![]() |
| ವಿಜಯಪುರದ ಕರೀಮುದ್ದೀನ್ ಮಸೀದಿ |
ಗುಮ್ಮಟನಗರಿ ವಿಜಯಪುರದಲ್ಲಿ ಗೋಳ ಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್ ಸೇರಿದಂತೆ ನೂರಾರು ಭವ್ಯ ಸ್ಮಾರಕಗಳು ಇವೆ. ಇವುಗಳಲ್ಲಿ ಬಹುತೇಕ ಆದಿಲ್ ಶಾಹಿ ಕಾಲದವು. ಆದರೆ ವಿಜಯಪುರದಲ್ಲಿ ಒಂದು ಸ್ಮಾರಕ ಇದೆ – ಆದಿಲ್ ಶಾಹಿಗಳು ಬಿಜಾಪುರಕ್ಕೆ ಬರುವುದಕ್ಕೂ ಸುಮಾರು 200 ವರ್ಷಗಳ ಮುಂಚೆ ನಿರ್ಮಾಣವಾದದ್ದು.
ಇನ್ನೂ ವಿಶೇಷವೇನೆಂದರೆ, ಈ ಸ್ಮಾರಕವನ್ನು ನೋಡಿದ ಬಹುತೇಕ ಜನರಿಗೆ ಒಂದು ಪ್ರಶ್ನೆ ಕಾಡುತ್ತದೆ- ಇದು ಮೊದಲು ಹಿಂದೂ ದೇವಾಲಯವಾಗಿತ್ತೇ? ಅಥವಾ ಜೈನ ಬಸದಿಯೇ? ನಂತರ ಮಸೀದಿಯಾಗಿ ಪರಿವರ್ತಿಸಲಾಯಿತೇ? ಈ ಪ್ರಶ್ನೆಗಳ ಮಧ್ಯೆ ನಿಂತಿರುವ ಅಪರೂಪದ ಸ್ಮಾರಕವೇ ಕರೀಮುದ್ದೀನ್ ಮಸೀದಿ.
ಇದನ್ನೂ ಓದಿ: ವಿಜಯಪುರದ ಮೆಕ್ಕಾ ಮಸೀದಿ; ಇಲ್ಲಿ ಮಹಿಳೆಯರಿಗೆ ಪ್ರವೇಶ ಉಂಟು!
ಮೊದಲ ದೃಷ್ಟಿಯಲ್ಲಿಯೇ ಗೊಂದಲ ಉಂಟುಮಾಡುವ ಸ್ಮಾರಕ
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿರುವ ಈ ಕಟ್ಟಡವನ್ನು ನೋಡಿದ ತಕ್ಷಣ, ಇದು ಚಾಲುಕ್ಯ ಶೈಲಿಯಲ್ಲಿ ನಿರ್ಮಿತ ಹಿಂದೂ ದೇವಾಲಯವೋ ಎಂಬ ಭಾವನೆ ಮೂಡುತ್ತದೆ. ಕಂಬಗಳು, ಶಿಲ್ಪಗಳ ವಿನ್ಯಾಸ, ಕಟ್ಟಡದ ರೂಪರೇಖೆ- ಎಲ್ಲವೂ ದೇವಾಲಯ ಶೈಲಿಯನ್ನು ನೆನಪಿಸುತ್ತದೆ. ಆದರೆ ಇದು ದೇವಾಲಯ ಅಲ್ಲ; ಮಸೀದಿ. ಈ ವಿಶಿಷ್ಟ ಶೈಲಿಯೇ ಕರೀಮುದ್ದೀನ್ ಮಸೀದಿಯನ್ನು ವಿಜಯಪುರದ ಇತರ ಮಸೀದಿಗಳಿಗಿಂತ ಭಿನ್ನವಾಗಿಸುತ್ತದೆ.![]() |
| ವಿಜಯಪುರದ ಕರೀಮುದ್ದೀನ್ ಮಸೀದಿ ಕಂಬಗಳು |
ವಿಜಯಪುರ: ದೆಹಲಿ ಸುಲ್ತಾನರ ಆಡಳಿತಕ್ಕೆ ಸೇರ್ಪಡೆ
11ನೇ ಶತಮಾನದಲ್ಲಿ ವಿಜಯಪುರವನ್ನು ಕಲ್ಯಾಣಿ ಚಾಲುಕ್ಯರು ಅಭಿವೃದ್ಧಿಪಡಿಸಿದರು. ನಂತರ ಈ ಪ್ರದೇಶ ಯಾದವರುರ ವಶಕ್ಕೆ ಬಂತು. 14ನೇ ಶತಮಾನದ ಆರಂಭದಲ್ಲಿ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ದಕ್ಷಿಣ ಭಾರತದ ಮೇಲೆ ದಂಡಯಾತ್ರೆ ನಡೆಸಲು ತನ್ನ ಸೇನಾನಾಯಕ ಮಲಿಕ್ ಕಾಫೂರ್ ನನ್ನು ಕಳುಹಿಸಿದನು.ಯಾದವರನ್ನು ಸೋಲಿಸಿದ ನಂತರ ವಿಜಯಪುರ ದೆಹಲಿ ಸುಲ್ತಾನರ ಅಧೀನಕ್ಕೆ ಸೇರಿತು. ಮಲಿಕ್ ಕಾಫೂರ್ ದೆಹಲಿಗೆ ಮರಳುವ ಮುನ್ನ ತನ್ನ ಮಗ ಕರೀಮುದ್ದೀನ್ನನ್ನು ವಿಜಯಪುರದ ರಾಜ್ಯಪಾಲನಾಗಿ ನೇಮಿಸಿದನು.
![]() |
| ವಿಜಯಪುರದ ಕರೀಮುದ್ದೀನ್ ಮಸೀದಿ |
ಕರೀಮುದ್ದೀನ್ ಮಸೀದಿ: ನಿರ್ಮಾಣ ಮತ್ತು ಶಿಲ್ಪಿಯ ಪಾತ್ರ
ರಾಜ್ಯಪಾಲನಾದ ಕರೀಮುದ್ದೀನ್ ವಿಜಯಪುರದಲ್ಲಿ ಒಂದು ಮಸೀದಿ ನಿರ್ಮಿಸಲು ನಿರ್ಧರಿಸಿದನು. ಈ ಕಾರ್ಯದ ಜವಾಬ್ದಾರಿಯನ್ನು ಸಾಲೋಟಗಿ ಗ್ರಾಮದ ಶಿಲ್ಪಿ ರೇವಯ್ಯ ಎಂಬುವವರಿಗೆ ನೀಡಲಾಯಿತು.ಇತಿಹಾಸಕಾರರ ಅಭಿಪ್ರಾಯದಂತೆ, ರೇವಯ್ಯಗೆ ಇಸ್ಲಾಮಿಕ್ ವಾಸ್ತುಶಿಲ್ಪದ ಪೂರ್ಣ ಅರಿವು ಇರಲಿಲ್ಲ. ಹೀಗಾಗಿ ಅವನು ಸ್ಥಳೀಯವಾಗಿ ಲಭ್ಯವಿದ್ದ ಶಿಲ್ಪಪರಂಪರೆ ಹಾಗೂ ಕಟ್ಟಡ ಅವಶೇಷಗಳನ್ನು ಬಳಸಿಕೊಂಡು ಮಸೀದಿಯನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಇದರಿಂದಲೇ ಈ ಮಸೀದಿ ದೇವಾಲಯದಂತೆಯೇ ಕಾಣುತ್ತದೆ.
ಕ್ರಿ.ಶ.1320ರಲ್ಲಿ ಈ ಮಸೀದಿ ನಿರ್ಮಾಣವಾಯಿತು. ಇದನ್ನು ವಿಜಯಪುರದಲ್ಲಿ ನಿರ್ಮಾಣವಾದ ಮೊದಲ ಮಸೀದಿ ಎಂದು ಪರಿಗಣಿಸಲಾಗುತ್ತದೆ. ಮೊದಲನೇ ಅಲಿ ಆದಿಲ್ ಶಾಹಿಯ ಜಾಮಾ ಮಸೀದಿ ನಿರ್ಮಾಣವಾಗುವವರೆಗೆ, ಇದು ಬಿಜಾಪುರದ ಪ್ರಮುಖ ಮಸೀದಿಯಾಗಿತ್ತು.
ಇದನ್ನೂ ಓದಿ: ಏಷ್ಯಾದ ಅತಿ ದೊಡ್ಡ ಮಸೀದಿ ಕಲಬುರಗಿ ಜಾಮೀಯಾ ಮಸೀದಿ
![]() |
| ವಿಜಯಪುರದ ಕರೀಮುದ್ದೀನ್ ಮಸೀದಿ ಒಳಭಾಗ |
ವಾಸ್ತುಶಿಲ್ಪದ ವೈಶಿಷ್ಟ್ಯ
ಕರೀಮುದ್ದೀನ್ ಮಸೀದಿ ಎರಡು ಅಂತಸ್ತಿನ ಕಟ್ಟಡವಾಗಿದ್ದು, ಎತ್ತರದಲ್ಲಿ ದೊಡ್ಡದಾಗಿಲ್ಲದಿದ್ದರೂ ಅದರ ಕಂಬಗಳ ವಿನ್ಯಾಸವು ವಿಶಿಷ್ಟ ಸೌಂದರ್ಯವನ್ನು ನೀಡುತ್ತದೆ. ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ಪ್ರವೇಶದ್ವಾರವು ಗಮನಸೆಳೆಯುತ್ತದೆ.
ಮಧ್ಯಭಾಗದ ಪ್ರಾರ್ಥನಾ ಮಂದಿರವು ಹೆಚ್ಚು ಎತ್ತರ ಹೊಂದಿದ್ದು, ಒಳಾಂಗಣಕ್ಕೆ ಭವ್ಯತೆ ನೀಡುತ್ತದೆ. ವಿಭಿನ್ನ ವಿನ್ಯಾಸಗಳಿರುವ ಕಂಬಗಳು ಈ ಮಸೀದಿಯ ಮುಖ್ಯ ಆಕರ್ಷಣೆಯಾಗಿವೆ. ಗೋಡೆಗಳ ಮೇಲೆ ಕುರಾನ್‌ನ ವಾಕ್ಯಗಳ ಕೆತ್ತನೆ ಕಾಣಸಿಗುತ್ತದೆ. ಇಂದಿನ ಸ್ಥಿತಿಯಲ್ಲಿ ಮಸೀದಿ ಶಿಥಿಲಗೊಂಡಿದ್ದು, ಕಂಬಗಳು ಕುಸಿಯದಂತೆ ಕಬ್ಬಿಣದ ರಾಡ್‌ಗಳನ್ನು ಅಳವಡಿಸಲಾಗಿದೆ.
ದೇವಾಲಯ ಅಥವಾ ಬಸದಿ?
ಇತಿಹಾಸಕಾರರ ವಾದ 1880ರಲ್ಲಿ ವಿಜಯಪುರಕ್ಕೆ ಭೇಟಿ ನೀಡಿದ್ದ ಬ್ರಿಟಿಷ್ ಪುರಾತತ್ವ ತಜ್ಞ ಹೆನ್ರಿ ಕಸಿನ್ಸ್, ಈ ಮಸೀದಿಯನ್ನು ಒಂದಕ್ಕಿಂತ ಹೆಚ್ಚು ದೇವಾಲಯಗಳ ಅವಶೇಷಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂದು ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ.
ಕೆಲವು ಇತಿಹಾಸಕಾರರ ಅಭಿಪ್ರಾಯದಂತೆ, ಈ ಸ್ಥಳವು ಮೊದಲು ಅಗ್ರಹಾರವಾಗಿರಬಹುದು ಅಥವಾ ಜೈನ ಬಸದಿ ಆಗಿರಬಹುದು. ಮಲಿಕ್ ಕಾಫೂರ್ ದಾಳಿಯ ಸಂದರ್ಭದಲ್ಲಿ ಅದನ್ನು ಹಾನಿಗೊಳಿಸಿ, ನಂತರ ಮಸೀದಿಯಾಗಿ ಪರಿವರ್ತಿಸಲಾಗಿದೆ ಎನ್ನುವ ವಾದವೂ ಇದೆ. ಆದರೆ ಇದಕ್ಕೆ ಸ್ಪಷ್ಟ ಶಾಸನಾತ್ಮಕ ಸಾಕ್ಷ್ಯಗಳು ಇಲ್ಲ. ಹೀಗಾಗಿ ಈ ವಿಷಯ ಇಂದಿಗೂ ಸಂಶೋಧನೆ ಮತ್ತು ಚರ್ಚೆಗೆ ತೆರೆಯಲ್ಪಟ್ಟಿದೆ.
ಇದನ್ನೂ ಓದಿ: ಹಿಂದೂ ಮುಸ್ಲಿಂ ಭಾವೈಕ್ಯ ಸಾರುವ ಖಾಜಾ ಬಂದೆ ನವಾಜ್ ದರ್ಗಾ
![]() |
| ಕರೀಮುದ್ದೀನ್ ಮಸೀದಿ ಪ್ರವೇಶ ದ್ವಾರ |
ಸೌಹಾರ್ದದ ಸಂಕೇತ
ಮಸೀದಿಯ ಆವರಣದಲ್ಲಿ ಸೂಫಿ ಸಂತ ಮಹಾಬರಿ ಖಂಡಾಯತ್ ಅವರ ಪುತ್ರನ ಸಮಾಧಿ ಇದೆ. ಇದರಿಂದ ಈ ಸ್ಥಳವು ಕೇವಲ ಇತಿಹಾಸದ ಸ್ಮಾರಕವಲ್ಲ; ಧಾರ್ಮಿಕ ಸೌಹಾರ್ದದ ತಾಣವಾಗಿಯೂ ಗುರುತಿಸಿಕೊಂಡಿದೆ.
ಕರೀಮುದ್ದೀನ್ ಮಸೀದಿ ಕೇವಲ ಒಂದು ಮಸೀದಿ ಅಲ್ಲ. ಇದು ವಿಜಯಪುರದ ರಾಜಕೀಯ ಬದಲಾವಣೆ, ವಾಸ್ತುಶಿಲ್ಪದ ಸಂಕ್ರಮಣ ಮತ್ತು ಇತಿಹಾಸದ ಹಲವು ಪದರಗಳನ್ನು ಒಳಗೊಂಡ ಅಪರೂಪದ ಸ್ಮಾರಕ.
ದೇವಾಲಯವೇ? ಬಸದಿಯೇ? ಅಥವಾ ಆರಂಭದಿಂದಲೂ ಮಸೀದಿಯೇ? ಈ ಪ್ರಶ್ನೆಗಳ ಮಧ್ಯೆಯೇ ಈ ಸ್ಮಾರಕದ ವೈಶಿಷ್ಟ್ಯ ಅಡಗಿದೆ. ನೀವು ವಿಜಯಪುರಕ್ಕೆ ಬಂದಾಗ, ಈ ಮರೆತ ಐತಿಹಾಸಿಕ ಸ್ಮಾರಕವನ್ನು ನೋಡದೇ ಮರೆಯಬೇಡಿ.




