ಒಂದೇ ಕಡೆ 10 ಸುಲ್ತಾನರ ಸಮಾಧಿಗಳು: ಬಯಲಾಯ್ತು ಅಷ್ಟೂರು ರಹಸ್ಯ!

bidar astur bahmani sutanate tombs firoz sha
ಅಷ್ಟೂರು ಗ್ರಾಮದಲ್ಲಿರುವ ಬಹಮನಿ ಸುಲ್ತಾನರ ಸಮಾಧಿಗಳು

ಒಂದಲ್ಲ… ಎರಡಲ್ಲ… ಒಟ್ಟು ಹತ್ತು ಸುಲ್ತಾನರ ಸಮಾಧಿಗಳು.

ಒಮ್ಮೆ ದಕ್ಷಿಣ ಭಾರತದ ಭಾರೀ ಸಾಮ್ರಾಜ್ಯವನ್ನು ಆಳಿದ ಬಹಮನಿ ರಾಜರು ಇಂದು ಶಾಂತವಾಗಿ ವಿಶ್ರಾಂತಿ ಪಡೆದಿರುವ ಸ್ಥಳ- ಬೀದರ್ ನಗರದ ಹೊರವಲಯದಲ್ಲಿರುವ ಅಷ್ಟೂರು ಗ್ರಾಮ.

ಬೀದರ್ ನಗರದಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಈ ಸಣ್ಣ ಹಳ್ಳಿ ಐತಿಹಾಸಿಕವಾಗಿ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿರುವ ಸಮಾಧಿಗಳು ಕೇವಲ ಗೋರಿಗಳು ಅಲ್ಲ; ಅವು ದಕ್ಕನ್ ರಾಜಕೀಯ, ಸೂಫಿ ಪರಂಪರೆ, ಪರ್ಷಿಯನ್ ವಾಸ್ತುಶಿಲ್ಪ ಮತ್ತು ಒಳಜಗಳಗಳಿಂದ ತುಂಬಿದ ಸಾಮ್ರಾಜ್ಯದ ಏರುಪೇರುಗಳ ಮೌನ ಸಾಕ್ಷಿಗಳು. 

bidar astur bahmani sutanate tombs firoz sha
ಫಿರೋಜ್ ಷಾ ವಿರುದ್ಧ ಬಂಡಾಯ ಎದ್ದ ಅಹ್ಮದ್ ಖಾನ್

ಬಹಮನಿ ಸಾಮ್ರಾಜ್ಯದ ಸ್ಥಾಪನೆ

ಬಹಮನಿ ಸಾಮ್ರಾಜ್ಯದ ಸ್ಥಾಪಕನು ಅಲಾವುದ್ದೀನ್ ಹಸನ್ ಗಂಗೂ ಬಹಮನಿ. ಇವರು ಮೊದಲು ದೆಹಲಿಯ ಮಹಮ್ಮದ್ ಬಿನ್ ತುಘಲಕ್ ಅವರ ದಖನ್ ಪ್ರಾಂತ್ಯದ ಗವರ್ನರ್ ಆಗಿದ್ದರು.

ಕ್ರಿ.ಶ. 1347ರಲ್ಲಿ ದಖನ್ ಪ್ರದೇಶದ ಅಮೀರ್‌ಗಳು ಮತ್ತು ಸೂಫಿ ಸಂತರ ಬೆಂಬಲದೊಂದಿಗೆ ದೆಹಲಿ ಸುಲ್ತಾನರ ವಿರುದ್ಧ ದಂಗೆ ಎದ್ದು, ಸ್ವತಂತ್ರ ಬಹಮನಿ ರಾಜ್ಯವನ್ನು ಸ್ಥಾಪಿಸಿದರು.

ಆರಂಭದಲ್ಲಿ ದೇವಗಿರಿ (ದೌಲತಾಬಾದ್) ರಾಜಧಾನಿಯಾಗಿತ್ತು. ಬಳಿಕ ರಾಜಧಾನಿಯನ್ನು ಕಲಬುರಗಿಗೆ ವರ್ಗಾಯಿಸಲಾಯಿತು. ಸುಮಾರು 180 ವರ್ಷಗಳ ಕಾಲ 18 ಸುಲ್ತಾನರು ಈ ಸಾಮ್ರಾಜ್ಯವನ್ನು ಆಳಿದರು.

ಆದರೆ ಬಹಮನಿ ಆಡಳಿತದ ಇತಿಹಾಸವು ಶಾಂತಿಯಾಗಿರಲಿಲ್ಲ. ಒಳಜಗಳ, ಗದ್ದುಗೆ ಗುದ್ದಾಟ, ರಾಜಕೀಯ ಕುತಂತ್ರಗಳು ಸಾಮ್ರಾಜ್ಯವನ್ನು ನಿರಂತರ ಅಸ್ಥಿರಗೊಳಿಸುತ್ತಿದ್ದವು.

ಇದನ್ನೂ ಓದಿ: ಆ ಒಂದು ಘಟನೆ.. ಬೀದರ್ ಇತಿಹಾಸವನ್ನೇ ಬದಲಾಯಿಸಿತು!

ಫಿರೋಜ್ ಷಾ ಮತ್ತು ಅಹಮದ್ ಷಾ ವಾಲಿ

1397ರಲ್ಲಿ ಫಿರೋಜ್ ಷಾ ಪಟ್ಟಕ್ಕೇರಿದರು. ಅವರು ಸುಮಾರು 25 ವರ್ಷಗಳ ಕಾಲ ಆಡಳಿತ ನಡೆಸಿದರು. ಅವರ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ಶಾಂತಿ ನೆಲೆಸಿದರೂ, ಗದ್ದುಗೆ ಗುದ್ದಾಟ ಮುಂದುವರಿಯುತ್ತಲೇ ಇತ್ತು.

ಅವರ ನಂತರ ಪಟ್ಟಕ್ಕೇರಿದ ಮಹತ್ವದ ಸುಲ್ತಾನನು ಅಹಮದ್ ಷಾ ವಾಲಿ ಬಹಮನಿ (1422–1436). ಒಳಜಗಳಗಳಿಂದ ಬೇಸತ್ತು, 1432ರಲ್ಲಿ ಅವರು ರಾಜಧಾನಿಯನ್ನು ಕಲಬುರಗಿಯಿಂದ ಬೀದರ್‌ಗೆ ವರ್ಗಾಯಿಸಿದರು. ಇಲ್ಲಿಂದಲೇ ಬೀದರ್ ಗತವೈಭವ ಆರಂಭವಾಯಿತು.

bidar astur bahmani sutanate tombs firoz sha
ಸುಲ್ತಾನ ಅಹ್ಮದ್ ಷಾ ವಲಿ
ಅಹಮದ್ ಷಾ ವಾಲಿ ಜನಪರ ಆಡಳಿತ ನಡೆಸಿದ ರಾಜನಾಗಿ ಗುರುತಿಸಲ್ಪಟ್ಟಿದ್ದಾರೆ. ಹಿಂದೂ–ಮುಸ್ಲಿಂ ಸೌಹಾರ್ದತೆಯನ್ನು ಉತ್ತೇಜಿಸಿದ ಕಾರಣ ಅವರಿಗೆ ವಲಿ (ದೇವರ ಗೆಳೆಯ) ಎಂಬ ಗೌರವಪದ ಲಭಿಸಿತು.

ಇಂದಿಗೂ ಅವರ ದರ್ಗಾದಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ವಿಶೇಷವೆಂದರೆ ಈ ಜಾತ್ರೆಗೆ ಚಾಲನೆ ನೀಡುವವರು ಲಿಂಗಾಯತ ಪರಂಪರೆಯ ಸ್ವಾಮೀಜಿಗಳು. ಇದು ದಕ್ಕನ್ ಸಂಸ್ಕೃತಿಯ ಸಮನ್ವಯತೆಯ ಪ್ರತೀಕವಾಗಿದೆ.
bidar astur bahmani sutanate tombs firoz sha
ಅಹ್ಮದ್ ಷಾ ವಲಿ ಸಮಾಧಿಗೆ ಗೌರವ ಸಲ್ಲಿಸುತ್ತಿರುವ ಹಿಂದೂಗಳು

ಅಷ್ಟೂರಿನ ಸಮಾಧಿಗಳು – ವಾಸ್ತುಶೈಲಿಯ ಅದ್ಭುತ

ಅಹಮದ್ ಷಾ ವಾಲಿಯ ಸಮಾಧಿ ಅಷ್ಟೂರಿನಲ್ಲಿರುವ ಪ್ರಮುಖ ಕಟ್ಟಡ. ಚೌಕಾಕಾರದ ಆಧಾರದ ಮೇಲೆ ನಿರ್ಮಿಸಲಾದ ಭವ್ಯ ಗುಂಬಜ್ ಇದರ ವೈಶಿಷ್ಟ್ಯ. ಒಳಭಾಗದಲ್ಲಿ ಪರ್ಷಿಯನ್ ಶಾಸನಗಳು, ಕುರ್‌ಆನ್ ವಚನಗಳು ಮತ್ತು ಸೂಫಿ ಸಂಕೇತಗಳು ಅಲಂಕಾರವಾಗಿ ಕಾಣುತ್ತವೆ. ಗೋಡೆಗಳ ಮೇಲೆ ನಕ್ಷತ್ರಾಕಾರದ ಹಾಗೂ ಹೂವಿನ ವಿನ್ಯಾಸಗಳು ದಖನಿ–ಪರ್ಷಿಯನ್ ಶೈಲಿಯ ಸುಂದರ ಉದಾಹರಣೆ.

bidar astur bahmani sutanate tombs firoz sha
ಅಹ್ಮದ್ ಷಾ ವಲಿ ಸ್ಮಾರಕದ ಗುಮ್ಮಟದ ಮೇಲಿನ ಚಿತ್ತಾರ!

ಅಷ್ಟೂರಿನ ಎಲ್ಲಾ ಸಮಾಧಿಗಳು ಒಂದೇ ರೀತಿಯಲ್ಲಿಲ್ಲ. ಪ್ರತಿಯೊಂದು ಗೋರಿಯೂ ವಿಭಿನ್ನ ವಿನ್ಯಾಸ ಹೊಂದಿದೆ. ಕೆಲವು ಭವ್ಯ ಗುಮ್ಮಟಗಳನ್ನು ಹೊಂದಿದ್ದರೆ, ಕೆಲವು ಸರಳ ವಿನ್ಯಾಸದಲ್ಲಿವೆ. ಕಪ್ಪು ಕಲ್ಲು, ಚೂನಾ ಮತ್ತು ಇಟ್ಟಿಗೆ ಬಳಸಿ ನಿರ್ಮಿಸಲಾದ ಈ ಕಟ್ಟಡಗಳು ದಕ್ಕನ್ ವಾಸ್ತುಶಿಲ್ಪದ ಅಮೂಲ್ಯ ಮಾದರಿಗಳಾಗಿವೆ.

ಇದನ್ನೂ ಓದಿ: ಕಲಬುರಗಿ ರಕ್ತಸಿಕ್ತ ಅಧ್ಯಾಯಕ್ಕೆ ಸಾಕ್ಷಿ- ಸಾತ್ ಗುಂಬಜ್

bidar astur bahmani sutanate tombs firoz sha
ಅಹ್ಮದ್ ಷಾ ವಲಿ ಸಮಾಧಿ

ರಾಜಕೀಯ ಅಶಾಂತಿ ಮತ್ತು ಹತ್ಯೆಗಳು

ಅಹಮದ್ ಷಾ ವಾಲಿ ನಂತರ ಅಧಿಕಾರಕ್ಕೇರಿದ ಎರಡನೇ ಅಲ್ಲಾಉದ್ದೀನ್ ಶಾ ಅವರ ಅವಧಿಯಲ್ಲಿ ಅರಮನೆಯೊಳಗಿನ ಅಮೀರ್‌ಗಳು ಮತ್ತು ಪ್ರಭಾವಿ ಗುಂಪುಗಳ ನಡುವೆ ಅಧಿಕಾರ ಹೋರಾಟ ತೀವ್ರಗೊಂಡಿತು. ಗದ್ದುಗೆಗಾಗಿ ನಡೆದ ಕುತಂತ್ರಗಳಲ್ಲಿ ಸುಲ್ತಾನರ ಹತ್ಯೆಗಳೂ ನಡೆದವು.

ಈ ಪೈಕಿ ಅತ್ಯಂತ ವಿವಾದಾತ್ಮಕ ರಾಜನು ಹುಮಾಯೂನ್ ಶಾ ಬಹಮನಿ. ಕೇವಲ ಮೂರು ವರ್ಷಗಳ ಆಡಳಿತ ನಡೆಸಿದರೂ, ಅವರ ಕ್ರೂರ ಆಡಳಿತ ಶೈಲಿಯ ಬಗ್ಗೆ ಇತಿಹಾಸ ಗ್ರಂಥಗಳಲ್ಲಿ ಉಲ್ಲೇಖಗಳಿವೆ.

bidar astur bahmani sutanate tombs firoz sha
ವಿರೋಧಿಗಳನ್ನು ಸಿಂಹದ ಬಾಯಿಗೆ ಕೊಡುತ್ತಿರುವ ಹುಮಾಯೂನ್ ಶಾ

ಕ್ರಿ.ಶ. 1461ರಲ್ಲಿ ಅಮೀರ್‌ಗಳು ಮತ್ತು ಮಂತ್ರಿಗಳು ಸೇರಿ ಅವರನ್ನು ಕೊಲೆ ಮಾಡಿದರು. ಅವರ ಸಮಾಧಿಯೂ ಅಷ್ಟೂರಿನಲ್ಲೇ ಇದೆ. ಕಾಲದ ಹಾನಿಯಿಂದ ಅದರ ಗುಮ್ಮಟ ಭಾಗಶಃ ಕುಸಿದಿದೆ. ಅವರ ಪತ್ನಿ ಮಲ್ಲಿಕಾ-ಇ-ಜಹಾನ್ ಅವರ ಸಮಾಧಿಯೂ ಸಮೀಪದಲ್ಲೇ ಇದೆ.

ಮಹಮ್ಮದ್ ಗವಾನ್ ಮತ್ತು ಸಾಮ್ರಾಜ್ಯದ ಕುಸಿತ

ಹುಮಾಯೂನ್ ಶಾ ನಂತರ ಮೂರನೇ ಮಹಮ್ಮದ್ ಶಾ ಪಟ್ಟಕ್ಕೇರಿದರು. ಅವರ ಕಾಲದಲ್ಲಿ ಮಂತ್ರಿಯಾಗಿದ್ದ ಮಹಮ್ಮದ್ ಗವಾನ್ ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದರು. ಶಿಕ್ಷಣ, ಹಣಕಾಸು ಮತ್ತು ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ನಡೆದವು.

bidar astur bahmani sutanate tombs firoz sha
ಅಷ್ಟೂರು ಗ್ರಾಮದಲ್ಲಿರುವ ಬಹಮನಿ ಸುಲ್ತಾನರ ಸಮಾಧಿಗಳು
ಬೀದರ್‌ನ ಪ್ರಸಿದ್ಧ ಮದರಸಾ ಅವರ ಕಾಲದ ಸ್ಮಾರಕವಾಗಿದೆ. ಆದರೆ ದರ್ಬಾರದ ಒಳಸಂಚುಗಳಿಂದ ಗವಾನ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಹತ್ಯೆ ಮಾಡಲಾಯಿತು. ಈ ಘಟನೆ ಬಹಮನಿ ಸಾಮ್ರಾಜ್ಯದ ಕುಸಿತಕ್ಕೆ ಪ್ರಮುಖ ಕಾರಣವಾಯಿತು.
ನಂತರ ಬರಿದ್, ಆದಿಲ್, ನಿಜಾಮ್, ಇಮಾದ್ ಮುಂತಾದ ಅಮೀರ್‌ಗಳು ತಮ್ಮದೇ ಸುಲ್ತಾನತೆಗಳನ್ನು ಸ್ಥಾಪಿಸಿದರು. ಬಹಮನಿ ಸಾಮ್ರಾಜ್ಯ ಐದು ಭಾಗಗಳಾಗಿ ಒಡೆಯಿತು.ಕೊನೆಯ ಸುಲ್ತಾನರು ಕೇವಲ ಹೆಸರಿಗಷ್ಟೇ ರಾಜರಾಗಿದ್ದರು. 1527ರಲ್ಲಿ ಬಹಮನಿ ಆಡಳಿತ ಅಂತ್ಯಗೊಂಡು ಬೀದರ್‌ನಲ್ಲಿ ಬರೀದ್ ಶಾಹಿಗಳ ಆಡಳಿತ ಆರಂಭವಾಯಿತು.
bidar astur bahmani sutanate tombs firoz sha
ಮರಣ ದಂಡನೆಗೆ ಗುರಿಯಾದ ಮಹಮೂದ್ ಗವಾನ್

ಮೌನವಾಗಿ ನಿಂತಿರುವ ಇತಿಹಾಸ

ಅಷ್ಟೂರಿನ ಸಮಾಧಿಗಳು ಇಂದು ಮೌನವಾಗಿ ನಿಂತಿವೆ. ಒಮ್ಮೆ ಭವ್ಯ ಸಾಮ್ರಾಜ್ಯವನ್ನು ಆಳಿದ ರಾಜರ ಅಂತಿಮ ವಿಶ್ರಾಂತಿ ಸ್ಥಳವಾಗಿರುವ ಈ ತಾಣ ಇತಿಹಾಸದ ಏರುಪೇರುಗಳನ್ನು ನೆನಪಿಸುತ್ತದೆ.

ಇವು ಕೇವಲ ಸಮಾಧಿಗಳು ಅಲ್ಲ- ಅವು ದಕ್ಕನ್ ರಾಜಕೀಯ, ಸೂಫಿ ಪರಂಪರೆ, ಪರ್ಷಿಯನ್ ಸಂಸ್ಕೃತಿ ಮತ್ತು ಕರ್ನಾಟಕದ ಮಧ್ಯಯುಗೀನ ಇತಿಹಾಸದ ಭಾಗ.

bidar astur bahmani sutanate tombs firoz sha
ಅಷ್ಟೂರು ಗ್ರಾಮದಲ್ಲಿರುವ ಬಹಮನಿ ಸುಲ್ತಾನರ ಸಮಾಧಿಗಳು

ಸಂರಕ್ಷಣೆ ಮತ್ತು ಪ್ರವಾಸೋದ್ಯಮ

ಈ ತಾಣವನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸುತ್ತಿದೆ. ಬೀದರ್ ಕೋಟೆ ಭೇಟಿ ಮಾಡುವವರು ಅಷ್ಟೂರಿನ ಸಮಾಧಿಗಳನ್ನು ಸಹ ನೋಡಬಹುದು.

ಸಮಾಧಿಗಳ ವಿಶಿಷ್ಟ ಗುಮ್ಮಟಗಳು, ಒಳಗಿನ ಚಿತ್ರಕಲೆ, ಪರ್ಷಿಯನ್ ಶಾಸನಗಳು ಮತ್ತು ಶಾಂತ ವಾತಾವರಣ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತವೆ. ಬೀದರ್‌ನ ಅಷ್ಟೂರು ಗ್ರಾಮದಲ್ಲಿ ಮಲಗಿರುವ ಈ 10 ಸುಲ್ತಾನರ ಸಮಾಧಿಗಳು ಬಹಮನಿ ಸಾಮ್ರಾಜ್ಯದ ಉದಯ–ಅಸ್ತಮಯದ ಕಥೆಯನ್ನು ಹೇಳುತ್ತವೆ.

bidar astur bahmani sutanate tombs firoz sha
ಅಷ್ಟೂರು ಗ್ರಾಮದಲ್ಲಿರುವ ಬಹಮನಿ ಸುಲ್ತಾನರ ಸಮಾಧಿಗಳು
ಒಮ್ಮೆ ವೈಭವದಿಂದ ಆಳಿದ ರಾಜರು ಇಂದು ಮೌನವಾಗಿ ವಿಶ್ರಾಂತಿ ಪಡೆದಿದ್ದಾರೆ. ಆದರೆ ಅವರ ಕಾಲದ ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ರಾಜಕೀಯ ಕಥೆಗಳು ಇನ್ನೂ ಜೀವಂತವಾಗಿವೆ. ನೀವು ಬೀದರ್‌ಗೆ ಭೇಟಿ ನೀಡಿದರೆ, ಈ ಐತಿಹಾಸಿಕ ತಾಣವನ್ನು ತಪ್ಪದೇ ನೋಡಿ. ಇತಿಹಾಸವನ್ನು ಕೇವಲ ಓದುವುದಲ್ಲ, ಅನುಭವಿಸುವುದು ಕೂಡ ಮುಖ್ಯ.
ನವೀನ ಹಳೆಯದು