![]() |
| ಬೀದರ್ ಹತ್ತಿರದ ಅಷ್ಟೂರು ಗ್ರಾಮದಲ್ಲಿರುವ ಚೌಖಂಡಿ |
ತಮ್ಮ ಆಳ್ವಿಕೆಯಲ್ಲಿ ಅವರು ಉತ್ತರ ಭಾರತ ಮತ್ತು ಇರಾನ್ ದೇಶಗಳಿಂದ ಬಂದ ಸಾವಿರಾರು ಸೂಫಿ ಸಂತರಿಗೆ ಆಶ್ರಯ ನೀಡಿದರು. ಈ ಸೂಫಿ ಸಂತರು ಪ್ರೀತಿ, ಶಾಂತಿ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುತ್ತಾ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಬಲಪಡಿಸಿದರು.
ಈ ಆಧ್ಯಾತ್ಮಿಕ ಪ್ರಭಾವದಿಂದಲೇ ಬೀದರ್ ಸೂಫಿ ಪರಂಪರೆಯ ಪವಿತ್ರ ಕೇಂದ್ರವಾಗಿ ಬೆಳೆಯಿತು. ಈ ಕಾರಣದಿಂದ ಈ ಭಾಗದಲ್ಲಿ ಅನೇಕ ದರ್ಗಾಗಳು ಕಂಡುಬರುತ್ತವೆ. ಇವು ಇಂದಿಗೂ ಧಾರ್ಮಿಕ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಏಕತೆಯ ಸಂಕೇತಗಳಾಗಿ ಉಳಿದಿವೆ. ಇಂತಹ ಪ್ರಮುಖ ದರ್ಗಾಗಳಲ್ಲಿ ಚೌಖಂಡಿ ಅಂದರೆ ಹಜರತ್ ಖಲೀಲುಲ್ಲಾಹ್ ದರ್ಗಾ ಕೂಡಾ ಒಂದು.
ಚೌಖಂಡಿಯ ಸ್ಥಳ ಮತ್ತು ಮಹತ್ವ
ಬೀದರ್ ನಗರದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಅಷ್ಟೂರು ಗ್ರಾಮದಲ್ಲಿ ಹಜರತ್ ಖಲೀಲುಲ್ಲಾಹ್ ದರ್ಗಾ ಇದೆ. ಸಾಮಾನ್ಯವಾಗಿ 'ಚೌಖಂಡಿ' ಎಂದು ಕರೆಯಲ್ಪಡುವ ಈ ಭವ್ಯ ಸಮಾಧಿ ಬಹಮನಿ ಕಾಲದ ಶ್ರೇಷ್ಠ ಕಲಾಸಂಪತ್ತಿನ ಪ್ರತೀಕವಾಗಿದೆ. ಆಧ್ಯಾತ್ಮಿಕತೆ, ಇತಿಹಾಸ ಮತ್ತು ವಾಸ್ತುಶಿಲ್ಪದ ಸಂಗಮವಾಗಿರುವ ಈ ಸ್ಮಾರಕವು ಇಂದಿಗೂ ಭಕ್ತರು ಮತ್ತು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.
ಚೌಖಂಡಿ ಎಂದರೆ ನಾಲ್ಕು ಅಂತಸ್ತಿನ ಕಟ್ಟಡ ಎಂಬ ಅರ್ಥ. ಆದರೆ ಈ ಕಟ್ಟಡವು ವಾಸ್ತವವಾಗಿ ಎರಡು ಅಂತಸ್ತಿನದ್ದಾಗಿದೆ. ಎತ್ತರದ ವೇದಿಕೆಯ ಮೇಲೆ ನಿರ್ಮಾಣಗೊಂಡಿರುವುದರಿಂದ ಇದು ನಾಲ್ಕು ಅಂತಸ್ತಿನಂತಾಗಿ ಕಾಣುತ್ತದೆ. ಇದರಿಂದಲೇ ಈ ಹೆಸರು ಪ್ರಸಿದ್ಧಿಯಾಯಿತು. ಇದು ಇಂಡೋ-ಇಸ್ಲಾಮಿಕ್ ವಾಸ್ತುಶೈಲಿಯ ಅತ್ಯಂತ ಸುಂದರ ಉದಾಹರಣೆಯಾಗಿದೆ.
![]() |
| ಭಾರತಕ್ಕೆ ಬರುತ್ತಿರುವ ಸೂಫಿ ಸಂತ ಖಲೀಲುಲ್ಲಾಹ್ ಕಿರ್ಮಾನಿ |
ಬೀದರ್‌ಗೆ ಆಗಮನ ಮತ್ತು ಬಹಮನಿ ರಾಜರ ಆಶ್ರಯ
ಹಜರತ್ ಖಲೀಲುಲ್ಲಾಹ್ ಕಿರ್ಮಾನಿ ಪ್ರಸಿದ್ಧ ಸೂಫಿ ಸಂತರು. ಅವರು ಇರಾನ್ ದೇಶದ ಕೆರ್ಮನ್ ಪ್ರದೇಶದವರಾಗಿದ್ದರು. ಅದರಿಂದಲೇ ಅವರಿಗೆ 'ಕಿರ್ಮಾನಿ' ಎಂಬ ಹೆಸರು ಬಂದಿದೆ.
ಬಹಮನಿ ಸಾಮ್ರಾಜ್ಯದ ಸುಲ್ತಾನ ಅಹ್ಮದ್ ಶಾಹ್ ವಲಿ ಅವರ ಆಹ್ವಾನದ ಮೇರೆಗೆ ಅವರು 1433ರಲ್ಲಿ ಬೀದರ್‌ಗೆ ಆಗಮಿಸಿದರು. ಅವರೊಂದಿಗೆ ಅವರ ಪುತ್ರರಾದ ಶಾಹ್ ಮುಹೀಬುದ್ದೀನ್ ಹಬೀಬುಲ್ಲಾ ಮತ್ತು ಶಾಹ್ ಹಬೀಬುದ್ದೀನ್ ಮುಹಿಬುಲ್ಲಾ ಕೂಡ ಬಂದರು. ಅವರ ಇನ್ನೊಬ್ಬ ಪುತ್ರ ಶಾಹ್ ನೂರುದ್ದೀನ್ ಕಿರ್ಮಾನಿ ಈಗಾಗಲೇ ಬೀದರ್‌ನಲ್ಲಿ ನೆಲೆಸಿದ್ದರು.
ಸೂಫಿ ಪರಂಪರೆಯ ಮೇಲೆ ಅಪಾರ ಗೌರವ ಹೊಂದಿದ್ದ ಸುಲ್ತಾನ್ ಅಹ್ಮದ್ ಶಾಹ್ ವಲಿ ಬಹಮನಿ, ಶಾಹ್ ಖಲೀಲುಲ್ಲಾಹ್ ಕಿರ್ಮಾನಿಯವರ ಪುತ್ರರಾದ ಶಾಹ್ ಮುಹೀಬುದ್ದೀನ್ ಹಬೀಬುಲ್ಲಾ ಮತ್ತು ಶಾಹ್ ಹಬೀಬುದ್ದೀನ್ ಮುಹಿಬುಲ್ಲಾ ಅವರಿಗೆ ತನ್ನ ರಾಜಕುಟುಂಬದ ರಾಜಕುಮಾರಿಯರನ್ನು ವಿವಾಹವಾಗಿ ನೀಡಿದರು. ಈ ವೈವಾಹಿಕ ಸಂಬಂಧವು ಬಹಮನಿ ರಾಜವಂಶ ಮತ್ತು ಕಿರ್ಮಾನಿ ಸೂಫಿ ಪರಂಪರೆಯ ನಡುವೆ ಆಧ್ಯಾತ್ಮಿಕ ಹಾಗೂ ರಾಜಕೀಯ ಬಾಂಧವ್ಯವನ್ನು ಬಲಪಡಿಸಿ, ಬೀದರ್ ಅನ್ನು ಸೂಫಿ ಸಂಸ್ಕೃತಿಯ ಪ್ರಮುಖ ಕೇಂದ್ರವನ್ನಾಗಿ ರೂಪಿಸಿತು.
![]() |
| ಖಲೀಲುಲ್ಲಾಹ್ ಕಿರ್ಮಾನಿ ಪುತ್ರರೊಂದಿಗೆ ರಾಜಕುಮಾರಿಯರ ವಿವಾಹ |
ಬೀದರ್- ಸೂಫಿ ಅಧ್ಯಾತ್ಮದ ಕೇಂದ್ರ
ಕ್ರಿ.ಶ. 1422ರಲ್ಲಿ ಸಿಂಹಾಸನಾರೂಢರಾದ ಅಹ್ಮದ್ ಶಾಹ್ ಬಹಮನಿ, ಸುಮಾರು ಕ್ರಿ.ಶ. 1425ರಲ್ಲಿ ತನ್ನ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್‌ಗೆ ಸ್ಥಳಾಂತರಿಸಿದರು. ಇದರ ಪರಿಣಾಮವಾಗಿ ಇರಾನ್, ಇರಾಕ್ ಮತ್ತು ಅರೇಬಿಯಾದಿಂದ ಅನೇಕ ಸೂಫಿ ಸಂತರು ಬೀದರ್‌ಗೆ ಆಗಮಿಸಿದರು. ಈ ಬೆಳವಣಿಗೆಯಿಂದ ಬೀದರ್ ಸೂಫಿ ಅಧ್ಯಾತ್ಮದ ಪ್ರಮುಖ ಕೇಂದ್ರವಾಯಿತು.
ಖ್ವಾಜಾ ಬಂದೆ ನವಾಜ್ ಗೆಸುದರಾಜ್ ಅವರ ನಿಧನದ ನಂತರ ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ಪ್ರಮುಖ ಸೂಫಿ ಸಂತರಲ್ಲಿ ಖಲೀಲುಲ್ಲಾಹ್ ಕಿರ್ಮಾನಿಯವರೂ ಒಬ್ಬರಾಗಿದ್ದರು. ಜಪ, ಧ್ಯಾನ, ಆತ್ಮಾವಲೋಕನ ಮತ್ತು ದೇವರ ಸ್ಮರಣೆ ಆಧಾರಿತ ಅವರ ಬೋಧನೆಗಳು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಬಲಪಡಿಸಿತು.
ಕಿರ್ಮಾನಿಯವರ ಬೋಧನೆಗಳು
ಬೀದರ್‌ಗೆ ಬಂದ ನಂತರ ಖಲೀಲುಲ್ಲಾಹ್ ಕಿರ್ಮಾನಿ ಅವರು ಜನರ ಜೀವನದೊಂದಿಗೆ ಬೆರೆತು ಬದುಕಿದರು. ಅವರ ಬೋಧನೆಗಳು ಸರಳವಾಗಿದ್ದರೂ ಆಳವಾದ ಅರ್ಥ ಹೊಂದಿದ್ದವು. ದೇವರನ್ನು ಕಂಡುಕೊಳ್ಳಲು ಕಠಿಣ ವಿಧಿವಿಧಾನಗಳ ಅಗತ್ಯವಿಲ್ಲ; ಶುದ್ಧ ಮನಸ್ಸು, ಪ್ರೀತಿ ಮತ್ತು ನಿಷ್ಠೆಯೇ ಸಾಕು ಎಂದು ಅವರು ತಿಳಿಸಿದರು.
'ಮಾನವ ಸೇವೆಯೇ ದೇವರ ಸೇವೆ' ಎಂಬ ಸಂದೇಶವನ್ನು ಅವರು ಒತ್ತಿ ಹೇಳಿದರು. ಬಡವರಿಗೆ ಸಹಾಯ ಮಾಡುವುದು, ಹಸಿದವರಿಗೆ ಅನ್ನ ನೀಡುವುದು ಮತ್ತು ಸಂಕಷ್ಟದಲ್ಲಿರುವವರಿಗೆ ಧೈರ್ಯ ನೀಡುವುದು- ಇವುಗಳೇ ನಿಜವಾದ ಪೂಜೆ ಎಂದು ಅವರು ಬೋಧಿಸಿದರು.
![]() |
| ಚೌಖಂಡಿ ದರ್ಗಾ ವಿಹಂಗಮ ನೋಟ |
ಅವರು ಭೌತಿಕ ಆಸ್ತಿಯನ್ನು ಮುಖ್ಯವೆಂದು ಕಾಣಲಿಲ್ಲ. ಆತ್ಮಶುದ್ಧಿ, ಪ್ರಾರ್ಥನೆ, ಧ್ಯಾನ ಮತ್ತು ಸತ್ಪ್ರವೃತ್ತಿಗಳ ಮೂಲಕ ಜೀವನವನ್ನು ಪವಿತ್ರಗೊಳಿಸುವುದೇ ಮುಖ್ಯ ಎಂದು ಹೇಳಿದರು.
ಕ್ರಿ.ಶ. 1455ರಲ್ಲಿ ಹಜರತ್ ಖಲೀಲುಲ್ಲಾಹ್ ಬೀದರ್‌ನಲ್ಲಿ ವಿಧಿವಶರಾದರು. ಅವರ ಸ್ಮರಣಾರ್ಥವಾಗಿ ಅಷ್ಟೂರು ಗ್ರಾಮದಲ್ಲಿ ಭವ್ಯ ಸಮಾಧಿಯನ್ನು ನಿರ್ಮಿಸಲಾಯಿತು. ಬಹಮನಿ ಕಾಲದಲ್ಲಿ ನಿರ್ಮಿತವಾದ ಈ ಸಮಾಧಿಯೇ 'ಚೌಖಂಡಿ' ಎಂದು ಪ್ರಸಿದ್ಧಿಯಾಯಿತು. ಅಷ್ಟೂರು ಪ್ರದೇಶವು ಬಹಮನಿ ರಾಜರ ಸಮಾಧಿಗಳಿಗೆ ಸಮೀಪದಲ್ಲಿರುವುದರಿಂದ ಈ ಸ್ಮಾರಕಕ್ಕೆ ವಿಶೇಷ ಮಹತ್ವ ದೊರೆತಿದೆ.
ವಾಸ್ತುಶಿಲ್ಪದ ವೈಶಿಷ್ಟ್ಯಗಳು
ಚೌಖಂಡಿಯ ವಾಸ್ತು ವಿನ್ಯಾಸ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ. ಅಷ್ಟಭುಜಾಕಾರದ ರಚನೆ, ಗಟ್ಟಿ ಅಡಿಪಾಯ, ದಪ್ಪ ಗೋಡೆಗಳು ಮತ್ತು ಭವ್ಯ ಕಮಾನುಗಳು ಇದರ ಘನತೆಯನ್ನು ಹೆಚ್ಚಿಸುತ್ತವೆ. ಬಿಳಿ ಸುಣ್ಣದ ಲೇಪನ, ಕಪ್ಪು ಕಲ್ಲಿನ ಅಂಚುಗಳು ಮತ್ತು ಬಣ್ಣದ ಟೈಲ್ಸ್‌ಗಳ ಅಲಂಕಾರಗಳು ಇದರ ಸೌಂದರ್ಯವನ್ನು ಇನ್ನಷ್ಟು ಮೆರಗುಗೊಳಿಸುತ್ತವೆ.
ಒಳಭಾಗದಲ್ಲಿ ಸ್ವತಂತ್ರವಾಗಿ ನಿಂತಿರುವ ಚದರಾಕಾರದ ಗುಮ್ಮಟದ ಸಮಾಧಿ ಕೊಠಡಿ ವಿಶೇಷ ಗಮನ ಸೆಳೆಯುತ್ತದೆ. ಈ ಕಟ್ಟಡದ ಹೊರಗಿನ ಗೋಡೆಗಳು ಕಪ್ಪು ಕಲ್ಲಿನ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ಹೂವಿನ ವಿನ್ಯಾಸಗಳು ಮತ್ತು ಸುಂದರ ಕಮಾನುಗಳು ಬಹಮನಿ ಕಾಲದ ಕಲಾತ್ಮಕ ವೈಭವವನ್ನು ತೋರಿಸುತ್ತವೆ.
ಮೇಲ್ಭಾಗದಲ್ಲಿನ ಅಲಂಕಾರಗಳು ಮತ್ತು ಬಣ್ಣದ ಟೈಲ್ಸ್‌ಗಳು ಕಟ್ಟಡಕ್ಕೆ ಅಪರೂಪದ ಸೌಂದರ್ಯವನ್ನು ನೀಡುತ್ತವೆ. ಪ್ರವೇಶದ್ವಾರದಲ್ಲಿ ಕುರಾನ್ ವಾಕ್ಯಗಳನ್ನು ಅಲಂಕರಿಸಲಾಗಿದೆ.
![]() |
| ಚೌಖಂಡಿ ದರ್ಗಾ (ಡ್ರೋನ್ ಮೂಲಕ ಸೆರೆ ಹಿಡಿದಾಗ) |
ಒಳಭಾಗದ ಸಮಾಧಿಗಳು
ಚೌಖಂಡಿಯ ಒಳಭಾಗದಲ್ಲಿ ಹಜರತ್ ಖಲೀಲುಲ್ಲಾಹ್ ಕಿರ್ಮಾನಿ ಹಾಗೂ ಅವರ ಪುತ್ರರಾದ ಮುಹೀಬುದ್ದೀನ್ ಹಬೀಬುಲ್ಲಾ ಮತ್ತು ಹಬೀಬುದ್ದೀನ್ ಮುಹಿಬುಲ್ಲಾ ಅವರ ಸಮಾಧಿಗಳು ಇವೆ. ದರ್ಗಾದ ಪ್ರವೇಶ ಭಾಗದಲ್ಲಿ ಅವರ ಶಿಷ್ಯರು ಮತ್ತು ವಂಶಸ್ಥರ ಸಮಾಧಿಗಳನ್ನೂ ನಿರ್ಮಿಸಲಾಗಿದೆ. ಸುತ್ತಮುತ್ತಲೂ ಇನ್ನೂ ಅನೇಕ ಸಮಾಧಿಗಳು ಕಂಡುಬರುತ್ತವೆ. ಆದರೆ ಬಹುತೇಕ ಸಮಾಧಿಗಳ ಮೇಲೆ ಹೆಸರುಗಳಿಲ್ಲ.
ಮೊಹರಂ ತಿಂಗಳಲ್ಲಿ ಸಾವಿರಾರು ಭಕ್ತರು ಈ ದರ್ಗಾಕ್ಕೆ ಆಗಮಿಸಿ ಸಂತನ ಸ್ಮರಣೆಯಲ್ಲಿ ಗೌರವ ಸಲ್ಲಿಸುತ್ತಾರೆ. ಮಹಿಳೆಯರು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿ ದಾರಗಳನ್ನು ಕಟ್ಟುವ ಸಂಪ್ರದಾಯವೂ ಇಲ್ಲಿ ಕಂಡುಬರುತ್ತದೆ. ಈ ಸ್ಥಳವು ಧಾರ್ಮಿಕ ಸೌಹಾರ್ದತೆಯ ಸಂಕೇತವಾಗಿ ಇಂದಿಗೂ ಜೀವಂತವಾಗಿದೆ.
ಬಹಮನಿ ಸಮಾಧಿಗಳ ಸಮೀಪದಲ್ಲಿರುವ ಈ ಸ್ಮಾರಕವು ವಿಶಾಲ ಆವರಣದ ಮಧ್ಯದಲ್ಲಿ ಎತ್ತರದ ಸ್ಥಳದಲ್ಲಿ ನಿರ್ಮಾಣಗೊಂಡಿದೆ. ಕೆಲವು ಭಾಗಗಳು ಶಿಥಿಲಗೊಂಡಿದ್ದರೂ, ಭವ್ಯ ಕಮಾನುಗಳು, ಸುಂದರ ಕ್ಯಾಲಿಗ್ರಫಿ ಮತ್ತು ಅದ್ಭುತ ವಿನ್ಯಾಸಗಳು ಬಹಮನಿ ಸಾಮ್ರಾಜ್ಯದ ಸುವರ್ಣಯುಗವನ್ನು ನೆನಪಿಸುತ್ತವೆ. ಇತಿಹಾಸ, ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕತೆಯನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಬಯಸುವವರಿಗೆ ಬೀದರ್‌ನ ಚೌಖಂಡಿ ಅಮೂಲ್ಯ ಪರಂಪರೆಯಾಗಿದೆ.




