![]() |
| ಕಲಬುರಗಿಯ ಮಳಖೇಡ ಕೋಟೆ ಮುಂಭಾಗ |
ರಾಷ್ಟ್ರಕೂಟರ ಉದಯ ಮತ್ತು ಸಾಮ್ರಾಜ್ಯದ ವಿಸ್ತಾರ
ಬಾದಾಮಿ ಚಾಲುಕ್ಯರನ್ನು ಸೋಲಿಸಿ ಕ್ರಿ.ಶ. 753ರಲ್ಲಿ ಸ್ವತಂತ್ರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ರಾಷ್ಟ್ರಕೂಟರು. ಅವರ ಸಂಸ್ಥಾಪಕ ದಂತಿದುರ್ಗ ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಿದನು. ಸುಮಾರು 220 ವರ್ಷಗಳ ಕಾಲ ಆಳ್ವಿಕೆ ನಡೆಸಿದ ರಾಷ್ಟ್ರಕೂಟರು ತಮ್ಮ ಯುದ್ಧತಂತ್ರ, ಆಡಳಿತ ಕೌಶಲ್ಯ ಮತ್ತು ರಾಜಕೀಯ ದೂರದೃಷ್ಟಿಯಿಂದ ದಕ್ಷಿಣ, ಮಧ್ಯ ಹಾಗೂ ಉತ್ತರ ಭಾರತದವರೆಗೂ ತಮ್ಮ ಪ್ರಭಾವವನ್ನು ವಿಸ್ತರಿಸಿದರು.
ರಾಷ್ಟ್ರಕೂಟರ ಸಾಧನೆ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕಲೆ, ಸಾಹಿತ್ಯ, ಧರ್ಮ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿಯೂ ಅವರು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿ ಬಹಮನಿ ಕಾಲದ ಭವ್ಯ ಕೋಟೆಯ ಇತಿಹಾಸ
![]() |
| ಅಮೋಘವರ್ಷ ನೃಪತುಂಗ (ಕಾಲ್ಪನಿಕ ಚಿತ್ರ) |
ಅಮೋಘವರ್ಷ ನೃಪತುಂಗ ಮತ್ತು ಮಾನ್ಯಖೇಟದ ಸುವರ್ಣಯುಗ
ರಾಷ್ಟ್ರಕೂಟ ಸಾಮ್ರಾಜ್ಯ ತನ್ನ ಉತ್ತುಂಗಕ್ಕೇರಿದ್ದು ಅಮೋಘವರ್ಷ ನೃಪತುಂಗರ ಕಾಲದಲ್ಲಿ. ಕ್ರಿ.ಶ. 814ರಿಂದ 878ರವರೆಗೆ 64 ವರ್ಷಗಳ ದೀರ್ಘಾವಧಿ ಆಳ್ವಿಕೆ ನಡೆಸಿದ ಈ ದೊರೆ ಕೇವಲ ಯೋಧನಲ್ಲ, ಮಹಾನ್ ಸಂಸ್ಕೃತಿಪ್ರೇಮಿಯೂ ಆಗಿದ್ದ. ಅವರ ಕಾಲದಲ್ಲಿ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಉತ್ತೇಜನ ದೊರೆಯಿತು.
ಕನ್ನಡದ ಮೊದಲ ಲಭ್ಯ ಗ್ರಂಥವೆಂದು ಪರಿಗಣಿಸಲ್ಪಡುವ ಕವಿರಾಜಮಾರ್ಗ ಇದೇ ಅವಧಿಯಲ್ಲಿ ರಚನೆಯಾಯಿತು. “ಕಾವೇರಿಯಿಂದ ಗೋದಾವರಿವರೆಗೆ ಇರುವ ನಾಡದ ಕನ್ನಡದೊಳ್” ಎಂಬ ಪ್ರಸಿದ್ಧ ಉಲ್ಲೇಖ, ಆ ಕಾಲದಲ್ಲೇ ಕನ್ನಡನಾಡಿನ ವ್ಯಾಪ್ತಿ ಎಷ್ಟಿತ್ತು ಎಂಬುದನ್ನು ಸೂಚಿಸುತ್ತದೆ.
ಅರಬ್ ಪ್ರವಾಸಿಗ ಸುಲೈಮಾನ್ ಅಮೋಘವರ್ಷ ನೃಪತುಂಗರನ್ನು “ಪ್ರಪಂಚದ ನಾಲ್ಕು ಮಹಾನ್ ರಾಜರಲ್ಲಿ ಒಬ್ಬ” ಎಂದು ಕೊಂಡಾಡಿದ್ದಾನೆ. ಮಾನ್ಯಖೇಟದ ವೈಭವವನ್ನು ಇಂದ್ರನ ಅಮರಾವತಿಗಿಂತಲೂ ಮೀರಿದಂತದ್ದು ಎಂದು ವರ್ಣಿಸಿರುವುದು, ಈ ರಾಜಧಾನಿಯ ಐಶ್ವರ್ಯ ಮತ್ತು ಸಾಂಸ್ಕೃತಿಕ ಚೈತನ್ಯವನ್ನು ಊಹಿಸಲು ಸಾಕಾಗಿದೆ.
ಮಾನ್ಯಖೇಟ: ರಾಜಧಾನಿಯಾಗಲು ಕಾರಣ
ಮಯೂರಖಂಡಿಯಿಂದ ರಾಜಧಾನಿಯನ್ನು ಮಾನ್ಯಖೇಟಕ್ಕೆ ಸ್ಥಳಾಂತರಿಸುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ. ಕಾಗಿನಾ ನದಿಯ ದಂಡೆಯಲ್ಲಿರುವ ಮಾನ್ಯಖೇಟವು ರಕ್ಷಣಾತ್ಮಕ ದೃಷ್ಟಿಯಿಂದಲೂ, ವ್ಯಾಪಾರ ಮತ್ತು ಕೃಷಿಗೆ ಅನುಕೂಲಕರವಾಗಿಯೂ ಇತ್ತು. ನದಿಯ ಸಮೀಪ ಇರುವುದರಿಂದ ನೀರಿನ ಲಭ್ಯತೆ, ಸಾಗಾಟ ಮತ್ತು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ದೊರಕಿದವು. ಈ ಭೌಗೋಳಿಕ ಲಾಭವೇ ಮಾನ್ಯಖೇಟವನ್ನು ರಾಜಧಾನಿಯಾಗಿ ರೂಪಿಸಿತು. ಉತ್ತರ ಮತ್ತು ದಕ್ಷಿಣ ಭಾರತದ ವ್ಯಾಪಾರ ಮಾರ್ಗಗಳ ಸಂಪರ್ಕಕೇಂದ್ರವಾಗಿದ್ದರಿಂದ ಮಳಖೇಡ ವಾಣಿಜ್ಯದಲ್ಲಿಯೂ ಪ್ರಮುಖ ಸ್ಥಾನ ಹೊಂದಿತ್ತು. ವಿದೇಶಿ ವ್ಯಾಪಾರಿಗಳ ಆಗಮನವೂ ಇಲ್ಲಿ ನಡೆಯುತ್ತಿತ್ತು.
ಇದನ್ನೂ ಓದಿ: 13 ರಕ್ತಸಿಕ್ತ ಯುದ್ಧಗಳಿಗೆ ಸಾಕ್ಷಿ ಆದ ಮುದ್ಗಲ್ ಕೋಟೆ!
![]() |
| ಮಳಖೇಡ ಕೋಟೆ (ಕಾಲ್ಪನಿಕ ಚಿತ್ರ) |
ರಾಷ್ಟ್ರಕೂಟರ ನಂತರದ ಮಾನ್ಯಖೇಟ
ರಾಷ್ಟ್ರಕೂಟರ ಪತನದ ನಂತರ ಮಾನ್ಯಖೇಟವು ಅವರ ಉತ್ತರಾಧಿಕಾರಿಗಳಾದ ಕಲ್ಯಾಣಿ ಚಾಲುಕ್ಯರುರ ಪ್ರಮುಖ ಕೇಂದ್ರವಾಯಿತು. ಕ್ರಿ.ಶ. 1050ರವರೆಗೂ ಈ ಪ್ರದೇಶ ತನ್ನ ರಾಜಕೀಯ ಮಹತ್ವವನ್ನು ಕಾಪಾಡಿಕೊಂಡಿತು. ನಂತರದ ಕಾಲಘಟ್ಟಗಳಲ್ಲಿ ವಿವಿಧ ರಾಜವಂಶಗಳ ಆಳ್ವಿಕೆಗೆ ಒಳಗಾಗಿ, ತನ್ನ ಪ್ರಾಚೀನ ವೈಭವವನ್ನು ನಿಧಾನವಾಗಿ ಕಳೆದುಕೊಂಡಿತು.
ಮಳಖೇಡ ಕೋಟೆಯ ವಾಸ್ತುಶಿಲ್ಪ
ಕಾಗಿನಾ ನದಿಯ ದಂಡೆಯ ಮೇಲೆ ನಿರ್ಮಿಸಲಾದ ಮಳಖೇಡ ಕೋಟೆ ನಾಲ್ಕು ಪ್ರವೇಶದ್ವಾರಗಳು ಮತ್ತು 52 ಬುರುಜುಗಳನ್ನು ಹೊಂದಿದೆ. ಕೋಟೆ ಹೊರಕೋಟೆ ಮತ್ತು ಒಳಕೋಟೆ ಎಂಬ ಎರಡು ಪ್ರಮುಖ ಭಾಗಗಳನ್ನೊಳಗೊಂಡಿದೆ. ಒಳಕೋಟೆಯನ್ನು ಚಿಕ್ಕ ಕಲ್ಲುಗಳಿಂದ, ಹೊರಕೋಟೆಯನ್ನು ದಪ್ಪ ಕಲ್ಲುಗಳಿಂದ ನಿರ್ಮಿಸಿರುವುದು ರಾಷ್ಟ್ರಕೂಟರ ಇಂಜಿನಿಯರಿಂಗ್ ಕೌಶಲ್ಯವನ್ನು ತೋರಿಸುತ್ತದೆ.
ಸುಮಾರು 6 ಮೀಟರ್ ಎತ್ತರದ ಒಳಕೋಟೆಯ ಗೋಡೆಗಳು ಇಂದು ಹಲವೆಡೆ ಕುಸಿದಿದ್ದರೂ, ಅವುಗಳ ಅವಶೇಷಗಳು ಆ ಕಾಲದ ಭವ್ಯತೆಯನ್ನು ನೆನಪಿಸುತ್ತವೆ. ಅರ್ಧವೃತ್ತಾಕಾರದ ಮತ್ತು ಚೌಕಾಕಾರದ ಬುರುಜುಗಳು ರಕ್ಷಣಾತ್ಮಕ ಉದ್ದೇಶಕ್ಕೆ ವಿನ್ಯಾಸಗೊಳಿಸಲ್ಪಟ್ಟಿವೆ.
ಪೂರ್ವ ದಿಕ್ಕಿನ ಮಹಾದ್ವಾರವು ಉತ್ತರಾಭಿಮುಖವಾಗಿದ್ದು, ಅದರೊಳಗೆ ಮೂರು ಬಾಗಿಲುಗಳಿವೆ. ಈ ವಿನ್ಯಾಸ ಶತ್ರುಗಳನ್ನು ಗೊಂದಲಕ್ಕೀಡಾಗಿಸಲು ರೂಪಿಸಲ್ಪಟ್ಟಿರಬಹುದು ಎಂದು ಇತಿಹಾಸಕಾರರು ಊಹಿಸುತ್ತಾರೆ.
ಇದನ್ನೂ ಓದಿ: ಬೀದರ್ ಕೋಟೆ ವಾಸ್ತುಶಿಲ್ಪ ಮತ್ತು ಅಜೇಯತೆಯ ಹಿನ್ನಲೆ
![]() |
| ಮಳಖೇಡ ಕೋಟೆಯ ಕಾವಲುಕೋಟೆ |
ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ
ಕೋಟೆಯ ಒಳಭಾಗದಲ್ಲಿ ಶಿಲ್ಪಗಳು, ವೀರಗಲ್ಲುಗಳು ಮತ್ತು ಹಳೆಯ ಕಟ್ಟಡಗಳ ಅವಶೇಷಗಳು ಕಂಡುಬರುತ್ತವೆ. ಜೈನ ಧರ್ಮದ ಪ್ರಭಾವ ಇಲ್ಲಿ ಬಹಳವಾಗಿದ್ದು, ಮಳಖೇಡ ಒಂದು ಪ್ರಮುಖ ಜೈನ ತಾಣವಾಗಿತ್ತು. ನಂತರ ಇದು ಅಗ್ರಹಾರವಾಗಿ ಬೆಳೆಯಿತು. ಜೈನ ಬಸದಿಗಳು ಮತ್ತು ಉತ್ತರಾದಿ ಮಠಗಳು ಇದರ ಸಾಕ್ಷಿಗಳಾಗಿವೆ.
ಮಳಖೇಡ ಕೇವಲ ರಾಜಕೀಯ ಕೇಂದ್ರವಲ್ಲ; ವಿದ್ಯಾ ಮತ್ತು ಧಾರ್ಮಿಕ ಚಟುವಟಿಕೆಗಳ ಕೇಂದ್ರವೂ ಆಗಿತ್ತು. ಪಂಡಿತರು, ಕವಿಗಳು, ತತ್ತ್ವಜ್ಞರು ಇಲ್ಲಿ ನೆಲೆಸಿ ಜ್ಞಾನ ಚರ್ಚೆಗಳನ್ನು ನಡೆಸುತ್ತಿದ್ದರು. ಮಾನ್ಯಖೇಟವನ್ನು ದಕ್ಷಿಣ ಭಾರತದ ಒಂದು ಬೌದ್ಧಿಕ ಕೇಂದ್ರವೆಂದು ಕರೆಯಬಹುದು.
![]() |
| ಮಳಖೇಡ ಕೋಟೆಯ ಬಾಗಿಲು |
₹5 ಕೋಟಿ ವೆಚ್ಚದಲ್ಲಿ ಕೋಟೆಯ ಜೀರ್ಣೋದ್ಧಾರ
2018ರಲ್ಲಿ ರಾಜ್ಯ ಸರ್ಕಾರವು ಸುಮಾರು ₹5 ಕೋಟಿ ವೆಚ್ಚದಲ್ಲಿ ಕೋಟೆಯ ಜೀರ್ಣೋದ್ಧಾರ ಕಾರ್ಯ ಆರಂಭಿಸಿತು. ಭಾರೀ ಮಳೆಯಿಂದ ಕೆಲವು ಭಾಗಗಳು ಕುಸಿದರೂ, ಮರುನಿರ್ಮಾಣ ಕಾರ್ಯ ಈಗ ಮತ್ತೆ ಪ್ರಾರಂಭವಾಗಿದೆ. ಸ್ಥಳೀಯರು ಮತ್ತು ಪುರಾತತ್ವ ಇಲಾಖೆಯ ಸಹಕಾರದಿಂದ ಕೋಟೆಯನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ.




