ತಡಿಯಾಂಡಮೋಳ್ ಬೆಟ್ಟದ ಚಾರಣ: ಪಶ್ಚಿಮ ಘಟ್ಟಗಳ ಅದ್ಭುತ ಅನುಭವ

kodagu-tadiandamol-trek-story
ತಡಿಯಾಂಡಮೋಳ್ ಬೆಟ್ಟದಲ್ಲಿ ಲೇಖಕರು ಮತ್ತು ಗೆಳೆಯರು
ಕರ್ನಾಟಕದ ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ಮಧ್ಯೆ ಪ್ರಕೃತಿ ತನ್ನ ಅಸಲಿ ಸೌಂದರ್ಯವನ್ನು ಪ್ರದರ್ಶಿಸುವ ಸ್ಥಳವೆಂದರೆ ಅದು ತಡಿಯಾಂಡಮೋಳ್ ಬೆಟ್ಟ. ಇತ್ತೀಚೆಗೆ ಸುದ್ದಿಯಲ್ಲಿದ್ದ ಈ ಬೆಟ್ಟ, ಸಾಹಸಪ್ರಿಯರು ಮತ್ತು ಪ್ರಕೃತಿ ಪ್ರೇಮಿಗಳ ಮನಸೆಳೆಯುವ ಅತ್ಯಂತ ಅದ್ಭುತ ಚಾರಣ ತಾಣವಾಗಿದೆ. ಕೇರಳದ ಯುವತಿ ಶಾರಣ್ಯ ಇಲ್ಲಿ ದಾರಿ ತಪ್ಪಿದ ಘಟನೆ ಬಳಿಕ ಈ ಬೆಟ್ಟ ದೇಶದಾದ್ಯಂತ ಗಮನ ಸೆಳೆದಿತ್ತು.

ತಡಿಯಾಂಡಮೋಳ್ ಬೆಟ್ಟವು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿದೆ. ಸಮುದ್ರಮಟ್ಟದಿಂದ ಸುಮಾರು 1,748 ಮೀಟರ್ ಎತ್ತರದಲ್ಲಿರುವ ಈ ಶಿಖರವು ಕರ್ನಾಟಕದ ಮೂರನೇ ಅತಿ ಎತ್ತರದ ಬೆಟ್ಟವಾಗಿದೆ. ಮೊದಲ ಸ್ಥಾನದಲ್ಲಿರುವುದು ಮುಳ್ಳಯ್ಯನಗಿರಿ ಹಾಗೂ ಎರಡನೇ ಸ್ಥಾನದಲ್ಲಿರುವುದು ಕುದುರೆಮುಖ. ಪಶ್ಚಿಮ ಘಟ್ಟಗಳ ಸರಣಿಯಲ್ಲಿ ಬರುವ ಈ ಬೆಟ್ಟವು ಜೀವ ವೈವಿಧ್ಯತೆಯ ನಿಧಿಯಾಗಿದ್ದು, ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳು ಭಾಗವಾಗಿದೆ.

ಈ ಬೆಟ್ಟವು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ ಸಮೀಪದಲ್ಲಿದ್ದು, ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿನ ದಟ್ಟ ಅರಣ್ಯಗಳು ಅಪರೂಪದ ಸಸ್ಯ ಹಾಗೂ ಪ್ರಾಣಿಗಳ ವಾಸಸ್ಥಾನವಾಗಿವೆ.

kodagu-tadiandamol-trek-story
ಬೆಟ್ಟದ ಪ್ರದೇಶದಲ್ಲಿ ಹರಿಯುತ್ತಿರುವ ಹಳ್ಳ

ಚಾರಣದ ಆರಂಭ

ನಾವು ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಆಗಿರುವ Karnataka Ecotourism Development Board ಮೂಲಕ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಂಡು ಬೆಳಗಿನ ಜಾವ 7 ಗಂಟೆಗೆ ಚಾರಣ ಪ್ರಾರಂಭಿಸಿದ್ದೆವು. ಈ ಟ್ರೆಕ್‌ನ ಒಟ್ಟು ದೂರವು ಸುಮಾರು 17 ಕಿಲೋಮೀಟರ್ ಆಗಿದ್ದು, ಸಾಮಾನ್ಯವಾಗಿ 5 ರಿಂದ 6 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.

ಚಾರಣದ ಆರಂಭದಲ್ಲೇ ಪ್ರಕೃತಿಯ ಮಡಿಲಲ್ಲಿ ಕಾಲಿಟ್ಟ ಅನುಭವ ನಮಗೆ ಹೊಸ ಉತ್ಸಾಹವನ್ನು ತುಂಬಿತು. ಮಂಜಿನಿಂದ ಆವೃತವಾದ ದಟ್ಟ ಕಾಡುಗಳು ಮತ್ತು ಪಕ್ಷಿಗಳ ಕಲರವ ನಮ್ಮ ಪ್ರಯಾಣಕ್ಕೆ ಸಂಗೀತವಾಗಿ ಪರಿಣಮಿಸಿತು.

ನೇತ್ರಾವತಿ ಶಿಖರ- ದಕ್ಷಿಣ ಕನ್ನಡದ ಮರೆತಿರುವ ಸ್ವರ್ಗ!

ಸಾಹಸಮಯ ಪಯಣ

ತಡಿಯಾಂಡಮೋಳ್ ಚಾರಣವು ಸುಲಭವೆಂದು ಹೇಳಲಾಗುವುದಾದರೂ, ಅದರಲ್ಲಿರುವ ಸವಾಲುಗಳು ಅದನ್ನು ರೋಮಾಂಚಕಾರಿ ಅನುಭವವನ್ನಾಗಿಸುತ್ತವೆ. ದಟ್ಟ ಕಾಡುಗಳ ನಡುವೆ ಮರಗಳು ಅಡ್ಡಲಾಗಿ ಬಿದ್ದಿರುವುದು, ಕಲ್ಲುಗಳ ಮೇಲೆ ನಡೆದು ಹೋಗುವುದು ಮತ್ತು ಮಂಜಿನ ನಡುವೆಯೇ ದಾರಿ ಹುಡುಕುವುದು ಸಾಹಸಮಯವಾಗಿತ್ತು.

ಚಾರಣದ ವೇಳೆ ನಾವು ಅನೇಕ ಪುಟ್ಟ ನದಿಗಳು ಮತ್ತು ಜಲಪಾತಗಳನ್ನು ದಾಟಬೇಕಾಯಿತು. ಅಲ್ಲಿನ ತಂಪಾದ, ಶುದ್ಧವಾದ ನೀರನ್ನು ಕುಡಿಯುವಾಗ ಅಮೃತವನ್ನು ಕುಡಿದ ಅನುಭವವಾಯಿತು. ಮರಗಳ ಬೇರುಗಳ ಮಧ್ಯೆ ಹರಿದುಬರುವ ಈ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂಬುದು ಸ್ಥಳೀಯರ ನಂಬಿಕೆ.

kodagu-tadiandamol-trek-story
ಜಾಲಿ..ಜಾಲಿ..ಎಲ್ಲಾ ಜಾಲಿ

ಪ್ರಕೃತಿಯ ಅದ್ಭುತ ಸೌಂದರ್ಯ

ಮಾರ್ಗ ಮಧ್ಯೆ ಹಸಿರು ಹುಲ್ಲುಗಾವಲುಗಳು, ಬೃಹತ್ ಬಂಡೆಗಳು ಹಾಗೂ ಮಂಜಿನಿಂದ ಆವೃತವಾದ ಕಣಿವೆಗಳು ನಮ್ಮ ಕಣ್ಮನ ಸೆಳೆದವು. ಕೆಲವೊಮ್ಮೆ ಪಕ್ಕದಲ್ಲೇ ಯಾರು ಇದ್ದಾರೆ ಎಂಬುದೇ ಕಾಣದಷ್ಟು ದಟ್ಟ ಮಂಜಿನ ನಡುವೆ ಚಾರಣ ಮಾಡುವುದು ರೋಮಾಂಚಕಾರಿ ಮತ್ತು ಸ್ವಲ್ಪ ಭಯಾನಕವೂ ಆಗಿತ್ತು.

ಈ ಪಯಣದಲ್ಲಿ ಅನೇಕ ಚಿಕ್ಕ ಜಲಪಾತಗಳು ನಮಗೆ ಸಿಕ್ಕವು. ಅಲ್ಲಲ್ಲಿ ವಿಶ್ರಾಂತಿ ತೆಗೆದುಕೊಂಡು ಫೋಟೋ ಮತ್ತು ವಿಡಿಯೋಗಳನ್ನು ತೆಗೆಯುತ್ತಾ ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಫೋಟೋ ತೆಗೆಯುವಾಗ ಜೋರಾದ ಗಾಳಿಯಿಂದ ನನ್ನ ಜರ್ಕಿನ್ ಹಾರಿ ಹೋಗಿತ್ತು. ಆದರೆ ಅದೇ ಜರ್ಕಿನ್ ಬೆಟ್ಟ ಇಳಿಯುವಾಗ ಮತ್ತೆ ಸಿಕ್ಕಿದ್ದು ಆ ದಿನದ ವಿಶೇಷ ನೆನಪಾಗಿ ಉಳಿಯಿತು.

ಸಿಡಿಲು ಮಲ್ಲಿಕಾರ್ಜುನ ಬೆಟ್ಟ- ಪ್ರಕೃತಿ, ಸಾಹಸ ಮತ್ತು ಭಕ್ತಿಯ ಸಂಗಮ

ಮಳೆಯ ನಡುವೆ ಶಿಖರಾರೋಹಣ

ತಡಿಯಾಂಡಮೋಳ್ ತನ್ನ ಅಚಾನಕ್ ಹವಾಮಾನ ಬದಲಾವಣೆಗೆ ಪ್ರಸಿದ್ಧವಾಗಿದೆ. ನಮ್ಮ ಚಾರಣದ ವೇಳೆ ಕೂಡ ಭಾರೀ ಮಳೆ ಸುರಿಯಿತು. ಆದರೂ ನಾವು ಎದೆಗುಂದದೆ ಶಿಖರ ತಲುಪುವ ಸಂಕಲ್ಪದಿಂದ ಮುಂದೆ ಸಾಗಿದ್ದೆವು.

ಶಿಖರ ತಲುಪಿದಾಗ ಎಲ್ಲೆಡೆ ಹರಡಿದ ಬೆಟ್ಟಗುಡ್ಡಗಳ ಸಾಲು, ಅಚ್ಚಹಸಿರಿನಿಂದ ಆವೃತವಾದ ದಟ್ಟ ಅರಣ್ಯಗಳು ಮತ್ತು ಮೋಡಗಳ ನಡುವೆ ಕಾಣಿಸಿದ ದೃಶ್ಯ ನಮ್ಮ ಎಲ್ಲಾ ಆಯಾಸವನ್ನು ಕ್ಷಣಾರ್ಧದಲ್ಲಿ ಮಾಯಗೊಳಿಸಿತು. ಪ್ರಕೃತಿಯ ಮಡಿಲಲ್ಲಿ ನಿಂತ ಆ ಕ್ಷಣ ನಮ್ಮ ಜೀವನದ ಮರೆಯಲಾಗದ ಅನುಭವವಾಗಿ ಉಳಿಯಿತು.

ಈ ಚಾರಣದ ವೇಳೆ ನಮಗೆ ಒಬ್ಬ ಅಚ್ಚರಿ ಗೆಳೆಯ ಸಿಕ್ಕನು- ಒಂದು ಪುಟ್ಟ ನಾಯಿ. ಚಾರಣದ ಆರಂಭದಿಂದ ಅಂತ್ಯದವರೆಗೆ ಅದು ನಮಗೆ ಮಾರ್ಗದರ್ಶಕನಂತೆ ದಾರಿ ತೋರಿಸಿತು. ಮಾನವ ಮತ್ತು ಪ್ರಕೃತಿಯ ನಡುವೆ ಇರುವ ಅನನ್ಯ ಬಾಂಧವ್ಯವನ್ನು ಅದು ನಮಗೆ ನೆನಪಿಸಿತು.

kodagu-tadiandamol-trek-story
ಚಾರಣದ ವೇಳೆ ಸಿಕ್ಕ ಗೆಳೆಯ

ಜೀವ ವೈವಿಧ್ಯತೆ ಮತ್ತು ಸವಾಲುಗಳು

ಈ ಪ್ರದೇಶದಲ್ಲಿ ಅಪರೂಪದ ಪಕ್ಷಿ ಪ್ರಭೇದಗಳು, ಚಿಟ್ಟೆಗಳು ಹಾಗೂ ಅನೇಕ ಕೀಟಗಳು ಕಂಡುಬರುತ್ತವೆ. ವಿಶೇಷವಾಗಿ ಮಳೆಗಾಲದಲ್ಲಿ ಲೀಚ್‌ಗಳು (ಜಿಗಣೆಗಳು) ಹೆಚ್ಚಾಗಿ ಕಂಡುಬರುತ್ತವೆ. ಅವು ನಮ್ಮ ರಕ್ತವನ್ನು ಹೀರುತ್ತಿದ್ದರೂ, ಇದು ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಯ ಭಾಗವಾಗಿದೆ.

ಐತಿಹಾಸಿಕ ಹಿನ್ನೆಲೆ

ತಡಿಯಾಂಡಮೋಳ್ ಬೆಟ್ಟ ಸಮೀಪದಲ್ಲಿರುವ ನಾಲ್ಕುನಾಡು ಅರಮನೆ ಈ ಪ್ರದೇಶದ ಐತಿಹಾಸಿಕ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಸ್ಮಾರಕವಾಗಿದೆ. 18ನೇ ಶತಮಾನದಲ್ಲಿ ಹಳೆಯೇರಿ (Haleri) ವಂಶದ ಕೊಡಗು ಅರಸರು ನಿರ್ಮಿಸಿದ ಈ ಅರಮನೆ, ಆಡಳಿತ ಕೇಂದ್ರವಾಗಿಯೂ ಹಾಗೂ ಬೇಸಿಗೆ ವಿಶ್ರಾಂತಿ ತಾಣವಾಗಿಯೂ ಬಳಸಲ್ಪಟ್ಟಿತು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಮತ್ತು ತಂಪಾದ ಹವಾಮಾನದಿಂದ ಕೂಡಿದ ಈ ಪ್ರದೇಶವು ರಾಜವಂಶದವರಿಗೆ ಸೂಕ್ತ ಆಶ್ರಯವಾಗಿತ್ತು.

ಇಂದು ನಾಲ್ಕುನಾಡು ಅರಮನೆ ತಡಿಯಾಂಡಮೋಳ್ ಚಾರಣದ ಪ್ರಮುಖ ಆರಂಭಿಕ ಕೇಂದ್ರವಾಗಿ ಪ್ರಸಿದ್ಧಿಯಾಗಿದೆ. ಈ ಅರಮನೆಯ ಸುತ್ತಮುತ್ತಲಿನಿಂದಲೇ ಚಾರಣದ ಮಾರ್ಗ ಆರಂಭವಾಗುವುದರಿಂದ, ಸಾಹಸ ಮತ್ತು ಇತಿಹಾಸ ಎರಡನ್ನೂ ಒಂದೇ ಸ್ಥಳದಲ್ಲಿ ಅನುಭವಿಸುವ ಅಪರೂಪದ ಅವಕಾಶ ಪ್ರವಾಸಿಗರಿಗೆ ದೊರೆಯುತ್ತದೆ. ಹೀಗಾಗಿ, ತಡಿಯಾಂಡಮೋಳ್ ಪ್ರಕೃತಿಯ ಅದ್ಭುತವಾಗಿದ್ದರೆ, ನಾಲ್ಕುನಾಡು ಅರಮನೆ ಕೊಡಗಿನ ಸಮೃದ್ಧ ಐತಿಹಾಸಿಕ ಪರಂಪರೆಯ ಸಂಕೇತವಾಗಿದೆ.

kodagu-tadiandamol-trek-story
ಈ ಹಸಿರು ಸಿರಿಯಲಿ..ಮನಸು ಮೆರೆಯಲಿ

ಪ್ರವಾಸಿಗರಿಗೆ ಮಾಹಿತಿ

ಸ್ಥಳ: ವಿರಾಜಪೇಟೆ ತಾಲೂಕು, ಕೊಡಗು ಜಿಲ್ಲೆ

ಎತ್ತರ: 1,748 ಮೀಟರ್

ಚಾರಣದ ದೂರ: ಸುಮಾರು 17 ಕಿಲೋಮೀಟರ್ (ಹೋಗಿ- ಬಂದು)

ಸಮಯ: 5- 6 ಗಂಟೆಗಳು

ಉತ್ತಮ ಸಮಯ: ಅಕ್ಟೋಬರ್ ರಿಂದ ಫೆಬ್ರವರಿ

ಅನುಮತಿ: ಕರ್ನಾಟಕ ಇಕೋ ಟೂರಿಸಂ ಅಥವಾ ಅರಣ್ಯ ಇಲಾಖೆಯಿಂದ

ಆರಂಭಿಕ ಸ್ಥಳ: ನಾಲ್ಕುನಾಡು ಪ್ಯಾಲೆಸ್ ಪ್ರದೇಶ

ಕಬ್ಬೆ ಬೆಟ್ಟ: ಕೊಡಗಿನ ಮೌನದೊಳಗಿನ ನೈಸರ್ಗಿಕ ವೈಭವ

ಪರಿಸರ ಸಂರಕ್ಷಣೆ- ನಮ್ಮ ಜವಾಬ್ದಾರಿ

ತಡಿಯಾಂಡಮೋಳ್ ಪ್ರಕೃತಿ ಸಂಪತ್ತಿನ ನಿಧಿಯಾಗಿರುವುದರಿಂದ ಇಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. 'Leave No Trace' ತತ್ವವನ್ನು ಅನುಸರಿಸುವುದು ಪ್ರತಿಯೊಬ್ಬ ಚಾರಣಪ್ರಿಯರ ಕರ್ತವ್ಯವಾಗಿದೆ. ಪರಿಸರವನ್ನು ಕಾಪಾಡಿದಾಗ ಮಾತ್ರ ಇಂತಹ ಅದ್ಭುತ ಸ್ಥಳಗಳು ಮುಂದಿನ ಪೀಳಿಗೆಗೂ ಉಳಿಯುತ್ತವೆ.

ತಡಿಯಾಂಡಮೋಳ್ ಕೇವಲ ಒಂದು ಬೆಟ್ಟವಲ್ಲ; ಅದು ಸಾಹಸ, ಶಾಂತಿ ಮತ್ತು ಪ್ರಕೃತಿಯ ಸೌಂದರ್ಯದ ಸಂಕಲನವಾಗಿದೆ. ಈ ಚಾರಣವು ನಮಗೆ ಧೈರ್ಯ, ಸಹನೆ ಮತ್ತು ಪರಿಸರದ ಮಹತ್ವವನ್ನು ಕಲಿಸಿತು. ಒಮ್ಮೆ ಇಲ್ಲಿ ಭೇಟಿ ನೀಡಿದರೆ ಮತ್ತೆ ಮತ್ತೆ ಬರಬೇಕೆನಿಸುವಷ್ಟು ಈ ಬೆಟ್ಟ ಮನಸೆಳೆಯುತ್ತದೆ. ಪ್ರಕೃತಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಜೀವನದಲ್ಲಿ ಕನಿಷ್ಠ ಒಮ್ಮೆ ತಡಿಯಾಂಡಮೋಳ್ ಚಾರಣವನ್ನು ಅನುಭವಿಸಬೇಕು.

ಲೇಖನ: ಜೀವನ್ ಎಸ್.ಗೌಡ, ಹವ್ಯಾಸಿ ಬರಹಗಾರರು

ನವೀನ ಹಳೆಯದು