರು ಅಗಲಿದ ದಿನವನ್ನು ಕರ್ನಾಟಕದ ಜನರು ಎಂದಿಗೂ ಮರೆಯಲಾರರು. ಶತಾಯುಷಿ ಮಹನೀಯರ ಅಗಲಿಕೆಯಿಂದ ಇಡೀ ನಾಡಿಗೆ ಒಂದು ರೀತಿಯ ಅನಾಥ ಭಾವ ಮೂಡಿತ್ತು. ದಾಸೋಹ ಮತ್ತು ಶಿಕ್ಷಣವನ್ನು ಜೀವನ ಧರ್ಮವನ್ನಾಗಿಸಿಕೊಂಡ ಈ ಮಹಾತ್ಮರ ಅಗಲಿಕೆಗೆ ಲಕ್ಷಾಂತರ ಜನರು ಕಂಬನಿ ಮಿಡಿದರು.

ಸಿದ್ಧಗಂಗಾ ಮಠದಲ್ಲಿ ಸಾವಿರಾರು ಬಡ ಮಕ್ಕಳಿಗೆ ಶಿಕ್ಷಣ ಮತ್ತು ಅನ್ನದಾನ ನೀಡಿದ ಈ ಮಹಾಪುರುಷರನ್ನು ಜನರು ಪ್ರೀತಿಯಿಂದ 'ನಡೆಯುವ ದೇವರು' ಎಂದು ಕರೆಯುತ್ತಿದ್ದರು. ಅಂಥ ಮಹನೀಯರ ಸಾನ್ನಿಧ್ಯದಲ್ಲಿ ಓದುವ ಅವಕಾಶ ದೊರೆತವರು ನಿಜಕ್ಕೂ ಭಾಗ್ಯಶಾಲಿಗಳು.

ನಾನೂ ಸಹ 2004ರಿಂದ 2010ರವರೆಗೆ ಸಿದ್ದಗಂಗಾ ಮಠದಲ್ಲಿ ಓದುವ ಅವಕಾಶ ಪಡೆದಿದ್ದೆ. ಆ ಅವಧಿಯಲ್ಲಿ ಸ್ವಾಮೀಜಿಯವರನ್ನು ಅನೇಕ ಬಾರಿ ಸಮೀಪದಿಂದ ನೋಡಿದ ಅನುಭವ ನನಗೆ ಸಿಕ್ಕಿದೆ. ಸ್ವಾಮೀಜಿಯವರ ಬಗ್ಗೆ ಜನರಿಗೆ ಇರುವ ಕುತೂಹಲವನ್ನು ಗಮನಿಸಿದಾಗ, ಅವರೊಂದಿಗೆ ವಿದ್ಯಾರ್ಥಿಗಳ ಸಂಬಂಧ ಹೇಗಿತ್ತು ಎಂಬ ಕೆಲವು ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

siddaganga shree shivakumara swamjiji
ದಾಸೋಹದ ಮನೆಯಲ್ಲಿ ಸಿದ್ದಗಂಗಾ ಶ್ರೀಗಳು (ಕಾಲ್ಪನಿಕ ಚಿತ್ರ)

ಸೋಮಾರಿಗಳಿಗೆ ಕಿವಿ ಹಿಂಡಿದ ದಿನ

ಸಿದ್ಧಗಂಗಾ ಮಠದಲ್ಲಿ ಪ್ರತಿದಿನ ಬೆಳಿಗ್ಗೆ 6 ಮತ್ತು ಸಂಜೆ 6 ಗಂಟೆಗೆ ಪ್ರಾರ್ಥನೆ ನಡೆಯುತ್ತಿತ್ತು. ಎಲ್ಲ ವಿದ್ಯಾರ್ಥಿಗಳೂ ಕೆಂಪು ವಸ್ತ್ರ ಧರಿಸಿ ಪ್ರಾರ್ಥನೆಗೆ ಹಾಜರಾಗುವುದು ಕಡ್ಡಾಯ.

ಆದರೆ ಕೆಲವರು ಸೋಮಾರಿತನದಿಂದ ಪ್ರಾರ್ಥನೆಗೆ ಗೈರಾಗುತ್ತಿದ್ದರು. ಒಂದು ದಿನ ಬೆಳಗಿನ ಪ್ರಾರ್ಥನೆ ವೇಳೆ ಸ್ವಾಮೀಜಿಯವರು 'ಯಾರು ಬಂದಿಲ್ಲ ಅವರನ್ನು ಕರೆದುಕೊಂಡು ಬನ್ನಿ' ಎಂದು ಸೂಚಿಸಿದರು. ನಂತರ ಎನ್‌ಸಿಸಿ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಂದ ಎಲ್ಲರನ್ನು ಕರೆದುಕೊಂಡು ಬಂದರು.

ಅರ್ಧ ಸ್ನಾನ ಮಾಡಿ ಬಕೇಟ್ ಹಿಡಿದವರು, ಇನ್ನೂ ನಿದ್ದೆಗಣ್ಣಿನಲ್ಲಿದ್ದವರು ಎಲ್ಲರೂ ಅಲ್ಲಿ ನಿಂತಿದ್ದರು. ಆಗ ಸ್ವಾಮೀಜಿಯವರು ಪ್ರತಿಯೊಬ್ಬರಿಗೂ ಪ್ರಾರ್ಥನೆಯ ಮಹತ್ವ ತಿಳಿಸಿ ಅವರ ಕಿವಿ ಹಿಂಡಿ ಬುದ್ಧಿವಾದ ಹೇಳಿದರು.
ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿನ ಅಂಚೆಯಣ್ಣ ನೆನಪು ಮತ್ತು ಫಜೀತಿಗಳು

siddaganga shree shivakumara swamjiji
ಸಂಜೆಯ ಪ್ರಾರ್ಥನೆಗೆ ಹೋಗುತ್ತಿರುವ ಮಠದ ವಿದ್ಯಾರ್ಥಿಗಳು

ಹಾಸ್ಯದಿಂದ ಬೋಧಿಸಿದ ಪಾಠ

ಸಂಜೆಯ ಪ್ರಾರ್ಥನೆ ವೇಳೆ ಸಾವಿರಾರು ವಿದ್ಯಾರ್ಥಿಗಳು ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕುಳಿತಿರುವ ದೃಶ್ಯವೇ ಒಂದು ಅದ್ಭುತ ಅನುಭವ. ಒಮ್ಮೆ ಪರೀಕ್ಷೆಗಳು ಸಮೀಪಿಸಿದ್ದಾಗ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಹಾಸ್ಯಮಯ ಚುಟುಕಿನ ಮೂಲಕ ಸಂದೇಶ ನೀಡಿದರು:

ಹೂವು ಇಲ್ಲ ಹಣ್ಣು ಇಲ್ಲ ಹೋದೆನಪ್ಪಾ ಗುಡಿಗೆ
ತೀರ್ಥ ಇಲ್ಲ ಪ್ರಸಾದ ಇಲ್ಲ ಬಂದೆನಪ್ಪಾ ಮನೆಗೆ
ಓದು ಇಲ್ಲ ಬರೆದು ಇಲ್ಲ ಹೋದೆನಪ್ಪಾ ಪರೀಕ್ಷೆಗೆ
ಮಾರ್ಕ್ಸ್ ಇಲ್ಲ ಪಾಸು ಇಲ್ಲ ಬಂದೆನಪ್ಪಾ ಮನೆಗೆ

'ಸಿದ್ಧತೆ ಇಲ್ಲದೇ ಪರೀಕ್ಷೆಗೆ ಹೋಗಬೇಡಿ' ಎಂಬ ಸಂದೇಶವನ್ನು ಅವರು ಹೀಗೆ ಹಾಸ್ಯಭರಿತವಾಗಿ ಹೇಳುತ್ತಿದ್ದಂತೆ ಸಭೆಯಲ್ಲಿ ನಗೆಯ ಅಲೆ ಎದ್ದಿತು.

ತರಗತಿಗೆ ತಪ್ಪಿಸಿದವರಿಗೆ ಶಿಕ್ಷೆ

ಬೆಳಿಗ್ಗೆ 7 ರಿಂದ 10ರವರೆಗೆ ವೇದ ಮತ್ತು ಸಂಸ್ಕೃತ ತರಗತಿಗಳು ನಡೆಯುತ್ತಿದ್ದರು. ಕೆಲ ವಿದ್ಯಾರ್ಥಿಗಳು ತರಗತಿಗೆ ಹೋಗದೆ ಮಠದ ಆವರಣದಲ್ಲಿ ತಿರುಗಾಡುತ್ತಿದ್ದರು.

ಒಮ್ಮೆ ಹೀಗೆ ತರಗತಿ ತಪ್ಪಿಸಿದ ವಿದ್ಯಾರ್ಥಿಯೊಬ್ಬ ಸ್ವಾಮೀಜಿಯವರ ಕೈಗೆ ಸಿಕ್ಕಿಬಿದ್ದ. ಆಗ ಸ್ವಾಮೀಜಿಯವರು ಅವನ ಕಿವಿ ಹಿಂಡಿ 'ಇನ್ನು ಮುಂದೆ ತರಗತಿಗೆ ತಪ್ಪಿಸಬೇಡ' ಎಂದು ಹೇಳಿ ಕಳುಹಿಸಿದರು. ಆಶ್ಚರ್ಯವೆಂದರೆ, ಆ ವಿದ್ಯಾರ್ಥಿ ಸ್ವಾಮೀಜಿಯವರು ಕಿವಿ ಹಿಂಡಿದ ವಿಚಾರವನ್ನು ಹೆಮ್ಮೆಯಿಂದ ಎಲ್ಲರಿಗೂ ಹೇಳುತ್ತಿದ್ದ.

siddaganga shree shivakumara swamjiji
ಸಿದ್ದಗಂಗಾ ಮಠದ ಸಂಸ್ಕೃತ ಪಾಠಶಾಲೆ ಆವರಣ

ಮಕ್ಕಳ ಮೇಲಿದ್ದ ಅಪಾರ ಪ್ರೀತಿ

ಸ್ವಾಮೀಜಿಯವರಿಗೆ ಮಕ್ಕಳ ಮೇಲಿದ್ದ ಪ್ರೀತಿ ಅಪಾರ. ವಿಶೇಷವಾಗಿ ರಜಾಕಾಲದಲ್ಲಿ ವಿದ್ಯಾರ್ಥಿಗಳು ಊರಿಗೆ ತೆರಳುವಾಗ ಅವರ ಮುಖದಲ್ಲಿ ಕಂಡುಬರುವ ಬೇಸರ ಗಮನಾರ್ಹ.

ಒಮ್ಮೆ ನಾನು ಮತ್ತು ನನ್ನ ಸ್ನೇಹಿತ ಊರಿಗೆ ಹೋಗುವುದಾಗಿ ಹೇಳಿದಾಗ ಸ್ವಾಮೀಜಿಯವರು “ಆಯ್ತು ಹೋಗಿ ಬನ್ನಿ” ಎಂದರು. ಆದರೆ ಅವರ ಮುಖದಲ್ಲಿ ಕಾಣುತ್ತಿದ್ದ ಆ ಮಮತೆ ನಮಗೆ ತಾಯಿಯ ಪ್ರೀತಿಯನ್ನೇ ನೆನಪಿಸುತ್ತಿತ್ತು.

ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ

ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಒಮ್ಮೆ ಸ್ವಾಮೀಜಿಯವರ ಕುರಿತಾದ ಹಾಡಿಗೆ ಒಬ್ಬ ವಿದ್ಯಾರ್ಥಿ ಅವರಂತೆಯೇ ವೇಷ ಧರಿಸಿ ಅಭಿನಯ ಮಾಡುತ್ತಿದ್ದ. ಅದನ್ನು ನೋಡಿ ಸ್ವಾಮೀಜಿಯವರು ಸಂತೋಷಪಟ್ಟು ಅವನನ್ನು ವೇದಿಕೆಗೆ ಕರೆಸಿ ಸನ್ಮಾನಿಸಿದರು.

siddaganga shree shivakumara swamjiji
ಸಿದ್ದಗಂಗಾ ಮಠದ ಹಾಸ್ಟೆಲ್ (ಶಿವಕುಮಾರ ಸ್ವಾಮೀಜಿ ಭವನ)

ಉತ್ತರ ಕರ್ನಾಟಕದ ಖಾರದ ಕಥೆ

ಮಠದಲ್ಲಿ ಊಟದ ಸಮಯದಲ್ಲಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ತಮ್ಮ ಊರಿಂದ ತರಿಸಿಕೊಂಡ ಚಟ್ನಿ ಪುಡಿಯನ್ನು ತಟ್ಟೆಯಲ್ಲಿ ಹಾಕಿಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಸ್ವಾಮೀಜಿಯವರು ಹಾಸ್ಯವಾಗಿ “ಯಾಕ್ರಪ್ಪಾ ಸಾರು ಸಪ್ಪಗಿದೆಯಾ?” ಎಂದು ಕೇಳಿದಾಗ ಎಲ್ಲರೂ ನಗುತ್ತಿದ್ದರು.

ಓದಿನ ಬಗ್ಗೆ ಕಾಳಜಿ

ಒಮ್ಮೆ ಪರೀಕ್ಷೆಗಾಗಿ ಕೆಲವು ವಿದ್ಯಾರ್ಥಿಗಳು ಮಠದಲ್ಲೇ ಉಳಿದುಕೊಂಡಿದ್ದರು. ಸಂಜೆ ವೇಳೆ ಅವರು ಸ್ವಾಮೀಜಿಯವರ ಕಚೇರಿ ಮುಂದೆ ಕುಳಿತು ಓದುತ್ತಿದ್ದರು.

ಪ್ರತಿದಿನ ಸ್ವಾಮೀಜಿಯವರು ಬಂದು ಅವರ ಕುಶಲೋಪರಿ ವಿಚಾರಿಸಿ ತಿನ್ನಲು ಹಣ್ಣು ಕೊಡುತ್ತಿದ್ದರು. ಆದರೆ ಕೆಲವರು ಓದುತ್ತಿರುವಂತೆ ನಟಿಸುತ್ತಿದ್ದರು. ಒಂದು ದಿನ ಇದನ್ನು ಗಮನಿಸಿದ ಸ್ವಾಮೀಜಿಯವರು 'ಇಲ್ಲಿಯವರೆಗೆ ಏನು ಓದಿದ್ದೀರಿ?' ಎಂದು ಕೇಳಿ ನಂತರ ಎಲ್ಲರಿಗೂ ಓದಿನ ಮಹತ್ವ ತಿಳಿಸಿದರು.

siddaganga shree shivakumara swamjiji
ವಿದ್ಯಾರ್ಥಿಗಳಿಗೆ ಹಣ್ಣು ನೀಡುತ್ತಿರುವ ಸಿದ್ಧಜ್ಞಾಗ ಶ್ರೀಗಳು  (ಕಾಲ್ಪನಿಕ ಚಿತ್ರ)

ಜನರನ್ನು ಸೆಳೆದ ನಿಷ್ಕಲ್ಮಷ ನಗು

2008ರಲ್ಲಿ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಅದ್ದೂರಿಯಾಗಿ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಆಗಿನ ರಾಷ್ಟ್ರಪತಿಗಳಾದ ಎ.ಪಿ.ಜೆ.ಅಬ್ದುಲ್ ಕಲಾಂ ಸಹ ಆಗಮಿಸಿದ್ದರು.

ಆ ಸಂದರ್ಭದಲ್ಲಿ ಸ್ವಾಮೀಜಿಯವರು ಭಾಷಣ ಮಾಡುವಾಗ ಅವರ ಧ್ವನಿ ದೂರದಲ್ಲಿದ್ದವರಿಗೆ ಸ್ಪಷ್ಟವಾಗಿ ಕೇಳಿಸಿರಲಿಲ್ಲ. ಆದರೆ ಅವರು ನಗುತ್ತಿರುವ ದೃಶ್ಯ ಪರದೆಯಲ್ಲಿ ಕಾಣುತ್ತಿದ್ದಂತೆ ಸಭೆಯಲ್ಲಿದ್ದ ಜನರು ಭಾರೀ ಚಪ್ಪಾಳೆ ತಟ್ಟಿದರು. ಜನರನ್ನು ಸೆಳೆದದ್ದು ಅವರ ಮಾತಿಗಿಂತ ಅವರ ನಿಷ್ಕಲ್ಮಷ ನಗು.
ಇದನ್ನೂ ಓದಿ: ಧಾರವಾಡ ಮೂರುಸಾವಿರ ಮಠದ ಇತಿಹಾಸ

ಸರಳತೆ ಮತ್ತು ಮಾನವೀಯತೆ

ಸ್ವಾಮೀಜಿಯವರ ಬಳಿ ಮುಖ್ಯಮಂತ್ರಿ ಬರಲಿ ಅಥವಾ ಸಾಮಾನ್ಯ ರೈತ ಬರಲಿ – ಎಲ್ಲರೊಂದಿಗೆ ಒಂದೇ ರೀತಿಯ ಸರಳವಾಗಿ ಮಾತನಾಡುತ್ತಿದ್ದರು. ರೈತರನ್ನು ನೋಡಿದಾಗ “ಮಳೆ ಹೇಗಾಗಿದೆ? ಬೆಳೆ ಹೇಗಿದೆ?” ಎಂದು ಅವರ ಬದುಕಿನ ಬಗ್ಗೆ ವಿಚಾರಿಸುತ್ತಿದ್ದರು. ಈ ಸರಳತೆಯೇ ಅವರನ್ನು ಜನಮನದಲ್ಲಿ ಶಾಶ್ವತವಾಗಿ ಉಳಿಸಿತು.

siddaganga shree shivakumara swamjiji
ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ

ಇಂಥ ನೂರಾರು ನೆನಪುಗಳನ್ನು ವಿದ್ಯಾರ್ಥಿಗಳ ಮನದಲ್ಲಿ ಬಿಟ್ಟು ಸಿದ್ಧಗಂಗಾಶ್ರೀಗಳು ಇಹಲೋಕ ತ್ಯಜಿಸಿದರು. ಆದರೆ ಅವರ ದಾಸೋಹ, ಶಿಕ್ಷಣ ಮತ್ತು ಮಾನವೀಯತೆಯ ಆದರ್ಶಗಳು ಇನ್ನೂ ಲಕ್ಷಾಂತರ ಜನರ ಬದುಕಿಗೆ ಬೆಳಕು ನೀಡುತ್ತಿವೆ.

ಸಿದ್ಧಗಂಗಾ ಮಠದ ಆ ಮಡಿಲಲ್ಲಿ ಬೆಳೆದ ಪ್ರತಿಯೊಬ್ಬ ವಿದ್ಯಾರ್ಥಿಯ ಮನದಲ್ಲಿ ಅವರು ಎಂದೆಂದಿಗೂ ಜೀವಂತ.

siddaganga shree shivakumara swamjiji
ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ
ನವೀನ ಹಳೆಯದು