ಬಾರಾ ಕಮಾನ್– ಅಪೂರ್ಣವಾಗಿಯೇ ಉಳಿದ ವಿಶ್ವದ ಅದ್ಭುತದ ಕನಸು

ವಿಜಯಪುರ ಎಂದರೆ ತಕ್ಷಣ ನೆನಪಾಗುವುದು ವಿಶ್ವವಿಖ್ಯಾತ ಗೋಳ ಗುಮ್ಮಟ. ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟ ಹೊಂದಿರುವ ಈ ಸ್ಮಾರಕ ಆದಿಲ್ ಶಾಹಿ ಸುಲ್ತಾನರ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿದೆ.

ಆದರೆ ಗೋಳ ಗುಮ್ಮಟವನ್ನೇ ಮೀರಿಸುವ ಮಹತ್ವಾಕಾಂಕ್ಷೆಯ ಸ್ಮಾರಕವೊಂದು ವಿಜಯಪುರದಲ್ಲಿ ನಿರ್ಮಾಣವಾಗಿತ್ತು ಅಂದ್ರೆ?
ನಿಜಕ್ಕೂ ಅಂತದ್ದೊಂದು ಸ್ಮಾರಕ ಇದೆ. ಆದರೆ ಅದು ಅಪೂರ್ಣ.

ನಾವು ಹೇಳ್ತಾ ಇರೋದು ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಬಾರಾ ಕಮಾನ್ ಬಗ್ಗೆ. ಇದರ ವಿಶೇಷತೆ ಏನು? ಇದನ್ನು ಯಾರು ಕಟ್ಟಿಸಿದರು? ಯಾಕೆ ಇದು ಅಪೂರ್ಣವಾಗಿ ಉಳಿಯಿತು? ಈ ಸ್ಟೋರಿ ಇಲ್ಲಿದೆ.

ವಿಜಯಪುರದ ಬಾರಾ ಕಮಾನ್  ಕಲ್ಪಿತ ಚಿತ್ರ
ಪೂರ್ಣ ಬಾರಾ ಕಮಾನ್ (ಕಾಲ್ಪನಿಕ ಚಿತ್ರ)

ಬಾರಾ ಕಮಾನ್: ಹೆಸರು ಮತ್ತು ಕುತೂಹಲ

‘ಬಾರಾ ಕಮಾನ್’ ಎಂದರೆ 12 ಕಮಾನುಗಳು ಎಂದರ್ಥ. ಆದರೆ ಇಲ್ಲಿ ಅದಕ್ಕಿಂತ ಹೆಚ್ಚು ಕಮಾನುಗಳಿವೆ. ವಾಸ್ತವವಾಗಿ ಇದನ್ನು 12 ಅಂತಸ್ತುಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು ಎಂದು ಹೇಳಲಾಗುತ್ತದೆ. ಹಾಗಾಗಿ ಇದರ ನಿಜ ಹೆಸರು ‘ಬಾರಾ ಅಂತಸ್ತ್’ ಆಗಬೇಕಿತ್ತು. ಆದರೆ ಕಾಲಕ್ರಮೇಣ ಜನರ ಬಾಯಲ್ಲಿ ಇದು ಬಾರಾ ಕಮಾನ್ ಆಗಿ ಪ್ರಸಿದ್ಧವಾಯಿತು.

ಈ ಸ್ಮಾರಕವನ್ನು ನೋಡಿದ ತಕ್ಷಣವೇ ಇದು ಅಪೂರ್ಣ ಕಟ್ಟಡ ಅನ್ನೋದು ಸ್ಪಷ್ಟವಾಗುತ್ತದೆ. ಬಾರಾ ಕಮಾನ್ ಯಾಕೆ ಅಪೂರ್ಣವಾಗಿ ಉಳಿಯಿತು ಅನ್ನೋದಕ್ಕೆ ಇಂದಿಗೂ ಖಚಿತ ಉತ್ತರ ಸಿಕ್ಕಿಲ್ಲ. ಹೀಗಾಗಿ ಇದು ವಿಜಯಪುರದ ಜನಪದ ಸಂಸ್ಕೃತಿಯಲ್ಲಿ ಒಂದು ಮಾತಾಗಿ ಉಳಿದಿದೆ. ಇಂದಿಗೂ ಯಾರಾದರೂ ಕೆಲಸವನ್ನು ಅರ್ಧಕ್ಕೇ ಬಿಟ್ಟರೆ — “ಬಾರಾ ಕಮಾನ್ ಕಟ್ಟಿದ ಹಾಗೆ” ಎಂದು ಹೇಳುತ್ತಾರೆ.

ಇದನ್ನೂ ಓದಿ: ರಾಮಲಿಂಗ ಡ್ಯಾಮ್ – ವಿಜಯಪುರದ ಮರೆತುಹೋದ ನೀರಾವರಿ ಅದ್ಭುತ

ಅಲಿ ರೋಜಾ: ಸಮಾಧಿಯಾಗಬೇಕಿದ್ದ ಮಹಾಸ್ಮಾರಕ

ಬಾರಾ ಕಮಾನ್ ಅಸಲಿಗೆ ಬಿಜಾಪುರದ ಸುಲ್ತಾನ ಎರಡನೇ ಅಲಿ ಆದಿಲ್ ಷಾ ಅವರ ಸಮಾಧಿ. ಹೀಗಾಗಿ ಇದನ್ನು ಅಲಿ ರೋಜಾ ಎಂದೂ ಕರೆಯಲಾಗುತ್ತದೆ. ಆ ಕಾಲದಲ್ಲಿ ರಾಜಪರಿವಾರದವರು ತಮ್ಮ ಮರಣಕ್ಕೂ ಮುಂಚೆಯೇ ಸಮಾಧಿಗಳನ್ನು ನಿರ್ಮಿಸುವ ಪದ್ಧತಿ ಇತ್ತು.

ವಿಜಯಪುರದ ಬಾರಾ ಕಮಾನ್
ಅಲಿ ಆದಿಲ್ ಷಾ II ಸಮಾಧಿ

ಎರಡನೇ ಅಲಿ ಆದಿಲ್ ಷಾ ಅವರ ತಂದೆ ಮಹಮದ್ ಆದಿಲ್ ಷಾ — ವಿಶ್ವವಿಖ್ಯಾತ ಗೋಳ ಗುಮ್ಮಟವನ್ನು ಕಟ್ಟಿಸಿದ ಸುಲ್ತಾನ. ಸಹಜವಾಗಿಯೇ ಮಗನಾದ ಅಲಿ ಆದಿಲ್ ಷಾಗೆ, ತನ್ನ ತಂದೆಯ ಸ್ಮಾರಕವನ್ನು ಮೀರಿಸುವ ಭವ್ಯ ಸ್ಮಾರಕವನ್ನು ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ಇತ್ತು.

ಇರಾನ್‌ನಿಂದ ಕರೆಸಿಕೊಂಡಿದ್ದ ಪ್ರಸಿದ್ಧ ವಾಸ್ತುಶಿಲ್ಪಿ ಮಲಿಕ್ ಸಂದಲ್ ಅವರನ್ನ ಈ ಯೋಜನೆಗೂ ಬಳಸಲಾಯಿತು. ಗೋಳ ಗುಮ್ಮಟದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಬಾರಾ ಕಮಾನ್ ನಿರ್ಮಾಣ ಕಾರ್ಯ ಆರಂಭವಾಯಿತು.

ಗೋಳ ಗುಮ್ಮಟದ ನೆರಳು ಬೀಳಬೇಕಿತ್ತು!

ಐತಿಹ್ಯದ ಪ್ರಕಾರ, ಹೊಸ ಕಟ್ಟಡದ ನೆರಳು ಗೋಳ ಗುಮ್ಮಟದ ಮೇಲೆ ಬೀಳುವಷ್ಟು ಎತ್ತರವಾಗಿರಬೇಕು ಅನ್ನೋದು ಅಲಿ ಆದಿಲ್ ಷಾ ಅವರ ಕನಸು. ಗೋಳ ಗುಮ್ಮಟ ನಿರ್ಮಾಣಕ್ಕೆ 30 ವರ್ಷ ಬೇಕಾದರೆ, ಅದಕ್ಕಿಂತ ದೊಡ್ಡದಾದ ಈ ಕಟ್ಟಡಕ್ಕೆ ಎಷ್ಟು ಕಾಲ ಬೇಕಾಗುತ್ತಿತ್ತೋ ಊಹಿಸಬಹುದು.

ಇಷ್ಟು ಎತ್ತರದ ಕಟ್ಟಡಕ್ಕೆ ಭಾರೀ ತಳಪಾಯ ಅಗತ್ಯವಿತ್ತು.

  • ಬಾರಾ ಕಮಾನ್‌ನ ತಳಪಾಯವೇ ಸುಮಾರು 40 ಅಡಿ ಎತ್ತರ

  • ಗೋಳ ಗುಮ್ಮಟದ ಹೊರಗೋಡೆಯ ಸುತ್ತಳತೆ: 156 ಅಡಿ

  • ಬಾರಾ ಕಮಾನ್‌ನ ಸುತ್ತಳತೆ: 215 ಅಡಿ

ಚತುರ್ಭುಜ ಆಕಾರದ ಈ ಬೃಹತ್ ಕಟ್ಟಡಕ್ಕೆ ನೆಲಮಟ್ಟದಿಂದ 20 ಅಡಿ ಎತ್ತರದ ಜಗತಿ ಇದೆ. ಸಂಪೂರ್ಣವಾಗಿ ಬಸಾಲ್ಟ್ ಕಲ್ಲಿನಲ್ಲಿ ನಿರ್ಮಿಸಿರುವ ಈ ಸ್ಮಾರಕವನ್ನು ಗಾಥಿಕ್ ಶೈಲಿಯಲ್ಲಿ ಕಟ್ಟಲಾಗಿದೆ.
ಇದನ್ನೂ ಓದಿ: ವಿಜಯಪುರದ ಮತ್ತೊಂದು ಗೋಳಗುಮ್ಮಟ ಜಹಾನ್ ಬೇಗಮ್ ಸ್ಮಾರಕ

ಅಲಿ ಆದಿಲ್ ಷಾ ಮತ್ತು ಮಲಿಕ್ ಸಂದಲ್
ಅಲಿ ಆದಿಲ್ ಷಾ II ಮತ್ತು ಮಲಿಕ್ ಸಂದಲ್ (ಕಾಲ್ಪನಿಕ ಚಿತ್ರ)

ಯಾಕೆ ಅಪೂರ್ಣವಾಗಿ ಉಳಿಯಿತು?

ಬಾರಾ ಕಮಾನ್ ನಿರ್ಮಾಣ ಹಂತದಲ್ಲಿದ್ದಾಗಲೇ, ಕ್ರಿ.ಶ. 1672ರಲ್ಲಿ ಎರಡನೇ ಅಲಿ ಆದಿಲ್ ಷಾ ಮರಣ ಹೊಂದಿದರು. ಅವರ ಕನಸಿನ ಸ್ಮಾರಕ ಮೊದಲ ಅಂತಸ್ತಿನಲ್ಲೇ ಅಸ್ಥಿಪಂಜರದಂತೆ ನಿಂತುಬಿಟ್ಟಿತು.

ಅವರ ನಂತರ ಅಧಿಕಾರಕ್ಕೆ ಬಂದ ಸಿಕಂದರ್ ಆದಿಲ್ ಷಾಗೆ ರಾಜ್ಯವನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ ಇಂತಹ ಭಾರೀ ನಿರ್ಮಾಣ ಕಾರ್ಯ ಮುಂದುವರಿಸಲು ರಾಜಾಶ್ರಯ ಸಿಗಲಿಲ್ಲ.
1686ರಲ್ಲಿ ಮೊಘಲ್ ದೊರೆ ಔರಂಗಜೇಬ್ ಬಿಜಾಪುರವನ್ನು ಆಕ್ರಮಿಸಿದ ನಂತರ ಆದಿಲ್ ಶಾಹಿ ಸಾಮ್ರಾಜ್ಯ ಪತನವಾಯಿತು. ಇದರಿಂದ ಬಾರಾ ಕಮಾನ್ ಶಾಶ್ವತವಾಗಿ ಅಪೂರ್ಣವಾಗಿಯೇ ಉಳಿಯಿತು.

ದಂತಕತೆಗಳು: ಇತಿಹಾಸವೇ ಅಥವಾ ಕಲ್ಪನೆಯೇ?

ಬಾರಾ ಕಮಾನ್ ಸುತ್ತ ಅನೇಕ ದಂತಕತೆಗಳು ಹುಟ್ಟಿಕೊಂಡಿವೆ. ಒಂದು ಕಥೆಯ ಪ್ರಕಾರ, ಗೋಳ ಗುಮ್ಮಟದ ವೈಭವ ಮೀರಿಬಿಡುತ್ತದೆ ಎಂಬ ಭಯದಿಂದ ಮಹಮದ್ ಆದಿಲ್ ಷಾ ತನ್ನ ಮಗನಾದ ಅಲಿ ಆದಿಲ್ ಷಾನನ್ನು ಕೊಲೆ ಮಾಡಿಸಿದನಂತೆ. ಇನ್ನೊಂದು ಕಥೆಯ ಪ್ರಕಾರ, ಕಟ್ಟಡ ಬಹಳ ಎತ್ತರವಾಗುತ್ತಿರುವುದರಿಂದ ಅದು ಕುಸಿಯಬಹುದು ಎಂಬ ಆತಂಕದಿಂದ ಕಾಮಗಾರಿ ನಿಲ್ಲಿಸಲಾಯಿತು.

ಆದರೆ ಇವುಗಳಿಗೆ ದೃಢವಾದ ಐತಿಹಾಸಿಕ ಸಾಕ್ಷ್ಯಗಳಿಲ್ಲ. ದಾಖಲೆಗಳ ಪ್ರಕಾರ, ಮಹಮದ್ ಆದಿಲ್ ಷಾ 1656ರಲ್ಲಿ ಮರಣ ಹೊಂದಿದ್ದು, ಅದೇ ವರ್ಷ ಅಲಿ ಆದಿಲ್ ಷಾ ಪಟ್ಟಕ್ಕೆ ಬಂದರು. ಹೀಗಾಗಿ ತಂದೆಯಿಂದ ಮಗನ ಹತ್ಯೆ ಎಂಬ ಕಥೆ ಐತಿಹ್ಯ ಮಾತ್ರ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಅಪೂರ್ಣವಾದರೂ ಅದ್ಭುತ

ಬಾರಾ ಕಮಾನ್ ಮಧ್ಯಕಾಲೀನ ಡೆಕ್ಕನ್ ಇತಿಹಾಸದಲ್ಲಿ ಎತ್ತರದ ವಾಸ್ತುಶಿಲ್ಪದ ಧೈರ್ಯಶಾಲಿ ಪ್ರಯೋಗ. ಅದರ ಭಾರೀ ಕಂಬಗಳು, ಅರ್ಧಕ್ಕೇ ನಿಂತಿರುವ ಕಮಾನುಗಳು ಆದಿಲ್ ಶಾಹಿ ವಾಸ್ತುಶಿಲ್ಪಿಗಳ ತಾಂತ್ರಿಕ ಆತ್ಮವಿಶ್ವಾಸವನ್ನು ತೋರಿಸುತ್ತವೆ.

ಸ್ಮಾರಕದ ಮಧ್ಯಭಾಗದಲ್ಲಿ ಎರಡನೇ ಅಲಿ ಷಾ ಮತ್ತು ಅವರ ಕುಟುಂಬದ ಸಮಾಧಿಗಳ ಪ್ರತಿಕೃತಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿವೆ. ಕೆಲವು ಕಮಾನುಗಳ ತುದಿಯಲ್ಲಿ ಯಾವುದೇ ಆಧಾರವಿಲ್ಲದೆ ಆಯತಾಕಾರದ ಚಪ್ಪಡಿ ಕಲ್ಲುಗಳನ್ನು ಇಟ್ಟಿರುವುದು ಶಿಲ್ಪಿಗಳ ಸಾಹಸಕ್ಕೆ ಸಾಕ್ಷಿ.

ಈ ಸ್ಮಾರಕ ಪೂರ್ಣಗೊಂಡಿದ್ದರೆ, ಅದು ಖಂಡಿತವಾಗಿಯೂ ಗೋಳ ಗುಮ್ಮಟಕ್ಕೆ ಪ್ರತಿಸ್ಪರ್ಧಿಯಾಗುತ್ತಿತ್ತು ಮತ್ತು ಡೆಕ್ಕನ್‌ನ ಅತ್ಯಂತ ಎತ್ತರದ ಸಮಾಧಿಯಾಗಿರುತ್ತಿತ್ತು.

ಇದನ್ನೂ ಓದಿ: ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣ ಈ ದೈತ್ಯ ಫಿರಂಗಿ!

ಭೇಟಿ ಮಾಹಿತಿ

ಬಾರಾ ಕಮಾನ್ ವಿಜಯಪುರ ಬಸ್ ನಿಲ್ದಾಣದಿಂದ ಕೇವಲ 1 ಕಿ.ಮೀ ದೂರದಲ್ಲಿದೆ.

  • ಪ್ರವೇಶ ಶುಲ್ಕ: ಇಲ್ಲ (ಉಚಿತ)

  • ವೀಕ್ಷಣಾ ಸಮಯ: ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ

ನೀವು ವಿಜಯಪುರಕ್ಕೆ ಭೇಟಿ ನೀಡಿದರೆ, ಈ ಅಪೂರ್ಣ ಕನಸಿನ ಅದ್ಭುತ ಸ್ಮಾರಕವನ್ನು ನೋಡದೇ ಮರೆಯಬೇಡಿ.

ನವೀನ ಹಳೆಯದು