 |
| ಮುಜಾಹಿದ್ ಮತ್ತು ರೂಹ್ ಪರ್ವರ್ ಆಗಾ |
ಇತಿಹಾಸದ ಪುಟಗಳನ್ನು ತಿರುಗಿಸಿದಾಗ ಕೆಲ ಕಥೆಗಳು ದಿನಾಂಕಗಳನ್ನೂ ವಂಶಗಳನ್ನೂ ಮೀರಿಸಿ ನಮ್ಮ ಮನಸ್ಸಿನಲ್ಲಿ ಜೀವಂತವಾಗುತ್ತವೆ. ಮನುಷ್ಯನ ಪ್ರೀತಿ, ಕೋಪ, ದ್ವೇಷ ಮತ್ತು ಪ್ರತೀಕಾರ- ಇವುಗಳು ಸೇರಿ ಸಾಮ್ರಾಜ್ಯಗಳ ದಿಕ್ಕನ್ನೇ ಬದಲಿಸಿದ ಉದಾಹರಣೆಗಳು ಅಪಾರ. ಅಂತಹದೇ ಒಂದು ಮನಕಲಕುವ ಕಥೆ 14ನೇ ಶತಮಾನದ ದಕ್ಕನ್ ಪ್ರದೇಶದಲ್ಲಿ ಉದಯಿಸಿದ ಬಹಮನಿ ಸಾಮ್ರಾಜ್ಯದ ರಾಜಧಾನಿಯಾದ ಗುಲ್ಬರ್ಗಾ ಕೋಟೆಯ ದಪ್ಪ ಕಲ್ಲಿನ ಗೋಡೆಗಳೊಳಗೆ ಮೌನವಾಗಿ ಪ್ರತಿಧ್ವನಿಸುತ್ತದೆ.
ಬಹಮನಿ ಸಾಮ್ರಾಜ್ಯದ ಉದಯ
1347ರಲ್ಲಿ ದೆಹಲಿ ಸುಲ್ತಾನತ್ತಿನಿಂದ ಬೇರ್ಪಟ್ಟು ದಕ್ಕನ್ ಪೀಠಭೂಮಿಯಲ್ಲಿ ಸ್ವತಂತ್ರವಾಗಿ ಉದಯಿಸಿದ ಶಕ್ತಿಯೇ ಅಲಾಉದ್ದೀನ್ ಬಹಮನಿ ಶಾ ಸ್ಥಾಪಿಸಿದ ಬಹಮನಿ ಸುಲ್ತಾನತ್ತು. ಇದರ ಮೊದಲ ರಾಜಧಾನಿ ಗುಲ್ಬರ್ಗಾ (ಇಂದಿನ ಕಲಬುರಗಿ). ಸುಮಾರು 180 ವರ್ಷಗಳ ಕಾಲ 18 ಸುಲ್ತಾನರು ಇಲ್ಲಿ ಆಡಳಿತ ನಡೆಸಿದರು. ಕೋಟೆಯೊಳಗಿನ ಜಾಮಾ ಮಸೀದಿ ಧಾರ್ಮಿಕ ಕೇಂದ್ರವಾಗಿದ್ದು, ಆಡಳಿತ ಮತ್ತು ರಾಜಕೀಯದ ಪ್ರಮುಖ ತಾಣವಾಗಿತ್ತು.
 |
| ಕಲಬುರಗಿ ಕೋಟೆ |
ಆದರೆ ಈ ಕೋಟೆಯ ಭವ್ಯತೆಗೆ ಹಿಂದೆಯೊಂದು ಕಠೋರ ಸತ್ಯ ಮರೆತುಹೋಗಿತ್ತು. ಸಿಂಹಾಸನಕ್ಕಾಗಿ ನಡೆಯುತ್ತಿದ್ದ ಒಳಜಗಳಗಳು, ರಾಜಕೀಯ ಕುತಂತ್ರಗಳು, ಬಂಧುಗಳೇ ಶತ್ರುಗಳಾಗುತ್ತಿದ್ದ ಕ್ಷಣಗಳು- ಇವೆಲ್ಲಕ್ಕೂ ಗುಲ್ಬರ್ಗಾ ಕೋಟೆ ಮೌನ ಸಾಕ್ಷಿಯಾಯಿತು.
ಇದನ್ನೂ ಓದಿ: ಗುಲ್ಬರ್ಗಾ ಕೋಟೆ; 800 ವರ್ಷಗಳ ಇತಿಹಾಸ ಹೊತ್ತ ದಖ್ಖನ್ ಕೋಟೆ
ಮುಜಾಹಿದ್ ಶಾ ಮತ್ತು ಅವನ ಬಾಲ್ಯ
ಬಹಮನಿ ವಂಶದ ಎರಡನೇ ಸುಲ್ತಾನನಾದ ಮೊಹಮ್ಮದ್ ಶಾ I ಅವರಿಗೆ ಇಬ್ಬರು ಮಕ್ಕಳು- ಮುಜಾಹಿದ್ ಮತ್ತು ರೂಹ್ ಪರ್ವರ್ ಆಗಾ. ರಾಜಮನೆತನದಲ್ಲಿ ಹುಟ್ಟಿದರೂ, ಇಬ್ಬರೂ ಕಠಿಣ ಶಿಸ್ತಿನಲ್ಲಿ ಬೆಳೆದರು. ಮುಜಾಹಿದ್ ಧೈರ್ಯಶಾಲಿ, ಯುದ್ಧಪ್ರಿಯ ಯುವರಾಜನಾಗಿ ಬೆಳೆದರೆ, ರೂಹ್ ಪರ್ವರ್ ಬುದ್ಧಿವಂತಳಾಗಿ ಮತ್ತು ತಂತ್ರಜ್ಞಳಾಗಿ ಬೆಳೆಯುತ್ತಾಳೆ.
ಆ ಕಾಲದಲ್ಲಿ ಸಾಮಾನ್ಯವಾಗಿ ರಾಜಕುಮಾರಿಯರಿಗೆ ಯುದ್ಧ ತರಬೇತಿ ನೀಡಲಾಗುತ್ತಿರಲಿಲ್ಲ. ಆದರೆ ರೂಹ್ ಪರ್ವರ್ ಕತ್ತಿ ಹಿಡಿಯುವ ಕಲೆಯನ್ನೂ, ಆಡಳಿತದ ಸೂಕ್ಷ್ಮತೆಯನ್ನೂ ಕಲಿತುಕೊಂಡಳು. ಸಹೋದರ- ಸಹೋದರಿಯ ನಡುವೆ ಅಪರೂಪದ ಬಾಂಧವ್ಯ ಇತ್ತು. ಆದರೆ ಮುಜಾಹಿದ್‌ನ ಸ್ವಭಾವದಲ್ಲಿ ಅತಿಯಾದ ಕೋಪ ಮತ್ತು ತುರ್ತು ನಿರ್ಧಾರಗಳ ಗುಣವಿತ್ತು.
ಒಮ್ಮೆ ಅವನು ರಾಜಭಂಡಾರದ ಬೀಗ ಮುರಿದು ಬಂಗಾರದ ನಾಣ್ಯಗಳನ್ನು ಸ್ನೇಹಿತರ ಮೇಲೆ ಖರ್ಚು ಮಾಡಿದ. ವಿಷಯ ತಿಳಿದ ತಂದೆ ಕಠಿಣ ಶಿಕ್ಷೆ ನೀಡಿದರು. ಆದರೆ ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ಮಾಹಿತಿ ನೀಡಿದ ಸೇವಕ ಮುಬಾರಕ್ ಮೇಲೆ ದ್ವೇಷ ಬೆಳೆಸಿದ. ಕೆಲವು ವರ್ಷಗಳ ಬಳಿಕ ಕುಸ್ತಿ ಆಟದ ನೆಪದಲ್ಲಿ ಮುಬಾರಕ್‌ನನ್ನು ಕೊಂದ ಘಟನೆ, ಮುಬಾರಕ್ ಮಗ ಮಸೂದ್ ಹೃದಯದಲ್ಲಿ ಪ್ರತೀಕಾರದ ಬೀಜ ಬಿತ್ತಿತು.
 |
| ಆಭರಣ ಕದ್ದ ಮುಜಾಹಿದ್ ಗೆ ಶಿಕ್ಷೆ ನೀಡುತ್ತಿರುವ ಸುಲ್ತಾನ್ |
ಯುವ ಸುಲ್ತಾನದ ಆಡಳಿತ
ತಂದೆಯ ನಿಧನದ ಬಳಿಕ 19ನೇ ವಯಸ್ಸಿನಲ್ಲಿ ಮುಜಾಹಿದ್ ಶಾ ಬಹಮನಿ ಸಿಂಹಾಸನಕ್ಕೇರಿದ. ಅವನಿಗೆ ಯುದ್ಧವೇ ಜೀವನ. ವಿಜಯನಗರ ಸಾಮ್ರಾಜ್ಯದ ವಿರುದ್ಧದ ಯುದ್ಧವನ್ನು ಮುಂದುವರಿಸಿದ. ಆಡಳಿತದ ಜವಾಬ್ದಾರಿಯನ್ನು ಪ್ರಧಾನಮಂತ್ರಿ ಮಲಿಕ್ ಸೈಫುದ್ದೀನ್ ಗೋರಿಗೆ ಒಪ್ಪಿಸಿ, ಯುದ್ಧಭೂಮಿಗೆ ತೆರಳಿದ.
ಯುದ್ಧದಲ್ಲಿ ಜಯ ಸಾಧಿಸಿದರೂ, ಸೇನೆಗೆ ಭಾರೀ ನಷ್ಟವಾಯಿತು. ಈ ವೇಳೆ ಅವನ ಮಾವ ದಾವೂದ್ ಅನುಮತಿ ಇಲ್ಲದೆ ಯುದ್ಧಭೂಮಿಗೆ ಬಂದದ್ದು ಮುಜಾಹಿದ್ ಕೋಪಕ್ಕೆ ಕಾರಣವಾಯಿತು. ಎಲ್ಲರ ಮುಂದೆ ಅವಮಾನಗೊಂಡ ದಾವೂದ್ ಮನಸ್ಸಿನಲ್ಲಿ ದ್ವೇಷ ಬೆಳೆದಿತು. ಇದೇ ವೇಳೆ ಮುಬಾರಕ್ ಮಗ ಮಸೂದ್ ಜೊತೆ ಕೈಜೋಡಿಸಿ ಪ್ರತೀಕಾರದ ಯೋಜನೆ ರೂಪಿಸಿದರು.
 |
| ಮುಜಾಹಿದ್ ಮತ್ತು ರೂಹ್ ಪರ್ವರ್ ಆಗಾ |
ದ್ರೋಹದ ರಾತ್ರಿ
1378ರ ಏಪ್ರಿಲ್ 17ರಂದು ಕೃಷ್ಣಾ ನದಿತೀರದಲ್ಲಿ ಮೀನು ಹಿಡಿಯಲು ಹೋದ ಮುಜಾಹಿದ್, ದಿನವಿಡೀ ಸೂರ್ಯನ ತಾಪದಿಂದ ಮತ್ತು ದಣಿವಿನಿಂದ ಗುಡಾರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಅದೇ ರಾತ್ರಿ ದಾವೂದ್ ಮತ್ತು ಮಸೂದ್ ಗುಡಾರಕ್ಕೆ ನುಗ್ಗಿ ಕತ್ತಿಯಿಂದ ಅವನನ್ನು ಹತ್ಯೆ ಮಾಡಿದರು. ಯುದ್ಧಭೂಮಿಯಲ್ಲಿ ಅಲ್ಲ- ದ್ರೋಹದ ಮೂಲಕ ಬಹಮನಿ ಸಾಮ್ರಾಜ್ಯದ ಮೂರನೇ ಸುಲ್ತಾನ್ ಅಂತ್ಯ ಕಂಡ.
ದಾವೂದ್ ತಾನೇ ಸುಲ್ತಾನನೆಂದು ಘೋಷಿಸಿಕೊಂಡ. ಒಳಯುದ್ಧದ ಭೀತಿಯಿಂದ ಕೆಲ ಮಂತ್ರಿಗಳು ಮೌನವಾಗಿದ್ದರು. ಆದರೆ ಒಂದು ಹೃದಯ ಮಾತ್ರ ಮೌನವಾಗಿರಲಿಲ್ಲ.
ಮೊಹರಂ ತಿಂಗಳಲ್ಲಿ ದಾವೂದ್ ಜಾಮಾ ಮಸೀದಿಗೆ ಆಯುಧವಿಲ್ಲದೆ ಪ್ರಾರ್ಥನೆಗೆ ಬರುತ್ತಾನೆ ಎಂಬ ಮಾಹಿತಿ ಅವಳಿಗೆ ತಿಳಿದಿತ್ತು. 1378ರ ಮೇ 24ರಂದು, ಪ್ರಾರ್ಥನೆ ವೇಳೆ ಬಾಕಾ ಕತ್ತಿಯಿಂದ ದಾವೂದ್‌ನ್ನು ಕೊಂದ. ಅಧಿಕಾರ ಹಿಡಿದ ಕೇವಲ 35 ದಿನಗಳಲ್ಲಿ ದಾವೂದ್ ಶಾ ಅಂತ್ಯ ಕಂಡ. ಗುಲ್ಬರ್ಗಾ ಕೋಟೆಯ ಜಾಮಾ ಮಸೀದಿ ಮತ್ತೆ ಒಂದು ರಾಜಕೀಯ ತಿರುವಿಗೆ ಸಾಕ್ಷಿಯಾಯಿತು.
 |
| ದಾವೂದ್ ಶಾ ಹತ್ಯೆಗೆ ಸಂಚು |
ಅಧಿಕಾರದ ಕಠಿಣ ನಿರ್ಧಾರ
ದಾವೂದ್ ಬೆಂಬಲಿಗರು ಅವನ 9 ವರ್ಷದ ಮಗ ಮೊಹಮ್ಮದ್ ಸಂಜರ್‌ನ್ನು ಸಿಂಹಾಸನಕ್ಕೇರಿಸಲು ಮುಂದಾದರು. ಆದರೆ ರೂಹ್ ಪರ್ವರ್ ಆ ಅವಕಾಶವನ್ನು ನಿರಾಕರಿಸಿದಳು. ಆ ಬಾಲಕನ ಕಣ್ಣುಗಳನ್ನು ತೆಗೆಸಿದಳು- ಅವನು ಎಂದಿಗೂ ಸಿಂಹಾಸನದ ಕನಸು ಕಾಣದಂತೆ. ಇದು ಕ್ರೂರ ನಿರ್ಧಾರವಾಗಿದ್ದರೂ, ಅವಳ ದೃಷ್ಟಿಯಲ್ಲಿ ಸಾಮ್ರಾಜ್ಯದ ಸ್ಥಿರತೆಯೇ ಮುಖ್ಯ. ನಂತರ ಅವಳು ತನ್ನ ಮತ್ತೊಬ್ಬ ಚಿಕ್ಕಪ್ಪನಾದ ಮೊಹಮ್ಮದ್ ಶಾ II ಅವರನ್ನು ಸುಲ್ತಾನನಾಗಿ ಘೋಷಿಸಿದಳು. ಅವನ ಆಡಳಿತದಲ್ಲಿ ಸಾಮ್ರಾಜ್ಯಕ್ಕೆ ಶಾಂತಿ ಮರಳಿತು.
 |
| ಸುಲ್ತಾನ್ ಮೊಹಮ್ಮದ್ ಶಾ II |
ಮೌನ ಶಕ್ತಿ- ರೂಹ್ ಪರ್ವರ್ ಆಗಾ
ಇತಿಹಾಸದ ಪುಟಗಳು ಸಾಮಾನ್ಯವಾಗಿ ರಾಜರ ಹೆಸರುಗಳಿಂದ ತುಂಬಿರುತ್ತವೆ. ಆದರೆ ಕೆಲವೊಮ್ಮೆ ರಾಜನನ್ನು ನಡಿಸುವ ಶಕ್ತಿ ಪರದೆಯ ಹಿಂದೆ ಇರುತ್ತದೆ. ರೂಹ್ ಪರ್ವರ್ ಆಗಾ ಅಂತಹ ಮೌನ ಶಕ್ತಿ.
ಅವಳು ಸಿಂಹಾಸನಕ್ಕೇರಲಿಲ್ಲ. ಆದರೆ ಸಿಂಹಾಸನವನ್ನು ಯಾರು ಏರಬೇಕು ಎಂಬುದನ್ನು ನಿರ್ಧರಿಸಿದಳು. ರಾಜಕೀಯ ಸಮತೋಲನ ಕಾಪಾಡಿದಳು. ಒಳಜಗಳಗಳಿಂದ ಸಾಮ್ರಾಜ್ಯ ಕುಸಿಯದಂತೆ ನೋಡಿಕೊಂಡಳು.
ಬಹಮನಿ ಸಾಮ್ರಾಜ್ಯ ನಂತರ ಐದು ಸ್ವತಂತ್ರ ಸುಲ್ತಾನತೆಗಳಾಗಿ ವಿಭಜಿತವಾಯಿತು. ಕೋಟೆಗಳು ಅವಶೇಷಗಳಾದವು. ರಾಜರ ಹೆಸರುಗಳು ಮಸುಕಾದವು. ಆದರೆ ಗುಲ್ಬರ್ಗಾ ಕೋಟೆಯ ಗೋಡೆಗಳ ನಡುವೆ ನಿಂತು ಕಿವಿಗೊಟ್ಟರೆ, ಮುಜಾಹಿದ್ ಮತ್ತು ರೂಹ್ ಅವರ ಕಥೆ ಇನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತದೆ.
ಪ್ರೀತಿ ಕೋಪವಾಯಿತು. ದ್ರೋಹ ವಿಧಿಯಾಯಿತು. ಪ್ರತೀಕಾರ ಇತಿಹಾಸವಾಯಿತು. ಗುಲ್ಬರ್ಗಾ ಕೋಟೆಯ ಕಲ್ಲುಗಳು ಇಂದಿಗೂ ಒಂದು ಕಥೆ ಹೇಳುತ್ತವೆ- ಒಬ್ಬ ಸಹೋದರನ ದುರಂತ ಅಂತ್ಯ, ಒಬ್ಬ ಸಹೋದರಿಯ ಧೈರ್ಯಶಾಲಿ ನಿರ್ಧಾರ, ಮತ್ತು ಸಾಮ್ರಾಜ್ಯದ ದಿಕ್ಕೇ ಬದಲಿಸಿದ ಮೌನ ಶಕ್ತಿ. ಇತಿಹಾಸ ಪ್ರಿಯರಿಗೆ, ಗುಲ್ಬರ್ಗಾ ಕೋಟೆ ಕೇವಲ ಪ್ರವಾಸಿ ತಾಣವಲ್ಲ. ಅದು ಅಧಿಕಾರ, ನಿಷ್ಠೆ ಮತ್ತು ಪ್ರತೀಕಾರದ ಜೀವಂತ ಪಾಠ.