ನಾಡ ಸಂಚಾರಿ- ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಮರೆತುಹೋದ ಕತೆಗಳನ್ನು ಸಂಶೋಧನಾತ್ಮಕವಾಗಿ ದಾಖಲಿಸುವ ಡಿಜಿಟಲ್ ವೇದಿಕೆ. ಇಲ್ಲಿ ಪ್ರಕಟವಾಗುವ ಲೇಖನಗಳು ವಿಶ್ವಾಸಾರ್ಹ ಇತಿಹಾಸ ಮೂಲಗಳು, ಪುರಾವೆಗಳು ಮತ್ತು ಅಧ್ಯಯನಗಳ ಆಧಾರದ ಮೇಲೆ ರಚಿಸಲಾಗುತ್ತದೆ.
ಗುಲ್ಬರ್ಗಾ ಕೋಟೆ: ಯುದ್ಧ, ವೈಭವ ಮತ್ತು ರಹಸ್ಯಗಳ ಇತಿಹಾಸ
ಲಿಂಕ್ ಪಡೆಯಿರಿ
Facebook
X
Pinterest
ಇಮೇಲ್
ಇತರ ಅಪ್ಲಿಕೇಶನ್ಗಳು
ಗುಲ್ಬರ್ಗಾ ಕೋಟೆ ಬುರುಜ್ ಮೇಲಿರುವ ಬಾರಹ ಗಜ ತೋಪು
ಶರಣರ ನಾಡು, ಸೂಫಿ ಸಂತರ ಬೀಡು, ತೊಗರಿ ಕಣಜ… ಹೀಗೆ ಹಲವು ಹೆಸರುಗಳಿಂದ ಪ್ರಸಿದ್ಧಿಯಾಗಿರುವ ಕಲಬುರಗಿ ನಗರವು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುತ್ತದೆ. ಶತಮಾನಗಳ ಇತಿಹಾಸ, ಧಾರ್ಮಿಕ ಸೌಹಾರ್ದತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದ ಪ್ರಸಿದ್ಧಿಯಾಗಿರುವ ಈ ನಗರದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳು ಕಂಡುಬರುತ್ತವೆ. ಪ್ರಸಿದ್ಧ ಸೂಫಿ ಸಂತ ಖಾಜಾ ಬಂದೆ ನವಾಜ್ ಅವರ ದರ್ಗಾ, ಶರಣಬಸವೇಶ್ವರ ದೇವಸ್ಥಾನ, ಬುದ್ಧ ವಿಹಾರ ಸೇರಿದಂತೆ ಅನೇಕ ಧಾರ್ಮಿಕ ಹಾಗೂ ಐತಿಹಾಸಿಕ ತಾಣಗಳು ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಈ ಎಲ್ಲ ತಾಣಗಳ ನಡುವೆ ಅತ್ಯಂತ ಪ್ರಮುಖವಾದ ಐತಿಹಾಸಿಕ ಸ್ಮಾರಕವೆಂದರೆ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಗುಲ್ಬರ್ಗಾ ಕೋಟೆ. ದಖ್ಖನ್‌ನ ರಾಜಕೀಯ, ಸೈನಿಕ ಹಾಗೂ ವಾಸ್ತುಶಿಲ್ಪದ ಬೆಳವಣಿಗೆಗೆ ಸಾಕ್ಷಿಯಾಗಿರುವ ಈ ಕೋಟೆ ಮಧ್ಯಯುಗೀನ ಭಾರತದ ಅತ್ಯಂತ ಮಹತ್ವದ ಕೋಟೆಗಳಲ್ಲಿ ಒಂದಾಗಿದೆ.
ಗುಲ್ಬರ್ಗಾ ಕೋಟೆಯ ಹೊರ ನೋಟ
ಕಲಬುರಗಿ ಕೋಟೆಯ ನಿರ್ಮಾಣ: ಆರಂಭದ ಇತಿಹಾಸ
ಇತಿಹಾಸಕಾರರ ಅಭಿಪ್ರಾಯದ ಪ್ರಕಾರ ಕಲಬುರಗಿ ಕೋಟೆಯ ಮೂಲ ನಿರ್ಮಾಣವನ್ನು ವಾರಂಗಲ್ ಪ್ರದೇಶದ ಸ್ಥಳೀಯ ಆಡಳಿತಗಾರರಿಂದ ಪ್ರಾರಂಭಿಸಲಾಯಿತು ಎಂದು ಹೇಳಲಾಗುತ್ತದೆ. ಕೆಲ ದಾಖಲೆಗಳ ಪ್ರಕಾರ ವಾರಂಗಲ್ ಕಾಕತೀಯರ ಆಡಳಿತ ಕಾಲದಲ್ಲಿ ಈ ಪ್ರದೇಶದಲ್ಲಿ ಮೊದಲ ಕೋಟೆ ನಿರ್ಮಾಣಗೊಂಡಿತು ಎಂದು ಸೂಚನೆಗಳಿವೆ.
ಆದರೆ ಇಂದಿನ ರೂಪದಲ್ಲಿರುವ ಕೋಟೆಯನ್ನು ಬಲಿಷ್ಠವಾಗಿ ಅಭಿವೃದ್ಧಿಪಡಿಸಿದವರು ಬಹಮನಿ ಸುಲ್ತಾನರು. ಕ್ರಿ.ಶ. 1347ರಲ್ಲಿ ದೆಹಲಿ ಸುಲ್ತಾನರ ವಿರುದ್ಧ ದಂಗೆ ಎದ್ದು ಸ್ವತಂತ್ರ ರಾಜ್ಯ ಸ್ಥಾಪಿಸಿದ ಅಲ್ಲಾವುದ್ದೀನ್ ಹಸನ್ ಗಂಗೂ ಈ ಕೋಟೆಯನ್ನು ಪುನರ್ ನಿರ್ಮಿಸಿ ಬಲಪಡಿಸಿದರು. ಇದೇ ಸಮಯದಲ್ಲಿ ಗುಲ್ಬರ್ಗಾ (ಇಂದಿನ ಕಲಬುರಗಿ) ನಗರವನ್ನು ಅವರು ತಮ್ಮ ರಾಜಧಾನಿಯಾಗಿ ಘೋಷಿಸಿದರು.
1347ರಿಂದ 1424ರವರೆಗೆ ಕಲಬುರಗಿ ಬಹಮನಿ ಸಾಮ್ರಾಜ್ಯದ ಪ್ರಮುಖ ರಾಜಧಾನಿಯಾಗಿತ್ತು. ನಂತರ ಅಹ್ಮದ್ ಷಾ ವಲಿ ಅವರು ರಾಜಧಾನಿಯನ್ನು ಬೀದರ್ ಗೆ ಸ್ಥಳಾಂತರಿಸಿದರು. ಆದರೂ ಕಲಬುರಗಿ ಕೋಟೆ ದಖ್ಖನ್‌ನ ಪ್ರಮುಖ ಸೈನಿಕ ಕೇಂದ್ರವಾಗಿ ಉಳಿಯಿತು.
ಬಹಮನಿ ಸಾಮ್ರಾಜ್ಯ ದುರ್ಬಲವಾದ ನಂತರ ದಖ್ಖನ್ ಪ್ರದೇಶದಲ್ಲಿ ಹಲವು ಯುದ್ಧಗಳು ನಡೆದವು. ಈ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯ ಈ ಕೋಟೆಯನ್ನು ಆಕ್ರಮಿಸಿ ಹಾನಿಗೊಳಪಡಿಸಿತು ಎಂಬ ದಾಖಲೆಗಳಿವೆ.
ಆದರೆ 1565ರಲ್ಲಿ ನಡೆದ ಪ್ರಸಿದ್ಧ ತಾಳಿಕೋಟೆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಸೋಲಿನ ನಂತರ ದಖ್ಖನ್ ಸುಲ್ತಾನರು ಮತ್ತೆ ಈ ಕೋಟೆಯನ್ನು ಪುನರ್ ನಿರ್ಮಿಸಿದರು. ವಿಶೇಷವಾಗಿ ಆದಿಲ್ ಶಾಹಿಗಳ ಆಡಳಿತದಲ್ಲಿ ಕೋಟೆಯ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಯಿತು.
ಗುಲ್ಬರ್ಗಾ ಕೋಟೆಯ ವಿಹಂಗಮ ನೋಟ
ಕೋಟೆಯ ವಾಸ್ತುಶಿಲ್ಪ ಮತ್ತು ರಕ್ಷಣಾ ವ್ಯವಸ್ಥೆ
ಸುಮಾರು 20 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಲಬುರಗಿ ಕೋಟೆ ಎರಡು ಸುತ್ತಿನ ಕೋಟೆ. ಹೊರಗಿನ ಗೋಡೆ ಹಾಗೂ ಒಳಗಿನ ಗೋಡೆ ಎಂಬ ಎರಡು ಭದ್ರತಾ ವಲಯಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಒಳಗಿನ ಗೋಡೆಯು ಹೊರಗಿನ ಗೋಡೆಗಿಂತ ಹೆಚ್ಚು ಎತ್ತರವಾಗಿದೆ.
ಕೋಟೆಯ ಗೋಡೆಗಳು ಸುಮಾರು 50 ಅಡಿ ದಪ್ಪವಾಗಿದ್ದು, ಭಾರಿ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿವೆ. ಸುಮಾರು 3 ಕಿಲೋಮೀಟರ್ ಉದ್ದವಿರುವ ಈ ಕೋಟೆಯನ್ನು ಸುತ್ತುವರಿದು 30 ಅಡಿ ಅಗಲ ಮತ್ತು ಸುಮಾರು 15 ಅಡಿ ಆಳದ ಕಂದಕವಿದೆ. ಯುದ್ಧ ಸಂದರ್ಭದಲ್ಲಿ ಶತ್ರುಗಳು ಮೊದಲು ಈ ಕಂದಕವನ್ನು ದಾಟಿ ನಂತರ ಕೋಟೆಯ ಗೋಡೆಗಳವರೆಗೆ ತಲುಪಬೇಕಾಗುತ್ತಿತ್ತು. ಈ ಕಾರಣದಿಂದಲೇ ಈ ಕೋಟೆಯನ್ನು ಅಭೇದ್ಯ ಕೋಟೆ ಎಂದು ಪರಿಗಣಿಸಲಾಗುತ್ತಿತ್ತು.
ಕೋಟೆಗೆ ಮುಖ್ಯವಾಗಿ ಎರಡು ದೊಡ್ಡ ಪ್ರವೇಶ ದ್ವಾರಗಳಿದ್ದು, ಅವುಗಳಲ್ಲಿ ಹಿಂದೂ ಹಾಗೂ ಇಸ್ಲಾಮಿಕ ವಾಸ್ತುಶೈಲಿಯ ಸಂಯೋಜನೆಯನ್ನು ನೋಡಬಹುದು. ಬೃಹತ್ ಗಾತ್ರದ ಮರದ ಬಾಗಿಲುಗಳು ಹಾಗೂ ಕಬ್ಬಿಣದ ಬಲವಾದ ಕವಾಟಗಳು ಕೋಟೆಯ ಭದ್ರತೆಯನ್ನು ಹೆಚ್ಚಿಸುತ್ತಿದ್ದವು.
ಕಲಬುರಗಿ ಕೋಟೆಯ ಇನ್ನೊಂದು ಪ್ರಮುಖ ವಿಶೇಷತೆ ಎಂದರೆ ಇಲ್ಲಿ ನಿರ್ಮಿಸಲಾದ ಗುಪ್ತ ದ್ವಾರಗಳು. ಇತಿಹಾಸದ ಪ್ರಕಾರ ಈ ಕೋಟೆಯಲ್ಲಿ ಸುಮಾರು ಆರು ರಹಸ್ಯ ದ್ವಾರಗಳಿದ್ದವು. ತುರ್ತು ಪರಿಸ್ಥಿತಿಯಲ್ಲಿ ಸೈನಿಕರು ಕೋಟೆಯೊಳಗೆ ಅಥವಾ ಹೊರಗೆ ಸುಲಭವಾಗಿ ಸಂಚರಿಸಲು ಈ ದ್ವಾರಗಳನ್ನು ಬಳಸಲಾಗುತ್ತಿತ್ತು.
ಕೋಟೆಯ ಸುತ್ತಮುತ್ತ ಒಟ್ಟು 16 ಕಾವಲು ಗೋಪುರಗಳು ನಿರ್ಮಿಸಲಾಗಿದೆ. ಈ ಗೋಪುರಗಳಿಂದ ಶತ್ರುಗಳ ಚಲನವಲನವನ್ನು ಸುಲಭವಾಗಿ ಗಮನಿಸಬಹುದಾಗಿತ್ತು. ಯುದ್ಧದ ಸಂದರ್ಭದಲ್ಲಿ ಸೈನಿಕರು ಇಲ್ಲಿ ನಿಂತು ತೋಪುಗಳು ಹಾಗೂ ಬಾಣಗಳಿಂದ ದಾಳಿ ನಡೆಸುತ್ತಿದ್ದರು.
ಗುಲ್ಬರ್ಗಾ ಕೋಟೆಯ ಬುರುಜ್ (ಕಾವಲು ಗೋಪುರ)
ಕೋಟೆಯ ಒಳಗಿನ ನಿರ್ಮಾಣಗಳು
ಕೋಟೆಯೊಳಗೆ ಹಲವು ಕಟ್ಟಡಗಳು ಹಾಗೂ ರಕ್ಷಣಾ ವ್ಯವಸ್ಥೆಗಳ ಅವಶೇಷಗಳನ್ನು ಇಂದು ಸಹ ನೋಡಬಹುದು. ರಾಜವಂಶದ ಸದಸ್ಯರು ಹಾಗೂ ಸೈನಿಕರಿಗೆ ನೀರು ಒದಗಿಸಲು ಇಲ್ಲಿ ಸುಮಾರು ಎಂಟು ಬಾವಿಗಳನ್ನು ನಿರ್ಮಿಸಲಾಗಿತ್ತು. ಇದು ಮಧ್ಯಯುಗೀನ ನಗರ ಯೋಜನೆಯ ಉತ್ತಮ ಉದಾಹರಣೆಯಾಗಿದೆ.
ಕೋಟೆಯೊಳಗೆ ಪ್ರವೇಶಿಸಿದ ನಂತರ ಕಾಣಿಸುವ ಪ್ರಮುಖ ಭಾಗವೇ ರಣಮಂಡಲ. ಬಹಮನಿ ಕಾಲದಲ್ಲಿ ಇದು ಸೈನಿಕರಿಗೆ ಯುದ್ಧ ತರಬೇತಿ ನೀಡುವ ಪ್ರಮುಖ ಕೇಂದ್ರವಾಗಿತ್ತು. ಯುದ್ಧದ ಮುನ್ನ ಹಾಗೂ ನಂತರ ಸುಲ್ತಾನರು, ಮಂತ್ರಿಗಳು ಮತ್ತು ಸೈನ್ಯಾಧಿಪತಿಗಳು ಇಲ್ಲಿ ರಹಸ್ಯ ಸಭೆಗಳನ್ನು ನಡೆಸುತ್ತಿದ್ದರು ಎಂದು ಇತಿಹಾಸದ ದಾಖಲೆಗಳು ಸೂಚಿಸುತ್ತವೆ.
ಇದೇ ರಣಮಂಡಲದಲ್ಲಿ ತೋಪುಗಳು, ಬಾಣಗಳು, ಖಡ್ಗಗಳು ಹಾಗೂ ಸಿಡಿಮದ್ದು ಸೇರಿದಂತೆ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗುತ್ತಿತ್ತು.
ಗುಲ್ಬರ್ಗಾ ಕೋಟೆಯ ಆವರಣದಲ್ಲಿರುವ ರಣಮಂಡಲ
ಕಲಬುರಗಿ ಕೋಟೆಯ ತೋಪುಗಳು
ಕಲಬುರಗಿ ಕೋಟೆ ತನ್ನ ಭಾರೀ ತೋಪುಗಳಿಗಾಗಿ ಪ್ರಸಿದ್ಧವಾಗಿದೆ. ಇತಿಹಾಸದ ಪ್ರಕಾರ ಈ ಕೋಟೆಯಲ್ಲಿ ಒಟ್ಟು 26 ತೋಪುಗಳಿದ್ದವು ಎಂದು ಹೇಳಲಾಗುತ್ತದೆ. ಆದರೆ ಇಂದಿಗೆ ಸುಮಾರು 17 ತೋಪುಗಳನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ.
ಈ ತೋಪುಗಳಲ್ಲಿ ಕೆಲವು 4 ಅಡಿಯಿಂದ 29 ಅಡಿವರೆಗೆ ಉದ್ದ ಹೊಂದಿವೆ. ಆಗಿನ ಕಾಲದಲ್ಲಿ ಇಷ್ಟು ಭಾರವಾದ ತೋಪುಗಳನ್ನು ಕೋಟೆಯ ಮೇಲೆ ಹೇಗೆ ತಂದರು ಎಂಬುದು ಹಲವರಿಗೆ ಕುತೂಹಲ ಉಂಟುಮಾಡುತ್ತದೆ. ಇತಿಹಾಸಕಾರರ ಪ್ರಕಾರ ತೋಪಿನ ಭಾಗಗಳನ್ನು ಪ್ರತ್ಯೇಕವಾಗಿ ತಯಾರಿಸಿ ಮೇಲಕ್ಕೆ ತಂದು ನಂತರ ಅವನ್ನು ಬೆಸುಗೆ ಹಾಕಲಾಗುತ್ತಿತ್ತು.
ಈ ಎಲ್ಲ ತೋಪುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಬಾರಹ ಗಜ ತೋಪು. ಒಂದು ಗಜ ಅಂದರೆ ಸುಮಾರು ಮೂರು ಅಡಿ. ಹೀಗಾಗಿ ಈ ತೋಪಿನ ಉದ್ದ ಸುಮಾರು 29 ಅಡಿಗಳಷ್ಟಿದೆ. ಇದರ ಸುತ್ತಳತೆ ಸುಮಾರು 7.6 ಅಡಿ ಹಾಗೂ ವ್ಯಾಸ ಸುಮಾರು 2 ಅಡಿ. ಸುಮಾರು 75 ಟನ್ ತೂಕ ಹೊಂದಿರುವ ಈ ತೋಪು ಒಂದು ಕಾಲದಲ್ಲಿ ಒಂದೂವರೆ ಕಿಲೋಮೀಟರ್ ದೂರದವರೆಗೆ ಗುಂಡು ಹಾರಿಸಬಲ್ಲ ಸಾಮರ್ಥ್ಯ ಹೊಂದಿತ್ತು ಎಂದು ಹೇಳಲಾಗುತ್ತದೆ.
ಗುಲ್ಬರ್ಗಾ ಕೋಟೆಯ ರಣಮಂಡಲದ ಮೇಲಿರುವ ತೋಪು
ಜಾಮಾ ಮಸೀದಿ – ವಾಸ್ತುಶಿಲ್ಪದ ಅದ್ಭುತ
ಕಲಬುರಗಿ ಕೋಟೆಯೊಳಗಿನ ಅತ್ಯಂತ ಪ್ರಸಿದ್ಧ ಕಟ್ಟಡವೆಂದರೆ ಜಾಮಾ ಮಸೀದಿ. ಈ ಮಸೀದಿ ಇಂಡೋ-ಪರ್ಶಿಯನ್ ವಾಸ್ತುಶೈಲಿಯ ಅದ್ಭುತ ಉದಾಹರಣೆಯಾಗಿದೆ. ಈ ಮಸೀದಿಯ ಅತ್ಯಂತ ವಿಶೇಷ ಅಂಶವೆಂದರೆ ಅದರ ಧ್ವನಿ ವ್ಯವಸ್ಥೆ. ಮಸೀದಿಯ ಒಂದು ಮೂಲೆಯಲ್ಲಿ ಮಾತನಾಡಿದರೆ ಮತ್ತೊಂದು ಮೂಲೆಯಲ್ಲಿಯೂ ಧ್ವನಿ ಸ್ಪಷ್ಟವಾಗಿ ಕೇಳುತ್ತದೆ. ಇದು ಆ ಕಾಲದ ವಾಸ್ತುಶಿಲ್ಪಿಗಳ ತಾಂತ್ರಿಕ ಸಾಮರ್ಥ್ಯವನ್ನು ತೋರಿಸುತ್ತದೆ.
ಕೋಟೆಯ ಒಳಗಡೆಯ ಗೋಡೆ ಮತ್ತು ಹೊರಗಿನ ಗೋಡೆ ನಡುವೆ ವಿಶಾಲವಾದ ಜಾಗವಿದೆ. ಇತಿಹಾಸಕಾರರ ಪ್ರಕಾರ ಈ ಪ್ರದೇಶವನ್ನು ಆನೆಗಳಿಗೆ ತರಬೇತಿ ನೀಡಲು ಬಳಸಲಾಗುತ್ತಿತ್ತು. ಯುದ್ಧದ ಸಮಯದಲ್ಲಿ ಆನೆಗಳು ದಖ್ಖನ್ ಸೇನೆಯ ಪ್ರಮುಖ ಭಾಗವಾಗಿದ್ದವು. ಹೀಗಾಗಿ ಕೋಟೆಯ ಸೈನಿಕ ವ್ಯವಸ್ಥೆಯಲ್ಲಿ ಆನೆಗಳಿಗೂ ಮಹತ್ವದ ಪಾತ್ರವಿತ್ತು.
ಆನೆಗಳಿಗೆ ತರಬೇತಿ ನೀಡುತ್ತಿದ್ದ ಜಾಗ
ಇಂದಿನ ಸ್ಥಿತಿ ಮತ್ತು ಸಂರಕ್ಷಣೆಯ ಅಗತ್ಯ
ಇಂದು ಕಲಬುರಗಿ ಕೋಟೆ ದಖ್ಖನ್ ಇತಿಹಾಸದ ಮಹತ್ವದ ಸ್ಮಾರಕವಾಗಿ ಉಳಿದಿದೆ. ಆದರೆ ಕೋಟೆಯ ಕೆಲವು ಭಾಗಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ಹಾಗೂ ಕೆಲವು ಪ್ರದೇಶಗಳು ಅತಿಕ್ರಮಣಕ್ಕೂ ಒಳಗಾಗಿವೆ.
ಈ ಮಹತ್ವದ ಸ್ಮಾರಕವನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಇಲಾಖೆ ಮತ್ತಷ್ಟು ಕ್ರಮ ಕೈಗೊಳ್ಳಬೇಕಾಗಿದೆ. ಸರಿಯಾದ ನಿರ್ವಹಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮಾಡಿದರೆ ಈ ಕೋಟೆ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿ ಬೆಳೆಯುವ ಸಾಧ್ಯತೆ ಇದೆ.
ಗುಲ್ಬರ್ಗಾ ಕೋಟೆಯ ಆವರಣದಲ್ಲಿರುವ ರಣಮಂಡಲ
ಸುಮಾರು ಎಂಟು ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹೊತ್ತಿರುವ ಕಲಬುರಗಿ ಕೋಟೆ ದಖ್ಖನ್‌ನ ರಾಜಕೀಯ, ಸೈನಿಕ ಮತ್ತು ವಾಸ್ತುಶಿಲ್ಪದ ವೈಭವವನ್ನು ಪ್ರತಿಬಿಂಬಿಸುತ್ತದೆ. ಬಹಮನಿ ಸಾಮ್ರಾಜ್ಯದ ಉದಯ, ವಿಜಯನಗರದ ಯುದ್ಧಗಳು, ಆದಿಲ್‌ಶಾಹಿಗಳ ಪುನರ್ ನಿರ್ಮಾಣ- ಇವೆಲ್ಲವೂ ಈ ಕೋಟೆಯ ಗೋಡೆಗಳಲ್ಲಿ ಅಚ್ಚಳಿಯದೆ ಉಳಿದಿವೆ.
ಕಲಬುರಗಿಗೆ ಭೇಟಿ ನೀಡುವ ಪ್ರವಾಸಿಗರು ಈ ಐತಿಹಾಸಿಕ ಕೋಟೆಯನ್ನು ತಪ್ಪದೇ ವೀಕ್ಷಿಸಬೇಕು. ಇದರ ಭವ್ಯ ಗೋಡೆಗಳು, ಬೃಹತ್ ತೋಪುಗಳು, ಜಾಮಾ ಮಸೀದಿ ಮತ್ತು ರಣಮಂಡಲ- ಇವುಗಳೆಲ್ಲ ಸೇರಿ ಮಧ್ಯಯುಗದ ದಕ್ಕನ್ ಇತಿಹಾಸದ ವೈಭವವನ್ನು ಮನಮೆಚ್ಚುವಂತೆ ಹೇಳುತ್ತವೆ. ಇತಿಹಾಸ ಪ್ರೇಮಿಗಳಿಗೆ ಕಲಬುರಗಿ ಕೋಟೆ ನಿಜಕ್ಕೂ ಒಂದು ಜೀವಂತ ಸಂಗ್ರಹಾಲಯವೇ ಸರಿ.
ವಿಜಯಪುರದ ಸಿದ್ದೇಶ್ವರ ದೇವಸ್ಥಾನ ವಿಜಯಪುರ- ಬಸವಾದಿ ಶರಣ ಪರಂಪರೆಗೆ ಜೀವ ತುಂಬಿದ ಪುಣ್ಯಭೂಮಿ. ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಇಲ್ಲಿ ನಡೆಯುವ ಸಿದ್ದೇಶ್ವರ ಜಾತ್ರೆ ಉತ್ತರ ಕರ್ನಾಟಕದ ಅತಿ ದೊಡ್ಡ ಧಾರ್ಮಿಕ- ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ನೂರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಜಾತ್ರೆಗೆ 'ಜಾತ್ರೆಗಳ ಜಾತ್ರೆ', 'ಜಾತ್ರೆಗಳ ತೊಟ್ಟಿಲು' ಎಂಬ ಹೆಗ್ಗಳಿಕೆ ದೊರೆತಿದೆ. ಮಕರ ಸಂಕ್ರಾಂತಿ ಹತ್ತಿರವಾಗುತ್ತಿದ್ದಂತೆ ವಿಜಯಪುರ ನಗರವೇ ಒಂದು ವಿಭಿನ್ನ ಸಂಭ್ರಮಕ್ಕೆ ತಯಾರಾಗುತ್ತದೆ. ಮುಸ್ಸಂಜೆಯ ಹೊತ್ತಿನಲ್ಲಿ ಸಿದ್ದೇಶ್ವರ ಮಂದಿರ ದೀಪಾಲಂಕಾರದಿಂದ ಹೊಳೆಯುವ ಕ್ಷಣದಿಂದಲೇ ಜಾತ್ರೆಗೆ ಅಧಿಕೃತ ಚಾಲನೆ ಸಿಗುತ್ತದೆ. ಆ ದಿನದಿಂದ ನಗರ ನಿದ್ರೆ ಮರೆತು ಉತ್ಸವದಲ್ಲಿ ತೊಡಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಿಂದಲೂ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಾರೆ. ಸಿದ್ದರಾಮನ ದರ್ಶನ, ಸಂಕಷ್ಟ ನಿವಾರಣೆ ಮತ್ತು ಜಾತ್ರೆಯ ವೈಭವ ನೋಡುವ ಆಸೆ ಪ್ರತಿಯೊಬ್ಬರಲ್ಲೂ ಜೀವಂತವಾಗಿರುತ್ತದೆ. ಸಿದ್ದೇಶ್ವರ ಮಂದಿರದ ಸುತ್ತಮುತ್ತ ನೂರಾರು ಅಂಗಡಿಗಳ ಸಾಲು, ಸಿಹಿತಿನಿಸುಗಳ ಪರಿಮಳ, ಮಕ್ಕಳ ಆಟಿಕೆಗಳು, ಮನೋರಂಜನಾ ಆಟಗಳು, ಸಂಗೀತ ಹಾಗೂ ನಾಟಕ ಪ್ರದರ್ಶನಗಳು- ಇವೆಲ್ಲ ಜಾತ್ರೆಯ ಸಂಭ್ರಮವನ್ನು ಇನ್ನಷ್ಟು ರಂಗೇರಿಸುತ್ತವೆ. ಜಾತ್ರೆಯ ವ್ಯವಸ್ಥೆ ಮತ್ತು ದನಗಳ ಜಾತ್ರ...
ರೈಲ್ವೆ ಮ್ಯೂಸಿಯಂನಲ್ಲಿರುವ ಮೀಟರ್ ಗೇಜ್ ಎಂಜಿನ್ ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ... ಎಂಬ ಹಾಡು ಕೇಳುತ್ತಿದ್ದಂತೆಯೇ ನಮ್ಮ ಬಾಲ್ಯದ ನೆನಪುಗಳಲ್ಲಿ ಉಗಿಬಂಡಿಯ ಚಿತ್ರ ಮೂಡುತ್ತದೆ. ರೈಲು ಎನ್ನುವುದು ಕೇವಲ ಸಾರಿಗೆ ಸಾಧನವಲ್ಲ; ಅದು ಇತಿಹಾಸ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಭಾರತದಲ್ಲಿ ರೈಲ್ವೆಯ ಪಯಣ ಆರಂಭವಾದದ್ದು 1853ರ ಏಪ್ರಿಲ್ 16ರಂದು. ಮುಂಬೈ ಮತ್ತು ಥಾಣೆ ನಡುವೆ ಮೊದಲ ರೈಲು ಸಂಚಾರ ಆರಂಭವಾದಾಗಿನಿಂದಲೇ ಭಾರತೀಯ ರೈಲ್ವೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಸುಮಾರು 170 ವರ್ಷಗಳ ಇತಿಹಾಸವಿರುವ ಭಾರತೀಯ ರೈಲ್ವೆ ಇಂದು ಬುಲೆಟ್ ಟ್ರೈನ್, ವೇಗದ ರೈಲುಗಳು ಮತ್ತು ಆಧುನಿಕ ತಂತ್ರಜ್ಞಾನಗಳತ್ತ ಸಾಗುತ್ತಿದೆ. ಈ ದೀರ್ಘ ಇತಿಹಾಸವನ್ನು ಹತ್ತಿರದಿಂದ ತಿಳಿದುಕೊಳ್ಳಬೇಕೆಂದರೆ ನೀವು ಮೈಸೂರಿನಲ್ಲಿರುವ ರೈಲ್ವೆ ವಸ್ತುಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ನೀಡಬೇಕು. ಮ್ಯೂಸಿಯಂನಲ್ಲಿರುವ ಹಳೆಯ ರೈಲುಗಳು ದೇಶದ ಎರಡನೇ ರೈಲ್ವೆ ಮ್ಯೂಸಿಯಂ ಮೈಸೂರಿನ ರೈಲ್ವೆ ನಿಲ್ದಾಣದ ಸಮೀಪ, ಕೆಆರ್ಎಸ್ ರಸ್ತೆಯಲ್ಲಿರುವ ರೈಲ್ವೆ ಮ್ಯೂಸಿಯಂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಇದು ಭಾರತದ ಎರಡನೇ ರೈಲ್ವೆ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೊದಲನೆಯದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರೈಲ್ವೆ ಮ್ಯೂಸಿಯಂ. 1979ರಲ್ಲಿ ದಕ್ಷಿಣ ರೈಲ್ವೆಯ ವಿಭಾಗೀಯ ಮ್ಯಾನೇಜರ್ ಆಗಿದ್ದ ಪಿ.ಎಂ.ಜೋಸೆಫ್ ಅ...
ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ವಿಹಂಗಮ ನೋಟ ಸುತ್ತಲೂ ಹಸಿರು ಹೊದಿಕೆಯಂತೆ ಹರಡಿಕೊಂಡಿರುವ ಪ್ರಕೃತಿ, ಕೈಗೆ ತಾಕುವಷ್ಟು ಹತ್ತಿರದಲ್ಲಿ ಹರಿಯುವ ಮೋಡಗಳು, ತಂಪಾದ ಗಾಳಿ, ಮತ್ತು ಬೆಟ್ಟದ ತುದಿಯಲ್ಲಿ ಸಿಗುವ ಆತ್ಮೀಯ ಶಾಂತಿ- ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ಅನುಭವಿಸಬೇಕೆಂದರೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಬೆಟ್ಟ ನಿಮ್ಮ ಮುಂದಿರುವ ಅದ್ಭುತ ತಾಣ. ಇದು ಕೇವಲ ಒಂದು ಪ್ರವಾಸಿ ಸ್ಥಳವಲ್ಲ; ಇದು ಪ್ರಕೃತಿ, ಸಾಹಸ ಮತ್ತು ಭಕ್ತಿಯ ಸುಂದರ ಸಂಗಮವಾಗಿದೆ. ಚಾರಣಪ್ರಿಯರಿಗೆ ಇದು ಒಂದು ರೋಚಕ ಅನುಭವವಾಗಿದ್ದರೆ, ಭಕ್ತರಿಗೆ ಇದು ಪವಿತ್ರ ಕ್ಷೇತ್ರ, ಮತ್ತು ಪ್ರಕೃತಿ ಪ್ರಿಯರಿಗೆ ಇದು ಮನಸ್ಸಿಗೆ ಶಾಂತಿ ನೀಡುವ ಸ್ವರ್ಗೀಯ ಸ್ಥಳವಾಗಿದೆ. ಸ್ಥಳ ಮತ್ತು ಪ್ರಕೃತಿ ಸೌಂದರ್ಯ ಸಿಡಿಲು ಮಲ್ಲಿಕಾರ್ಜುನ ಬೆಟ್ಟವು ಮೈಸೂರಿನಿಂದ ಸುಮಾರು 70–80 ಕಿಲೋಮೀಟರ್ ದೂರದಲ್ಲಿದ್ದು, ಸುಮಾರು 1200–1300 ಅಡಿ ಎತ್ತರದಲ್ಲಿದೆ. ಈ ಬೆಟ್ಟದ ಸುತ್ತಲೂ ಹಸಿರು ಕಾಡು, ಕಲ್ಲಿನ ದಾರಿಗಳು ಮತ್ತು ಗ್ರಾಮೀಣ ಸೊಬಗು ತುಂಬಿಕೊಂಡಿದ್ದು, ವರ್ಷಪೂರ್ತಿ ತಂಪಾದ ವಾತಾವರಣವನ್ನು ಹೊಂದಿದೆ. ಮಳೆಗಾಲದಲ್ಲಿ ಈ ಪ್ರದೇಶ ಸಂಪೂರ್ಣ ಹಸಿರು ಹೊದಿಕೆಯಲ್ಲಿ ಕಂಗೊಳಿಸುತ್ತದೆ. ಚಳಿಗಾಲದಲ್ಲಿ ವಾತಾವರಣ ಚಾರಣಕ್ಕೆ ಅನುಕೂಲಕರವಾಗಿದ್ದು, ಬೇಸಿಗೆಯಲ್ಲಿ ಸ್ವಲ್ಪ ಬಿಸಿಲು ಹೆಚ್ಚಾಗಬಹುದು. ಆದರೂ, ಬೆಳಗಿನ ಸಮಯದಲ್ಲಿ ಭೇಟಿ ನೀಡಿದರೆ ಉತ್ತ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ