![]() |
| ಕಲಬುರಗಿ ನಗರದಲ್ಲಿರುವ ಸಾತ್ ಗುಂಬಜ್ |
ಇಲ್ಲಿ ನಮಗೆ ಏಳು ದೊಡ್ಡ ಗುಮ್ಮಟಗಳನ್ನು ಹೊಂದಿರುವ ಸಮಾಧಿಗಳ ಸಂಕೀರ್ಣ ಕಾಣಿಸುತ್ತದೆ. ಆದರೆ ಇವು ಸಾಮಾನ್ಯ ಸಮಾಧಿಗಳಲ್ಲ. ಇವು ಬಹಮನಿ ಸುಲ್ತಾನರ ಗೋರಿಗಳು.
ಈ ಸಾತ್ ಗುಂಬಜ್ ಸಂಕೀರ್ಣವು ಕೇವಲ ಬಹಮನಿ ಸಾಮ್ರಾಜ್ಯದ ಗತವೈಭವವನ್ನಷ್ಟೇ ಅಲ್ಲ, ಗುಲಬರ್ಗಾ ಕಂಡ ಭೀಕರ ಅಧಿಕಾರ ಹೋರಾಟ, ದ್ರೋಹ, ಕೊಲೆ ಮತ್ತು ಕಣ್ಣುಕೀಳುವ ರಕ್ತಸಿಕ್ತ ಅಧ್ಯಾಯಗಳಿಗೂ ಸಾಕ್ಷಿಯಾಗಿದೆ.
ಯಾರು ಯಾರು ಇಲ್ಲಿ ಸಮಾಧಿಯಾಗಿದ್ದಾರೆ?
ನಗರದ ಖಾಜಾ ಬಂದೆ ನವಾಜ್ ದರ್ಗಾ ರಸ್ತೆಯಲ್ಲಿರುವ ಈ ಸಂಕೀರ್ಣದಲ್ಲಿ ಬಹಮನಿ ವಂಶದ ಐವರು ಸುಲ್ತಾನರು, ಅವರ ಪರಿವಾರದವರು ಹಾಗೂ ಕೆಲವು ಪ್ರಮುಖ ಸೇನಾಪತಿಗಳ ಸಮಾಧಿಗಳು ಇವೆ.
![]() |
| ಕಲಬುರಗಿ ನಗರದಲ್ಲಿರುವ ಸಾತ್ ಗುಂಬಜ್ |
- ಬಹಮನಿ ಸಂಸ್ಥಾನದ 3ನೇ ಸುಲ್ತಾನ ಮುಜಾಹಿದ್ ಷಾ
- 4ನೇ ಸುಲ್ತಾನ ದಾವೂದ್ ಷಾ
- 6ನೇ ಸುಲ್ತಾನ ಘಿಯಾಸುದ್ದೀನ್ ಷಾ
- 7ನೇ ಸುಲ್ತಾನ ಶಮ್ಸುದ್ದೀನ್ ಷಾ
- 8ನೇ ಸುಲ್ತಾನ ಫಿರೋಜ್ ಷಾ
![]() |
| ಸುಲ್ತಾನನೊಬ್ಬನ ಸಮಾಧಿ |
ಬಹಮನಿ ಸಾಮ್ರಾಜ್ಯದ ಆರಂಭ- ಗುಲಬರ್ಗಾ ರಾಜಧಾನಿಯಾಗಿದ್ದು ಹೇಗೆ?
ಬಹಮನಿ ರಾಜ್ಯದ ಸ್ಥಾಪಕ ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನಿ (Alauddin Hasan Gangu Bahmani), ದೆಹಲಿಯ ತುಘಲಕ್ ಸಾಮ್ರಾಜ್ಯದ ದಖನ್ ಭಾಗದ ಗವರ್ನರ್ ಆಗಿದ್ದ. ಕ್ರಿ.ಶ. 1347ರಲ್ಲಿ, ದಖನ್‌ನ ಅಮೀರರ ಸಹಕಾರ ಪಡೆದು, ಅವನು ಮಹಮದ್ ಬಿನ್ ತುಘಲಕ್ (Muhammad bin Tughlaq) ವಿರುದ್ಧ ದಂಗೆ ಎದ್ದು ಸ್ವತಂತ್ರ ಬಹಮನಿ ರಾಜ್ಯ ಸ್ಥಾಪಿಸಿದ.ಆರಂಭದಲ್ಲಿ ದೌಲತಾಬಾದ್ (ದೇವಗಿರಿ) ರಾಜಧಾನಿಯಾಗಿದ್ದರೂ, ಕೆಲವೇ ವರ್ಷಗಳಲ್ಲಿ ಅಲ್ಲಾವುದ್ದೀನ್ ರಾಜಧಾನಿಯನ್ನು ಗುಲಬರ್ಗಾಕ್ಕೆ ವರ್ಗಾಯಿಸಿದ. ಇದರಿಂದ ಗುಲಬರ್ಗಾ ಬಹಮನಿ ಸಾಮ್ರಾಜ್ಯದ ರಾಜಕೀಯ ಕೇಂದ್ರವಾಯಿತು. ಒಟ್ಟು 18 ಸುಲ್ತಾನರು ಸುಮಾರು 180 ವರ್ಷಗಳ ಕಾಲ ಈ ಸಾಮ್ರಾಜ್ಯವನ್ನು ಆಳಿದರು.
18 ಸುಲ್ತಾನರು- ಆದರೆ ಶಾಂತಿ ಮಾತ್ರ ಅಪರೂಪ
ಈ 18 ಸುಲ್ತಾನರಲ್ಲಿ:- 3 ಸುಲ್ತಾನರ ಗದ್ದುಗೆ ಕಸಿದುಕೊಳ್ಳಲಾಯಿತು
- 5 ಸುಲ್ತಾನರನ್ನು ಹತ್ಯೆ ಮಾಡಲಾಯಿತು
- 2 ಸುಲ್ತಾನರ ಕಣ್ಣುಗಳನ್ನು ಕೀಳಲಾಯಿತು
ಇದನ್ನೂ ಓದಿ: ಆ ಒಂದು ಘಟನೆ… ಬೀದರ್ ಇತಿಹಾಸವನ್ನೇ ಬದಲಿಸಿತು!
![]() |
| ಬಹಮನಿ ಕೋಟೆಯೊಳಗಿನ ಒಳಜಗಳ (ಕಾಲ್ಪನಿಕ ಚಿತ್ರ) |
ಮುಜಾಹಿದ್ ಷಾ ಮತ್ತು ದಾವೂದ್ ಷಾ- ಚಿಕ್ಕಪ್ಪ ಮಗನ ನಡುವಿನ ಕೊಲೆ
ಬಹಮನಿ ಸ್ಥಾಪಕ ಅಲ್ಲಾವುದ್ದೀನ್‌ಗೆ ಮೊದಲನೇ ಮಹಮದ್, ದಾವೂದ್ ಮತ್ತು ಎರಡನೇ ಮಹಮದ್ ಎಂಬ ಮೂವರು ಮಕ್ಕಳು.ರುಹ್ ಪರವಾರ್ ಅಗಾ- ಪ್ರತೀಕಾರದ ರಾಣಿ
ಮುಜಾಹಿದ್ ಷಾಕ್ಕೆ ರುಹ್ ಪರವಾರ್ ಅಗಾ ಎಂಬ ಅಕ್ಕ ಇರುತ್ತಾಳೆ. ತಮ್ಮ ತಮ್ಮನ ಕೊಲೆಯ ಸುದ್ದಿ ತಿಳಿದ ತಕ್ಷಣ, ಅವಳು ತನ್ನ ಚಿಕ್ಕಪ್ಪ ದಾವೂದ್ ಷಾನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸುತ್ತಾಳೆ.1378ರ ಮೇ 24ರಂದು, ಗುಲಬರ್ಗಾ ಕೋಟೆಯ ಜಾಮೀಯಾ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ದಾವೂದ್ ಷಾನನ್ನು ಬಖಾ ಎಂಬ ಅರಮನೆಯ ಸೈನಿಕನ ಮೂಲಕ ಕೊಲ್ಲಿಸುತ್ತಾಳೆ.
ದಾವೂದ್ ಷಾ ಕೇವಲ 35 ದಿನಗಳ ಆಳ್ವಿಕೆಯಲ್ಲಿ ದುರಂತ ಅಂತ್ಯ ಕಾಣುತ್ತಾನೆ. ದಾವೂದ್ ಷಾನ ಹಿರಿಯ ಮಗ ಮೊಹಮ್ಮದ್ ಸಂಜರ್ಗೆ ಪಟ್ಟ ಕಟ್ಟಲು ಮಂತ್ರಿಗಳು ನಿರ್ಧರಿಸುತ್ತಾರೆ. ಆದರೆ “ತನ್ನ ತಮ್ಮನ ಹಂತಕನ ಮಗ ರಾಜನಾಗಬಾರದು” ಎಂಬ ಕಾರಣಕ್ಕೆ ರುಹ್ ಪರವಾರ್ ಅವನ ಕಣ್ಣುಗಳನ್ನು ಕೀಳಿಸುತ್ತಾಳೆ. ನಂತರ ಅವಳು ತನ್ನ ಚಿಕ್ಕಪ್ಪ ಎರಡನೇ ಮಹಮದ್ ಷಾನನ್ನು ಪಟ್ಟಕ್ಕೇರಿಸುತ್ತಾಳೆ.
ಇದನ್ನೂ ಓದಿ: ಗುಲ್ಬರ್ಗಾ ಕೋಟೆ ರಹಸ್ಯ; ತಮ್ಮನ ಕೊಂದ ರಾಜನನ್ನೇ ಮುಗಿಸಿದ ಅಕ್ಕ
![]() |
| ಮೊಹಮ್ಮದ್ ಸಂಜರ್ ಕಣ್ಣು ಕೀಳುತ್ತಿರುವ ದೃಶ್ಯ (ಕಾಲ್ಪನಿಕ ಚಿತ್ರ) |
ಗಿಯಾಸುದ್ದೀನ್, ಶಮ್ಸುದ್ದೀನ್ ಮತ್ತು ತಗಲ್ಚಿನ್
ಎರಡನೇ ಮಹಮದ್ ಷಾನ ನಂತರ ಅವನ ಮಗ ಗಿಯಾಸುದ್ದೀನ್ ಷಾ ಅಧಿಕಾರಕ್ಕೆ ಬಂದನು. ಆದರೆ ಮಂತ್ರಿ ತಗಲ್ಚಿನ್ ಅವನ ವಿರುದ್ಧ ದಂಗೆ ಎದ್ದು ಗಿಯಾಸುದ್ದೀನ್‌ನ ಕಣ್ಣುಗಳನ್ನು ಕೀಳಿಸಿ, ಅವನನ್ನು ಸೆರೆಮನೆಗೆ ಹಾಕುತ್ತಾನೆ. ನಂತರ ಸೇವಕಿಯ ಮಗ ಶಮ್ಸುದ್ದೀನ್ ಷಾನನ್ನು ಕೈಗೊಂಬೆ ಸುಲ್ತಾನನಾಗಿ ನೇಮಿಸುತ್ತಾನೆ. ಸ್ವಲ್ಪ ದಿನಗಳಲ್ಲೇ ಫಿರೋಜ್ ಮತ್ತು ಅಹಮದ್ ಗುಲಬರ್ಗಾ ಮೇಲೆ ದಾಳಿ ಮಾಡಿ, ಗಿಯಾಸುದ್ದೀನ್ ಅನ್ನು ಬಿಡುಗಡೆ ಮಾಡುತ್ತಾರೆ. ಕಣ್ಣು ಕಳೆದುಕೊಂಡ ಗಿಯಾಸುದ್ದೀನ್ ತನ್ನ ಖಡ್ಗದಿಂದ ತಗಲ್ಚಿನ್ ಅನ್ನು ಹತ್ಯೆ ಮಾಡುತ್ತಾನೆ. ಇದು ಬಹಮನಿ ಇತಿಹಾಸದ ಅತ್ಯಂತ ಭೀಕರ ಕ್ಷಣಗಳಲ್ಲಿ ಒಂದು.
![]() |
| ದಾವೂದ್ ಷಾ ಕೊಲೆಗೆ ಯತ್ನ (ಕಾಲ್ಪನಿಕ ಚಿತ್ರ) |
ಫಿರೋಜ್ ಷಾ ವೈಭವ ಮತ್ತು ಅಂತ್ಯ
1397ರಲ್ಲಿ ಫಿರೋಜ್ ಷಾ ಪಟ್ಟಕ್ಕೇರುತ್ತಾನೆ. ಅವನು ಸುಮಾರು 25 ವರ್ಷಗಳ ಕಾಲ ಆಳಿದನು. ಫಿರೋಜ್ ಷಾ ಕವಿ, ಕಲೆ, ಸಾಹಿತ್ಯ, ಗಣಿತ, ಖಗೋಳಶಾಸ್ತ್ರದ ಅಭಿಮಾನಿ. ಬಹಮನಿ ಸುಲ್ತಾನರಲ್ಲಿ ಅತ್ಯಂತ ಪ್ರಸಿದ್ಧ ದೊರೆ. ಆದರೂ ಗದ್ದುಗೆ ಗುದ್ದಾಟ ಅವನ ಕಾಲದಲ್ಲೂ ನಿಲ್ಲಲಿಲ್ಲ.
1422ರಲ್ಲಿ ಫಿರೋಜ್ ಷಾ ಮರಣಾನಂತರ, ಅವನ ತಮ್ಮ ಅಹಮದ್ ಷಾ ಪಟ್ಟಕ್ಕೇರಿದನು ಮತ್ತು ರಾಜಧಾನಿಯನ್ನು ಗುಲಬರ್ಗಾದಿಂದ ಬೀದರ್‌ಗೆ ವರ್ಗಾಯಿಸಿದ. ಇದರಿಂದ ಗುಲಬರ್ಗಾದ ರಾಜಕೀಯ ವೈಭವಕ್ಕೆ ತೆರೆ ಬಿತ್ತು.
ಇದನ್ನೂ ಓದಿ: ಒಂದೇ ಕಡೆ 10 ಸುಲ್ತಾನರ ಗೋರಿಗಳು; ಬಯಲಾಯ್ತು ಅಷ್ಟೂರು ರಹಸ್ಯ
![]() |
| ಫಿರೋಜ್ ಷಾ ಸಮಾಧಿ |
ಸಾತ್ ಗುಂಬಜ್- ವಾಸ್ತುಶಿಲ್ಪದ ವೈಶಿಷ್ಟ್ಯ
ಸಾತ್ ಗುಂಬಜ್‌ನ ಪ್ರತಿಯೊಂದು ಸಮಾಧಿಯ ಮೇಲೂ ಬೃಹತ್ ಗುಮ್ಮಟಗಳನ್ನು ನಿರ್ಮಿಸಲಾಗಿದ್ದು, ಇವುಗಳಲ್ಲಿ ಪರ್ಷಿಯನ್ ಶೈಲಿಯ ಬಾಗಿಲುಗಳು, ಎತ್ತರದ ಗೋಪುರಗಳು, ಮಿಹ್ರಾಬ್ (ಪ್ರಾರ್ಥನಾ ಸ್ಥಳ) ಹಾಗೂ ತುಘಲಕ್ ವಾಸ್ತುಶಿಲ್ಪದ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ.
ಮುಜಾಹಿದ್ ಷಾ ಸಮಾಧಿ ಅತ್ಯಂತ ಸರಳವಾಗಿದ್ದರೆ, ಫಿರೋಜ್ ಷಾ ಸಮಾಧಿ ಅದಕ್ಕೆ ವಿರುದ್ಧವಾಗಿ ಭವ್ಯತೆ ಮತ್ತು ಕಲಾತ್ಮಕತೆಯ ಪರಾಕಾಷ್ಠೆಯನ್ನು ತೋರಿಸುತ್ತದೆ; ಒಂದು ಮಹಡಿಯಾದರೂ ಹೊರಗಿನಿಂದ ಎರಡು ಮಹಡಿಯಂತೆ ಕಾಣುವುದು ಅದರ ವಿಶೇಷತೆ.
ಒಂದು ಕಾಲದಲ್ಲಿ ಪರಸ್ಪರ ದ್ವೇಷ, ದ್ರೋಹ ಮತ್ತು ಕ್ರೂರ ರಾಜಕೀಯ ಹೋರಾಟಗಳ ಮೂಲಕ ಅಧಿಕಾರಕ್ಕೆ ಬಂದ ಸುಲ್ತಾನರು, ಸಾವಿನ ನಂತರ ಒಂದೇ ಸಂಕೀರ್ಣದಲ್ಲಿ ಸಮಾಧಿಯಾಗಿರುವುದು ಇತಿಹಾಸದ ವ್ಯಂಗ್ಯವೆನಿಸುತ್ತದೆ.
ಸಾತ್ ಗುಂಬಜ್ ಕೇವಲ ಸಮಾಧಿಗಳ ಗುಂಪಲ್ಲ; ಅದು ಬಹಮನಿ ಸಾಮ್ರಾಜ್ಯದ ರಕ್ತಸಿಕ್ತ ಅಧ್ಯಾಯವನ್ನು ಹೊತ್ತಿರುವ ಜೀವಂತ ಮ್ಯೂಸಿಯಂ. ನೀವು ಕಲಬುರಗಿಗೆ ಭೇಟಿ ನೀಡಿದಾಗ, ಈ ಸ್ಮಾರಕವನ್ನು ನೋಡದೇ ಮರಳಬೇಡಿ.






