ಆಸಾರ್ ಮಹಲ್ – ಆದಿಲ್ ಶಾಹಿಗಳ ನ್ಯಾಯ ಮತ್ತು ಆಡಳಿತದ ಸಂಕೇತ

ವಿಜಯಪುರದ ಆಸಾರ್ ಮಹಲ್
ವಿಜಯಪುರದ ಆಸಾರ್ ಮಹಲ್
ವಿಜಯಪುರವನ್ನು ಸುಮಾರು 200 ವರ್ಷಗಳ ಕಾಲ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಆದಿಲ್ ಶಾಹಿ ಸುಲ್ತಾನರು ಕಲೆ, ಸಾಹಿತ್ಯ, ಸಂಗೀತ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಗೋಳ ಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್ ಸೇರಿದಂತೆ ನೂರಾರು ಭವ್ಯ ಸ್ಮಾರಕಗಳ ಜೊತೆಗೆ, ಕೆರೆ–ಕಟ್ಟೆ–ಬಾವಡಿ–ತಲಾಬ್‌ಗಳನ್ನು ನಿರ್ಮಿಸುವ ಮೂಲಕ ನೀರಾವರಿ ವ್ಯವಸ್ಥೆಯ ಮೇಲೂ ವಿಶೇಷ ಗಮನ ಹರಿಸಿದ್ದರು.

ಈ ಸಮೃದ್ಧ ಆಡಳಿತ ವ್ಯವಸ್ಥೆಗೆ ಜೀವಂತ ಸಾಕ್ಷಿಯಾಗಿ ನಿಂತಿರುವ ಪ್ರಮುಖ ಸ್ಮಾರಕವೇ ಆಸಾರ್ ಮಹಲ್.

ಆದಿಲ್ ಶಾಹಿಗಳ “ನ್ಯಾಯ ಸಭಾಂಗಣ”

ಆಸಾರ್ ಮಹಲ್ ಅನ್ನು ಕ್ರಿ.ಶ. 1646ರಲ್ಲಿ ಗೋಳ ಗುಮ್ಮಟವನ್ನು ನಿರ್ಮಿಸಿದ ಸುಲ್ತಾನ ಮೊಹಮ್ಮದ್ ಆದಿಲ್ ಷಾ ಕಟ್ಟಿಸಿದರು. ಈ ಕಟ್ಟಡವನ್ನು ಮೂಲತಃ ನ್ಯಾಯಸಭಾಂಗಣವಾಗಿ ಬಳಸಲಾಗುತ್ತಿತ್ತು. ಆ ಕಾಲದಲ್ಲಿ ಇದನ್ನು ದಿವಾನ್-ಎ-ಅದಲ್ ಎಂದು ಕರೆಯಲಾಗುತ್ತಿತ್ತು.

ಸ್ವತಃ ಸುಲ್ತಾನನೇ ಪಸಾರಿ ಕಮಾನ್ ಮೂಲಕ ಇಲ್ಲಿ ಆಗಮಿಸಿ ಸಾರ್ವಜನಿಕ ನ್ಯಾಯವಿಚಾರಣೆ ನಡೆಸುತ್ತಿದ್ದ. ಜನಸಾಮಾನ್ಯರು ತಮ್ಮ ದೂರು, ವಾದ ಮತ್ತು ದಾವೆಗಳನ್ನು ನೇರವಾಗಿ ಸುಲ್ತಾನನ ಮುಂದೆ ಮಂಡಿಸುವ ಅವಕಾಶವಿತ್ತು. ಈ ಅರ್ಥದಲ್ಲಿ ಆಸಾರ್ ಮಹಲ್ ಆ ಕಾಲದ ಒಂದು ರೀತಿಯ ಸುಪ್ರೀಂ ಕೋರ್ಟ್ ಎಂದೇ ಹೇಳಬಹುದು.

ಆಸಾರ್ ಮಹಲ್ ಕೇವಲ ನ್ಯಾಯಾಲಯ ಮಾತ್ರವಲ್ಲ; ಇದು ಒಂದು ರಾಜಕೀಯ ಸಭಾಂಗಣವೂ ಆಗಿತ್ತು. ಪ್ರಮುಖ ಒಪ್ಪಂದಗಳು, ಹಕ್ಕುಪತ್ರಗಳು ಹಾಗೂ ತೆರಿಗೆ ಸಂಬಂಧಿತ ಘೋಷಣೆಗಳು ಇಲ್ಲಿಯೇ ಪ್ರಕಟವಾಗುತ್ತಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ.
ಇದನ್ನೂ ಓದಿ: ಬಿಜಾಪುರ ಆದಿಲ್ ಶಾಹಿ ನೌಕಾಪಡೆ ಕಚೇರಿ ಜಹಾಜ್ ಮಹಲ್ ಈಗ ಹೇಗಿದೆ?

ವಿಜಯಪುರದ ಆಸಾರ್ ಮಹಲ್
ವಿಜಯಪುರದ ಆಸಾರ್ ಮಹಲ್

ಧಾರ್ಮಿಕ ಮಹತ್ವ ಪಡೆದ ಆಸಾರ್ ಮಹಲ್

ಕಟ್ಟಡ ನಿರ್ಮಾಣವಾದ ಕೆಲವು ವರ್ಷಗಳ ನಂತರ, ಮೆಕ್ಕಾದಿಂದ ತರಿಸಲಾದ ಪ್ರವಾದಿ ಮೊಹಮ್ಮದ್ ಅವರ ಪವಿತ್ರ ಗಡ್ಡದ ಕೂದಲುಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಯಿತು. ಇದರಿಂದ ಆಸಾರ್ ಮಹಲ್‌ಗೆ ಧಾರ್ಮಿಕ ಮಹತ್ವ ದೊರೆಯಿತು.

ಪರ್ಷಿಯನ್ ಭಾಷೆಯಲ್ಲಿ “ಆಸಾರ್” ಎಂದರೆ ಪವಿತ್ರ ಎಂಬ ಅರ್ಥ. ಪವಿತ್ರ ಅವಶೇಷಗಳನ್ನು ಇಲ್ಲಿ ಇರಿಸಿದ್ದರಿಂದ ಈ ಕಟ್ಟಡಕ್ಕೆ ಆಸಾರ್ ಮಹಲ್ ಎಂಬ ಹೆಸರು ಬಂತು.

ಭಾರತದಲ್ಲಿ ಪ್ರವಾದಿ ಮೊಹಮ್ಮದ್ ಅವರ ಪವಿತ್ರ ಕೇಶಗಳು ಇರುವುದು ಎರಡೇ ಸ್ಥಳಗಳಲ್ಲಿ ಎಂದು ನಂಬಲಾಗಿದೆ —
ಒಂದು ಕಾಶ್ಮೀರದಲ್ಲಿ, ಇನ್ನೊಂದು ವಿಜಯಪುರದ ಈ ಆಸಾರ್ ಮಹಲ್‌ನಲ್ಲಿ.

ಪ್ರತಿ ವರ್ಷ ಈದ್ ಮಿಲಾದ್ ದಿನ ಇಲ್ಲಿ ಸಂದಲ್ ಹಾಗೂ ಉರುಸ್ ನಡೆಯುತ್ತದೆ. ಆ ಸಂದರ್ಭದಲ್ಲಿ ಪವಿತ್ರ ಕೇಶಗಳನ್ನು ಇರಿಸಿದ ಪೆಟ್ಟಿಗೆಯ ದರ್ಶನಕ್ಕೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ: ಮುತ್ತು ರತ್ನಗಳ ಮಾರುಕಟ್ಟೆ: ವಿಜಯಪುರದ ಮರೆತುಹೋದ ‘ಮೋತಿ ಬಜಾರ್

ಕಟ್ಟಡದ ವಿನ್ಯಾಸ ಮತ್ತು ವಾಸ್ತುಶಿಲ್ಪ

ಆಸಾರ್ ಮಹಲ್ ಎರಡು ಅಂತಸ್ತಿನ ಭವ್ಯ ಕಟ್ಟಡ. ಮೇಲ್ಚಾವಣಿಗೆ ತೇಗದ ಮರದ ದಿಮ್ಮಿಗಳನ್ನು ಬಳಸಲಾಗಿದೆ. 1956ರಲ್ಲಿ ಮೇಲ್ಛಾವಣಿಯ ಒಂದು ಭಾಗ ಕುಸಿದುಬಿದ್ದಿದ್ದು, ಬಳಸಲಾಗಿದ್ದ ಮರದ ದಿಮ್ಮಿಗಳನ್ನು ಕಟ್ಟಡದ ಪಕ್ಕದಲ್ಲೇ ಸಂರಕ್ಷಿಸಲಾಗಿದೆ.

ಸಭಾಂಗಣದ ಮುಂಭಾಗದಲ್ಲಿರುವ ಮೂರು ಸುಂದರ ಕೊಳಗಳು ಈ ಕಟ್ಟಡದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮಧ್ಯದ ಕೊಳವು ಸುಮಾರು 10 ಅಡಿ ಆಳವಿದ್ದು, ಪಕ್ಕದ ಎರಡು ಕೊಳಗಳು ಸ್ವಲ್ಪ ಚಿಕ್ಕ ಗಾತ್ರದವು. ಆದಿಲ್ ಶಾಹಿಗಳ ಕಾಲದಲ್ಲಿ ಈ ಕೊಳಗಳಿಗೆ ಬೇಗಂ ತಲಾಬ್ನಿಂದ ನೀರು ಹರಿಸಲಾಗುತ್ತಿತ್ತು ಎಂಬ ನಂಬಿಕೆ ಇದೆ.

ಮೊಹಮ್ಮದ್ ಆದಿಲ್ ಷಾ
ಮಹಮದ್ ಆದಿಲ್ ಷಾ ವರ್ಣಚಿತ್ರ

ಒಳಾಂಗಣ ಮತ್ತು ಇತರೆ ಮಾಹಿತಿಗಳು

ಆಸಾರ್ ಮಹಲ್ ತನ್ನ ವಾಸ್ತುಶಿಲ್ಪದ ಸೌಂದರ್ಯದಿಂದಲೂ ಗಮನ ಸೆಳೆಯುತ್ತದೆ. ಇಲ್ಲಿನ ಅಲಂಕಾರಿಕ ಕಿಟಕಿಗಳು ನಯನಮನೋಹರವಾಗಿವೆ. ಮೇಲ್ಮಹಡಿಯಲ್ಲಿ ಆದಿಲ್ ಶಾಹಿ ಕಾಲದ ವರ್ಣಚಿತ್ರಗಳು, ಮೊಹಮ್ಮದ್ ಆದಿಲ್ ಷಾ ಬಳಸುತ್ತಿದ್ದ ಜಮಖಾನಗಳು ಹಾಗೂ ಕಸೂತಿ ಮಾಡಿದ ಬಟ್ಟೆಗಳನ್ನು ಸಂಗ್ರಹಿಸಿ ಇಡಲಾಗಿದೆ.

ಆಸಾರ್ ಮಹಲ್ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಮರಣದಂಡನೆಗೆ ಒಳಪಟ್ಟ ಕೈದಿಗಳನ್ನು ಗಲ್ಲಿಗೇರಿಸಲಾಗುತ್ತಿತ್ತು ಎಂಬ ಮಾಹಿತಿಯೂ ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಆಸಾರ್ ಮಹಲ್ ಕೇವಲ ಒಂದು ಸ್ಮಾರಕವಲ್ಲ. ಇದು ಆದಿಲ್ ಶಾಹಿ ಕಾಲದ ನ್ಯಾಯ, ಆಡಳಿತ, ಧಾರ್ಮಿಕ ನಂಬಿಕೆ ಮತ್ತು ವಾಸ್ತುಶಿಲ್ಪದ ಸಂಯೋಜನೆಯ ಜೀವಂತ ಸಾಕ್ಷಿ.

ನೀವು ವಿಜಯಪುರಕ್ಕೆ ಭೇಟಿ ನೀಡಿದರೆ, ಈ ಅಪರೂಪದ ಐತಿಹಾಸಿಕ ಸ್ಮಾರಕವನ್ನು ನೋಡದೇ ಮರೆಯಬೇಡಿ.

ನವೀನ ಹಳೆಯದು