ನಾಡ ಸಂಚಾರಿ- ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಮರೆತುಹೋದ ಕತೆಗಳನ್ನು ಸಂಶೋಧನಾತ್ಮಕವಾಗಿ ದಾಖಲಿಸುವ ಡಿಜಿಟಲ್ ವೇದಿಕೆ. ಇಲ್ಲಿ ಪ್ರಕಟವಾಗುವ ಲೇಖನಗಳು ವಿಶ್ವಾಸಾರ್ಹ ಇತಿಹಾಸ ಮೂಲಗಳು, ಪುರಾವೆಗಳು ಮತ್ತು ಅಧ್ಯಯನಗಳ ಆಧಾರದ ಮೇಲೆ ರಚಿಸಲಾಗುತ್ತದೆ.
'ಕರ್ನಾಟಕದ ರಾಬಿನ್ ಹುಡ್' ವೀರ ಸಿಂಧೂರ ಲಕ್ಷ್ಮಣ
ಲಿಂಕ್ ಪಡೆಯಿರಿ
Facebook
X
Pinterest
ಇಮೇಲ್
ಇತರ ಅಪ್ಲಿಕೇಶನ್ಗಳು
ವೀರ ಸಿಂಧೂರ ಲಕ್ಷ್ಮಣ (ಕಾಲ್ಪನಿಕ ಚಿತ್ರ)
ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಗಮನಿಸಿದರೆ, ಸಾವಿರಾರು ಕ್ರಾಂತಿಕಾರಿಗಳ ರಕ್ತಸಿಕ್ತ ಹೋರಾಟಗಳು ನಮ್ಮ ಕಣ್ಣೆದುರು ಜೀವಂತವಾಗಿ ಮೂಡುತ್ತವೆ. ಸಂಗೊಳ್ಳಿ ರಾಯಣ್ಣ, ಮೈಲಾರ ಮಹಾದೇವಪ್ಪ, ಸುರಪುರ ವೆಂಕಟಪ್ಪ ನಾಯಕ, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಮೊದಲಾದ ಅನೇಕ ವೀರರು ತಮ್ಮ ಯುವ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಇಂತಹ ಮಹನೀಯರ ಪವಿತ್ರ ಸಾಲಿನಲ್ಲಿ ಮತ್ತೊಂದು ಹೆಸರಾಗಿ ಹೊಳೆಯುವವರು ವೀರ ಸಿಂಧೂರ ಲಕ್ಷ್ಮಣ.
ವೀರ ಸಿಂಧೂರ ಲಕ್ಷ್ಮಣನ ಸಮಾಧಿ
ಇಂದಿಗೆ ಸುಮಾರು 103 ವರ್ಷಗಳ ಹಿಂದೆ, ಬೀಳಗಿ ಸಮೀಪದ ಕಪ್ಪರ ಪಡಿಯಮ್ಮನ ಗುಡ್ಡದಲ್ಲಿ ಬ್ರಿಟಿಷರು ಸಿಂಧೂರ ಲಕ್ಷ್ಮಣನನ್ನು ಗುಂಡಿಕ್ಕಿ ಕೊಂದರು. ಆಗ ಅವನಿಗೆ ಕೇವಲ 24 ವರ್ಷ ವಯಸ್ಸು. ಬ್ರಿಟಿಷ್ ಆಡಳಿತ ಮತ್ತು ಜಮೀನ್ದಾರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲಕ್ಷ್ಮಣನ ಸಾವು ಈ ಭಾಗದ ಬಡವರು ಮತ್ತು ಶೋಷಿತರನ್ನು ತೀವ್ರ ದುಃಖಕ್ಕೆ ತಳ್ಳಿತು. ಶ್ರೀಮಂತರಿಂದ ಸಂಪತ್ತನ್ನು ಪಡೆದು ಅದನ್ನು ಬಡವರಿಗೆ ಹಂಚುತ್ತಿದ್ದ ಕಾರಣದಿಂದ ಅವನನ್ನು 'ಕರ್ನಾಟಕದ ರಾಬಿನ್ ಹುಡ್' ಎಂದೂ ಕರೆಯಲಾಗುತ್ತಿತ್ತು. ಇತಿಹಾಸದ ಅಧಿಕೃತ ಪುಟಗಳು ಅವನ ಹೆಸರನ್ನು ಹೆಚ್ಚು ನೆನಪಿಸದಿದ್ದರೂ, ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಜನರು ಅವನನ್ನು ಮರೆಯಲೇ ಇಲ್ಲ. ಅವನ ಸಾಹಸಗಳನ್ನು ಜನರು ಲಾವಣಿಗಳಲ್ಲಿ, ಜಾನಪದ ಹಾಡುಗಳಲ್ಲಿ ಮತ್ತು ನಾಟಕಗಳಲ್ಲಿ ಇಂದಿಗೂ ಹಾಡುತ್ತಲೇ ಇದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಸಿಂಧೂರ ಎಂಬ ಸಣ್ಣ ಹಳ್ಳಿಯಲ್ಲಿ ಲಕ್ಷ್ಮಣ ಜನಿಸಿದರು. ಈ ಹಳ್ಳಿಯಲ್ಲಿ ಕನ್ನಡ ಮಾತನಾಡುವ ಜನರೇ ಹೆಚ್ಚು. ಜಮೀನ್ದಾರ ಭೀಮನಗೌಡನ ಬಳಿ ವಾಲಿಕಾರನಾಗಿ ಕೆಲಸ ಮಾಡುತ್ತಿದ್ದ ಸಾಬಣ್ಣ ಮತ್ತು ನರಸವ್ವ ದಂಪತಿಗೆ ಜನಿಸಿದ ಮಗನೇ ಈ ವೀರ ಲಕ್ಷ್ಮಣ. ಬೇಡರ ಸಮುದಾಯಕ್ಕೆ ಸೇರಿದ ಲಕ್ಷ್ಮಣ ಬಾಲ್ಯದಿಂದಲೇ ಧೈರ್ಯ ಮತ್ತು ಸಾಹಸಕ್ಕೆ ಹೆಸರುವಾಸಿಯಾಗಿದ್ದನು ಎಂದು ಜನಪದಗಳು ವರ್ಣಿಸುತ್ತವೆ. ಸುಮಾರು ಏಳು ಅಡಿ ಎತ್ತರದ ಆಜಾನುಬಾಹು ವ್ಯಕ್ತಿಯಾಗಿದ್ದ ಅವನು ಅನ್ಯಾಯ ಕಂಡಾಗ ತಕ್ಷಣ ಸಿಡಿದೇಳುವ ಸ್ವಭಾವ ಹೊಂದಿದ್ದ.
ತನ್ನ ತಂದೆ ತಾಯಿ ಜೊತೆ ಬಾಲಕ ಲಕ್ಷ್ಮಣ (ಕಾಲ್ಪನಿಕ ಚಿತ್ರ)
ಹದಿನೆಂಟರ ಹರೆಯದಲ್ಲಿ ಅವನಿಗೆ ತನ್ನ ಅಕ್ಕನ ಮಗಳು ಚಂದ್ರವ್ವಳೊಂದಿಗೆ ವಿವಾಹ ನಡೆಯಿತು. ತಂದೆಯ ಮರಣದ ನಂತರ ವಾಲಿಕಾರನ ಕೆಲಸವೂ ಲಕ್ಷ್ಮಣನ ಪಾಲಿಗೆ ಬಂತು. ಸರ್ಕಾರ ನೀಡಿದ್ದ ತುಂಡು ಭೂಮಿಯಲ್ಲಿ ತಾಯಿ ಮತ್ತು ಹೆಂಡತಿಯೊಂದಿಗೆ ಕೃಷಿ ಮಾಡಿಕೊಂಡು ಸಾಮಾನ್ಯ ಬದುಕು ಸಾಗಿಸುತ್ತಿದ್ದನು. ಆದರೆ ಆ ಕಾಲದಲ್ಲಿ ಬಂದ ಭೀಕರ ಬರಗಾಲ ಅವನ ಜೀವನವನ್ನು ಸಂಪೂರ್ಣವಾಗಿ ಬದಲಿಸಿತು.
ಬೀಳಗಿಯಲ್ಲಿರುವ ಸಿಂಧೂರ ಲಕ್ಷ್ಮಣ ಕಟ್ಟಿ
ಒಂದು ವರ್ಷ ಮಳೆ ಬರದೆ ಬೆಳೆಗಳು ನಾಶವಾದವು. ಕೆರೆಗಳು ಮತ್ತು ಬಾವಿಗಳು ಬತ್ತಿ ಜನರು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಕೂಲಿ ಸಿಗದೆ, ಊಟ ಸಿಗದೆ ಜನರು ಉಪವಾಸದ ಪರಿಸ್ಥಿತಿಗೆ ತಲುಪಿದರು. ಇಂತಹ ಸಂಕಷ್ಟದ ವೇಳೆಯಲ್ಲಿಯೂ ಜತ್ ಸಂಸ್ಥಾನ ಮತ್ತು ಬ್ರಿಟಿಷ್ ಆಡಳಿತ ಜನರಿಂದ ಕಂದಾಯವನ್ನು ಕಠಿಣವಾಗಿ ವಸೂಲಿ ಮಾಡುತ್ತಿತ್ತು. ತೆರಿಗೆ ಕಟ್ಟಲು ಸಾಧ್ಯವಾಗದ ರೈತರ ಮನೆ, ಭೂಮಿಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಅಸಹಾಯಕ ಜನರ ಆಸ್ತಿ ಮತ್ತು ಒಡವೆಗಳು ಶ್ರೀಮಂತರ ಪಾಲಾಗುತ್ತಿದವು. ಊರಿನ ಗೌಡರು ಮತ್ತು ಕುಲಕರಣಿಗಳು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು.
ಜೈಲಿನಿಂದ ತಪ್ಪಿಸಿಕೊಳ್ಳುತ್ತಿರುವ ಲಕ್ಷ್ಮಣ ಮತ್ತು ಸಂಗಡಿಗರು (ಕಾಲ್ಪನಿಕ)
ತನ್ನ ಜನರ ಈ ದುಸ್ಥಿತಿಯನ್ನು ಕಂಡ ಲಕ್ಷ್ಮಣ ಮನಸ್ಸಿನಲ್ಲಿ ಬಂಡಾಯದ ಕಿಡಿ ಹೊತ್ತಿತು. ಇದೇ ಸಮಯದಲ್ಲಿ ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಗೆ ಕರೆ ನೀಡಿದ್ದರು. ಈ ಚಳವಳಿಯ ಪ್ರಭಾವವೂ ಲಕ್ಷ್ಮಣನ ಮೇಲೆ ಬಿತ್ತು. ಊರಿನಲ್ಲಿ ವಾಲಿಕಾರನಾಗಿದ್ದ ಅವನು ಮನೆ ಮನೆಗೆ ತೆರಳಿ “ಕಂದಾಯ ಕಟ್ಟಬೇಡಿ, ಅನ್ಯಾಯದ ವಿರುದ್ಧ ನಿಲ್ಲಿ” ಎಂದು ಜನರಿಗೆ ಕರೆ ನೀಡಲು ಆರಂಭಿಸಿದ.
ಸಿಂಧೂರ ಲಕ್ಷ್ಮಣ ಮತ್ತು ಸಂಗಡಿಗರು (ಕಾಲ್ಪನಿಕ ಚಿತ್ರ)
ಇದರಿಂದ ಅವನು ಜಮೀನ್ದಾರರ ಕೆಂಗಣ್ಣಿಗೆ ಗುರಿಯಾದ. ಇದೇ ಸಂದರ್ಭದಲ್ಲಿ ನಡೆದ ಒಂದು ಘಟನೆ ಅವನ ಬದುಕಿಗೆ ತಿರುವು ನೀಡಿತು. ಒಂದು ಮಧ್ಯರಾತ್ರಿ ಲಕ್ಷ್ಮಣನ ಮನೆಗೆ ಅವನ ಸೋದರಳಿಯರಾದ ನರಸಪ್ಪ, ಸಾಬು ಮತ್ತು ಗೋಪಾಲ ಬಂದರು. ಬರಗಾಲದಿಂದ ಕಂಗೆಟ್ಟಿದ್ದ ಅವರು ಖಾನಾಪುರದ ಸಾಹುಕಾರನ ಮನೆ ದಾಳಿ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಶ್ರಯಕ್ಕಾಗಿ ಬಂದಿದ್ದರು. ಆರಂಭದಲ್ಲಿ ಲಕ್ಷ್ಮಣ ಅವರನ್ನು ಹೊರಹಾಕಿದ. ಆದರೆ ಅವನ ಪತ್ನಿ ಚಂದ್ರವ್ವ ಬಡವರ ಸಂಕಷ್ಟವನ್ನು ಉಲ್ಲೇಖಿಸಿ ಶ್ರೀಮಂತರ ಅನ್ಯಾಯದ ವಿರುದ್ಧ ನಿಲ್ಲಬೇಕೆಂದು ಹೇಳಿದಳು. ಆ ಮಾತುಗಳು ಲಕ್ಷ್ಮಣನ ಮನಸ್ಸಿನಲ್ಲಿ ಆಳವಾದ ಚಿಂತನೆ ಹುಟ್ಟಿಸಿತು.
ಆಸ್ತಿ ಪತ್ರಗಳನ್ನು ಬಡವರಿಗೆ ಮರಳಿಸುತ್ತಿರುವ ಲಕ್ಷ್ಮಣ (ಕಾಲ್ಪನಿಕ ಚಿತ್ರ)
ಆ ರಾತ್ರಿ ಯಿಡೀ ಅವನು ನಿದ್ರೆ ಮಾಡಲಿಲ್ಲ. ಕೊನೆಗೆ ಬೆಳಗಾಗುವಷ್ಟರಲ್ಲಿ ಶ್ರೀಮಂತರ ಸಂಪತ್ತನ್ನು ಪಡೆದು ಬಡವರಿಗೆ ಸಹಾಯ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದನು. ತನ್ನ ಅಳಿಯರನ್ನು ಸೇರಿಸಿಕೊಂಡು ಒಂದು ತಂಡವನ್ನು ರಚಿಸಿದನು. ಮೊದಲಿಗೆ ಬೀಳೂರಿನ ಕುಲಕರ್ಣಿಯ ಅಂಗಡಿಗೆ ದಾಳಿ ನಡೆಸಿ ಅಲ್ಲಿನ ವಸ್ತುಗಳನ್ನು ಬಡವರಿಗೆ ಹಂಚಿದನು. ಜನರು ಅಡವಿಟ್ಟಿದ್ದ ಹೊಲ ಮತ್ತು ಮನೆ ಪತ್ರಗಳನ್ನು ನಾಶಮಾಡಿ ಅವರಿಗೆ ನ್ಯಾಯ ಒದಗಿಸಿದನು.
ಬೀಳಗಿ ಹತ್ತಿರದಲ್ಲಿರುವ ಕಪ್ಪರ ಪಡಿಯಮ್ಮನ ಗುಡ್ಡ
ಇಲ್ಲಿಂದ ಆರಂಭವಾದ ಲಕ್ಷ್ಮಣನ ಸಾಹಸಗಳು ನಿಧಾನವಾಗಿ ದೊಡ್ಡ ಚಳವಳಿಯಾಗಿ ರೂಪುಗೊಂಡವು. ಅವನ ತಂಡ ಊರು ಊರು ಸಂಚರಿಸಿ ಶ್ರೀಮಂತರ ಮನೆಗಳ ಮೇಲೆ ದಾಳಿ ನಡೆಸುತ್ತಿತ್ತು. ಬಡವರ ಹೊಲ, ಮನೆಗಳನ್ನು ಮರಳಿ ಕೊಡಿಸುತ್ತಿತ್ತು. ಜನರು ಅವನಿಗೆ ಅನ್ನ, ಆಶ್ರಯ ಮತ್ತು ಮಾಹಿತಿ ನೀಡಿ ಸಹಾಯ ಮಾಡುತ್ತಿದ್ದರು. ಲಕ್ಷ್ಮಣನ ಹೆಸರು ಕೇಳಿದರೆ ಜನರಲ್ಲಿ ಧೈರ್ಯ ಮೂಡುತ್ತಿತ್ತು.
ಲಕ್ಷ್ಮಣ ಬಂಧನಕ್ಕೆ ಆದೇಶ ಹೊರಡಿಸಿದ ಬ್ರಿಟಿಷ್ ಅಧಿಕಾರಿ (ಕಾಲ್ಪನಿಕ)
ಈ ಘಟನೆಗಳಿಂದ ಜಮೀನ್ದಾರರು ಭಯಗೊಂಡರು. ಲಕ್ಷ್ಮಣನನ್ನು ಹಿಡಿಯಲು ಬ್ರಿಟಿಷ್ ಅಧಿಕಾರಿಗಳು ಶೋಧ ಆರಂಭಿಸಿದರು. ಅಥಣಿ, ಜಮಖಂಡಿ, ಬಬಲೇಶ್ವರ, ಕಂಕಣವಾಡಿ ಮುಂತಾದ ಪ್ರದೇಶಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದರು. ಆದರೆ ಲಕ್ಷ್ಮಣನ ತಂಡ ಅವರನ್ನು ತಪ್ಪಿಸಿಕೊಂಡೇ ಇತ್ತು.
ಗುಡ್ಡ ಗಾಡುಗಳಲ್ಲಿ ಅಡಗಿ ಕುಳಿತ ಲಕ್ಷ್ಮಣ ಮತ್ತು ಸಂಗಡಿಗರು (ಕಾಲ್ಪನಿಕ)
ಒಂದು ವೇಳೆ ಅವನು ತನ್ನ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಲು ಸಿಂಧೂರಿಗೆ ಬಂದಾಗ ಪೊಲೀಸರು ಅವನನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ದರು. ಆದರೆ ಅಲ್ಲಿಂದಲೂ ಅವನು ತಪ್ಪಿಸಿಕೊಂಡು ಮತ್ತೆ ತನ್ನ ತಂಡದೊಂದಿಗೆ ಹೋರಾಟ ಮುಂದುವರೆಸಿದನು.
ಊಟ ಮಾಡುತ್ತಿರುವಾಗ ಗುಂಡು ಹಾರಿಸುತ್ತಿರುವ ದ್ರೋಹಿಗಳು (ಕಾಲ್ಪನಿಕ)
ಅಂತಿಮವಾಗಿ ಬ್ರಿಟಿಷರ ಒತ್ತಡದಿಂದ ಕೆಲವು ಸ್ಥಳೀಯರ ದ್ರೋಹದಿಂದ ಲಕ್ಷ್ಮಣ ಸಿಕ್ಕಿಬಿದ್ದನು. 1922ರ ಜುಲೈ 15ರಂದು ಬೀಳಗಿ ಸಮೀಪದ ಕಪ್ಪರ ಪಡಿಯಮ್ಮನ ಗುಡ್ಡದಲ್ಲಿ ಅವನ ಮೇಲೆ ಗುಂಡು ಹಾರಿಸಲಾಯಿತು. ರಕ್ತದ ಮಡುವಿನಲ್ಲಿ ಬಿದ್ದ ಅವನ ದೇಹವನ್ನು ನಂತರ ಪೊಲೀಸರು ಬೀಳಗಿಗೆ ತೆಗೆದುಕೊಂಡು ಬಂದರು ಮತ್ತು ಅಲ್ಲಿ ಸಮಾಧಿ ಮಾಡಲಾಯಿತು.
ಸಿಂಧೂರ ಲಕ್ಷ್ಮಣನ ಕೊನೆಯ ಚಿತ್ರ
ಸಿಂಧೂರ ಲಕ್ಷ್ಮಣನ ಸಾವಿನ ಸುದ್ದಿ ತಿಳಿದಾಗ ಸಾವಿರಾರು ಜನರು ಅವನನ್ನು ನೋಡಲು ಸೇರಿದರು. ಬ್ರಿಟಿಷರು ತೆಗೆದ ಅವನ ಒಂದು ಚಿತ್ರ ಮಾತ್ರ ಇಂದಿಗೂ ಅವನ ಏಕೈಕ ದೃಶ್ಯ ಸಾಕ್ಷಿಯಾಗಿ ಉಳಿದಿದೆ.
ಇಂಗ್ಲೀಷ್ ಆಡಳಿತದ ದಾಖಲೆಗಳಲ್ಲಿ ಅವನ ಹೆಸರು ದರೋಡೆಕೋರನೆಂದು ದಾಖಲಾದರೂ, ಜನರ ಮನಸ್ಸಿನಲ್ಲಿ ಅವನು ಬಡವರಿಗಾಗಿ ಹೋರಾಡಿದ ವೀರನಾಗಿಯೇ ಉಳಿದಿದ್ದಾನೆ. ಅವನ ಸಾಹಸಗಳನ್ನು ಜನರು ಇಂದಿಗೂ ಜಾನಪದ ಹಾಡುಗಳಲ್ಲಿ ಮತ್ತು ಲಾವಣಿಗಳಲ್ಲಿ ಹಾಡುತ್ತಾರೆ.
ಬೀಳಗಿ ಪಟ್ಟಣದಲ್ಲಿರುವ ಸಿಂಧೂರ ಲಕ್ಷ್ಮಣನ ಸ್ಮಾರಕ ಭವನ
ಬೀಳಗಿಯಲ್ಲಿ ಇರುವ ಅವನ ಸಮಾಧಿ ಇಂದು ಕೂಡಾ ಆ ಶತಮಾನ ಹಿಂದಿನ ಹೋರಾಟದ ನೆನಪನ್ನು ಉಳಿಸಿಕೊಂಡಿದೆ. ಹಲವಾರು ವರ್ಷಗಳ ಬಳಿಕ ಸ್ಥಳೀಯರ ಪ್ರಯತ್ನದಿಂದ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಜನರ ಹೃದಯದಲ್ಲಿ ಜೀವಂತವಾಗಿರುವ ಈ ವೀರನ ಕಥೆ ಉತ್ತರ ಕರ್ನಾಟಕದ ಇತಿಹಾಸದಲ್ಲಿ ಅಳಿಯದ ಅಧ್ಯಾಯವಾಗಿದೆ.
ವಿಜಯಪುರದ ಸಿದ್ದೇಶ್ವರ ದೇವಸ್ಥಾನ ವಿಜಯಪುರ- ಬಸವಾದಿ ಶರಣ ಪರಂಪರೆಗೆ ಜೀವ ತುಂಬಿದ ಪುಣ್ಯಭೂಮಿ. ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಇಲ್ಲಿ ನಡೆಯುವ ಸಿದ್ದೇಶ್ವರ ಜಾತ್ರೆ ಉತ್ತರ ಕರ್ನಾಟಕದ ಅತಿ ದೊಡ್ಡ ಧಾರ್ಮಿಕ- ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ನೂರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಜಾತ್ರೆಗೆ 'ಜಾತ್ರೆಗಳ ಜಾತ್ರೆ', 'ಜಾತ್ರೆಗಳ ತೊಟ್ಟಿಲು' ಎಂಬ ಹೆಗ್ಗಳಿಕೆ ದೊರೆತಿದೆ. ಮಕರ ಸಂಕ್ರಾಂತಿ ಹತ್ತಿರವಾಗುತ್ತಿದ್ದಂತೆ ವಿಜಯಪುರ ನಗರವೇ ಒಂದು ವಿಭಿನ್ನ ಸಂಭ್ರಮಕ್ಕೆ ತಯಾರಾಗುತ್ತದೆ. ಮುಸ್ಸಂಜೆಯ ಹೊತ್ತಿನಲ್ಲಿ ಸಿದ್ದೇಶ್ವರ ಮಂದಿರ ದೀಪಾಲಂಕಾರದಿಂದ ಹೊಳೆಯುವ ಕ್ಷಣದಿಂದಲೇ ಜಾತ್ರೆಗೆ ಅಧಿಕೃತ ಚಾಲನೆ ಸಿಗುತ್ತದೆ. ಆ ದಿನದಿಂದ ನಗರ ನಿದ್ರೆ ಮರೆತು ಉತ್ಸವದಲ್ಲಿ ತೊಡಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಿಂದಲೂ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಾರೆ. ಸಿದ್ದರಾಮನ ದರ್ಶನ, ಸಂಕಷ್ಟ ನಿವಾರಣೆ ಮತ್ತು ಜಾತ್ರೆಯ ವೈಭವ ನೋಡುವ ಆಸೆ ಪ್ರತಿಯೊಬ್ಬರಲ್ಲೂ ಜೀವಂತವಾಗಿರುತ್ತದೆ. ಸಿದ್ದೇಶ್ವರ ಮಂದಿರದ ಸುತ್ತಮುತ್ತ ನೂರಾರು ಅಂಗಡಿಗಳ ಸಾಲು, ಸಿಹಿತಿನಿಸುಗಳ ಪರಿಮಳ, ಮಕ್ಕಳ ಆಟಿಕೆಗಳು, ಮನೋರಂಜನಾ ಆಟಗಳು, ಸಂಗೀತ ಹಾಗೂ ನಾಟಕ ಪ್ರದರ್ಶನಗಳು- ಇವೆಲ್ಲ ಜಾತ್ರೆಯ ಸಂಭ್ರಮವನ್ನು ಇನ್ನಷ್ಟು ರಂಗೇರಿಸುತ್ತವೆ. ಜಾತ್ರೆಯ ವ್ಯವಸ್ಥೆ ಮತ್ತು ದನಗಳ ಜಾತ್ರ...
ರೈಲ್ವೆ ಮ್ಯೂಸಿಯಂನಲ್ಲಿರುವ ಮೀಟರ್ ಗೇಜ್ ಎಂಜಿನ್ ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ... ಎಂಬ ಹಾಡು ಕೇಳುತ್ತಿದ್ದಂತೆಯೇ ನಮ್ಮ ಬಾಲ್ಯದ ನೆನಪುಗಳಲ್ಲಿ ಉಗಿಬಂಡಿಯ ಚಿತ್ರ ಮೂಡುತ್ತದೆ. ರೈಲು ಎನ್ನುವುದು ಕೇವಲ ಸಾರಿಗೆ ಸಾಧನವಲ್ಲ; ಅದು ಇತಿಹಾಸ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಭಾರತದಲ್ಲಿ ರೈಲ್ವೆಯ ಪಯಣ ಆರಂಭವಾದದ್ದು 1853ರ ಏಪ್ರಿಲ್ 16ರಂದು. ಮುಂಬೈ ಮತ್ತು ಥಾಣೆ ನಡುವೆ ಮೊದಲ ರೈಲು ಸಂಚಾರ ಆರಂಭವಾದಾಗಿನಿಂದಲೇ ಭಾರತೀಯ ರೈಲ್ವೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಸುಮಾರು 170 ವರ್ಷಗಳ ಇತಿಹಾಸವಿರುವ ಭಾರತೀಯ ರೈಲ್ವೆ ಇಂದು ಬುಲೆಟ್ ಟ್ರೈನ್, ವೇಗದ ರೈಲುಗಳು ಮತ್ತು ಆಧುನಿಕ ತಂತ್ರಜ್ಞಾನಗಳತ್ತ ಸಾಗುತ್ತಿದೆ. ಈ ದೀರ್ಘ ಇತಿಹಾಸವನ್ನು ಹತ್ತಿರದಿಂದ ತಿಳಿದುಕೊಳ್ಳಬೇಕೆಂದರೆ ನೀವು ಮೈಸೂರಿನಲ್ಲಿರುವ ರೈಲ್ವೆ ವಸ್ತುಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ನೀಡಬೇಕು. ಮ್ಯೂಸಿಯಂನಲ್ಲಿರುವ ಹಳೆಯ ರೈಲುಗಳು ದೇಶದ ಎರಡನೇ ರೈಲ್ವೆ ಮ್ಯೂಸಿಯಂ ಮೈಸೂರಿನ ರೈಲ್ವೆ ನಿಲ್ದಾಣದ ಸಮೀಪ, ಕೆಆರ್ಎಸ್ ರಸ್ತೆಯಲ್ಲಿರುವ ರೈಲ್ವೆ ಮ್ಯೂಸಿಯಂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಇದು ಭಾರತದ ಎರಡನೇ ರೈಲ್ವೆ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೊದಲನೆಯದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರೈಲ್ವೆ ಮ್ಯೂಸಿಯಂ. 1979ರಲ್ಲಿ ದಕ್ಷಿಣ ರೈಲ್ವೆಯ ವಿಭಾಗೀಯ ಮ್ಯಾನೇಜರ್ ಆಗಿದ್ದ ಪಿ.ಎಂ.ಜೋಸೆಫ್ ಅ...
ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ವಿಹಂಗಮ ನೋಟ ಸುತ್ತಲೂ ಹಸಿರು ಹೊದಿಕೆಯಂತೆ ಹರಡಿಕೊಂಡಿರುವ ಪ್ರಕೃತಿ, ಕೈಗೆ ತಾಕುವಷ್ಟು ಹತ್ತಿರದಲ್ಲಿ ಹರಿಯುವ ಮೋಡಗಳು, ತಂಪಾದ ಗಾಳಿ, ಮತ್ತು ಬೆಟ್ಟದ ತುದಿಯಲ್ಲಿ ಸಿಗುವ ಆತ್ಮೀಯ ಶಾಂತಿ- ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ಅನುಭವಿಸಬೇಕೆಂದರೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಬೆಟ್ಟ ನಿಮ್ಮ ಮುಂದಿರುವ ಅದ್ಭುತ ತಾಣ. ಇದು ಕೇವಲ ಒಂದು ಪ್ರವಾಸಿ ಸ್ಥಳವಲ್ಲ; ಇದು ಪ್ರಕೃತಿ, ಸಾಹಸ ಮತ್ತು ಭಕ್ತಿಯ ಸುಂದರ ಸಂಗಮವಾಗಿದೆ. ಚಾರಣಪ್ರಿಯರಿಗೆ ಇದು ಒಂದು ರೋಚಕ ಅನುಭವವಾಗಿದ್ದರೆ, ಭಕ್ತರಿಗೆ ಇದು ಪವಿತ್ರ ಕ್ಷೇತ್ರ, ಮತ್ತು ಪ್ರಕೃತಿ ಪ್ರಿಯರಿಗೆ ಇದು ಮನಸ್ಸಿಗೆ ಶಾಂತಿ ನೀಡುವ ಸ್ವರ್ಗೀಯ ಸ್ಥಳವಾಗಿದೆ. ಸ್ಥಳ ಮತ್ತು ಪ್ರಕೃತಿ ಸೌಂದರ್ಯ ಸಿಡಿಲು ಮಲ್ಲಿಕಾರ್ಜುನ ಬೆಟ್ಟವು ಮೈಸೂರಿನಿಂದ ಸುಮಾರು 70–80 ಕಿಲೋಮೀಟರ್ ದೂರದಲ್ಲಿದ್ದು, ಸುಮಾರು 1200–1300 ಅಡಿ ಎತ್ತರದಲ್ಲಿದೆ. ಈ ಬೆಟ್ಟದ ಸುತ್ತಲೂ ಹಸಿರು ಕಾಡು, ಕಲ್ಲಿನ ದಾರಿಗಳು ಮತ್ತು ಗ್ರಾಮೀಣ ಸೊಬಗು ತುಂಬಿಕೊಂಡಿದ್ದು, ವರ್ಷಪೂರ್ತಿ ತಂಪಾದ ವಾತಾವರಣವನ್ನು ಹೊಂದಿದೆ. ಮಳೆಗಾಲದಲ್ಲಿ ಈ ಪ್ರದೇಶ ಸಂಪೂರ್ಣ ಹಸಿರು ಹೊದಿಕೆಯಲ್ಲಿ ಕಂಗೊಳಿಸುತ್ತದೆ. ಚಳಿಗಾಲದಲ್ಲಿ ವಾತಾವರಣ ಚಾರಣಕ್ಕೆ ಅನುಕೂಲಕರವಾಗಿದ್ದು, ಬೇಸಿಗೆಯಲ್ಲಿ ಸ್ವಲ್ಪ ಬಿಸಿಲು ಹೆಚ್ಚಾಗಬಹುದು. ಆದರೂ, ಬೆಳಗಿನ ಸಮಯದಲ್ಲಿ ಭೇಟಿ ನೀಡಿದರೆ ಉತ್ತ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ