Karnatak College Dharwad: ಕೆಸಿಡಿ ಇತಿಹಾಸ, ಕ್ಯಾಂಪಸ್ ಮತ್ತು ನೆನಪುಗಳು

Karnatak College Dharwad kcd campus
ಧಾರವಾಡ ಕರ್ನಾಟಕ ಕಾಲೇಜು
ಮಲೆನಾಡ ಸೆರಗಿನ ಸಹ್ಯಾದ್ರಿ ಅಂಚಿನಲ್ಲಿ ನೆಲೆಸಿರುವ ಧಾರವಾಡಗೆ ಒಂದಿಷ್ಟು ವಿಶಿಷ್ಟವಾದ ಚುಂಬಕ ಶಕ್ತಿ ಇದೆ ಎಂದು ಸ್ಥಳೀಯರು ಹೆಮ್ಮೆಪಡುತ್ತಾರೆ. ಈ ನೆಲದ ಮಣ್ಣಿನಲ್ಲಿ ಸಾಹಿತ್ಯದ ಸುಗಂಧವಿದೆ; ಗದ್ಯ, ಪದ್ಯ, ಸಂಗೀತ, ಚಿಂತನೆ—ಎಲ್ಲವೂ ಇಲ್ಲಿ ಬೆಳೆದು ಬಾಳಿವೆ. 'ಧಾರವಾಡದಲ್ಲಿ ಎಲ್ಲೇ ನಿಂತು ಕಲ್ಲು ಎಸೆದರೂ ಅದು ಒಬ್ಬ ಕವಿಯ ಮನೆಯ ಮೇಲೆ ಬೀಳುತ್ತದೆ' ಎನ್ನುವ ಮಾತು ಅತಿಶಯೋಕ್ತಿಯಂತಿದ್ದರೂ, ಈ ಭಾಗದ ಸಾಹಿತ್ಯ ಪರಂಪರೆಯನ್ನು ನೆನಪಿಸಿದಾಗ ಅದು ಅರ್ಥಪೂರ್ಣವಾಗಿ ಕಾಣುತ್ತದೆ.

ಸಾಹಿತ್ಯದ ಜೊತೆಗೇ ಶಿಕ್ಷಣ ಕ್ಷೇತ್ರದಲ್ಲೂ ಧಾರವಾಡ ತನ್ನದೇ ಆದ ಸ್ಥಾನ ಪಡೆದಿದೆ. ಉತ್ತರ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ರೆಕ್ಕೆ ನೀಡಿದ ವಿದ್ಯಾಕಾಶಿ ಎಂದರೆ ಧಾರವಾಡ. ಕಳೆದ ಒಂದು ಶತಮಾನದಿಂದ ಇಲ್ಲಿ ಬೆಳೆದ ಅನೇಕ ಶಿಕ್ಷಣ ಸಂಸ್ಥೆಗಳು ಈ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವುದು ಸತ್ಯ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಕರ್ನಾಟಕ ಕಾಲೇಜು. 'ಉತ್ತರ ಕರ್ನಾಟಕದ Oxford' ಎಂದೇ ಹೆಸರುವಾಸಿಯಾದ ಈ ಕಾಲೇಜು, ಅನೇಕ ಗಣ್ಯರನ್ನು ರೂಪಿಸಿದ ವಿದ್ಯಾಮಂದಿರ.
Karnatak College Dharwad kcd campus
ಕೆಸಿಡಿ ಆವರಣದಲ್ಲಿ ಅಪ್ಪ ಮಗಳು

ಕನಸಿನ ಕ್ಯಾಂಪಸ್‌ಗೆ ಮೊದಲ ಹೆಜ್ಜೆ

ಧಾರವಾಡದಲ್ಲಿ ಓದಬೇಕು ಎನ್ನುವುದು ನನ್ನ ಕನಸಾಗಿತ್ತು. ಮೊದಲ ಬಾರಿ ಅಪ್ಪನ ಕೈ ಹಿಡಿದು, ಭಾರವಾದ ಪೆಟ್ಟಿಗೆ ಹೊತ್ತು, ಎಂದೂ ಕಾಣದ ನಗರಕ್ಕೆ ಬಂದ ಕ್ಷಣ ಇನ್ನೂ ನೆನಪಿದೆ. ಜಿಟಿಜಿಟಿ ಮಳೆ, ತಣ್ಣನೆಯ ತಂಗಾಳಿ, ಮಂಜಿನ ಹನಿ—ಅದು ಪ್ರಕೃತಿಯ ಮಡಿಲಲ್ಲಿರುವ ಒಂದು ವಿಶಿಷ್ಟ ಅನುಭವ.

ಕೆಸಿಡಿ ಸರ್ಕಲ್ ಬಳಿ ಇಳಿದು ಕಾಲೇಜಿನ ಗೇಟ್ ಕಡೆ ನಡೆಯುವಾಗ ಎಲ್ಲೆಡೆ ಹಸಿರಿನ ಹೊದಿಕೆ. ಹತ್ತಿರದಲ್ಲಿದ್ದ ಗಣಪತಿ ಗುಡಿಯಲ್ಲಿ ಅಪ್ಪ ನನ್ನನ್ನು ಕರೆದುಕೊಂಡು ಹೋಗಿ 'ಇಲ್ಲಿಯ ಗಣೇಶ ನಿನ್ನನ್ನು ನೋಡಿಕೊಳ್ಳುತ್ತಾನೆ' ಎಂದು ಹೇಳಿದ ಕ್ಷಣ ಮನಸ್ಸಿನಲ್ಲಿ ಅಚ್ಚಳಿಯಾಗಿದೆ. ಅದೇ ನನ್ನ ಮತ್ತು ಕೆಸಿಡಿಯ ಮೊದಲ ಭೇಟಿ.

Karnatak College Dharwad kcd campus
ಕೆಸಿಡಿ ಮೈದಾನದಲ್ಲಿ ವ್ಯಾಯಾಮ ಮಾಡುತ್ತಿರುವ ಜನ

ಕಾವೇರಿ ಹಾಸ್ಟೆಲ್ ಮತ್ತು ಮೊದಲ ದಿನದ ತರಗತಿ

ಅಡ್ಮಿಷನ್ ಪ್ರಕ್ರಿಯೆ ಮುಗಿದ ಬಳಿಕ ಹತ್ತಿರದ ಕಾವೇರಿ ಹಾಸ್ಟೆಲ್‌ನಲ್ಲಿ ವಸತಿ ವ್ಯವಸ್ಥೆ ಆಯಿತು. ಅಪ್ಪ ಊರಿಗೆ ಹಿಂತಿರುಗಿದ ಕ್ಷಣದಿಂದ ನಾನು ಸಂಪೂರ್ಣವಾಗಿ 'ಕೆಸಿಡಿಯನ್' ಆಗಿಬಿಟ್ಟೆ. ನನ್ನ ಮೊದಲ ತರಗತಿ 7A ಪ್ಯಾರನ್ ಹಾಲ್‌ನಲ್ಲಿ. ಆ ಹಾಲ್‌ನ ಭವ್ಯತೆ, ಮೆಟ್ಟಿಲುಗಳ ವೈಭವ, ಗೋಡೆಗಳ ಮೇಲಿನ ಗಣ್ಯರ ಚಿತ್ರಗಳು—ಎಲ್ಲವೂ ಹೊಸ ವಿದ್ಯಾರ್ಥಿನಿಯಾಗಿ ನನ್ನಲ್ಲಿ ಆಶ್ಚರ್ಯ ಮೂಡಿಸಿತು.

ಕಾಲೇಜಿನ ಮುಂಭಾಗದ ದೊಡ್ಡ ಮೈದಾನದಲ್ಲಿ ಬೆಳಗ್ಗೆ ವಾಕ್ ಮಾಡುವ ಹಿರಿಯರು, ಓಟದ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಸರ್ಕಾರಿ ನೌಕರಿಗಾಗಿ ಸಿದ್ಧತೆ ನಡೆಸುತ್ತಿರುವ ಯುವಕರು—ಎಲ್ಲವೂ ಒಮ್ಮೆಲೆ ಪ್ರೇರಣೆಯ ವಾತಾವರಣ ನಿರ್ಮಿಸುತ್ತವೆ. ಪ್ರವೇಶದ ಬಳಿ ಇರುವ ಎರಡು ದೊಡ್ಡ ಸಿಂಹ ಪ್ರತಿಮೆಗಳು ಕಾಲೇಜಿನ ಗಾಂಭೀರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಇದನ್ನೂ ಓದಿ: ಹುಬ್ಬಳ್ಳಿ ಮೂರುಸಾವಿರ ಮಠದ ಇತಿಹಾಸ

ಸ್ನೇಹ, ಸಂಭ್ರಮ ಮತ್ತು ಕಲಾ ಚಟುವಟಿಕೆಗಳು

ದಿನಗಳು ಕಳೆದಂತೆ ಸ್ನೇಹಿತರ ಬಳಗ ರೂಪುಗೊಂಡಿತು. ಒಟ್ಟಿಗೆ ಕುಳಿತು ಓದುವುದು, ಅಸೈನ್‌ಮೆಂಟ್ ಬರೆಯುವುದು, ಕಾಲೇಜಿನ ಕಟ್ಟೆಗಳಲ್ಲಿ ತುಂಟಾಟ- ಎಲ್ಲವೂ ಕಾಲೇಜು ಜೀವನದ ಮಧುರ ಕ್ಷಣಗಳು. ಕೆಲವೊಮ್ಮೆ ಸ್ನೇಹ ಪ್ರೀತಿಗೆ ರೂಪಾಂತರಗೊಂಡ ಕಥೆಗಳೂ ಅಲ್ಲಲ್ಲಿ ಮೂಡುತ್ತವೆ.

NSS ಚಟುವಟಿಕೆಗಳಲ್ಲಿ ಭಾಗವಹಿಸಿ ಹಳ್ಳಿಗಳಲ್ಲಿ ಕ್ಯಾಂಪ್ ನಡೆಸಿದ ಅನುಭವ ಮರೆಯಲಾಗದು. ಒಟ್ಟಿಗೆ ಅಡುಗೆ ಮಾಡಿ ತಿನ್ನುವುದು, ಗ್ರಾಮೀಣ ಜೀವನದ ಅನುಭವ ಪಡೆಯುವುದು- ಎಲ್ಲವೂ ವ್ಯಕ್ತಿತ್ವ ರೂಪಿಸುವ ಪಾಠಗಳಾಗಿವೆ.

ಕ್ಯಾಂಪಸ್‌ನಲ್ಲಿರುವ ಸೃಜನಾ ರಂಗಮಂದಿರ ಕಲೆಗಳ ಕೇಂದ್ರ. ನಾಟಕ, ಹಾಡು, ನೃತ್ಯ, ಸಂಗೀತ- ಎಲ್ಲವೂ ಇಲ್ಲಿ ಅರಳುತ್ತವೆ. ಯುವಜನೋತ್ಸವದ ವೇಳೆ ಕಾಲೇಜು ಸಾಂಸ್ಕೃತಿಕ ಸಿಂಚನದಿಂದ ಕಂಗೊಳಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ ಪ್ರತಿಭೆ ತೋರಿಸಲು ವೇದಿಕೆ ಸಿಗುತ್ತದೆ.

Karnatak College Dharwad kcd campus
ಧಾರವಾಡ ಕರ್ನಾಟಕ ಕಾಲೇಜು

ಓದು ಮತ್ತು ಸ್ಪರ್ಧಾತ್ಮಕ ಸಿದ್ಧತೆ

ಕೆಸಿಡಿ ವಿದ್ಯಾರ್ಥಿಗಳ ವಿಶೇಷತೆ ಎಂದರೆ ಸರ್ಕಾರಿ ಉದ್ಯೋಗಕ್ಕಾಗಿ ಅವರ ಪರಿಶ್ರಮ. ಕ್ಯಾಂಪಸ್‌ನಲ್ಲಿರುವ V. K.Gokak Library ಸದಾ ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿರುತ್ತದೆ. ಇಲ್ಲಿ ಓದಿದ ಅನೇಕರು ವಿವಿಧ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಜಿಮ್ಖಾನಾ ವ್ಯವಸ್ಥೆ ಕಾಲೇಜಿನ ಮತ್ತೊಂದು ವಿಶೇಷತೆ. ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ಪಾಠ. ಕಾಲೇಜಿನ ವಾರ್ಷಿಕ ಸಂಚಿಕೆ 'ನಿನಾದ' ವಿದ್ಯಾರ್ಥಿಗಳ ಸಾಹಿತ್ಯ, ಸಾಧನೆ ಮತ್ತು ಚಟುವಟಿಕೆಗಳ ಸಂಗ್ರಹವಾಗಿದ್ದು, ಜ್ಞಾನದ ಬುತ್ತಿಯಂತೆ ಕಾಣುತ್ತದೆ.

Karnatak College Dharwad kcd campus
ಧಾರವಾಡ ಕರ್ನಾಟಕ ಕಾಲೇಜು ವಿಹಂಗಮ ನೋಟ

ಕೆಂಪು ಕಟ್ಟಡದ ವೈಭವಶಾಲಿ ಇತಿಹಾಸ

60 ಎಕರೆ ವ್ಯಾಪ್ತಿಯಲ್ಲಿ ನಿಂತಿರುವ ಗಾಥಿಕ್ ಶೈಲಿಯ ಕೆಂಪು ಕಟ್ಟಡ ಕೇವಲ ಶಿಕ್ಷಣ ಸಂಸ್ಥೆಯಲ್ಲ; ಅದು ಇತಿಹಾಸದ ಸಾಕ್ಷಿ. ಕೆಸಿಡಿ ಆರಂಭಕ್ಕೂ ಮುನ್ನ ಇದು ಬ್ರಿಟಿಷರ ಕಾಲದಲ್ಲಿ ದಕ್ಷಿಣ ಮರಾಠಾ ರೈಲ್ವೆಯ ಕೇಂದ್ರ ಕಚೇರಿಯಾಗಿತ್ತು. 1917ರಲ್ಲಿ ಧಾರವಾಡಕ್ಕೆ ಕಾಲೇಜು ಮಂಜೂರು ಮಾಡುವ ಕಾರ್ಯದಲ್ಲಿ ಸರ್ ಸಿದ್ದಪ್ಪ ಕಂಬಳಿ ಮಹತ್ವದ ಪಾತ್ರ ವಹಿಸಿದರು.

ಶಾಶ್ವತ ಕಟ್ಟಡ ಹುಡುಕುವ ಸಂದರ್ಭದಲ್ಲಿ ಈ ನಸುಗೆಂಪು ಕಟ್ಟಡ ಕಣ್ಣಿಗೆ ಬಿದ್ದಿತು. ಕೆಲವು ದಿನಗಳಲ್ಲಿ ರೈಲ್ವೆ ಕಚೇರಿ ಮದ್ರಾಸಿಗೆ ಸ್ಥಳಾಂತರಗೊಳ್ಳಲಿದೆ ಎಂಬ ಮಾಹಿತಿ ತಿಳಿದು, ಅಧಿಕಾರಿಗಳು ಅದನ್ನು ಕಾಲೇಜಿಗಾಗಿ ಖರೀದಿಸಿದರು. ಸಾರ್ವಜನಿಕರಿಂದ ಸಂಗ್ರಹಿಸಿದ ನಿಧಿಯೂ ಇದರ ಸ್ಥಾಪನೆಗೆ ಸಹಾಯವಾಯಿತು.

ಇದನ್ನೂ ಓದಿ: ಕಿತ್ತೂರು ಯುದ್ಧದ ಮೌನಸಾಕ್ಷಿಗಳು; ಧಾರವಾಡದ ಬ್ರಿಟಿಷ್ ಸಮಾಧಿಗಳು

ಸ್ವಾತಂತ್ರ್ಯ ಹೋರಾಟ ಮತ್ತು ಕೆಸಿಡಿ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕೆಸಿಡಿ ವಿದ್ಯಾರ್ಥಿಗಳು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ತ್ರಿವರ್ಣ ಧ್ವಜ ಹಾರಿಸಿದ ಕಾರಣ ಬಂಧನಕ್ಕೊಳಗಾದ ವಿದ್ಯಾರ್ಥಿಗಳ ಕಥೆಗಳು ಕಾಲೇಜಿನ ಇತಿಹಾಸದಲ್ಲಿ ದಾಖಲಾಗಿವೆ. ಈ ವಿದ್ಯಾಸಂಸ್ಥೆ ಕೇವಲ ಶಿಕ್ಷಣ ನೀಡದೇ, ರಾಷ್ಟ್ರೀಯ ಚೇತನೆಯನ್ನು ಬೆಳೆಸಿದ ಕೇಂದ್ರವೂ ಆಗಿದೆ.

Karnatak College Dharwad kcd campus
ಕೆಸಿಡಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ವಿದ್ಯಾರ್ಥಿ
ಕೆಸಿಡಿಯಲ್ಲಿ ಕಲಿತ ಗಣ್ಯರ ಪಟ್ಟಿ ದೀರ್ಘವಾಗಿದೆ. ಶಶಿಕಲಾ ಕಾಕೋಡ್ಕರ್, ನಂದನ್ ನೀಲೇಕಣಿ, ಗಿರೀಶ್ ಕಾರ್ನಾಡ್, ಚನ್ನವೀರ ಕನವಿ, ಪಾಟೀಲ ಪುಟ್ಟಪ್ಪ ಹಾಗೂ ಎಂ.ಎಂ. ಕಲಬುರ್ಗಿ ಸೇರಿದಂತೆ ಹಲವಾರು ಸಾಹಿತಿಗಳು, ರಾಜಕಾರಣಿಗಳು ಮತ್ತು ಚಿಂತಕರು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಕೆಸಿಡಿಯ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿದ್ದಾರೆ.
Karnatak College Dharwad kcd campus
ಧಾರವಾಡ ಕರ್ನಾಟಕ ಕಾಲೇಜು

ನೆನಪುಗಳ ನಿತ್ಯಹರಿದ್ವರ್ಣ

ಉದಯ ಸರ್ಕಲ್‌ನ ಭಜ್ಜಿ, ಕೆಸಿಡಿ ಸರ್ಕಲ್‌ನ ಎಗ್ಗ್ ರೈಸ್, ಕ್ಯಾಂಟಿನ್ ಚಹಾ, ಸಪ್ತಾಪೂರ ಬಾವಿ ಬೇಕರಿ ಸ್ವೀಟ್-ಇವುಗಳೆಲ್ಲ ಕಾಲೇಜು ದಿನಗಳ ನೆನಪುಗಳ ಭಾಗ. ಮಳೆ ಬಿದ್ದಾಗ ಹಸಿರಿನ ಮಧ್ಯೆ ತೇಲುವ ಕೆಂಪು ಕಟ್ಟಡ, ಸ್ನೇಹಿತರ ಜೊತೆ ಹಂಚಿಕೊಂಡ ನಗು, ಪರೀಕ್ಷಾ ಒತ್ತಡ- ಎಲ್ಲವೂ ಮನಸ್ಸಿನಲ್ಲಿ ಸದಾ ಜೀವಂತ.

ಇಂದು ನೂರರ ಹರೆಯ ದಾಟಿದ ಈ ಕೆಂಪು ಸುಂದರಿ ಇನ್ನೂ ಗಟ್ಟಿಮುಟ್ಟಾದ ಜ್ಞಾನದೇವಿಯಾಗಿ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ ಕಟ್ಟುತ್ತಿದೆ. ಧಾರವಾಡದ ಹೃದಯಭಾಗದಲ್ಲಿ ನಿಂತಿರುವ ಈ ಶಿಕ್ಷಣ ಮಂದಿರ, ಭವಿಷ್ಯ ರೂಪಿಸುವ ಗುರುಮಾತೆಯಂತಿದೆ.

Karnatak College Dharwad kcd campus
ಧಾರವಾಡ ಕರ್ನಾಟಕ ಕಾಲೇಜು

ಕೆಸಿಡಿ ಕೇವಲ ಒಂದು ಕಾಲೇಜಲ್ಲ; ಅದು ಒಂದು ಅನುಭವ, ಒಂದು ಪರಂಪರೆ, ಒಂದು ಗುರುತು. ಇಲ್ಲಿ ಕಲಿತ ಪ್ರತಿಯೊಬ್ಬರ ಜೀವನದಲ್ಲಿ ಅದು ಅಚ್ಚಳಿಯಾಗಿದೆ. ಧಾರವಾಡಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕರೆ, ಈ ಐತಿಹಾಸಿಕ ಕ್ಯಾಂಪಸ್ ಸುತ್ತಾಡಿ ಅದರ ವೈಭವವನ್ನು ಕಣ್ಣಾರೆ ನೋಡಿ.

ನವೀನ ಹಳೆಯದು