ಕುಂತಿಬೆಟ್ಟ ಟ್ರೆಕ್ಕಿಂಗ್- ಪ್ರಕೃತಿಯ ಸೌಂದರ್ಯ ಮತ್ತು ನಮ್ಮ ಸಾಹಸ

kunti betta trecking mandya
ಕುಂತಿ ಬೆಟ್ಟದ ವಿಹಂಗಮ ನೋಟ
ಮಂಡ್ಯ ಜಿಲ್ಲೆಯ ಪಾಂಡುಪುರದ ಸಮೀಪದಲ್ಲಿರುವ 'ಕುಂತಿಬೆಟ್ಟ' ಇಂದು ಟ್ರೆಕ್ಕಿಂಗ್ ಪ್ರಿಯರ ಸ್ವರ್ಗವಾಗಿಬಿಟ್ಟಿದೆ. ಆದರೆ ಈ ಬೆಟ್ಟದ ವಿಶೇಷತೆ ಕೇವಲ ಅದರ ಪ್ರಕೃತಿ ಸೌಂದರ್ಯದಲ್ಲೇ ಇಲ್ಲ… ಇದರ ಹಿಂದೆ ಒಂದು ಪುರಾಣದ ನಂಟು ಕೂಡ ಇದೆ. ಸ್ಥಳೀಯ ಜನರ ನಂಬಿಕೆಯ ಪ್ರಕಾರ, ರಾಮ, ಲಕ್ಷ್ಮಣ ಮತ್ತು ಸೀತೆಯವರು ತಮ್ಮ ವನವಾಸದ ಸಮಯದಲ್ಲಿ ಈ ಭಾಗಕ್ಕೆ ಬಂದು ಕೆಲಕಾಲ ನೆಲೆಸಿದ್ದರು ಎನ್ನಲಾಗುತ್ತದೆ. ಇನ್ನೂ ಕೆಲವರು ಮಹಾಭಾರತದ ಕುಂತಿದೇವಿಯ ಹೆಸರಿನಿಂದಲೇ ಈ ಬೆಟ್ಟಕ್ಕೆ 'ಕುಂತಿಬೆಟ್ಟ' ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ. ಪುರಾಣದ ಕಥೆಗಳು ಏನೇ ಇರಲಿ, ಈ ಬೆಟ್ಟದ ಮೇಲಕ್ಕೆ ಹತ್ತಿದಾಗ ಸಿಗುವ ಅನುಭವ ಮಾತ್ರ ನಿಜವಾಗಿಯೂ ವಿಭಿನ್ನ.

ಚಾರಣ ಪ್ರಿಯರಾದ ನಾವು ಕೂಡ ಬಹಳ ದಿನಗಳಿಂದ ಕುಂತಿಬೆಟ್ಟಕ್ಕೆ ಹೋಗಬೇಕೆಂದು ಪ್ಲ್ಯಾನ್ ಮಾಡುತ್ತಿದ್ದೆವು. ಕೊನೆಗೂ ಒಂದು ದಿನ ಸಮಯ ಕೂಡಿ ಬಂದಿತು. ನಮ್ಮ ಊರಾದ ಕೆ.ಆರ್.ನಗರದಿಂದ ಏಳು ಜನರ ತಂಡ ಬೆಳಗಿನ ಜಾವ ಐದು ಗಂಟೆಗೆ ಬೈಕ್‌ಗಳಲ್ಲಿ ಹೊರಟೆವು. ಮುಂಜಾನೆ ರಸ್ತೆಯಲ್ಲಿ ಬೀಸುತ್ತಿದ್ದ ತಂಪಾದ ಗಾಳಿ, ಸ್ನೇಹಿತರ ಜೊತೆಯ ಮಾತುಕತೆ, ಖಾಲಿ ರಸ್ತೆಯಲ್ಲಿ ಸಾಗುತ್ತಿದ್ದ ಪ್ರಯಾಣ- ಇವೆಲ್ಲಾ ಟ್ರಿಪ್ ಶುರುವಾಗುವ ಮೊದಲೇ ಒಂದು ವಿಭಿನ್ನ ಖುಷಿ ಕೊಡುತ್ತಿತ್ತು. ಸುಮಾರು 40 ಕಿಲೋ ಮೀಟರ್ ಪ್ರಯಾಣದ ನಂತರ ಬೆಳಗ್ಗೆ ಆರು ಗಂಟೆ ವೇಳೆಗೆ ಕುಂತಿಬೆಟ್ಟ ತಲುಪಿದೆವು.

ಅಷ್ಟರಲ್ಲಿ ಸೂರ್ಯ ನಿಧಾನವಾಗಿ ಉದಯವಾಗುತ್ತಿದ್ದ. ಮಂಜಿನ ಮಧ್ಯೆ ಕಾಣುತ್ತಿದ್ದ ಬೆಟ್ಟದ ಆ ದೃಶ್ಯ ನೋಡಿದಾಗಲೇ 'ಇವತ್ತು ಒಳ್ಳೆಯ ಅನುಭವ ಸಿಗುತ್ತೆ' ಅನ್ನೋ ಭಾವನೆ ಮನಸ್ಸಿನಲ್ಲಿ ಬಂತು. ಅಲ್ಲಿಗೆ ಈಗಾಗಲೇ ಹಲವರು ಟ್ರೆಕ್ಕಿಂಗ್‌ಗೆ ಬಂದಿದ್ದರು. ಕೆಲವರು ಫೋಟೋ ತೆಗೆದುಕೊಳ್ಳುತ್ತಿದ್ದರು, ಇನ್ನೂ ಕೆಲವರು ಗುಂಪಾಗಿ ಬೆಟ್ಟ ಹತ್ತಲು ಸಿದ್ಧವಾಗುತ್ತಿದ್ದರು. ಕುಂತಿಬೆಟ್ಟ ಈಗ ಮಂಡ್ಯ, ಮೈಸೂರು ಮತ್ತು ಬೆಂಗಳೂರಿನ ಯುವಕರಿಗೆ ಫೇವರಿಟ್ ವೀಕೆಂಡ್ ಟ್ರೆಕ್ಕಿಂಗ್ ಸ್ಪಾಟ್ ಆಗಿದೆ ಅನ್ನೋದು ಅಲ್ಲಿ ಹೋದಾಗ ಗೊತ್ತಾಗುತ್ತದೆ.

ಕುಂತಿ ಬೆಟ್ಟದಲ್ಲಿ ಗೆಳೆಯರೊಂದಿಗೆ ಲೇಖಕರು

ಬಾಲ್ಯದ ನೆನಪುಗಳನ್ನು ಮರಳಿ ತಂದ ಚಾರಣ

ಚಾರಣವನ್ನು ಆರಂಭಿಸಿದ ನಾವು ಮೊದಲಿನಿಂದಲೇ ತುಂಬಾ ಉತ್ಸಾಹದಲ್ಲಿದ್ದೆವು. ಆರಂಭದ ದಾರಿ ಸ್ವಲ್ಪ ಸುಲಭವಾಗಿದ್ದರಿಂದ ತಮಾಷೆ ಮಾಡುತ್ತಾ, ಒಬ್ಬರನ್ನೊಬ್ಬರು ಕೆಣಕುತ್ತಾ ಮುಂದೆ ಸಾಗುತ್ತಿದ್ದೆವು. ದಾರಿಯಲ್ಲಿ ಸಿಗುತ್ತಿದ್ದ ದೊಡ್ಡ ದೊಡ್ಡ ಬಂಡೆಗಳ ಮೇಲೆ ಜಾರುಬಂಡಿಯಂತೆ ಜಾರುತ್ತಾ ಬಾಲ್ಯದ ದಿನಗಳನ್ನು ನೆನಪಿಸಿಕೊಂಡೆವು. ನಿಜ ಹೇಳಬೇಕಂದ್ರೆ, ಆ ಕ್ಷಣದಲ್ಲಿ ನಾವು ಮತ್ತೆ ಚಿಕ್ಕ ಮಕ್ಕಳಾದಂತಾಗಿತ್ತು.

ಕುಂತಿಬೆಟ್ಟದ ವಿಶೇಷತೆ ಅಂದ್ರೆ ಇಲ್ಲಿ ಕೇವಲ ಮಣ್ಣು ದಾರಿಗಳು ಮಾತ್ರ ಇರಲ್ಲ. ದೊಡ್ಡ ದೊಡ್ಡ ಕಲ್ಲುಬಂಡೆಗಳು, ಸ್ವಾಭಾವಿಕವಾಗಿ ನಿರ್ಮಾಣವಾದ ಸಣ್ಣ ಗುಹೆಗಳಂತಹ ಜಾಗಗಳು, ಕೆಲವೆಡೆ ಸ್ಲೋಪ್ ಇರುವ ಕಲ್ಲಿನ ಮೇಲ್ಮೈ- ಇವೆಲ್ಲಾ ಟ್ರೆಕ್ಕಿಂಗ್‌ಗೆ ಇನ್ನಷ್ಟು ರೋಮಾಂಚನ ನೀಡುತ್ತವೆ. ಕೆಲವೊಮ್ಮೆ ಕೈಯನ್ನೂ ಬಳಸಿಕೊಂಡು ಹತ್ತಬೇಕಾಗುತ್ತದೆ. ಅದಕ್ಕಾಗಿಯೇ ಇಲ್ಲಿ ಬರುವಾಗ ಒಳ್ಳೆಯ ಶೂ ಹಾಕಿಕೊಂಡು ಬರೋದು ತುಂಬಾ ಮುಖ್ಯ.

ಅರ್ಧ ಬೆಟ್ಟ ಹತ್ತುವಷ್ಟರಲ್ಲಿ ಸ್ವಲ್ಪ ಸುಸ್ತಾಗಿತ್ತು. ಹಾಗಾಗಿ ನಾವು ಒಂದು ದೊಡ್ಡ ಬಂಡೆಯ ನೆರಳಿನಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಂಡೆವು. ಜೊತೆಯಲ್ಲಿ ತಂದಿದ್ದ ಹಣ್ಣುಹಂಪಲು, ನೀರು ಕುಡಿಯುತ್ತಾ ಸ್ವಲ್ಪ ಹೊತ್ತು ಪ್ರಕೃತಿಯನ್ನು ಆನಂದಿಸಿದೆವು. ಅಲ್ಲಿ ಕುಳಿತಾಗ ಕೆಳಗಡೆ ಕಾಣುತ್ತಿದ್ದ ಹಸಿರು ಹೊಲಗಳು, ದೂರದಲ್ಲಿ ಸಾಗುತ್ತಿದ್ದ ರಸ್ತೆಗಳು, ಮುಂಜಾನದ ಗಾಳಿ- ಇವೆಲ್ಲಾ ಮನಸ್ಸಿಗೆ ಒಂದು ವಿಚಿತ್ರವಾದ ಶಾಂತಿ ಕೊಡುತ್ತಿತ್ತು.

kunti betta trecking mandya
ಕುಂತಿ ಬೆಟ್ಟದಲ್ಲಿ ರಾರಾಜಿಸಿದ ಕನ್ನಡ ಬಾವುಟ

ಕರ್ನಾಟಕದ ಬಾವುಟ ಹಾರಿಸಿದ ಹೆಮ್ಮೆಯ ಕ್ಷಣ

ಅಲ್ಲಿ ಇದ್ದ ಒಂದು ದೊಡ್ಡ ಬಂಡೆ ನೋಡಿದಾಗ ನನ್ನ ಮನಸ್ಸಿನಲ್ಲಿ ಒಂದು ಆಸೆ ಬಂತು. 'ಹೇಗಾದರೂ ಈ ಬಂಡೆ ಮೇಲೆ ಹತ್ತಿ ಕರ್ನಾಟಕದ ಬಾವುಟ ಹಾರಿಸಬೇಕು' ಅನ್ನೋ ಆಸೆ. ಸ್ನೇಹಿತರು ಮೊದಲಿಗೆ ಜಾಗ್ರತೆ ಅಂತ ಹೇಳಿದ್ರೂ, ಕೊನೆಗೆ ಎಲ್ಲರೂ ಸೇರಿ ಹತ್ತಲು ಸಹಾಯ ಮಾಡಿದರು. ಸ್ವಲ್ಪ ಕಷ್ಟಪಟ್ಟು ಮೇಲೆ ಹತ್ತಿದ ಮೇಲೆ ನಮ್ಮ ಕನ್ನಡದ ಬಾವುಟವನ್ನು ಗಾಳಿಯಲ್ಲಿ ಹಾರಿಸಿದ ಕ್ಷಣ ನಿಜವಾಗಿಯೂ ಮರೆಯಲಾಗದ ಅನುಭವ.

ಆ ಸಮಯದಲ್ಲಿ ಕೆಳಗಿದ್ದ ಸ್ನೇಹಿತರು ಕೂಗಿ ಖುಷಿಪಟ್ಟರು. ಆ ಕ್ಷಣದಲ್ಲಿ ನಮಗೆ ಬಂದ ಹೆಮ್ಮೆ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಪ್ರವಾಸ ಅಂದ್ರೆ ಕೇವಲ ಒಂದು ಜಾಗ ನೋಡಿ ಬರೋದು ಅಲ್ಲ… ಅಲ್ಲಿ ಸಿಗುವ ಭಾವನೆಗಳು, ಸ್ನೇಹಿತರ ಜೊತೆ ಸೃಷ್ಟಿಯಾಗುವ ನೆನಪುಗಳೇ ನಿಜವಾದ ಟ್ರಿಪ್ ಅನ್ನಿಸಿತು.

ನಂತರ ಮತ್ತೆ ಮುಂದೆ ಸಾಗಿದ ನಾವು ಬಂಡೆಗಳ ಮಧ್ಯೆ ಫೋಟೋ ಕ್ಲಿಕ್ಕಿಸುತ್ತಾ, ಕೆಲವೆಡೆ ವಿಡಿಯೋ ಶೂಟ್ ಮಾಡುತ್ತಾ ಮೇಲಕ್ಕೆ ಹತ್ತುತ್ತಲೇ ಹೋದೆವು. ಕುಂತಿಬೆಟ್ಟದಲ್ಲಿ ಫೋಟೋಗ್ರಫಿಗೆ ಸಾಕಷ್ಟು ಅದ್ಭುತ ಜಾಗಗಳಿವೆ. ವಿಶೇಷವಾಗಿ ಸೂರ್ಯೋದಯ ಸಮಯದಲ್ಲಿ ಇಲ್ಲಿ ತೆಗೆದ ಫೋಟೋಗಳು ತುಂಬಾ ಸುಂದರವಾಗಿ ಬರುತ್ತವೆ. ಅದಕ್ಕಾಗಿಯೇ ಹಲವಾರು ಫೋಟೋಗ್ರಾಫರ್‌ಗಳು ಕೂಡ ಇಲ್ಲಿ ಬರುತ್ತಾರೆ.

kunti betta trecking mandya
ಗೆಳೆಯರೊಂದಿಗೆ ಲೇಖಕರ ಸಂಭ್ರಮ

ಬೆಟ್ಟದ ತುದಿಯಲ್ಲಿ ಸಿಕ್ಕ ಆನಂದ

ಕೊನೆಗೂ ನಾವು ಬೆಟ್ಟದ ತುತ್ತತುದಿಯನ್ನು ತಲುಪಿದೆವು. ಅಲ್ಲಿ ನಿಂತು ನೋಡಿದ ದೃಶ್ಯವನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಮೇಲಿನಿಂದ ನೋಡಿದಾಗ ಕೆರೆತೊಣ್ಣೂರು ಕೆರೆ ಒಂದು ದೊಡ್ಡ ಸಮುದ್ರದಂತೆ ಕಾಣುತ್ತಿತ್ತು. ಸುತ್ತಮುತ್ತಲಿನ ಹಳ್ಳಿಗಳು ಚಿಕ್ಕ ಆಟಿಕೆ ಮನೆಗಳಂತೆ ಕಾಣುತ್ತಿದ್ದವು. ಬೆಳಗಿನ ಬೆಳಕಿನಲ್ಲಿ ಮಿನುಗುತ್ತಿದ್ದ ನೀರು, ಹಸಿರು ಹೊಲಗಳು, ದೂರದ ಬೆಟ್ಟಗಳು- ಇವೆಲ್ಲಾ ಸೇರಿ ಒಂದು ಅದ್ಭುತ ದೃಶ್ಯ ಸೃಷ್ಟಿಸಿತ್ತು.

ಕುಂತಿಬೆಟ್ಟದ ಇನ್ನೊಂದು ವಿಶೇಷತೆ ಅಂದ್ರೆ ಇಲ್ಲಿ ರಾತ್ರಿ ಟ್ರೆಕ್ಕಿಂಗ್ ಕೂಡ ನಡೆಯುತ್ತದೆ. ವಿಶೇಷವಾಗಿ ಪೂರ್ಣಿಮೆಯ ಸಮಯದಲ್ಲಿ ಹಲವರು ರಾತ್ರಿ ಬೆಟ್ಟ ಹತ್ತಿ ಚಂದ್ರನ ಬೆಳಕಿನಲ್ಲಿ ಪ್ರಕೃತಿಯನ್ನು ಆನಂದಿಸಲು ಬರುತ್ತಾರೆ. ಆದರೆ ರಾತ್ರಿ ಟ್ರೆಕ್ಕಿಂಗ್ ಮಾಡುವವರು ಜಾಗ್ರತೆ ವಹಿಸುವುದು ತುಂಬಾ ಮುಖ್ಯ. ಕೆಲವೆಡೆ ಕಲ್ಲುಗಳು ಜಾರುವ ಸಾಧ್ಯತೆ ಇರುತ್ತದೆ.

ನಾವು ಕೂಡ ಅಲ್ಲಿ ಸ್ವಲ್ಪ ಸಮಯ ಕುಳಿತು ಪ್ರಕೃತಿಯನ್ನು ಎಂಜಾಯ್ ಮಾಡಿದೆವು. ಗಾಳಿ ಜೋರಾಗಿ ಬೀಸುತ್ತಿತ್ತು. ಕೆಲವರು ಫೋಟೋ ತೆಗೆದುಕೊಳ್ಳುತ್ತಿದ್ದರು, ಕೆಲವರು ಸುಮ್ಮನೆ ದೃಶ್ಯ ನೋಡುತ್ತಾ ಕುಳಿತಿದ್ದರು. ಆದರೆ ನಾವು ಹೋದ ಕಡೆ ಡ್ಯಾನ್ಸ್ ಮಾಡದೆ ಬಂದರೆ ಸಮಾಧಾನವೇ ಇಲ್ಲ. ಹಾಗಾಗಿ ಅಲ್ಲೇ ಒಂದು ಹಾಡು ಹಾಕಿಕೊಂಡು ಸ್ವಲ್ಪ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸಿದೆವು. ಆ ಕ್ಷಣಗಳಲ್ಲಿ ಯಾವುದೇ ಟೆನ್ಷನ್ ಇರಲಿಲ್ಲ… ಕೇವಲ ಖುಷಿ ಮಾತ್ರ ಇತ್ತು.

kunti betta trecking mandya
ಚಾರಣಕ್ಕೆ ಹೊರಡುವ ಮುನ್ನ ತೆಗೆದ ಚಿತ್ರ
ಸ್ವಲ್ಪ ಸಮಯ ಕಳೆದ ನಂತರ ನಿಧಾನವಾಗಿ ಬೆಟ್ಟ ಇಳಿಯಲು ಶುರುಮಾಡಿದೆವು. ಇಳಿಯುವಾಗಲೂ ಸಾಕಷ್ಟು ಜಾಗಗಳಲ್ಲಿ ನಿಂತು ಫೋಟೋ ತೆಗೆದುಕೊಂಡೆವು. ಬೆಳಗ್ಗೆ ಹತ್ತುವಾಗ ಕಾಣದಿದ್ದ ಕೆಲವು ಸುಂದರ ದೃಶ್ಯಗಳು ಈಗ ಸ್ಪಷ್ಟವಾಗಿ ಕಾಣುತ್ತಿವೆ. ಕೊನೆಗೆ ಕೆಳಗೆ ತಲುಪುವಷ್ಟರಲ್ಲಿ ದೇಹ ಸುಸ್ತಾಗಿದ್ದರೂ ಮನಸ್ಸು ಮಾತ್ರ ತುಂಬಾ ಹಗುರವಾಗಿತ್ತು.

ಕುಂತಿಬೆಟ್ಟ ಟ್ರೆಕ್ಕಿಂಗ್ ಸಂಪೂರ್ಣ ಮಾಡಲು ಸಾಮಾನ್ಯವಾಗಿ ಮೂರುರಿಂದ ನಾಲ್ಕು ಗಂಟೆ ಸಾಕು. ಇಲ್ಲಿ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಕುಟುಂಬದವರ ಜೊತೆಗೂ ಬರಬಹುದು, ಸ್ನೇಹಿತರ ಜೊತೆಗೂ ಬರಬಹುದು. ಆದರೆ ಪ್ಲಾಸ್ಟಿಕ್ ತ್ಯಾಜ್ಯ ಹಾಕದೇ ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ.

ಸಾಹಸ, ಪ್ರಕೃತಿ, ಸ್ನೇಹ ಮತ್ತು ನೆನಪುಗಳನ್ನು ಒಂದೇ ಜಾಗದಲ್ಲಿ ಅನುಭವಿಸಬೇಕೆಂದರೆ ಕುಂತಿಬೆಟ್ಟ ಖಂಡಿತವಾಗಿಯೂ ಒಮ್ಮೆ ಭೇಟಿ ನೀಡಬೇಕಾದ ಸ್ಥಳ. ಕೆಲವೊಂದು ಪ್ರಯಾಣಗಳು ಕೇವಲ ಒಂದು ಟ್ರಿಪ್ ಆಗಿರುವುದಿಲ್ಲ… ಅವು ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವಗಳಾಗಿಬಿಡುತ್ತವೆ. ನಮಗೆ ಕುಂತಿಬೆಟ್ಟ ಕೂಡ ಅಂತಹದೇ ಒಂದು ನೆನಪಾಗಿ ಉಳಿಯಿತು.

ಲೇಖಕರು: ಜೀವನ್ ಎಸ್.ಗೌಡ (ಹವ್ಯಾಸಿ ಬರಹಗಾರರು)

ನವೀನ ಹಳೆಯದು