![]() |
| ಆನೆಯನ್ನು ಪಳಗಿಸುತ್ತಿರುವುದು |
ಖೆಡ್ಡಾ ಎಂದರೇನು?
ಖೆಡ್ಡಾ ಎಂದರೆ ಕಾಡಾನೆಗಳನ್ನು ಸಮೂಹವಾಗಿ ಸೆರೆ ಹಿಡಿಯುವ ಪ್ರಾಚೀನ ವಿಧಾನ. ಇದು ಸಾದಾ ಬೇಟೆಗಾರಿಕೆಯ ವಿಧಾನವಲ್ಲ. ತಿಂಗಳ ಕಾಲದ ತಯಾರಿ, ನೂರಾರು ಸಿಬ್ಬಂದಿ, ಅನುಭವಿ ಬುಡಕಟ್ಟು ಜನರು ಮತ್ತು ಪಳಗಿದ ಆನೆಗಳ ಸಹಕಾರದಿಂದ ನಡೆಯುವ ಸಂಘಟಿತ ಕಾರ್ಯಾಚರಣೆ. ಮೈಸೂರು ಸಮೀಪದ ಕಾಕನಕೋಟೆ ಅರಣ್ಯ ಮತ್ತು ಚಾಮರಾಜನಗರ ಜಿಲ್ಲೆಯ ಬೂದಿ ಪದಗ ಪ್ರದೇಶಗಳು ಖೆಡ್ಡಾ ಕಾರ್ಯಾಚರಣೆಗೆ ಪ್ರಸಿದ್ಧವಾಗಿದ್ದವು.
![]() |
| ಕಬಿನಿ ಪ್ರದೇಶದಲ್ಲಿ ವಿಹರಿಸುತ್ತಿರುವ ಆನೆಗಳು |
ಮೈಸೂರು ಅರಸರ ವಿಶೇಷ ವಿಭಾಗ
ಖೆಡ್ಡಾ ಕಾರ್ಯಾಚರಣೆಗೆ ಕನಿಷ್ಠ ಮೂರು ತಿಂಗಳ ತಯಾರಿ ಅಗತ್ಯವಿತ್ತು. ಇದರ ಸಂಘಟನೆಗಾಗಿ ಮೈಸೂರು ಅರಸರು ಅರಣ್ಯ ಇಲಾಖೆಯಲ್ಲೇ ಪ್ರತ್ಯೇಕ 'ಖೆಡ್ಡಾ ವಿಭಾಗ'ವನ್ನೇ ಆರಂಭಿಸಿದ್ದರು.
ಈ ಕಾರ್ಯಾಚರಣೆಗೆ ಬ್ರಿಟಿಷ್ ಅಧಿಕಾರಿಗಳನ್ನು ಕೂಡ ನೇಮಿಸಲಾಗುತ್ತಿತ್ತು. 1890ರಲ್ಲಿ ಬ್ರಿಟಿಷ್ ಅಧಿಕಾರಿ ಜಾರ್ಜ್ ಪಿ. ಸ್ಯಾಂಡರ್‌ಸನ್ ಅವರನ್ನು ಕಾಕನಕೋಟೆ ಅರಣ್ಯದ ಖೆಡ್ಡಾ ಕಾರ್ಯಾಚರಣೆಗೆ ನಿಯುಕ್ತಿಗೊಳಿಸಲಾಯಿತು.
1890ರಿಂದ 1971ರವರೆಗೆ ನಡೆದ ವಿವಿಧ ಖೆಡ್ಡಾ ಕಾರ್ಯಾಚರಣೆಗಳಲ್ಲಿ ಒಟ್ಟು 1562 ಕಾಡಾನೆಗಳನ್ನು ಸೆರೆಹಿಡಿಯಲಾಗಿದೆ ಎಂಬ ದಾಖಲೆಗಳು ದೊರೆಯುತ್ತವೆ.
ಇದನ್ನೂ ಓದಿ: ಮೈಸೂರು ದಸರಾ ಗಜರಾಜರ ರೋಚಕ ಇತಿಹಾಸ
![]() |
| ಖೆಡ್ಡಾ ಕಾರ್ಯಾಚರಣೆ |
ಖೆಡ್ಡಾ ಕಾರ್ಯಾಚರಣೆ ಹೇಗೆ ನಡೆಯುತ್ತಿತ್ತು?
ಖೆಡ್ಡಾ ಅತ್ಯಂತ ರೋಮಾಂಚಕ ಪ್ರಕ್ರಿಯೆಯಾಗಿತ್ತು. ಆಗಿನ ಕಾಲದಲ್ಲಿ ಜನರಿಗೆ ಇದು ಒಂದು ಸಾರ್ವಜನಿಕ ಪ್ರದರ್ಶನದಂತೆಯೂ ಇತ್ತು. ಕಬಿನಿ ನದಿ ತೀರದಲ್ಲಿ ದೊಡ್ಡ ಆವರಣವನ್ನು ಸಜ್ಜುಗೊಳಿಸಲಾಗುತ್ತಿತ್ತು. ದಟ್ಟ ಕಾಡಿನಿಂದ ಆನೆಗಳನ್ನು ನಿಧಾನವಾಗಿ ಹೊರಕ್ಕೆ ಅಟ್ಟಿ, ಅವುಗಳನ್ನು ನದಿಪಕ್ಕದ ಖೆಡ್ಡಾ ಆವರಣದತ್ತ ಕರೆದೊಯ್ಯಲಾಗುತ್ತಿತ್ತು.
ಆವರಣವು ಬಲಿಷ್ಠ ಮರದ ದಿಮ್ಮಿಗಳಿಂದ ನಿರ್ಮಿಸಲಾದ ಬೋನುಗಳಿಂದ ಕೂಡಿರುತ್ತಿತ್ತು. ಸುತ್ತಲೂ ಆಳವಾದ ಕಂದಕವಿರುತ್ತಿತ್ತು. ಆನೆಗಳು ಒಳಗೆ ನುಗ್ಗಿದ ಕ್ಷಣವೇ ದಪ್ಪದ ಮರದ ಬಾಗಿಲುಗಳನ್ನು ಮುಚ್ಚಿ ಅವುಗಳನ್ನು ಸುರಕ್ಷಿತವಾಗಿ ಬಂಧಿಸಲಾಗುತ್ತಿತ್ತು.ತಮಟೆ ಸದ್ದು, ಸಿಬ್ಬಂದಿಯ ಕೂಗು, ಜನರ ಹಾಜರಿ- ಇವುಗಳ ಪರಿಣಾಮದಿಂದ ಆನೆಗಳು ಗಾಬರಿಗೊಂಡು ಆವರಣದೊಳಗೆ ಪ್ರವೇಶಿಸುತ್ತಿದ್ದವು.
![]() |
| ಖೆಡ್ಡಾ ಕಾರ್ಯಾಚರಣೆ |
ಸೆರೆ ಹಿಡಿದ ಬಳಿಕ ಏನು?
ಆನೆಗಳನ್ನು ತಕ್ಷಣ ಕೆಲಸಕ್ಕೆ ಬಳಸಲಾಗುತ್ತಿರಲಿಲ್ಲ. ಮೊದಲಿಗೆ ಅವುಗಳನ್ನು ಶಾಂತಗೊಳಿಸಲಾಗುತ್ತಿತ್ತು. ಕೆಲ ದಿನಗಳ ನಂತರ ದಪ್ಪ ಹಗ್ಗಗಳಿಂದ ಕಟ್ಟಿ, ಪಳಗಿದ ಆನೆಗಳ ನೆರವಿನಿಂದ ಕಾಡಿನ ಒಳಗೆ ಕರೆದೊಯ್ಯಲಾಗುತ್ತಿತ್ತು.
ಅನುಭವಿ ಸಿಬ್ಬಂದಿ ಮತ್ತು ಬುಡಕಟ್ಟು ಜನಾಂಗದವರ ನೆರವಿನಿಂದ ಆನೆಗಳನ್ನು ಕ್ರಮೇಣ ಮಾನವ ಸಂಪರ್ಕಕ್ಕೆ ಒಗ್ಗಿಸಲಾಗುತ್ತಿತ್ತು. ಸುಮಾರು ಆರುರಿಂದ ಎಂಟು ತಿಂಗಳುಗಳ ತರಬೇತಿಯ ಬಳಿಕ ಆನೆಗಳನ್ನು ವಿವಿಧ ಕೆಲಸಗಳಿಗೆ ನಿಯೋಜಿಸಲಾಗುತ್ತಿತ್ತು.
ಮರ ಎಳೆಯುವುದು, ಉತ್ಸವಗಳಲ್ಲಿ ಭಾಗವಹಿಸುವುದು, ಅರಣ್ಯ ಇಲಾಖೆಯ ಕಾರ್ಯಗಳು- ಇಂತಹ ವಿವಿಧ ಜವಾಬ್ದಾರಿಗಳಿಗೆ ಆನೆಗಳನ್ನು ಬಳಸಲಾಗುತ್ತಿತ್ತು.
![]() |
| ಆನೆಗಳಿಗೆ ಸ್ನಾನ ಮಾಡಿಸುತ್ತಿರುವ ಯುವಕರು |
ರಾಜಮರ್ಯಾದೆಯ ಖೆಡ್ಡಾ
ಖೆಡ್ಡಾ ಕೇವಲ ಅರಣ್ಯ ಕಾರ್ಯಾಚರಣೆಯಲ್ಲ. ಅದು ರಾಜಮರ್ಯಾದೆಯ ಕಾರ್ಯಕ್ರಮವಾಗಿಯೂ ಬೆಳೆದಿತ್ತು. 1906ರಲ್ಲಿ ಇಂಗ್ಲೆಂಡ್‌ನ ವೇಲ್ಸ್ ರಾಜಕುಮಾರ ಮೈಸೂರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶೇಷ ಖೆಡ್ಡಾ ಏರ್ಪಡಿಸಲಾಯಿತು. ಆ ಕಾರ್ಯಾಚರಣೆಯಲ್ಲಿ 87 ಆನೆಗಳನ್ನು ಸೆರೆಹಿಡಿದು ನಂತರ ಮತ್ತೆ ಕಾಡಿಗೆ ಬಿಡಲಾಗಿತ್ತು.
1948ರ ಡಿಸೆಂಬರ್‌ನಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಗೌರವಾರ್ಥವೂ ಕಾಕನಕೋಟೆಯಲ್ಲಿ ವಿಶೇಷ ಖೆಡ್ಡಾ ನಡೆಸಲಾಗಿತ್ತು. ಆಗ 35 ಆನೆಗಳನ್ನು ಸೆರೆ ಹಿಡಿಯಲಾಗಿತ್ತು.
ದಸರಾ ಮತ್ತು ಖೆಡ್ಡಾ
ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರಿಗೆ ಸಾವಿರಾರು ಜನರು ಆಗಮಿಸುತ್ತಿದ್ದರು. ದಸರಾ ಉತ್ಸವದ ಜೊತೆಗೆ ಖೆಡ್ಡಾ ಕಾರ್ಯಾಚರಣೆಯನ್ನೂ ಜನರಿಗೆ ನೋಡುವ ಅವಕಾಶ ಕಲ್ಪಿಸಲಾಗುತ್ತಿತ್ತು. ವಿದೇಶಿ ಪ್ರವಾಸಿಗರು ಸಹ ಖೆಡ್ಡಾ ವೀಕ್ಷಿಸಲು ವಿಶೇಷವಾಗಿ ಬರುತ್ತಿದ್ದರು. ಇದರಿಂದ ಮೈಸೂರು ರಾಜ್ಯದ ಖ್ಯಾತಿ ಜಗತ್ತಿನ ಮಟ್ಟಿಗೆ ಹರಡಿತು.
![]() |
| ಮೈಸೂರು ದಸರಾದಲ್ಲಿ ಪಾಲ್ಗೊಂಡ ಆನೆಗಳು |
ಖೆಡ್ಡಾ ಸಾಕ್ಷ್ಯಚಿತ್ರಗಳು
ಮೈಸೂರು ಮಹಾರಾಜರು ದಸರಾ ಕುರಿತ ಸಾಕ್ಷ್ಯಚಿತ್ರ ನಿರ್ಮಿಸಲು ಪ್ರತಿಭಾವಂತ ಸಿನಿಮಾ ತಂತ್ರಜ್ಞ ಮೋಹನ್ ಭವನಾನಿ ಅವರನ್ನು ಆಹ್ವಾನಿಸಿದ್ದರು. ಅವರು ಖೆಡ್ಡಾ ಕಾರ್ಯಾಚರಣೆಯನ್ನೂ ಚಿತ್ರಿಕರಿಸಿದ್ದರು.
ಅಮೆರಿಕದ ಕ್ಯಾಲಿಫೋರ್ನಿಯಾದ Oriental International Film ಸಂಸ್ಥೆಯೂ ಖೆಡ್ಡಾ ಕಾರ್ಯಾಚರಣೆಯನ್ನು ಚಿತ್ರೀಕರಿಸಿತ್ತು. ಈ ದೃಶ್ಯಚಿತ್ರಗಳ ಮೂಲಕ ಖೆಡ್ಡಾ ಜಗತ್ತಿನ ಗಮನ ಸೆಳೆಯಿತು.
![]() |
| ಮೋಹನ್ ಭವನಾನಿ |
ಖೆಡ್ಡಾ ಅಂತ್ಯವಾದದ್ದು ಏಕೆ?
1971ರವರೆಗೆ ಖೆಡ್ಡಾ ಕಾರ್ಯಾಚರಣೆ ಮುಂದುವರಿಯಿತು. ಆದರೆ ನಂತರ ಪರಿಸ್ಥಿತಿಗಳು ಬದಲಾಗತೊಡಗಿದವು. ಕಬಿನಿ ಜಲಾಶಯ ನಿರ್ಮಾಣವಾದ ಬಳಿಕ ಕಾರ್ಯಾಚರಣೆ ನಡೆಯುತ್ತಿದ್ದ ಕಾಕನಕೋಟೆ ಅರಣ್ಯದ ದೊಡ್ಡ ಭಾಗ ಮುಳುಗಡೆಯಾಯಿತು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಹೆಚ್ಚಾಯಿತು. ಕಾಡುಪ್ರಾಣಿಗಳ ಹಕ್ಕುಗಳ ಬಗ್ಗೆ ಚರ್ಚೆಗಳು ಪ್ರಾರಂಭವಾದವು.
ಇದರಿಂದ ಖೆಡ್ಡಾ ನಿಧಾನವಾಗಿ ನಿಲ್ಲಿಸಲಾಯಿತು. ಇಂದು ಕಾಡಾನೆಗಳನ್ನು ಹಿಡಿಯುವ ವಿಧಾನ ಸಂಪೂರ್ಣವಾಗಿ ಬದಲಾಗಿದೆ. ಅರಿವಳಿಕೆ ನೀಡಿ ಸ್ಥಳಾಂತರಿಸುವ ವಿಧಾನ ಹೆಚ್ಚು ಮಾನವೀಯ ಮತ್ತು ವೈಜ್ಞಾನಿಕವಾಗಿ ಪರಿಗಣಿಸಲಾಗಿದೆ.
ಇದನ್ನೂ ಓದಿ: ನಾಡಹಬ್ಬ ದಸರಾ ಹಂಪಿಯಿಂದ ಮೈಸೂರಿಗೆ ಬಂದಿದ್ದು ಹೇಗೆ ಗೊತ್ತಾ?
ವನ್ಯಚರಿತ್ರೆಯ ರೋಮಾಂಚಕ ಅಧ್ಯಾಯ
ಇಂದು 'ಆಪರೇಷನ್ ಖೆಡ್ಡಾ' ಕರ್ನಾಟಕದ ವನ್ಯಚರಿತ್ರೆಯಲ್ಲಿ ಒಂದು ಅದ್ದೂರಿ ಆದರೆ ವಿವಾದಾತ್ಮಕ ಅಧ್ಯಾಯವಾಗಿ ಉಳಿದಿದೆ. ಒಂದೆಡೆ ಅದು ಸಂಘಟಿತ ಅರಣ್ಯ ನಿರ್ವಹಣೆಯ ಉದಾಹರಣೆ. ಮತ್ತೊಂದೆಡೆ, ಅದು ಮಾನವ ಮತ್ತು ಕಾಡುಜೀವಿಗಳ ಸಂಬಂಧದ ಬದಲಾದ ದೃಷ್ಟಿಕೋಣವನ್ನು ನೆನಪಿಸುತ್ತದೆ.
ಇತಿಹಾಸದ ದೃಷ್ಟಿಯಿಂದ ನೋಡಿದರೆ, ಖೆಡ್ಡಾ ಮೈಸೂರು ರಾಜ್ಯದ ಆಡಳಿತ ಸಾಮರ್ಥ್ಯ, ಸಂಘಟನೆ ಮತ್ತು ಅರಣ್ಯ ನಿರ್ವಹಣೆಯ ಒಂದು ವಿಶಿಷ್ಟ ಮಾದರಿಯಾಗಿದೆ.
![]() |
| ಖೆಡ್ಡಾ ಕಾರ್ಯಾಚರಣೆ |







