ಕಲಬುರಗಿ ಶರಣಬಸವೇಶ್ವರ ದೇವಸ್ಥಾನ: ಜೋಡಿ ಮೂರ್ತಿಗಳ ರಹಸ್ಯ!

kalaburagi sharana basaveshwara temple
ಕಲಬುರಗಿ ಶರಣಬಸವೇಶ್ವರ ದೇವಸ್ಥಾನ
ಶರಣರ ನಾಡು, ಸೂಫಿ ಸಂತರ ಬೀಡು, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು- ಈ ಎಲ್ಲಾ ಹೆಸರಿನಿಂದ ಪ್ರಸಿದ್ಧಿ ಪಡೆದಿರುವ Kalaburagi ಧಾರ್ಮಿಕ ಸೌಹಾರ್ದತೆಗೆ ಒಂದು ಜೀವಂತ ಉದಾಹರಣೆ. ಈ ನಗರದಲ್ಲಿ ವಿವಿಧ ಧರ್ಮಗಳ ಪರಂಪರೆಗಳು ಒಂದೇ ಜಾಗದಲ್ಲಿ ಒಂದಾಗಿ ಬೆರೆತು ಕಾಣಿಸುತ್ತವೆ. ಸೂಫಿ ಸಂತರ ದರ್ಗಾಗಳು, ಬಸವಣ್ಣನ ಶರಣರ ನೆಲೆಗಳು, ದೇವಾಲಯಗಳು ಮತ್ತು ಮಸೀದಿಗಳು- ಇವೆಲ್ಲವೂ ಇಲ್ಲಿ ಸಹಜವಾಗಿ ಬೆಸೆದುಕೊಂಡಿವೆ. ಈ ವೈವಿಧ್ಯಮಯ ಆಧ್ಯಾತ್ಮಿಕ ಪರಂಪರೆಯ ನಡುವೆ ವಿಶೇಷ ಸ್ಥಾನ ಪಡೆದಿರುವುದು ಶ್ರೀ ಶರಣಬಸವೇಶ್ವರ ದೇವಸ್ಥಾನ (Sharana Basaveshwara Temple). ಇದು ಕೇವಲ ಒಂದು ದೇವಾಲಯವಲ್ಲ; ದಾಸೋಹ, ಜ್ಞಾನ ಮತ್ತು ಮಾನವೀಯತೆಯನ್ನು ಶತಮಾನಗಳಿಂದ ಜೀವಂತವಾಗಿಟ್ಟಿರುವ ಒಂದು ಮಹಾ ಚಳುವಳಿಯ ಕೇಂದ್ರವಾಗಿದೆ.

ಶರಣಬಸವೇಶ್ವರರ ಜೀವನ ಮತ್ತು ತತ್ವ

ಶರಣಬಸವೇಶ್ವರರು 1746ರಲ್ಲಿ ಕಲಬುರಗಿಯ ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಅವರು ಆಧ್ಯಾತ್ಮಿಕ ಚಿಂತನೆಗಳತ್ತ ಆಕರ್ಷಿತರಾದರು. ಆ ಸಮಯದಲ್ಲಿ ದಕ್ಕನ್ ಪ್ರದೇಶ ಹೈದರಾಬಾದ್ ನಿಜಾಮರ ಅಡಿಯಲ್ಲಿ ಇದ್ದು, ಸಮಾಜದಲ್ಲಿ ಬಡತನ, ಅಸಮಾನತೆ ಮತ್ತು ಹಸಿವು ವ್ಯಾಪಕವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅವರು ಬಸವಣ್ಣನ ಕಾಯಕ ಮತ್ತು ದಾಸೋಹ ತತ್ವಗಳನ್ನು ತಮ್ಮ ಜೀವನದ ಕೇಂದ್ರವನ್ನಾಗಿ ಮಾಡಿಕೊಂಡರು. 'ಹಸಿದವನಿಗೆ ಅನ್ನ ನೀಡುವುದು ದೇವರ ಸೇವೆ' ಎಂಬ ಸಂದೇಶವನ್ನು ಅವರು ಕೇವಲ ಮಾತಿನಲ್ಲಿ ಹೇಳದೇ, ತಮ್ಮ ಜೀವನದಲ್ಲೇ ಅನುಸರಿಸಿದರು.

ಈ ಆಧ್ಯಾತ್ಮಿಕ ಪಯಣದಲ್ಲಿ ಪ್ರಮುಖ ಪ್ರಭಾವ ಬೀರಿದವರು ಮರುಳಸಿದ್ಧ ಶಿವಾಚಾರ್ಯರು. ಅವರ ಸಾನ್ನಿಧ್ಯದಲ್ಲಿ ಶರಣಬಸವೇಶ್ವರರು ಕೇವಲ ಜ್ಞಾನವನ್ನೇ ಪಡೆಯಲಿಲ್ಲ; ಬದುಕಿನ ನಿಜವಾದ ಅರ್ಥವನ್ನು ಅರಿತುಕೊಂಡರು. ‘ಕಾಯಕವೇ ಕೈಲಾಸ, ದಾಸೋಹವೇ ಧರ್ಮ’ ಎಂಬ ತತ್ವ ಅವರ ಬದುಕಿನ ದಿಕ್ಕನ್ನು ನಿರ್ಧರಿಸಿತು. ಸಾಂಸಾರಿಕ ಜೀವನದಲ್ಲಿಯೂ ಅವರು ತಮ್ಮ ಪತ್ನಿ ಮಹಾದೇವಿಯವರೊಂದಿಗೆ ದಾಸೋಹ, ಲಿಂಗಪೂಜೆ ಮತ್ತು ಶಿವಾನುಭವದ ಮೂಲಕ ಆದರ್ಶ ಬದುಕನ್ನು ನಡೆಸಿದರು. ಆದರೆ ಪತ್ನಿ ಮತ್ತು ಮಗನ ಅಕಾಲಿಕ ನಿಧನ ಅವರ ಜೀವನದಲ್ಲಿ ದೊಡ್ಡ ತಿರುವು ತಂದಿತು. ಆ ದುಃಖದ ನಂತರ ಅವರು ಲೋಕಸಂಚಾರಕ್ಕೆ ಹೊರಟರು.

kalaburagi sharana basaveshwara temple
ಭಕ್ತರೊಂದಿಗೆ ಶರಣಬಸವೇಶ್ವರರು

ಕಲಬುರಗಿಯಲ್ಲಿ ದಾಸೋಹ ಚಳುವಳಿ

ಭೀಮಾ ನದಿಯನ್ನು ದಾಟಿ ಊರು ಊರು ಸಂಚರಿಸುತ್ತಾ ಶರಣಬಸವೇಶ್ವರರು ಹಸಿದವರಿಗೆ ಅನ್ನ, ಸಂಕಷ್ಟದಲ್ಲಿರುವವರಿಗೆ ಧೈರ್ಯ ನೀಡುತ್ತಾ ಕಲಬುರಗಿಗೆ ಬಂದರು. ಆ ಕಾಲದ ಕಲಬುರಗಿ ಜಾತಿ ಭೇದ ಮತ್ತು ಕಟ್ಟಳೆಗಳಿಂದ ಕೂಡಿದ ಸಮಾಜವಾಗಿತ್ತು. ಇಂತಹ ಸಂದರ್ಭದಲ್ಲಿ ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಹರಡುವುದು ಸುಲಭವಾಗಿರಲಿಲ್ಲ. ಆದರೆ ಅವರು ತಮ್ಮ ಕಾರ್ಯವನ್ನು ನಿಲ್ಲಿಸಲಿಲ್ಲ.

ಈ ಸಂದರ್ಭದಲ್ಲಿ ಅವರ ಜೀವನದಲ್ಲಿ ಮಹತ್ವದ ಪಾತ್ರವಹಿಸಿದವರು Doddappa Sharana. ದೊಡ್ಡಪ್ಪ ಶರಣರು ಅವರನ್ನು ಅಪಾರ ಭಕ್ತಿಯಿಂದ ಸ್ವಾಗತಿಸಿ, ತಮ್ಮ ವಶದಲ್ಲಿದ್ದ ಜಾಗವನ್ನು ದಾಸೋಹ ಮತ್ತು ಶರಣರ ಸೇವೆಗೆ ಮುಕ್ತವಾಗಿ ನೀಡಿದರು ಎಂದು ತಿಳಿದುಬರುತ್ತದೆ. ಇದೇ ಸ್ಥಳದಲ್ಲಿ ಶರಣಬಸವೇಶ್ವರರು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಅಲ್ಲಿಂದಲೇ ಅನ್ನದಾಸೋಹ, ಶಿವಾನುಭವ ಗೋಷ್ಟಿಗಳು ಮತ್ತು ಲಿಂಗದೀಕ್ಷೆಯಂತಹ ಕಾರ್ಯಗಳು ಬೆಳೆಯಲು ಆರಂಭವಾಯಿತು.

ಆದರೆ ಈ ಮಾರ್ಗ ಸುಲಭವಾಗಿರಲಿಲ್ಲ. ಜಾತಿ-ಮತ ಬೇಧವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ನ ನೀಡುವ ದಾಸೋಹದ ತತ್ವವನ್ನು ಕೆಲವರು ವಿರೋಧಿಸಿದರು. ಒಂದೇ ಸ್ಥಳದಲ್ಲಿ ಎಲ್ಲರೂ ಕೂತು ಊಟ ಮಾಡುವುದನ್ನು ಒಪ್ಪದ ಮನೋಭಾವವೂ ಎದುರಾಯಿತು. ಆದರೆ ಶರಣಬಸವೇಶ್ವರರು ವಿರೋಧಗಳಿಗೆ ಪ್ರತಿಯಾಗಿ ತಮ್ಮ ಕಾರ್ಯದ ಮೂಲಕವೇ ಉತ್ತರ ನೀಡಿದರು. ಪ್ರತಿದಿನ ನಡೆಯುತ್ತಿದ್ದ ಅನ್ನದಾಸೋಹ ಮತ್ತು ಸೇವಾ ಚಟುವಟಿಕೆಗಳು ನಿಧಾನವಾಗಿ ಜನರ ಮನಸ್ಸನ್ನು ಬದಲಾಯಿಸಿತು. ಕಾಲಕ್ರಮೇಣ ದಾಸೋಹವು ಕೇವಲ ಸೇವೆಯಾಗಿರದೆ, ಒಂದು ಸಂಸ್ಕೃತಿಯಾಯಿತು. ಜನರು ತಮ್ಮ ಮನೆಗಳಲ್ಲಿಯೂ ಅನ್ನದಾಸೋಹವನ್ನು ಅನುಸರಿಸಲು ಆರಂಭಿಸಿದರು.

kalaburagi sharana basaveshwara temple
ಶರಣಬಸವೇಶ್ವರರ ದಾಸೋಹಕ್ಕೆ ಅಡ್ಡಿ ಪಡಿಸುತ್ತಿರುವ ಮೇಲ್ವರ್ಗದವರು

ದೇವಸ್ಥಾನದ ವೈಭವ ಮತ್ತು ಪರಂಪರೆ

1822ರ ಮಾರ್ಚ್ 11ರಂದು ಶರಣಬಸವೇಶ್ವರರು ಲಿಂಗೈಕ್ಯರಾದರು. ಅವರ ಸಮಾಧಿಯ ಮೇಲೆಯೇ ಇಂದಿನ ದೇವಾಲಯ ನಿರ್ಮಾಣವಾಗಿದೆ. ಗರ್ಭಗುಡಿಯಲ್ಲಿ ಕಾಣಸಿಗುವ ಜೋಡಿ ಮೂರ್ತಿಗಳಲ್ಲಿ ಒಂದು ಶರಣಬಸವೇಶ್ವರರದು ಮತ್ತು ಇನ್ನೊಂದು ಅವರ ಗುರು ಮರುಳಸಿದ್ದ ಶಿವಚಾರ್ಯರದು. ಇದು ಗುರು-ಶಿಷ್ಯರ ಅವಿನಾಭಾವ ಸಂಬಂಧದ ಸಂಕೇತವಾಗಿದೆ.

ದೇವಾಲಯದ ವಾಸ್ತುಶಿಲ್ಪವು ದಕ್ಕನ್ ಶೈಲಿಯ ಪ್ರಭಾವವನ್ನು ಹೊಂದಿದೆ. ವಿಶಾಲ ಸಭಾಮಂಟಪ, ಅನೇಕ ಕಂಬಗಳು, 36 ಕಮಾನುಗಳ ಛಾವಣಿ ಮತ್ತು ಗೋಡೆಗಳ ಮೇಲಿನ ಕೆತ್ತನೆಗಳು- ಎಲ್ಲವೂ ಈ ಕ್ಷೇತ್ರದ ಐತಿಹಾಸಿಕ ಮಹತ್ವವನ್ನು ತೋರಿಸುತ್ತವೆ. ಆದರೆ ಈ ಸ್ಥಳದ ನಿಜವಾದ ವೈಭವ ಅದರ ದಾಸೋಹ ಪರಂಪರೆಯಲ್ಲಿದೆ. ಇಂದಿಗೂ ಇಲ್ಲಿ ಬರುವ ಪ್ರತಿಯೊಬ್ಬ ಭಕ್ತನಿಗೂ ಉಚಿತ ಅನ್ನದ ವ್ಯವಸ್ಥೆ ಇದೆ. ದೇವಸ್ಥಾನದ ಸಂಕೀರ್ಣದಲ್ಲಿರುವ ದಾಸೋಹ ಮಹಾಮನೆ ಶತಮಾನಗಳ ಪರಂಪರೆಯನ್ನು ಮುಂದುವರಿಸುತ್ತಿದೆ.

ಈ ಕ್ಷೇತ್ರದ ಇನ್ನೊಂದು ವಿಶಿಷ್ಟತೆ ಎಂದರೆ ಧಾರ್ಮಿಕ ಸೌಹಾರ್ದತೆ. ಕಲಬುರಗಿಯ ಪ್ರಸಿದ್ಧ Khwaja Bande Nawaz Dargah ಜೊತೆ ಈ ದೇವಾಲಯವು ಶತಮಾನಗಳ ಬಾಂಧವ್ಯ ಹೊಂದಿದೆ. ಬಂದೇ ನವಾಜರ ಉರುಸು ಆರಂಭವಾಗುವ ಮೊದಲು ತೇಯ್ದ ಗಂಧವು ಶರಣಬಸವೇಶ್ವರರ ದೇವಸ್ಥಾನದಿಂದ ಬರಬೇಕು ಎಂಬ ಪರಂಪರೆ ಇದೆ. ಅದೇ ರೀತಿ ಶರಣಬಸವೇಶ್ವರರ ಜಾತ್ರೆ ಆರಂಭವಾಗುವ ಮುನ್ನ ದೀವಟಿಗೆಗಳು ದರ್ಗಾದಿಂದ ಬರುತ್ತವೆ. ಈ ಪರಸ್ಪರ ಗೌರವ ಮತ್ತು ಸಹಕಾರ ಕಲಬುರಗಿಯ ಸೌಹಾರ್ದತೆಯ ಪ್ರತೀಕವಾಗಿದೆ.

kalaburagi sharana basaveshwara temple
ದೇವಾಲಯದಲ್ಲಿರುವ ಜೋಡಿ ಮೂರ್ತಿಗಳು

ಜಾತ್ರೆ, ಸಂಪ್ರದಾಯ ಮತ್ತು ಇಂದಿನ ಮಹತ್ವ

ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಶರಣಬಸವೇಶ್ವರರ ಜಾತ್ರೆ ಸುಮಾರು 15 ದಿನಗಳ ಕಾಲ ನಡೆಯುತ್ತದೆ. ಮೊದಲ ದಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ. ಈ ವೇಳೆ ಗುರು-ಶಿಷ್ಯರ ಜೋಡಿ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗುತ್ತದೆ. ಎರಡನೇ ದಿನ ನಡೆಯುವ ರಥೋತ್ಸವದಲ್ಲಿ ಸಾವಿರಾರು ಭಕ್ತರು ಒಂದಾಗಿ ತೇರು ಎಳೆಯುವ ದೃಶ್ಯ ಅದ್ಭುತವಾಗಿರುತ್ತದೆ. ಜಯಘೋಷಗಳಿಂದ ಮೊಳಗುವ ವಾತಾವರಣ, ಹೂವು-ಹಣ್ಣುಗಳನ್ನು ಅರ್ಪಿಸುವ ಭಕ್ತರ ಭಾವ- ಎಲ್ಲವೂ ಆ ಕ್ಷಣವನ್ನು ವಿಶೇಷವಾಗಿಸುತ್ತದೆ.

ಜಾತ್ರೆಯ ಸಮಯದಲ್ಲಿ ನಿರಂತರ ಅನ್ನದಾಸೋಹ ನಡೆಯುತ್ತದೆ. ರೈತರು ತಮ್ಮ ಬೆಳೆದ ಬೆಳೆಯಲ್ಲಿ ಒಂದು ಭಾಗವನ್ನು ದಾಸೋಹಕ್ಕೆ ನೀಡುವ ಸಂಪ್ರದಾಯವೂ ಇಂದಿಗೂ ಮುಂದುವರಿದಿದೆ. ಇದೇ ಸಮಯದಲ್ಲಿ ಅರಳಗುಂಡಗಿ ಗ್ರಾಮದಲ್ಲಿಯೂ ಜಾತ್ರೆ ನಡೆಯುವುದು ಈ ಪರಂಪರೆಯ ವ್ಯಾಪ್ತಿಯನ್ನು ತೋರಿಸುತ್ತದೆ.

kalaburagi sharana basaveshwara temple
ಶರಣಬಸವೇಶ್ವರ ದೇವಾಲಯದ ವಿಶಿಷ್ಟ ಗೋಪುರ
ದೇವಾಲಯದ ಸಮೀಪದಲ್ಲಿರುವ ಅಪ್ಪನ ಕೆರೆ ಸುಮಾರು 102 ಎಕರೆ ವ್ಯಾಪ್ತಿಯಲ್ಲಿದ್ದು, ಪ್ರವಾಸಿಗರಿಗೆ ವಿಶ್ರಾಂತಿ ನೀಡುವ ಸ್ಥಳವಾಗಿದೆ. 1927ರಲ್ಲಿ Mahatma Gandhi ಇಲ್ಲಿ ಭೇಟಿ ನೀಡಿರುವುದು ಈ ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಇಂದಿಗೂ ಶರಣಬಸವೇಶ್ವರ ಮಹಾಸಂಸ್ಥಾನವು ಅನ್ನದಾಸೋಹದ ಜೊತೆಗೆ 'ಜ್ಞಾನ ದಾಸೋಹ'ವನ್ನೂ ಮುಂದುವರಿಸುತ್ತಿದೆ. ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡುತ್ತಿದೆ. ಇತ್ತೀಚೆಗೆ ಹಿರಿಯ ಪೀಠಾಧಿಪತಿ Dr.Sharanabasappa Appa ಲಿಂಗೈಕ್ಯರಾದ ನಂತರ, ಅವರ ಪುತ್ರ Doddappa Appa ಈ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ಕಲಬುರಗಿ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದ ಸಮೀಪದಲ್ಲೇ ಇರುವ ಈ ದೇವಸ್ಥಾನಕ್ಕೆ ತಲುಪಲು ಸುಲಭವಾದ ಸಾರಿಗೆ ಸೌಲಭ್ಯಗಳಿವೆ. ನೀವು ಕಲಬುರಗಿಗೆ ಭೇಟಿ ನೀಡುವಾಗ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದು ಕೇವಲ ಒಂದು ಧಾರ್ಮಿಕ ಅನುಭವವಲ್ಲ; ಅದು ಮಾನವೀಯತೆ, ಸಮಾನತೆ ಮತ್ತು ಸೌಹಾರ್ದತೆಯ ಜೀವಂತ ಪಾಠವಾಗುತ್ತದೆ.

ನವೀನ ಹಳೆಯದು