 |
| ಕಪ್ಪೆಚಿಪ್ಪು ಕಲಾಕೃತಿಗಳ ವಸ್ತುಸಂಗ್ರಹಾಲಯ |
ಮೈಸೂರಿಗೆ ಮತ್ತೊಂದು ಕಲಾ ಆಕರ್ಷಣೆ
ಸಾಂಸ್ಕೃತಿಕ ನಗರಿ ಮೈಸೂರು ಈಗಾಗಲೇ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ವಸ್ತುಸಂಗ್ರಹಾಲಯಗಳ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ಪಟ್ಟಿಗೆ ಸೇರ್ಪಡೆಯಾದ ಮತ್ತೊಂದು ವಿಶಿಷ್ಟ ತಾಣವೇ
Guinness World Record Sea Shell Art Museum. ಇದು ಮೈಸೂರಿನ ಪ್ರಸಿದ್ಧ Sand Sculpture Museum ಸಮೀಪದಲ್ಲೇ ಇರುವುದರಿಂದ ಪ್ರವಾಸಿಗರು ಒಂದೇ ಬಾರಿ ಎರಡು ವಿಭಿನ್ನ ಕಲಾ ಲೋಕಗಳನ್ನು ನೋಡಬಹುದು.
ಇದನ್ನೂ ಓದಿ: ಪ್ರವಾಸಿಗರ ಸೆಳೆಯುವ ಮೈಸೂರು ಮರಳು ಶಿಲ್ಪ ಮ್ಯೂಸಿಯಂ
 |
| ಸೆಂಟ್ ಫಿಲೋಮಿನಾ ಚರ್ಚ್ |
ಗಿನ್ನೆಸ್ ದಾಖಲೆಯ ಗಣೇಶ ವಿಗ್ರಹ
ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆ ಎಂದರೆ ಕೇವಲ ಕಪ್ಪೆಚಿಪ್ಪು ಮತ್ತು ಶಂಖಗಳಿಂದ ನಿರ್ಮಿಸಲಾದ ಗಣೇಶನ ಬೃಹತ್ ವಿಗ್ರಹ. ಸುಮಾರು 11 ಅಡಿ ಎತ್ತರದ ಈ ಗಣೇಶ ಶಿಲ್ಪವು ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ. ಈ ಸಾಧನೆಯ ಮೂಲಕ ರಾಧಾ ಮಲ್ಲಪ್ಪ ಮೈಸೂರಿನ ಮೊದಲ ಮಹಿಳಾ ಗಿನ್ನೆಸ್ ದಾಖಲೆಧಾರಿಯಾಗಿದ್ದಾರೆ. ಈ ವಿಗ್ರಹವನ್ನು ನೋಡಿದಾಗ ಅದು ಕೇವಲ ಚಿಪ್ಪುಗಳಿಂದ ಮಾಡಲಾಗಿದೆ ಎಂಬುದನ್ನು ನಂಬಲು ಕಷ್ಟವಾಗುತ್ತದೆ.
 |
| 11 ಅಡಿ ಎತ್ತರದ ಗಣೇಶನ ಕಲಾಕೃತಿ |
ರಾಧಾರ ಕಲಾರಾಧನೆ – ಒಂದು ಪ್ರೇರಣಾದಾಯಕ ಕಥೆ
ರಾಧಾ ಮಲ್ಲಪ್ಪ ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದವರು. ಅವರು ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ ವರೆಗೂ ಮಾತ್ರವಾದರೂ, ಅವರಲ್ಲಿದ್ದ ಸಹಜ ಕಲಾತ್ಮಕ ಪ್ರತಿಭೆಯೇ ಅವರನ್ನು ವಿಶಿಷ್ಟ ಕಲಾವಿದೆಯನ್ನಾಗಿ ರೂಪಿಸಿತು. ಯಾವುದೇ ವಿಧದ ತರಬೇತಿ ಪಡೆಯದೇ ಸ್ವಪ್ರೇರಣೆಯಿಂದಲೇ ಅವರು ಕರಕುಶಲ ಕಲೆಯನ್ನು ಅಭ್ಯಾಸ ಮಾಡಿದರು. ಅವರ ಕೈಗೆ ಸಿಕ್ಕ ಯಾವುದೇ ವಸ್ತುವನ್ನೂ ಕಲಾಕೃತಿಯಾಗಿ ರೂಪಿಸುವ ಅದ್ಭುತ ಸಾಮರ್ಥ್ಯ ಅವರಿಗೆ ಇದೆ.
ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ವಿವಿಧ ಬೀಜಗಳು, ಬೆಂಕಿಕಡ್ಡಿಗಳು, ಮರದ ತೊಗಟೆ ಮುಂತಾದ ಸಾಮಾನ್ಯವಾಗಿ ತ್ಯಜಿಸಲಾಗುವ ವಸ್ತುಗಳನ್ನೇ ಅವರು ತಮ್ಮ ಸೃಜನಶೀಲತೆಯಿಂದ ಕಲಾಕೃತಿಗಳಾಗಿ ರೂಪಿಸುತ್ತಿದ್ದರು. ಹೀಗೆ ಯಾವ ವಸ್ತು ಕೈಗೆ ಸಿಕ್ಕಿದರೂ ಅದಕ್ಕೆ ಹೊಸ ರೂಪ ನೀಡುವುದೇ ಅವರ ಹವ್ಯಾಸವಾಗಿತ್ತು.
ಕೇವಲ 16ನೇ ವಯಸ್ಸಿನಲ್ಲಿ ಮೈಸೂರಿನ ಬಾಲಭವನದಲ್ಲಿ ಮಕ್ಕಳಿಗೆ ಕರಕುಶಲ ವಸ್ತುಗಳ ತಯಾರಿಕೆ ತರಬೇತಿ ನೀಡುವ ಶಿಕ್ಷಕಿಯಾಗಿ ಅವರು ಸೇವೆ ಆರಂಭಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಮಕ್ಕಳಿಗೆ ‘ಬೆಸ್ಟ್ ಔಟ್ ಆಫ್ ವೇಸ್ಟ್’ ಎಂಬ ಕಲೆಯ ಮೂಲಕ ನಿರುಪಯುಕ್ತ ವಸ್ತುಗಳಿಂದ ಉಪಯುಕ್ತ ಮತ್ತು ಸುಂದರ ಕಲಾಕೃತಿಗಳನ್ನು ತಯಾರಿಸುವ ವಿಧಾನವನ್ನು ಬೋಧಿಸಿದರು.
ಇದನ್ನೂ ಓದಿ: ಚುಕುಬುಕು ಬಂಡಿಯ ಕತೆ ಹೇಳುವ ಮೈಸೂರು ರೈಲ್ವೆ ಮ್ಯೂಸಿಯಂ
 |
| ರಾವಣನ ಗರ್ವಭಂಗ ಮಾಡಿದ ಹನುಮ! |
ಚಿಪ್ಪಿನೊಳಗಡೆ ಅಡಗಿರುವ ಕಲಾ ಲೋಕ
ಮ್ಯೂಸಿಯಂ ಒಳಗೆ ಪ್ರವೇಶಿಸಿದ ಕ್ಷಣದಲ್ಲೇ ರಾಧಾ ಮಲ್ಲಪ್ಪ ಅವರ ಪರಿಶ್ರಮ ಮತ್ತು ಸೃಜನಶೀಲತೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಸುಮಾರು 150ಕ್ಕೂ ಹೆಚ್ಚು ಶಂಖ ಹಾಗೂ ಕಪ್ಪೆಚಿಪ್ಪುಗಳಿಂದ ನಿರ್ಮಿಸಲಾದ ಅದ್ಭುತ ಕಲಾಕೃತಿಗಳು ಪ್ರದರ್ಶನದಲ್ಲಿವೆ.
ಕಪ್ಪೆಚಿಪ್ಪಿನಿಂದ ನಿರ್ಮಿಸಲಾದ ತಾಜ್ ಮಹಲ್, ಶಿವ ದೇವಾಲಯ, ಸಂತ ಫಿಲೋಮಿನಾ ಚರ್ಚ್ ಮಾದರಿ, ದಶಾವತಾರ, ಸರಸ್ವತಿ ದೇವಿ, ಕಾಳಿಂಗ ಮರ್ಧನ, ಬೋಧಿವೃಕ್ಷದಡಿ ಬುದ್ಧ ಮತ್ತು ರಾವಣನ ಸಭೆಯಲ್ಲಿ ಹನುಮಂತನ ಕಲಾಕೃತಿಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.
ಈ ಪ್ರತಿಯೊಂದು ಕಲಾಕೃತಿಯಲ್ಲಿಯೂ ಕಾಣಿಸುವ ಸೂಕ್ಷ್ಮತೆ ಕಲಾವಿದೆಯ ಅಪಾರ ತಾಳ್ಮೆ ಮತ್ತು ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಕೆಲವು ಶಿಲ್ಪಗಳನ್ನು ನಿರ್ಮಿಸಲು ರಾಧಾ ಮಲ್ಲಪ್ಪ ಅವರು ಐದುರಿಂದ ಎಂಟು ವರ್ಷಗಳವರೆಗೆ ಸಮಯ ತೆಗೆದುಕೊಂಡಿರುವುದು ಅವರ ಕಲಾಪ್ರೀತಿ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.
 |
| ಕಪ್ಪೆಚಿಪ್ಪು, ಶಂಖಗಳಲ್ಲಿ ಮೂಡಿದ ದೇವಾಲಯ |
ಕಸದಿಂದ ರಸ ತೆಗೆಯುವ ಅದ್ಭುತ ಕಲೆ
ರಾಧಾ ಮಲ್ಲಪ್ಪ ಅವರ ಕಲೆಯ ಇನ್ನೊಂದು ವಿಶೇಷತೆ ಎಂದರೆ ನಿರುಪಯುಕ್ತ ವಸ್ತುಗಳಿಂದ ಕಲಾಕೃತಿಗಳನ್ನು ನಿರ್ಮಿಸುವುದು. ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ಪಿಸ್ತಾ ಮತ್ತು ಏಲಕ್ಕಿ ಸಿಪ್ಪೆ, ರೇಷ್ಮೆ ಗೂಡು, ಹುಲ್ಲು ಮತ್ತು ದಾರ, ಗಾಜು, ಪ್ಲಾಸ್ಟಿಕ್ ವೈರ್, ಗೋಣಿಚೀಲ, ಬೆಂಕಿಕಡ್ಡಿ ಹಾಗೂ ಹತ್ತಿ ಮುಂತಾದ ಸಾಮಾನ್ಯವಾಗಿ ತ್ಯಜಿಸಲಾಗುವ ವಸ್ತುಗಳನ್ನು ಅವರು ತಮ್ಮ ಸೃಜನಶೀಲತೆಯಿಂದ ಅದ್ಭುತ ಕಲಾಕೃತಿಗಳಾಗಿ ರೂಪಿಸಿದ್ದಾರೆ. ಈ ವಸ್ತುಗಳಿಂದ ತಯಾರಿಸಲಾದ ಹೂಕುಂಡಗಳು, ದೀಪಾಕೃತಿಗಳು, ಫೋಟೋ ಫ್ರೇಮ್‌ಗಳು ಮತ್ತು ಭಿತ್ತಿಚಿತ್ರಗಳು ಮ್ಯೂಸಿಯಂನಲ್ಲಿ ಪ್ರವಾಸಿಗರ ಗಮನ ಸೆಳೆಯುವ ಪ್ರಮುಖ ಆಕರ್ಷಣೆಗಳಾಗಿವೆ.
 |
| ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸಿದ ಕಲಾಕೃತಿ |
ಬಹುಮುಖ ಪ್ರತಿಭೆಯ ಕಲಾವಿದೆ
ರಾಧಾ ಮಲ್ಲಪ್ಪ ಬಹುಮುಖ ಪ್ರತಿಭೆಯ ಕಲಾವಿದೆ. ಕರಕುಶಲ ಕಲೆ, ಚಿತ್ರಕಲೆ, ಕಸೂತಿ ಕೆಲಸ, ಸ್ಯಾಂಡ್ ಆರ್ಟ್, ಮಿರರ್ ಆರ್ಟ್, ಬಾಟಲ್ ಆರ್ಟ್ ಮತ್ತು ನಿಬ್ ಪೆಂಟಿಂಗ್ ಸೇರಿದಂತೆ ಅನೇಕ ಕಲಾರೂಪಗಳಲ್ಲಿ ಅವರು ತಮ್ಮ ನೈಪುಣ್ಯತೆಯನ್ನು ತೋರಿಸಿದ್ದಾರೆ. ಇದಷ್ಟೇ ಅಲ್ಲದೆ, ಆಯುರ್ವೇದ ಚಿಕಿತ್ಸೆಯಲ್ಲಿಯೂ ಅವರಿಗೆ ವಿಶೇಷ ಆಸಕ್ತಿ ಹಾಗೂ ಪರಿಣತಿ ಇರುವುದರಿಂದ ತಮ್ಮ ಮನೆಮಟ್ಟದಲ್ಲಿಯೇ ಕೆಲವರಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
 |
| ಪೆಂಗ್ವಿನ್ ಸಾಮ್ರಾಜ್ಯ! |
ಪ್ರಶಸ್ತಿಗಳ ಸರಮಾಲೆ
ರಾಧಾ ಮಲ್ಲಪ್ಪ ತಮ್ಮ ಕಲೆಯನ್ನು ಎಂದಿಗೂ ಪ್ರಶಸ್ತಿಗಳಿಗಾಗಿ ಮಾಡಿಲ್ಲ. ಆದರೆ ಅವರ ಅಪರೂಪದ ಕಲಾತ್ಮಕ ಪ್ರತಿಭೆಯನ್ನು ಗುರುತಿಸಿ ಸರ್ಕಾರ ಮತ್ತು ವಿವಿಧ ಸಂಘಸಂಸ್ಥೆಗಳು ಅವರಿಗೆ ಅನೇಕ ಪ್ರಶಸ್ತಿಗಳು ಹಾಗೂ ಗೌರವಗಳನ್ನು ನೀಡಿ ಸನ್ಮಾನಿಸಿವೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಶಿಲ್ಪಾಚಾರ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅಮೋಘವರ್ಷ ನೃಪತುಂಗ ಪ್ರಶಸ್ತಿ ಮತ್ತು ಹೊಯ್ಸಳ ಕಲಾ ಸರಸ್ವತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಇವುಗಳ ಜೊತೆಗೆ ರಾಷ್ಟ್ರಮಟ್ಟ ಮತ್ತು ರಾಜ್ಯಮಟ್ಟದ ಅನೇಕ ಗೌರವಗಳು ಅವರ ಸಾಧನೆಗೆ ಸಿಕ್ಕಿರುವುದು ಅವರ ಕಲಾವೈಭವಕ್ಕೆ ಸಾಕ್ಷಿಯಾಗಿದೆ.
 |
| ಕಪ್ಪೆಚಿಪ್ಪುಗಳನ್ನು ಬಳಸಿ ತಯಾರಿಸಿದ ತಾಜ್ ಮಹಲ್! |
ಮೈಸೂರಿಗೆ ಹೋದರೆ ತಪ್ಪದೇ ಭೇಟಿ ಕೊಡಿ
ಪ್ರವಾಸಿಗರಿಗಾಗಿ ಈ ಮ್ಯೂಸಿಯಂ ಪ್ರತಿದಿನ ತೆರೆದಿರುತ್ತಿದ್ದು, ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಭೇಟಿ ನೀಡಬಹುದು. ಮೈಸೂರಿಗೆ ಪ್ರವಾಸಕ್ಕೆ ಹೋಗುವವರು ಸಾಮಾನ್ಯವಾಗಿ ಅರಮನೆ, ಮೃಗಾಲಯ ಮತ್ತು ಚಾಮುಂಡಿ ಬೆಟ್ಟ ನೋಡುತ್ತಾರೆ. ಆದರೆ ನೀವು ಕಲೆಯನ್ನು ಪ್ರೀತಿಸುವವರಾದರೆ ಕಪ್ಪೆಚಿಪ್ಪು ಕಲಾಕೃತಿಗಳ ಈ ವಸ್ತುಸಂಗ್ರಹಾಲಯವನ್ನು ತಪ್ಪದೇ ಭೇಟಿ ಮಾಡಬೇಕು.
ಇಲ್ಲಿ ನೋಡಬಹುದಾದ ಪ್ರತಿಯೊಂದು ಕಲಾಕೃತಿಯೂ ಮಾನವ ಸೃಜನಶೀಲತೆಯ ಅದ್ಭುತ ಉದಾಹರಣೆ. ಕಸವೆಂದು ನಾವು ತಳ್ಳಿಹಾಕುವ ವಸ್ತುಗಳು ಕಲಾವಿದೆಯ ಕೈಯಲ್ಲಿ ಹೇಗೆ ಅಮೂಲ್ಯ ಕಲಾಕೃತಿಗಳಾಗಿ ರೂಪುಗೊಳ್ಳುತ್ತವೆ ಎಂಬುದನ್ನು ಇಲ್ಲಿ ಕಂಡು ಆಶ್ಚರ್ಯಪಡುವುದರಲ್ಲಿ ಸಂಶಯವೇ ಇಲ್ಲ.