ಕೋಲಾರ ಅಲ್ಲ ಕೊಲ್ಹಾರ! ಇಲ್ಲಿನ ಮಡಿಕೆ ಮೊಸರಿಗೆ ಭಾರಿ ಡಿಮ್ಯಾಂಡ್!

ಕೊಲ್ಹಾರ ಮಡಿಕೆ ಮೊಸರು
ಮೈಸೂರು ಅಂದ ತಕ್ಷಣ ನಮಗೆ ಮೈಸೂರು ಪಾಕ್ ನೆನಪಾಗುತ್ತದೆ. ಧಾರವಾಡ ಅಂದ ತಕ್ಷಣ ಪೇಡ ಕಣ್ಣ ಮುಂದೆ ಬರುತ್ತದೆ. ಹಾಗೆಯೇ ಕೊಲ್ಹಾರ ಅಂದ ತಕ್ಷಣ, ಆಹಾರಪ್ರಿಯರ ಮನಸ್ಸಿನಲ್ಲಿ ಮೂಡುವುದು ಒಂದೇ- ಗಟ್ಟಿ ಕೆನೆ ಮೊಸರು.

ನಾವು ಹೇಳ್ತಾ ಇರೋದು KGF ಕೋಲಾರ ಬಗ್ಗೆ ಅಲ್ಲ. ವಿಜಯಪುರದ ಕೊಲ್ಹಾರ ಬಗ್ಗೆ. ಕೋಲಾರ ಚಿನ್ನದ ಗಣಿಗೆ ಪ್ರಸಿದ್ಧವಾದರೆ, ಕೊಲ್ಹಾರ ಮೊಸರಿನ ಖಣಿಗೆ ಹೆಸರಾಗಿದೆ.

ಹೆದ್ದಾರಿ ಪಕ್ಕದಲ್ಲೇ ಹಬ್ಬಿಕೊಂಡಿರುವ ಮೊಸರಿನ ಪರಿಮಳ

ವಿಜಯಪುರದಿಂದ ಬಾಗಲಕೋಟೆ ಹಾಗೂ ಹುಬ್ಬಳ್ಳಿ ಕಡೆಗೆ ಸಾಗುವ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲೇ ಕೊಲ್ಹಾರ ಪಟ್ಟಣ ಇದೆ.
ಈ ಮಾರ್ಗವಾಗಿ ಪ್ರಯಾಣ ಮಾಡುವವರು, ವಿಶೇಷವಾಗಿ ಯುಕೆಪಿ ಕ್ರಾಸ್ ಬಳಿ ಬಂದಾಗ ಒಂದು ದೃಶ್ಯ ತಪ್ಪದೇ ಕಾಣುತ್ತಾರೆ.

ರಸ್ತೆಯ ಎರಡೂ ಬದಿಗಳಲ್ಲಿ, ಮಣ್ಣಿನ ಮಡಕೆಗಳಲ್ಲಿ ತುಂಬಿರುವ ಗಟ್ಟಿ ಮೊಸರು, ಮೇಲೊಂದು ಕಾಗದ ಅಥವಾ ಬಾಳೆ ಎಲೆಯ ಮುಚ್ಚಳ, ಅದನ್ನು ಸುತ್ತಿಕೊಂಡಿರುವ ಗ್ರಾಹಕರ ಗುಂಪು.

ಕೊಲ್ಹಾರ ಹಾದು ಹೋಗುವವರು, ಮೊಸರಿನ ಮಡಿಕೆ ಖರೀದಿಸದೇ ಮುಂದೆ ಸಾಗುವುದು ಅಪರೂಪ. ಇದು ಕೇವಲ ವ್ಯಾಪಾರ ಅಲ್ಲ- ಇದು ದಶಕಗಳಿಂದ ಮುಂದುವರಿದಿರುವ ಆಹಾರ ಸಂಸ್ಕೃತಿ.
ಕೊಲ್ಹಾರ ಎಮ್ಮೆ
ಕೊಲ್ಹಾರ ಗ್ರಾಮದಲ್ಲಿರುವ ಎಮ್ಮೆಗಳು

ಶತಮಾನಗಳ ಇತಿಹಾಸ ಹೊಂದಿರುವ ಗಟ್ಟಿ ಕೆನೆ ಮೊಸರು

ಕೊಲ್ಹಾರದ ಕೆನೆ ಮೊಸರು ಇವತ್ತಿನ ಟ್ರೆಂಡ್ ಅಲ್ಲ. ಇದಕ್ಕೆ ಶತಮಾನದ ಇತಿಹಾಸ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿನ ಮೊಸರಿನ ರುಚಿಗೆ ಪ್ರಮುಖ ಕಾರಣ- ದೇಸಿ ಹಸು ಮತ್ತು ಎಮ್ಮೆ ಹಾಲು.

ಕೊಲ್ಹಾರ ತಾಲ್ಲೂಕು ಕೇಂದ್ರವಾಗಿದ್ದು, ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 2,000ಕ್ಕೂ ಹೆಚ್ಚು ಎಮ್ಮೆಗಳು ಇವೆ ಎನ್ನಲಾಗುತ್ತದೆ. ಇವುಗಳಿಂದ ಬರುವ ಹಾಲಿನಲ್ಲೂ ಸುಮಾರು 70 ಶೇಕಡಾ ಹಾಲು ನೇರವಾಗಿ ಮೊಸರು ತಯಾರಿಕೆಗೆ ಬಳಸಲಾಗುತ್ತದೆ. ಇದು ಸಾಮಾನ್ಯ ಮೊಸರು ಅಲ್ಲ. ಇದು ಗಟ್ಟಿ, ಕೆನೆ ತುಂಬಿರುವ, ಒಮ್ಮೆ ತಿಂದರೆ ಮತ್ತೆ ಮತ್ತೆ ನೆನಪಾಗುವ ಮೊಸರು.

ಇದನ್ನೂ ಓದಿ: ಕಲಬುರಗಿ ಕಮಲಾಪುರ ಕೆಂಪು ಬಾಳೆ; ಬೇಕಿದೆ ಜಾಗತಿಕ ಮನ್ನಣೆ

ಮೊಸರು ಉದ್ಯಮ- ನೂರಾರು ಕುಟುಂಬಗಳ ಬದುಕು

ಕೊಲ್ಹಾರದಲ್ಲಿ ಮೊಸರು ಕೇವಲ ಆಹಾರವಲ್ಲ. ಅದು ಆರ್ಥಿಕ ವ್ಯವಸ್ಥೆ. ಈ ಉದ್ಯಮದಿಂದ ನೂರಾರು ಕುಟುಂಬಗಳು ತಮ್ಮ ಬದುಕು ಕಟ್ಟಿಕೊಂಡಿವೆ.

ಹಾಲು ಉತ್ಪಾದಕರು, ಮೊಸರು ತಯಾರಕರು, ಮಡಿಕೆ ತಯಾರಿಸುವ ಕುಂಬಾರರು, ಮಾರಾಟಗಾರರು – ಎಲ್ಲರ ಜೀವನವೂ ಈ ಮೊಸರಿನೊಂದಿಗೆ ನೇರವಾಗಿ ಸಂಪರ್ಕ ಹೊಂದಿದೆ. ಇದು ಗ್ರಾಮೀಣ ಆರ್ಥಿಕತೆಯ ಜೀವಾಳ.
ಕೊಲ್ಹಾರ ಕೆನೆ ಮೊಸರು
ಕೊಲ್ಹಾರ ಕೆನೆ ಮೊಸರು ತಯಾರಿಕೆ

ಮಣ್ಣಿನ ಮಡಕೆ- ರುಚಿಯ ಗುಟ್ಟು

ಕೊಲ್ಹಾರದ ಮೊಸರು ಇಷ್ಟು ಪ್ರಸಿದ್ಧಿಯಾಗಲು ಮಣ್ಣಿನ ಮಡಕೆಗಳೇ ಇನ್ನೊಂದು ಪ್ರಮುಖ ಕಾರಣವಾಗಿದ್ದು, ಇಲ್ಲಿ ಹಲವು ತಲೆಮಾರುಗಳಿಂದ ವಿಶೇಷ ಗುಣಮಟ್ಟದ ಮಣ್ಣಿನ ಮಡಕೆಗಳನ್ನು ತಯಾರಿಸುತ್ತಿರುವ ಕುಂಭಾರ ಕುಟುಂಬಗಳು ಇವೆ.

ಈ ಮಡಕೆಗಳಲ್ಲಿ ಮೊಸರು ಇಟ್ಟಾಗ ತಾಪಮಾನ ಸಮತೋಲನ, ನೈಸರ್ಗಿಕ ತಂಪು, ರುಚಿ ಮತ್ತು ಗಟ್ಟಿತನ ಸ್ವಾಭಾವಿಕವಾಗಿ ಉಳಿದುಕೊಳ್ಳುತ್ತವೆ, ಇದೇ ಕಾರಣದಿಂದ ಕೊಲ್ಹಾರದ ಕೆನೆ ಮೊಸರು ಇಂದು ವಿಶಿಷ್ಟ ಬ್ರಾಂಡ್ ಆಗಿದೆ.


ಆದರೆ ಈ ಸುಂದರ ಪರಂಪರೆ ಇವತ್ತು ಸಂಕಷ್ಟದಲ್ಲಿದೆ. ಪ್ಲಾಸ್ಟಿಕ್, ಸ್ಟೀಲ್ ಮತ್ತು ಆಧುನಿಕ ಪಾತ್ರೆಗಳ ಬಳಕೆ ಹೆಚ್ಚುತ್ತಿರುವುದರಿಂದ, ಮಣ್ಣಿನ ಮಡಿಕೆಗಳ ಬೇಡಿಕೆ ಕಡಿಮೆಯಾಗುತ್ತಿದೆ. ಇದರಿಂದ ಕುಂಬಾರಿಕೆ ವೃತ್ತಿ ಅಪಾಯದ ಅಂಚಿಗೆ ತಲುಪಿದೆ. ಇಂದು ಬೆರಳಣಿಕೆಯಷ್ಟು ಕುಟುಂಬಗಳು ಮಾತ್ರ ಈ ಪಾರಂಪರಿಕ ವೃತ್ತಿಯನ್ನು ಮುಂದುವರಿಸುತ್ತಿವೆ. ಇದು ಕೇವಲ ಒಂದು ವೃತ್ತಿಯ ಸಮಸ್ಯೆ ಅಲ್ಲ- ಇದು ಸಾಂಸ್ಕೃತಿಕ ನಷ್ಟ.

ಸರ್ಕಾರ ಮತ್ತು ಸಮಾಜದ ಹೊಣೆ

ಸಂಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಕುಲಕಸುಬನ್ನು ಕೈಬಿಡದೆ ಮುಂದುವರಿಸುತ್ತಿರುವ ಈ ಕುಂಭಾರ ಕುಟುಂಬಗಳು ವಿಶೇಷ ಗೌರವಕ್ಕೆ ಪಾತ್ರವಾಗಿದ್ದು, ಇವರಿಗೆ ಸಾಲ ಸೌಲಭ್ಯ, ಕೆಲಸಕ್ಕೆ ಸೂಕ್ತ ಜಾಗ, ಮಡಿಕೆ ಉತ್ಪಾದನೆಗೆ ಪ್ರೋತ್ಸಾಹ ಹಾಗೂ ಕೊಲ್ಹಾರ ಕೆನೆ ಮೊಸರಿನ ಬ್ರಾಂಡಿಂಗ್ ಮತ್ತು GI ಗುರುತು ದೊರೆಯುವಂತೆ ಸರ್ಕಾರದಿಂದ ಅಗತ್ಯ ನೆರವು ಒದಗಿಸಬೇಕಾಗಿದೆ; ಪಾರಂಪರಿಕ ಆಹಾರ ಪದ್ಧತಿಯನ್ನು ಉಳಿಸುವುದು ಸರ್ಕಾರದಷ್ಟೇ ಅಲ್ಲ, ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ.
ಕೊಲ್ಹಾರ ಕೆನೆ ಮೊಸರು
ಕೊಲ್ಹಾರ ಕೆನೆ ಮೊಸರು

ಕೊಲ್ಹಾರ- ಕೇವಲ ಊರಲ್ಲ, ಒಂದು ಅನುಭವ

ವಿಜಯಪುರದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಈ ಪುಟ್ಟ ಪಟ್ಟಣವು ಇವತ್ತು ಕರ್ನಾಟಕದ ಆಹಾರ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಕೊಲ್ಹಾರಕ್ಕೆ ಭೇಟಿ ನೀಡುವುದು ಅಂದರೆ ಕೇವಲ ಮೊಸರು ತಿನ್ನುವುದಲ್ಲ; ಅದು ಒಂದು ಪರಂಪರೆಯನ್ನು ಸವಿಯುವುದು ಮತ್ತು ಗ್ರಾಮೀಣ ಬದುಕಿನ ಶುದ್ಧತೆಯನ್ನು ಅನುಭವಿಸುವುದಾಗಿದೆ. 

ನೀವು ವಿಜಯಪುರ- ಬಾಗಲಕೋಟೆ- ಹುಬ್ಬಳ್ಳಿ ಮಾರ್ಗವಾಗಿ ಪ್ರಯಾಣ ಮಾಡುವಾಗ ಕೊಲ್ಹಾರ ಬಂದಾಗ ಒಂದು ಕ್ಷಣ ನಿಲ್ಲಿ. ಮಣ್ಣಿನ ಮಡಕೆಯಲ್ಲಿರುವ ಆ ಗಟ್ಟಿ ಕೆನೆ ಮೊಸರನ್ನು ಸವಿಯಿರಿ. ಅದು ಕೇವಲ ರುಚಿಯಲ್ಲ, ಶತಮಾನಗಳ ಕಥೆ, ಪರಂಪರೆಯ ಪರಿಮಳ ಮತ್ತು ನೂರಾರು ಕುಟುಂಬಗಳ ಬದುಕಿನ ಸಾರ್ಥಕತೆಯಾಗಿದೆ. ಕೊಲ್ಹಾರಕ್ಕೆ ಹೋದರೆ ಮಡಿಕೆ ಮೊಸರು ಮರೆಯದೇ ಸವಿಯಿರಿ.

ನವೀನ ಹಳೆಯದು