ಶಿವಾಜಿಯಿಂದ ಹತನಾದ ಅಫಜಲ್ ಖಾನ್ ನಿಜವಾದ ಸಮಾಧಿ ಎಲ್ಲಿದೆ ಗೊತ್ತಾ?

ಅಫಜಲ್ ಖಾನ್ ಸಮಾಧಿ, ವಿಜಯಪುರ
ವಿಜಯಪುರದಲ್ಲಿರುವ ಅಫಜಲ್ ಖಾನ್ ಸಮಾಧಿ

ನವೆಂಬರ್ 10, 1659
ಸ್ಥಳ: ಪ್ರತಾಪಗಢ ಕೋಟೆ

ಭಾರತೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಗಳಲ್ಲಿ ಇದು ಒಂದಾಗಿದೆ. ಈ ದಿನ ಮರಾಠ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮತ್ತು ಆದಿಲ್ ಶಾಹಿ ಸಾಮ್ರಾಜ್ಯದ ಪ್ರಬಲ ಸೇನಾಪತಿ ಅಫಜಲ್ ಖಾನ್ ಮುಖಾಮುಖಿಯಾದರು. ಈ ಐತಿಹಾಸಿಕ ಭೇಟಿಯ ಅಂತ್ಯದಲ್ಲಿ ಅಫಜಲ್ ಖಾನ್ ಹತನಾದನು.

ಆದರೆ ಇಂದಿಗೂ ಅನೇಕರು ಕೇಳುವ ಪ್ರಶ್ನೆ ಒಂದೇ- ಅಫಜಲ್ ಖಾನ್ ಪ್ರತಾಪಗಢದಲ್ಲಿ ಮೃತಪಟ್ಟಿದ್ದರೆ, ಅವನ ಸಮಾಧಿ ಸುಮಾರು 300 ಕಿ.ಮೀ ದೂರದ ವಿಜಯಪುರದಲ್ಲೇ ಏಕೆ ಇದೆ? ಈ ಸ್ಟೋರಿ ಓದಿ.

ಅಫಜಲ್ ಖಾನ್ ಮತ್ತು ಬಡಿ ಬೇಗಂ
ಅಫಜಲ್ ಖಾನ್ ಮತ್ತು ಬಡಿ ಬೇಗಂ (ಕಾಲ್ಪನಿಕ ಚಿತ್ರ)

ಆದಿಲ್ ಶಾಹಿ ರಾಜಕೀಯ ಹಿನ್ನಲೆ

ಕ್ರಿ.ಶ.1656ರಲ್ಲಿ ಆದಿಲ್ ಶಾಹಿ ವಂಶದ ಎರಡನೇ ಅಲಿ ಆದಿಲ್ ಶಾ (Ali Adil Shah II) ಸುಲ್ತಾನನಾಗಿ ಅಧಿಕಾರ ಸ್ವೀಕರಿಸುತ್ತಾನೆ. ಆಗ ಅವನ ವಯಸ್ಸು ಕೇವಲ 18 ವರ್ಷ. ಸುಲ್ತಾನ ಅಪ್ರಾಪ್ತನಾಗಿದ್ದ ಕಾರಣ, ಅವನ ತಾಯಿ ಬಡಿ ಬೇಗಂ ರಾಜಪ್ರತಿನಿಧಿಯಾಗಿ ರಾಜ್ಯವನ್ನು ನಡೆಸುತ್ತಿದ್ದರು.

ಈ ಸಮಯದಲ್ಲೇ ಸ್ವರಾಜ್ಯದ ಕನಸು ಕಂಡಿದ್ದ ಶಿವಾಜಿ, ಆದಿಲ್ ಶಾಹಿಗಳ ಕೋಟೆಗಳನ್ನು ಒಂದರ ಹಿಂದೆ ಒಂದರಂತೆ ವಶಪಡಿಸಿಕೊಳ್ಳುತ್ತಿದ್ದರು. ಈ ನಿರಂತರ ದಾಳಿಗಳು ಬಡಿ ಬೇಗಂಗೆ ಗಂಭೀರ ಚಿಂತೆಯಾಗಿ ಪರಿಣಮಿಸಿದವು.

ಇದನ್ನೂ ಓದಿ: ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡ ಸಾಟ್ ಖಬರ್ 63 ಸಮಾಧಿಗಳ ರಹಸ್ಯ

ಅಫಜಲ್ ಖಾನ್- ಸೇನಾಪತಿ ಮತ್ತು ಸವಾಲು

ಶಿವಾಜಿಯನ್ನು ಬಂಧಿಸುವ ಹೊಣೆ ಯಾರಿಗೆ? ಎಂಬ ಪ್ರಶ್ನೆ ಬಂದಾಗ, ಸೇನಾಪತಿಗಳಲ್ಲಿ ಒಬ್ಬನಾಗಿದ್ದ ಅಫಜಲ್ ಖಾನ್ ಈ ಜವಾಬ್ದಾರಿಯನ್ನು ಸ್ವಯಂ ಸ್ವೀಕರಿಸಿದನು.

ಸುಮಾರು 6.7 ಅಡಿ ಎತ್ತರದ, ಆಜಾನುಬಾಹು ವ್ಯಕ್ತಿಯಾಗಿದ್ದ ಅಫಜಲ್ ಖಾನ್, ಆದಿಲ್ ಶಾಹಿ ವಂಶದ ನಿಷ್ಠಾವಂತ ಸೇನಾಪತಿ. ಅವನು ಸೂಫಿ ಸಂತರಲ್ಲಿ ಅಪಾರ ನಂಬಿಕೆ ಇಟ್ಟಿದ್ದನೆಂಬ ಉಲ್ಲೇಖಗಳು ಇತಿಹಾಸದಲ್ಲಿ ಸಿಗುತ್ತವೆ.

ಶಿವಾಜಿ ವಿರುದ್ಧ ಹೊರಡುವ ಮೊದಲು, ತನ್ನ ಗುರುವಾಗಿದ್ದ ಸೂಫಿ ಸಂತನ ಬಳಿ ಭವಿಷ್ಯ ಕೇಳಿದಾಗ, 'ಈ ಯುದ್ಧದ ನಂತರ ನೀನು ಹಿಂದಿರುಗುವುದಿಲ್ಲ' ಎಂದು ಎಚ್ಚರಿಸಲಾಗಿತ್ತು. ಆದರೂ ಅಫಜಲ್ ಖಾನ್ ಆ ಸಲಹೆಯನ್ನು ನಿರಾಕರಿಸಿ ಯುದ್ಧದತ್ತ ಹೆಜ್ಜೆ ಹಾಕಿದನು.
ಅಫಜಲ್ ಖಾನ್ ಮತ್ತು ಸೂಫಿ ಸಂತ
ಅಫಜಲ್ ಖಾನ್ ಮತ್ತು ಸೂಫಿ ಸಂತ

ಮಾತುಕತೆ ಅಥವಾ ಕುತಂತ್ರ?

ಯುದ್ಧಕ್ಕೂ ಮೊದಲು ಶಿವಾಜಿ, ಶಾಂತಿ ಸಂದೇಶವನ್ನು ಕಳುಹಿಸಿದರು. ಇದು ಯುದ್ಧ ತಂತ್ರದ ಭಾಗವಾಗಿತ್ತು. ಮಾತುಕತೆಗೆ ಎರಡೂ ಪಾಳಯಗಳಿಂದ ರಾಯಭಾರಿಗಳನ್ನು ನೇಮಿಸಲಾಯಿತು.

ನವೆಂಬರ್ 10, 1659ರಂದು, ಪ್ರತಾಪಗಢದ ತಪ್ಪಲಿನಲ್ಲಿದ್ದ ಶಾಮಿಯಾನದಲ್ಲಿ ಶಿವಾಜಿ–ಅಫಜಲ್ ಖಾನ್ ಸಭೆ ಏರ್ಪಡಿಸಲಾಯಿತು. ಒಪ್ಪಂದದಂತೆ, ಇಬ್ಬರೂ ತಮ್ಮೊಂದಿಗೆ ಕೇವಲ ಹತ್ತು ಅಂಗರಕ್ಷಕರನ್ನು ಮಾತ್ರ ಕರೆತರುವುದಾಗಿ ನಿರ್ಧರಿಸಿದರು. ಆದರೆ ಅಫಜಲ್ ಖಾನ್, ಆಲಿಂಗನದ ನೆಪದಲ್ಲಿ ಶಿವಾಜಿಯನ್ನು ಹತ್ಯೆ ಮಾಡುವ ಕುತಂತ್ರ ರೂಪಿಸಿದ್ದ. ಇದಕ್ಕಾಗಿ ಕಠಾರಿಯನ್ನು ಮರೆಮಾಡಿಕೊಂಡಿದ್ದ.

ಇದನ್ನೂ ಓದಿ: ಬಾರಾ ಕಮಾನ್– ಅಪೂರ್ಣವಾಗಿಯೇ ಉಳಿದ ವಿಶ್ವದ ಅದ್ಭುತದ ಕನಸು

ವಾಘ್ ನಖ ಮತ್ತು ಇತಿಹಾಸದ ತಿರುವು

ಅಫಜಲ್ ಖಾನ್‌ನ ಉದ್ದೇಶವನ್ನು ಅರಿತಿದ್ದ ಶಿವಾಜಿ, ತಮ್ಮ ವಸ್ತ್ರದೊಳಗೆ ರಕ್ಷಾಕವಚ ಮತ್ತು ಕೈಯಲ್ಲಿ ವಾಘ್ ನಖ ಧರಿಸಿದ್ದರು. ಆಲಿಂಗನದ ವೇಳೆ ಅಫಜಲ್ ಖಾನ್ ಕಠಾರಿಯಿಂದ ದಾಳಿ ಮಾಡಿದರೂ, ರಕ್ಷಾಕವಚ ಶಿವಾಜಿಯನ್ನು ಉಳಿಸಿತು. ಪ್ರತಿಯಾಗಿ ಶಿವಾಜಿ ವಾಘ್ ನಖದಿಂದ ಅಫಜಲ್ ಖಾನ್ ಮೇಲೆ ಪ್ರಬಲ ದಾಳಿ ನಡೆಸಿದರು.

ತೀವ್ರವಾಗಿ ಗಾಯಗೊಂಡ ಅಫಜಲ್ ಖಾನ್ ಡೇರೆಯಿಂದ ಹೊರ ಓಡಿದನು. ಬಳಿಕ ಮರಾಠ ಸೈನಿಕರು ಅವನನ್ನು ಬೆನ್ನಟ್ಟಿ ಹತ್ಯೆ ಮಾಡಿದರು. ಈ ಘಟನೆಯ ನಂತರ ಮರಾಠ ಸೇನೆ ಆದಿಲ್ ಶಾಹಿ ಸೇನೆಯನ್ನು ಸಂಪೂರ್ಣವಾಗಿ ಸೋಲಿಸಿತು.
ಅಫಜಲ್ ಖಾನ್ ಮತ್ತು ಶಿವಾಜಿ
ಅಫಜಲ್ ಖಾನ್ ಮತ್ತು ಶಿವಾಜಿ

ಪ್ರತಾಪಗಢ ಮತ್ತು ವಿಜಯಪುರ- ಎರಡು ಸಮಾಧಿಗಳು ಏಕೆ?

ಶಿವಾಜಿಯ ಆದೇಶದಂತೆ, ಅಫಜಲ್ ಖಾನ್‌ನ ಪಾರ್ಥಿವ ಶರೀರವನ್ನು ಪ್ರತಾಪಗಢದಲ್ಲೇ ಸಮಾಧಿ ಮಾಡಲಾಯಿತು. ಆದರೆ ವಿಜಯಪುರದಲ್ಲಿರುವ ಅಫಜಲ್ ಖಾನ್ ಸಮಾಧಿ 'ಸೆನೋಟಾಫ್' (Cenotaph). ಅಂದರೆ ವ್ಯಕ್ತಿಯ ಸ್ಮರಣಾರ್ಥ ನಿರ್ಮಿಸಲಾದ ಸಮಾಧಿ, ಆದರೆ ದೇಹ ಅಲ್ಲಿ ಇರದು.

ಈ ಸ್ಮಾರಕವನ್ನು ಅಫಜಲ್ ಖಾನ್ ತನ್ನ ಜೀವಿತಾವಧಿಯಲ್ಲೇ 1653ರಲ್ಲಿ ನಿರ್ಮಿಸಲು ಆರಂಭಿಸಿದ್ದನೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಇಲ್ಲಿನ ವಾಸ್ತುಶಿಲ್ಪದಲ್ಲಿ ಇಬ್ರಾಹಿಂ ರೋಜಾ, ಮೆಹ್ತಾರ್ ಮಹಲ್ ಮುಂತಾದ ಆದಿಲ್ ಶಾಹಿ ಸ್ಮಾರಕಗಳ ಶೈಲಿಯ ಛಾಪು ಕಾಣುತ್ತದೆ.
ಅಫಜಲ್ ಖಾನ್ ಸಮಾಧಿ, ವಿಜಯಪುರ
ವಿಜಯಪುರದಲ್ಲಿರುವ ಅಫಜಲ್ ಖಾನ್ ಸಮಾಧಿ

ಸ್ಮಾರಕದ ಪ್ರಮುಖ ವೈಶಿಷ್ಟ್ಯಗಳು:

ಈ ಕಟ್ಟಡವು ಎರಡು ಅಂತಸ್ತಿನ ರಚನೆಯಾಗಿದ್ದು, ಎರಡು ಪ್ರಾರ್ಥನಾ ಕೋಣೆಗಳನ್ನು ಹೊಂದಿದೆ. ಮಧ್ಯಭಾಗದಲ್ಲಿ ನೀರಿನ ಕೊಳವಿದ್ದು, ಒಟ್ಟು 52 ಕಮಾನುಗಳು ಇದರ ವೈಶಿಷ್ಟ್ಯವನ್ನು ಹೆಚ್ಚಿಸುತ್ತವೆ. ಸುಂದರ ಗೋಪುರವು ಕಟ್ಟಡಕ್ಕೆ ಭವ್ಯತೆಯನ್ನು ನೀಡುತ್ತದೆ. ಇಂಡೋ-ಸಾರ್ಸೆನಿಕ್, ಪರ್ಷಿಯನ್, ದ್ರಾವಿಡಿಯನ್ ಮತ್ತು ಗೋಲ್ಕೊಂಡಾ ಶೈಲಿಗಳ ಸಂಯೋಜನೆಯು ಇದರ ವಾಸ್ತುಶಿಲ್ಪವನ್ನು ವಿಶಿಷ್ಟವಾಗಿಸಿದೆ. ಅಲ್ಲದೆ, ಇಲ್ಲಿನ ಗೋಡೆಗಳ ಮೇಲಿನ ಸೂಕ್ಷ್ಮ ಚಿತ್ರಕಲೆಗಳು ವೀಕ್ಷಕರನ್ನು ಆಕರ್ಷಿಸುತ್ತವೆ.
ಅಫಜಲ್ ಖಾನ್ ಸಮಾಧಿ, ವಿಜಯಪುರ
ವಿಜಯಪುರದಲ್ಲಿರುವ ಅಫಜಲ್ ಖಾನ್ ಸಮಾಧಿ
ಅಫಜಲ್ ಖಾನ್ ಬಗ್ಗೆ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಅವನನ್ನು ಕ್ರೂರ ಸೇನಾಪತಿ ಎನ್ನುತ್ತಾರೆ. ಇನ್ನೂ ಕೆಲವರು ಅವನನ್ನು ಧೈರ್ಯಶಾಲಿ, ನಿಷ್ಠಾವಂತ ಮತ್ತು ಸಮರ್ಥ ಆಡಳಿತಗಾರ ಎಂದು ಪರಿಗಣಿಸುತ್ತಾರೆ. ಇತಿಹಾಸ ಎಂದರೆ ಕೇವಲ ಜಯ- ಪರಾಭವಗಳ ಕಥೆಯಲ್ಲ; ಅದು ಹಲವು ದೃಷ್ಟಿಕೋಣಗಳ ಸಂಗಮ.

ಈ ಐತಿಹಾಸಿಕ ಸ್ಮಾರಕವು ವಿಜಯಪುರ ಬಸ್ ನಿಲ್ದಾಣದಿಂದ ಸುಮಾರು 4 ಕಿ.ಮೀ ದೂರದಲ್ಲಿದ್ದು, ಅಫಜಲ್ಪುರ ಟಕ್ಕೆ ಸಮೀಪದಲ್ಲಿದೆ. ನೀವು ವಿಜಯಪುರಕ್ಕೆ ಭೇಟಿ ನೀಡುವಾಗ, ಗೋಳಗುಮ್ಮಟದ ಜೊತೆಗೆ ಈ ಮರೆತುಹೋಗಿರುವ ಅಫಜಲ್ ಖಾನ್ ಸಮಾಧಿ (ಸೆನೋಟಾಫ್) ನೋಡೋದನ್ನು ಮರೆಯಬೇಡಿ.
ನವೀನ ಹಳೆಯದು