ಜನವರಿ 23, 1565
ಈ ದಿನ ವಿಜಯನಗರ ಸಾಮ್ರಾಜ್ಯ ಮತ್ತು ದಖನ್ ಸುಲ್ತಾನರ ನಡುವೆ ನಡೆದ ತಾಳಿಕೋಟೆ ಯುದ್ಧ ದಕ್ಷಿಣ ಭಾರತದ ಇತಿಹಾಸವನ್ನೇ ತಿರುವುಮಾಡಿತು. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಯಿತು. ಅಪಾರ ಪ್ರಮಾಣದ ಸಂಪತ್ತು ಸುಲ್ತಾನರ ಕೈವಶವಾಯಿತು. ವೈಭವಶಾಲಿ ಹಂಪಿ, ಕ್ರಮೇಣ ಹಾಳು ಹಂಪೆಯಾಗಿ ಪರಿವರ್ತನೆಯಾಯಿತು.ಹಂಪಿಯಿಂದ ವಿಜಯಪುರದತ್ತ ವಲಸೆ
ಯುದ್ಧದ ನಂತರ ಹಂಪಿಯಲ್ಲಿದ್ದ ಜನಸಾಮಾನ್ಯರು, ಕಲಾವಿದರು, ಶಿಲ್ಪಿಗಳು, ವ್ಯಾಪಾರಿಗಳು ಬೇರೆ ಬೇರೆ ಕಡೆ ವಲಸೆ ಹೋದರು. ಹಂಪಿಗೆ ಸಮೀಪದಲ್ಲಿದ್ದ ಪ್ರಮುಖ ನಗರಗಳಲ್ಲಿ ಒಂದಾಗಿದ್ದದ್ದು ಇಂದಿನ ವಿಜಯಪುರ.ಹೀಗಾಗಿ ಲಕ್ಷಾಂತರ ಜನರು ವಿಜಯಪುರಕ್ಕೆ ವಲಸೆ ಬಂದರು. ಕೆಲ ಇತಿಹಾಸಕಾರರ ಅಭಿಪ್ರಾಯದಂತೆ, ಆ ಕಾಲದಲ್ಲೇ ವಿಜಯಪುರ ನಗರದ ಜನಸಂಖ್ಯೆ 10 ಲಕ್ಷವನ್ನು ಮೀರಿತ್ತು. ಇಷ್ಟು ದೊಡ್ಡ ಜನಸಂಖ್ಯೆಗೆ ಕುಡಿಯುವ ನೀರು, ಆಹಾರ ಮತ್ತು ವಸತಿ ಒದಗಿಸುವುದು ಅಸಾಧ್ಯದ ಸವಾಲಾಗಿತ್ತು.
ಇದನ್ನೂ ಓದಿ: ಕುಮಟಗಿ ಬೇಸಿಗೆ ಅರಮನೆ; 400 ವರ್ಷಗಳ ಹಿಂದಿನ ರಾಜರ ರೆಸಾರ್ಟ್!
![]() |
| ಹಂಪಿ ಪತನದ ನಂತರ ಬಿಜಾಪುರಕ್ಕೆ ಬರುತ್ತಿರುವ ಜನ (ಕಾಲ್ಪನಿಕ ಚಿತ್ರ) |
ಬಯಲುಸೀಮೆ ಮತ್ತು ನೀರಿನ ಸವಾಲು
ವಿಜಯಪುರ ಬಯಲುಸೀಮೆ ಪ್ರದೇಶದಲ್ಲಿರುವುದರಿಂದ ನೀರಿನ ಕೊರತೆ ಸದಾ ದೊಡ್ಡ ಸಮಸ್ಯೆಯೇ ಆಗಿತ್ತು. ಆದರೆ ಆದಿಲ್ ಶಾಹಿ ಸುಲ್ತಾನರು ಈ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕಂಡರು.ಭಾರಿ ಸಂಖ್ಯೆಯಲ್ಲಿ ಕೆರೆಗಳು, ಕಟ್ಟೆಗಳು, ಬಾವಡಿಗಳು ಮತ್ತು ನಾಳೆಗಳನ್ನು ನಿರ್ಮಿಸಲಾಯಿತು. ನೀರಾವರಿ ಕ್ಷೇತ್ರದಲ್ಲಿ ಆದಿಲ್ ಶಾಹಿಗಳು ಮಾಡಿದ ಸಾಧನೆ ಇಂದಿಗೂ ಅಚ್ಚರಿ ಮೂಡಿಸುತ್ತದೆ. ಇದರ ಜೀವಂತ ಸಾಕ್ಷಿ – ವಿಜಯಪುರ ನಗರದ ಯತ್ನಾಳ್ ರಸ್ತೆಯಲ್ಲಿರುವ ರಾಮಲಿಂಗ ಡ್ಯಾಮ್.
ರಾಮಲಿಂಗ ಡ್ಯಾಮ್- ಮೂಲ ಮತ್ತು ಪ್ರಾರಂಭ
ಇತಿಹಾಸದ ಪ್ರಕಾರ, 14ನೇ ಶತಮಾನದಲ್ಲಿ ಯಾದವರು ಈ ಡ್ಯಾಮ್‌ನ ಮೂಲ ರೂಪವನ್ನು ನಿರ್ಮಿಸಿದ್ದರೆಂದು ಹೇಳಲಾಗುತ್ತದೆ. ಇದು gravity-based water storage system ಆಗಿದ್ದು, ಎತ್ತರದ ಬೆಟ್ಟ ಪ್ರದೇಶಗಳಿಂದ ಹರಿದುಬರುವ ಮಳೆನೀರು ಇಲ್ಲಿ ಸಂಗ್ರಹವಾಗುತ್ತಿತ್ತು. ಆದಿಯಲ್ಲಿ ಇದು ಕೇವಲ ಮಣ್ಣಿನ ಒಡ್ಡುಗಳಿಂದ ಕೂಡಿತ್ತು.![]() |
| ಮಣ್ಣಿನ ಒಡ್ಡುಗಳಿಂದ ಕೂಡಿರುವ ರಾಮಲಿಂಗ ಡ್ಯಾಮ್ (ಕಾಲ್ಪನಿಕ ಚಿತ್ರ) |
ಆದಿಲ್ ಶಾಹಿಗಳ ಕಾಲದ ಜೀರ್ಣೋದ್ಧಾರ
ತಾಳಿಕೋಟೆ ಯುದ್ಧದ ನಂತರ ವಿಜಯಪುರ ನಗರದ ಜನಸಂಖ್ಯೆ ವೇಗವಾಗಿ ಹೆಚ್ಚಾಯಿತು. ಇದೇ ಸಮಯದಲ್ಲಿ ಬಿಜಾಪುರ ಸುಲ್ತಾನ ಮೊದಲನೇ ಅಲಿ ಆದಿಲ್ ಶಾ (Ali Adil Shah I) ವ್ಯಾಪಾರ ಉದ್ದೇಶಕ್ಕಾಗಿ ನಗರದ ಸಮೀಪದಲ್ಲೇ ಶಹಪುರ ಎಂಬ ಹೊಸ ಪಟ್ಟಣವನ್ನು ನಿರ್ಮಿಸಿದನು.ಶಹಪುರ ಹಾಗೂ ವಿಜಯಪುರದ ಜನರಿಗೆ ನೀರು ಒದಗಿಸಲು ರಾಮಲಿಂಗ ಡ್ಯಾಮ್‌ನ ಭಾರಿ ಜೀರ್ಣೋದ್ಧಾರ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಣ್ಣಿನ ಒಡ್ಡುಗಳಿಗೆ ಬಲಿಷ್ಠ ಕಲ್ಲಿನ ತಡೆಗೋಡೆಗಳನ್ನು ನಿರ್ಮಿಸಿ, ಜಾಕ್ ವೆಲ್ (Water Pavilion), ತೂಬು ಗೇಟ್‌ಗಳು ಮತ್ತು ನೀರು ಹರಿಸುವ ನಾಲೆಗಳನ್ನು ಅಭಿವೃದ್ಧಿಪಡಿಸಲಾಯಿತು.
![]() |
| ವಿಜಯಪುರ ನಗರದಲ್ಲಿರುವ ರಾಮಲಿಂಗ ಡ್ಯಾಮ್ |
ತಾಂತ್ರಿಕ ವೈಶಿಷ್ಟ್ಯಗಳು
ಸುಮಾರು 1.3 ಕಿ.ಮೀ ಉದ್ದವಿರುವ ಈ ಡ್ಯಾಮ್‌ನ ನೀರನ್ನು ಕುಡಿಯಲು, ಕೃಷಿಗೆ ಮತ್ತು ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ನೀರು ಹರಿದುಬರುವ ಭಾಗದಲ್ಲಿ ಮಣ್ಣಿನ ಒಡ್ಡುಗಳ ಮೇಲೆ ಕಪ್ಪು ಬಸಾಲ್ಟ್ ಶಿಲೆಗಳಿಂದ ಮೆಟ್ಟಿಲುಗಳಿರುವ ಗೋಡೆ ನಿರ್ಮಿಸಲಾಗಿದ್ದು, ಇದು ಎತ್ತರದಿಂದ ಬರುವ ನೀರಿನ ರಭಸವನ್ನು ನಿಯಂತ್ರಿಸುವುದಕ್ಕೂ ಮಣ್ಣಿನ ಸವಕಳಿಯನ್ನು ತಡೆಯುವುದಕ್ಕೂ ಅತ್ಯಂತ ಉಪಯುಕ್ತವಾಗಿತ್ತು.ಸಂಗ್ರಹವಾದ ನೀರನ್ನು ಹೊರಹಾಕಲು ಸುಲ್ತಾನರು ಜಾಕ್ ವೆಲ್ (Water Pavilion) ಅನ್ನು ನಿರ್ಮಿಸಿದ್ದು, ಅದರೊಳಗೆ ಇಳಿಯಲು ಮೆಟ್ಟಿಲುಗಳು, ಗೋಡೆಗಳ ಮೇಲೆ ಚಿತ್ತಾರಗಳು ಮತ್ತು ನೀರಿನ ಹರಿವನ್ನು ನಿಯಂತ್ರಿಸುವ ವ್ಯವಸ್ಥೆ ಇದ್ದವು. ನೀರನ್ನು ಹಂತ ಹಂತವಾಗಿ ಹರಿಸಲು ವಿವಿಧ ಎತ್ತರಗಳಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ಕಾರ್ಮಿಕರು ಸದಾ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಬೀದರ್ ಕರೇಜ್ ವ್ಯವಸ್ಥೆ: ನೆಲದೊಳಗಿನ ಜಲವೈಜ್ಞಾನಿಕ ಅದ್ಭುತ
ಕೃಷಿಗೆ ಜೀವ ನೀಡಿದ ಡ್ಯಾಮ್
ಡ್ಯಾಮ್‌ನಿಂದ ನೀರನ್ನು ಮಣ್ಣಿನ ಪೈಪ್‌ಗಳು ಮತ್ತು ನಾಲೆಗಳ ಮೂಲಕ ಹಲವಾರು ಕಿಲೋಮೀಟರ್ ದೂರದ ಹೊಲಗಳಿಗೆ ಹರಿಸಲಾಗುತ್ತಿತ್ತು. ತೊಟ್ಟಿಗಳು ಮತ್ತು ಬಾವಡಿಗಳಲ್ಲಿ ಸಂಗ್ರಹವಾದ ಈ ನೀರನ್ನು ಜನರು ದಿನನಿತ್ಯ ಬಳಸುತ್ತಿದ್ದರು.ಇತಿಹಾಸದ ಪ್ರಕಾರ, ಈ ಭಾಗದಲ್ಲಿ ದ್ರಾಕ್ಷಿ, ಕಿತ್ತಳೆ, ದಾಳಿಂಬೆ, ಅಂಜೂರ, ಸೇಬು ಹಾಗೂ ಹಲವು ಬೆಳೆಗಳು ಬೆಳೆಯಲಾಗುತ್ತಿದ್ದು, ರಾಮಲಿಂಗ ಡ್ಯಾಮ್ ನೀರೇ ಅವುಗಳಿಗೆ ಆಸರೆಯಾಗಿತ್ತು.
![]() |
| ವಿಜಯಪುರ ನಗರದಲ್ಲಿರುವ ರಾಮಲಿಂಗ ಡ್ಯಾಮ್ |
ಡ್ಯಾಮ್ ಹತ್ತಿರ ಇಂಡೋ-ಇಸ್ಲಾಮಿಕ್ ಶೈಲಿಯ ರಚನೆಗಳು ಕಂಡು ಬರುತ್ತವೆ. ಇಲ್ಲಿ ಎಣ್ಣೆ ದೀಪಗಳನ್ನು ಇಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ರಾತ್ರಿ ಸಮಯದಲ್ಲಿ ಡ್ಯಾಮ್ ದೀಪಗಳ ಬೆಳಕಿನಲ್ಲಿ ಅದ್ಭುತವಾಗಿ ಕಾಣುತ್ತಿತ್ತು ಎಂಬ ವಿವರಗಳು ಸಿಗುತ್ತವೆ.
ದಾಳಿ ಮತ್ತು ಅವನತಿ
1624ರಲ್ಲಿ, ಎರಡನೇ ಇಬ್ರಾಹಿಂ ಆದಿಲ್ ಶಾಹಿ ಕಾಲದಲ್ಲಿ, ಸೇನಾಪತಿ ಮಲಿಕ್ ಅಂಬರ್ ನೇತೃತ್ವದಲ್ಲಿ ಅಹಮದನಗರದ ನಿಜಾಮಶಾಹಿಗಳು ವಿಜಯಪುರದ ಮೇಲೆ ದಾಳಿ ನಡೆಸಿದರು.ಈ ದಾಳಿಯಲ್ಲಿ ರಾಮಲಿಂಗ ಡ್ಯಾಮ್‌ಗೆ ಹಾನಿಯಾಯಿತು. ನಂತರದ ಸುಲ್ತಾನರು ಇದನ್ನು ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ, ಡ್ಯಾಮ್ ಕ್ರಮೇಣ ಬಳಕೆಯಿಂದ ಹೊರಗುಳಿದು ಪಾಳುಬಿದ್ದಿತು.
ಈ ಹಿಂದೆ ಡ್ಯಾಮ್‌ಗೆ ನೀರು ತಂದುಕೊಡುತ್ತಿದ್ದ ತೊರವಿ ಹಳ್ಳ, ದರ್ಗಾ ಹಳ್ಳ ಮತ್ತು ಲೋಹಗಾನ್ ಹಳ್ಳ ಕಾಲಕ್ರಮೇಣ ಬತ್ತಿಹೋಗಿವೆ ಎಂದು ಹೇಳಲಾಗುತ್ತದೆ. ನೀರು ಸಂಗ್ರಹವಾಗುತ್ತಿದ್ದ ಪ್ರದೇಶಗಳು ಇಂದು ಕೃಷಿಭೂಮಿಗಳಾಗಿ ಪರಿವರ್ತನೆಯಾಗಿವೆ.
![]() |
| ರಾಮಲಿಂಗ ಡ್ಯಾಮ್ ಕಾಲುವೆ |
ಇದನ್ನೂ ಓದಿ: ಆದಿಲ್ ಶಾಹಿ ಕಾಲದ ಬಾವಡಿಗಳು ಮತ್ತು ನೀರಾವರಿ ವ್ಯವಸ್ಥೆ





