ನಾಡ ಸಂಚಾರಿ- ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಮರೆತುಹೋದ ಕತೆಗಳನ್ನು ಸಂಶೋಧನಾತ್ಮಕವಾಗಿ ದಾಖಲಿಸುವ ಡಿಜಿಟಲ್ ವೇದಿಕೆ. ಇಲ್ಲಿ ಪ್ರಕಟವಾಗುವ ಲೇಖನಗಳು ವಿಶ್ವಾಸಾರ್ಹ ಇತಿಹಾಸ ಮೂಲಗಳು, ಪುರಾವೆಗಳು ಮತ್ತು ಅಧ್ಯಯನಗಳ ಆಧಾರದ ಮೇಲೆ ರಚಿಸಲಾಗುತ್ತದೆ.
ಮೈಸೂರು ದಸರಾ ಜಂಬೂ ಸವಾರಿ: ಅಂಬಾರಿ ಹೊತ್ತ ಆನೆಗಳ ಇತಿಹಾಸ
ಲಿಂಕ್ ಪಡೆಯಿರಿ
Facebook
X
Pinterest
ಇಮೇಲ್
ಇತರ ಅಪ್ಲಿಕೇಶನ್ಗಳು
ಮೈಸೂರು ದಸರಾ ಜಂಬೂ ಸವಾರಿಗೆ ತಯಾರಾದ ಆನೆಗಳು
ಮೈಸೂರು ದಸರಾ (Mysore Dasara) ಎಂದಾಕ್ಷಣ ನಮ್ಮ ಕಣ್ಣ ಮುಂದೆ ಮೂಡುವ ಅದ್ಭುತ ದೃಶ್ಯವೇ ಜಂಬೂ ಸವಾರಿ. ಆನೆಗಳಿಲ್ಲದ ಜಂಬೂ ಸವಾರಿಯನ್ನು ಊಹಿಸುವುದೇ ಅಸಾಧ್ಯ. ನಾಡಹಬ್ಬ ಸಮೀಪಿಸುತ್ತಿದ್ದಂತೆ ಅರಣ್ಯಗಳಲ್ಲಿ ವಾಸಿಸುವ ಗಜರಾಜರು ಒಂದೊಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರಯಾಣ ಆರಂಭಿಸುತ್ತವೆ.
ಸಾಮಾನ್ಯವಾಗಿ ಅವುಗಳನ್ನು ಸುರಕ್ಷಿತವಾಗಿ ಲಾರಿಗಳ ಮೂಲಕ ತರಲಾಗುತ್ತದೆ. ಈ ಪ್ರಯಾಣದಲ್ಲಿ ಆನೆಗಳ ಜೊತೆಗೆ ಅವರ ಮಾವುತರು ಮತ್ತು ಕುಟುಂಬದವರು ಸಹ ಬರುತ್ತಾರೆ. ಹೀಗೆ ಕಾಡಿನಿಂದ ನಾಡಿಗೆ ಬಂದ ಗಜಪಡೆಗೆ ಮೈಸೂರಿನಲ್ಲಿ ತಿಂಗಳ ಮಟ್ಟಿಗೆ ರಾಜಾತಿಥ್ಯ ಸಿಗುತ್ತದೆ.
ದಸರಾ ತಾಲೀಮಿಗೆ ಹೊರಡುತ್ತಿರುವ ಗಜಪಡೆ
ಈ ಅವಧಿಯಲ್ಲಿ ಆನೆಗಳಿಗೆ ವಿಶೇಷ ಆಹಾರ, ಆರೈಕೆ ಮತ್ತು ತರಬೇತಿ ನೀಡಲಾಗುತ್ತದೆ. ಜಂಬೂ ಸವಾರಿ ದಿನದಂದು ಸಾವಿರಾರು ಜನರ ಮುಂದೆ ರಾಜಮಾರ್ಗದಲ್ಲಿ ಗರ್ವದಿಂದ ಹೆಜ್ಜೆ ಹಾಕುವಂತೆ ಅವುಗಳನ್ನು ಸಿದ್ಧಪಡಿಸಲಾಗುತ್ತದೆ. ದಸರಾ ಇತಿಹಾಸದಲ್ಲಿ ನೂರಾರು ಆನೆಗಳು ಭಾಗವಹಿಸಿದ್ದರೂ, ಕೆಲವೇ ಆನೆಗಳಿಗೆ ಮಾತ್ರ ಚಿನ್ನದ ಅಂಬಾರಿ ಹೊರುವ ಅಪರೂಪದ ಗೌರವ ದೊರಕಿದೆ. ಈ ಗೌರವವು ಸಾಮಾನ್ಯವಲ್ಲ- ಅದು ಶಾಂತ ಸ್ವಭಾವ, ಶಕ್ತಿ, ತರಬೇತಿ ಮತ್ತು ವಿಶ್ವಾಸಕ್ಕೆ ಸಿಕ್ಕ ಪ್ರಶಸ್ತಿ.
ಚಿನ್ನದ ಅಂಬಾರಿ ಹೊತ್ತ ಮೊದಲ ಆನೆಯಾಗಿ ‘ಜಯಮಾರ್ತಾಂಡ’ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಆನೆ ಮುಮ್ಮಡಿ ಕೃಷ್ಣರಾಜ್ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆ ಸಿಕ್ಕಿತು. 1860ರ ಹೊತ್ತಿಗೆ ಮಹಾರಾಜರನ್ನು ಹೊತ್ತ ಅಂಬಾರಿ ಸಾಗಿಸಲು ಆರಂಭಿಸಿದ ಜಯಮಾರ್ತಾಂಡ ಸುಮಾರು 45 ವರ್ಷಗಳ ಕಾಲ ಈ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿತು. ಇದು ಒಂದು ಅಪರೂಪದ ದಾಖಲೆಯೇ ಸರಿ. ಮೈಸೂರಿನ ಅರಮನೆ ಮಹಾದ್ವಾರಕ್ಕೂ ಜಯಮಾರ್ತಾಂಡ ಎಂಬ ಹೆಸರಿಡಲಾಗಿದೆ ಎಂಬುದು ಈ ಆನೆಯ ಮಹತ್ವವನ್ನು ಹೇಳುತ್ತದೆ.
The Sword of Tipu Sultan ಧಾರಾವಾಹಿಯಲ್ಲಿ ದ್ರೋಣ
ಜಯಮಾರ್ತಾಂಡ ನಂತರ ಅನೇಕ ಆನೆಗಳು ಈ ಗೌರವವನ್ನು ಪಡೆದುಕೊಂಡಿವೆ. 1902ರಿಂದ ವಿಜಯಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಗಜೇಂದ್ರ, ಬಿಳಿಗಿರಿ, ದ್ರೋಣ, ಸುಂದರರಾಜ್ ಮತ್ತು ಐರಾವತ ಎಂಬ ಗಜರಾಜರು ಅಂಬಾರಿ ಹೊತ್ತಿದ್ದಾರೆ. ಇವರಲ್ಲಿ ಐರಾವತ ವಿಶೇಷವಾಗಿ ಗಮನಾರ್ಹ. 1937ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ The Elephant Boy ನಲ್ಲಿ ಈ ಆನೆ ಕಾಣಿಸಿಕೊಂಡಿದೆ. ಈ ಚಿತ್ರದಲ್ಲಿ ನಟಿಸಿದ ಸಾಬು ದಸ್ತಗೀರ್ ವಿಶ್ವದ ಗಮನ ಸೆಳೆದಿದ್ದರು.
ಗಂಧದ ಗುಡಿ ಚಿತ್ರದಲ್ಲಿ ಭಾಗವಹಿಸಿದ್ದ ರಾಜೇಂದ್ರ
ಇದರ ನಂತರ ಬಿಳಿಗಿರಿ ಎಂಬ ಆನೆಗೆ ಅಂಬಾರಿ ಹೊರುವ ಅವಕಾಶ ದೊರೆಯಿತು. ಬಿಳಿಗಿರಿ ಅತ್ಯಂತ ದೈತ್ಯಾಕಾರದ ಆನೆ—ಸುಮಾರು 10.5 ಅಡಿ ಎತ್ತರ ಮತ್ತು 7,000 ಕೆ.ಜಿ ತೂಕ ಹೊಂದಿತ್ತು. 1969ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಹೊತ್ತ ಕೊನೆಯ ಆನೆ ಎಂಬ ಹೆಗ್ಗಳಿಕೆ ಇದಕ್ಕೆ ಸಿಕ್ಕಿದೆ. ಆ ಬಳಿಕ ಅಂಬಾರಿಯಲ್ಲಿ ಮಹಾರಾಜರ ಬದಲು ನಾಡ ದೇವತೆಯನ್ನು ಕೂರಿಸುವ ಸಂಪ್ರದಾಯ ಆರಂಭವಾಯಿತು. ಇದು ದಸರಾ ಆಚರಣೆಯಲ್ಲಿ ಮಹತ್ವದ ಬದಲಾವಣೆಯಾಗಿ ಗುರುತಿಸಿಕೊಂಡಿತು.
ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ದಸರಾ
ಬಿಳಿಗಿರಿಯ ನಂತರ ‘ರಾಜೇಂದ್ರ’ ಎಂಬ ಆನೆ ಚಿನ್ನದ ಅಂಬಾರಿ ಹೊರುವ ಅವಕಾಶ ಪಡೆದುಕೊಂಡಿತು. ಈ ಆನೆ ಜನಪ್ರಿಯವಾಗಲು ಕಾರಣವೇನೆಂದರೆ, 1973ರಲ್ಲಿ ಬಿಡುಗಡೆಯಾದ ಕನ್ನಡದ ಅಮರ ಚಿತ್ರ ಗಂಧದ ಗುಡಿ. ಈ ಚಿತ್ರದಲ್ಲಿ ರಾಜಕುಮಾರ್ ಅವರು 'ನಾವಾಡುವ ನುಡಿಯೇ ಕನ್ನಡ ನುಡಿ' ಹಾಡನ್ನು ಇದೇ ಆನೆಯ ಮೇಲೆ ಕುಳಿತು ಹಾಡಿದ್ದಾರೆ. ಇದರಿಂದ ರಾಜೇಂದ್ರ ಜನಮನಗಳಲ್ಲಿ ಅಚ್ಚಳಿಯದ ಸ್ಥಾನ ಪಡೆದಿತು. ಇದು ಡಾ.ರಾಜ್‌ಕುಮಾರ್ ಅವರ ಅಚ್ಚುಮೆಚ್ಚಿನ ಆನೆಯಾಗಿಯೂ ಪ್ರಸಿದ್ಧ.
ರಾಜೇಂದ್ರ ನಂತರ ‘ದ್ರೋಣ’ ಎಂಬ ಶಾಂತ ಸ್ವಭಾವದ ಆನೆ ಅಂಬಾರಿ ಹೊರುವ ಜವಾಬ್ದಾರಿ ಪಡೆದಿತು. ದ್ರೋಣ ತನ್ನ ಶಾಂತತೆಯಿಂದಲೇ ಜನಪ್ರಿಯವಾಯಿತು. ಒಟ್ಟು 18 ವರ್ಷಗಳ ಕಾಲ ನಿರಂತರವಾಗಿ ಅಂಬಾರಿ ಹೊತ್ತ ದ್ರೋಣ ಸುಮಾರು 10.25 ಅಡಿ ಎತ್ತರ ಮತ್ತು 6,400 ಕೆ.ಜಿ ತೂಕ ಹೊಂದಿತ್ತು. ಇದು ದೂರದರ್ಶನದಲ್ಲಿ ಪ್ರಸಾರವಾದ The Sword of Tipu Sultan ಧಾರಾವಾಹಿಯಲ್ಲೂ ಕಾಣಿಸಿಕೊಂಡಿತ್ತು. ಆದರೆ 1998ರಲ್ಲಿ ವಿದ್ಯುತ್ ತಂತಿ ತಗುಲಿ ದ್ರೋಣ ಸಾವನ್ನಪ್ಪಿದ ಸುದ್ದಿ ನಾಡಿನ ಜನರಲ್ಲಿ ಅಪಾರ ದುಃಖ ಮೂಡಿಸಿತು.
ದ್ರೋಣ ನಂತರ ‘ಅರ್ಜುನ’ ಎಂಬ ಆನೆ ಒಮ್ಮೆ ಅಂಬಾರಿ ಹೊತ್ತಿತು. ಆದರೆ ಕೆಲವು ಅನಾಹುತ ಘಟನೆಗಳ ಕಾರಣದಿಂದ ಅದನ್ನು ಉತ್ಸವದಿಂದ ದೂರ ಮಾಡಲಾಯಿತು. ಬಳಿಕ ಶಾಂತ ಸ್ವಭಾವದ ‘ಬಲರಾಮ’ 1999ರಿಂದ 2011ರವರೆಗೆ ಅಂಬಾರಿ ಹೊತ್ತಿತು. ವಯಸ್ಸಾದ ಕಾರಣಕ್ಕೆ ಅದಕ್ಕೆ ನಿವೃತ್ತಿ ನೀಡಲಾಯಿತು.
ನಂತರ ಮತ್ತೆ ಅರ್ಜುನನನ್ನೇ ಆಯ್ಕೆ ಮಾಡಲಾಯಿತು. 2012ರಿಂದ 2019ರವರೆಗೆ ಯಶಸ್ವಿಯಾಗಿ ಅಂಬಾರಿ ಹೊತ್ತ ಅರ್ಜುನ, ತನ್ನ ಶಕ್ತಿ ಮತ್ತು ತರಬೇತಿಗಾಗಿ ಪ್ರಸಿದ್ಧಿ ಪಡೆದಿತ್ತು. ಆದರೆ 2023 ಡಿಸೆಂಬರ್ 4ರಂದು ಕಾಡಾನೆ ಸೆರೆ ಕಾರ್ಯಾಚರಣೆಯ ವೇಳೆ ಗಾಯಗೊಂಡು ಮೃತಪಟ್ಟದ್ದು ದಸರಾ ಇತಿಹಾಸದ ಮತ್ತೊಂದು ದುಃಖಕರ ಘಟನೆಯಾಗಿದೆ.
ಡುಮ್ಮ ಶ್ರೀಕಂಠನಿಗೆ ಸ್ನಾನ ಮಾಡಿಸುತ್ತಿರುವ ಮಾವುತ
ಪ್ರಸ್ತುತ ಕಾಲದಲ್ಲಿ ‘ಅಭಿಮನ್ಯು’ ಎಂಬ ಗಜರಾಜ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದಾನೆ. 2020ರಿಂದ ಆರಂಭವಾದ ಈ ಸೇವೆಯನ್ನು ಅಭಿಮನ್ಯು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾನೆ. ಸುಮಾರು 2.74 ಮೀಟರ್ ಎತ್ತರ ಮತ್ತು 5,000 ಕೆ.ಜಿ ತೂಕ ಹೊಂದಿರುವ ಈ ಆನೆ ತನ್ನ ಶಾಂತ ಸ್ವಭಾವ ಮತ್ತು ದೈಹಿಕ ಸಾಮರ್ಥ್ಯದಿಂದ ಎಲ್ಲರ ಮೆಚ್ಚುಗೆ ಪಡೆದಿದೆ. ಪ್ರತಿ ವರ್ಷವೂ ಮದುಮಗನಂತೆ ಅಲಂಕರಿಸಿಕೊಂಡು ರಾಜಬೀದಿಯಲ್ಲಿ ಅಂಬಾರಿ ಹೊತ್ತು ಸಾಗುವ ಅಭಿಮನ್ಯು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿದೆ.
ದಸರಾ ತಾಲೀಮು ಮುಗಿಸಿ ಅರಮನೆಗೆ ತೆರಳುತ್ತಿರುವ ಗಜಪಡೆ
ಮೈಸೂರು ದಸರಾ ಕೇವಲ ಹಬ್ಬವಲ್ಲ- ಅದು ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಗರ್ವದ ಸಂಕೇತ. ಈ ಹಬ್ಬದಲ್ಲಿ ಭಾಗವಹಿಸುವ ಪ್ರತಿಯೊಂದು ಆನೆಯೂ ಒಂದು ಜೀವಂತ ಇತಿಹಾಸ. ಅವುಗಳ ಸೇವೆ, ಶಿಸ್ತು ಮತ್ತು ಮಾನವ-ಪ್ರಾಣಿ ಸಂಬಂಧದ ಅದ್ಭುತ ಉದಾಹರಣೆ. ಜಂಬೂ ಸವಾರಿ ದಿನದಂದು ಲಕ್ಷಾಂತರ ಜನರ ನಡುವೆ ಸಾಗುವ ಈ ಗಜರಾಜರು ಕೇವಲ ಪ್ರಾಣಿಗಳಲ್ಲ, ನಾಡಿನ ಗೌರವವನ್ನು ಹೊತ್ತ ದೂತರಾಗಿದ್ದಾರೆ.
ಇಂದು ತಂತ್ರಜ್ಞಾನ ಮತ್ತು ಆಧುನಿಕತೆಯ ನಡುವೆಯೂ ಮೈಸೂರು ದಸರಾ ತನ್ನ ಪರಂಪರೆಯನ್ನು ಉಳಿಸಿಕೊಂಡಿರುವುದು ವಿಶೇಷ. ಪ್ರತಿ ಆನೆಯ ಹಿಂದೆ ಒಂದು ಕಥೆ ಇದೆ, ಒಂದು ಸಂಸ್ಕೃತಿ ಇದೆ, ಒಂದು ಭಾವನೆ ಇದೆ. ಈ ಕಥೆಗಳು ಮುಂದಿನ ತಲೆಮಾರಿಗೆ ತಲುಪಬೇಕು- ಅದೇ ನಮ್ಮ ಕರ್ತವ್ಯ. ಜಂಬೂ ಸವಾರಿ ಎಂದರೆ ಕೇವಲ ಮೆರವಣಿಗೆ ಅಲ್ಲ, ಅದು ನಾಡಿನ ಆತ್ಮದ ಪ್ರತಿಬಿಂಬ. ಮತ್ತು ಆ ಆತ್ಮವನ್ನು ಹೊತ್ತು ಸಾಗಿಸುವ ಗಜರಾಜರು- ನಮ್ಮ ನಿಜವಾದ ಹೀರೋಗಳು.
ವಿಜಯಪುರದ ಸಿದ್ದೇಶ್ವರ ದೇವಸ್ಥಾನ ವಿಜಯಪುರ- ಬಸವಾದಿ ಶರಣ ಪರಂಪರೆಗೆ ಜೀವ ತುಂಬಿದ ಪುಣ್ಯಭೂಮಿ. ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಇಲ್ಲಿ ನಡೆಯುವ ಸಿದ್ದೇಶ್ವರ ಜಾತ್ರೆ ಉತ್ತರ ಕರ್ನಾಟಕದ ಅತಿ ದೊಡ್ಡ ಧಾರ್ಮಿಕ- ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ. ನೂರಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಜಾತ್ರೆಗೆ 'ಜಾತ್ರೆಗಳ ಜಾತ್ರೆ', 'ಜಾತ್ರೆಗಳ ತೊಟ್ಟಿಲು' ಎಂಬ ಹೆಗ್ಗಳಿಕೆ ದೊರೆತಿದೆ. ಮಕರ ಸಂಕ್ರಾಂತಿ ಹತ್ತಿರವಾಗುತ್ತಿದ್ದಂತೆ ವಿಜಯಪುರ ನಗರವೇ ಒಂದು ವಿಭಿನ್ನ ಸಂಭ್ರಮಕ್ಕೆ ತಯಾರಾಗುತ್ತದೆ. ಮುಸ್ಸಂಜೆಯ ಹೊತ್ತಿನಲ್ಲಿ ಸಿದ್ದೇಶ್ವರ ಮಂದಿರ ದೀಪಾಲಂಕಾರದಿಂದ ಹೊಳೆಯುವ ಕ್ಷಣದಿಂದಲೇ ಜಾತ್ರೆಗೆ ಅಧಿಕೃತ ಚಾಲನೆ ಸಿಗುತ್ತದೆ. ಆ ದಿನದಿಂದ ನಗರ ನಿದ್ರೆ ಮರೆತು ಉತ್ಸವದಲ್ಲಿ ತೊಡಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಿಂದಲೂ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಾರೆ. ಸಿದ್ದರಾಮನ ದರ್ಶನ, ಸಂಕಷ್ಟ ನಿವಾರಣೆ ಮತ್ತು ಜಾತ್ರೆಯ ವೈಭವ ನೋಡುವ ಆಸೆ ಪ್ರತಿಯೊಬ್ಬರಲ್ಲೂ ಜೀವಂತವಾಗಿರುತ್ತದೆ. ಸಿದ್ದೇಶ್ವರ ಮಂದಿರದ ಸುತ್ತಮುತ್ತ ನೂರಾರು ಅಂಗಡಿಗಳ ಸಾಲು, ಸಿಹಿತಿನಿಸುಗಳ ಪರಿಮಳ, ಮಕ್ಕಳ ಆಟಿಕೆಗಳು, ಮನೋರಂಜನಾ ಆಟಗಳು, ಸಂಗೀತ ಹಾಗೂ ನಾಟಕ ಪ್ರದರ್ಶನಗಳು- ಇವೆಲ್ಲ ಜಾತ್ರೆಯ ಸಂಭ್ರಮವನ್ನು ಇನ್ನಷ್ಟು ರಂಗೇರಿಸುತ್ತವೆ. ಜಾತ್ರೆಯ ವ್ಯವಸ್ಥೆ ಮತ್ತು ದನಗಳ ಜಾತ್ರ...
ರೈಲ್ವೆ ಮ್ಯೂಸಿಯಂನಲ್ಲಿರುವ ಮೀಟರ್ ಗೇಜ್ ಎಂಜಿನ್ ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ... ಎಂಬ ಹಾಡು ಕೇಳುತ್ತಿದ್ದಂತೆಯೇ ನಮ್ಮ ಬಾಲ್ಯದ ನೆನಪುಗಳಲ್ಲಿ ಉಗಿಬಂಡಿಯ ಚಿತ್ರ ಮೂಡುತ್ತದೆ. ರೈಲು ಎನ್ನುವುದು ಕೇವಲ ಸಾರಿಗೆ ಸಾಧನವಲ್ಲ; ಅದು ಇತಿಹಾಸ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಭಾರತದಲ್ಲಿ ರೈಲ್ವೆಯ ಪಯಣ ಆರಂಭವಾದದ್ದು 1853ರ ಏಪ್ರಿಲ್ 16ರಂದು. ಮುಂಬೈ ಮತ್ತು ಥಾಣೆ ನಡುವೆ ಮೊದಲ ರೈಲು ಸಂಚಾರ ಆರಂಭವಾದಾಗಿನಿಂದಲೇ ಭಾರತೀಯ ರೈಲ್ವೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಸುಮಾರು 170 ವರ್ಷಗಳ ಇತಿಹಾಸವಿರುವ ಭಾರತೀಯ ರೈಲ್ವೆ ಇಂದು ಬುಲೆಟ್ ಟ್ರೈನ್, ವೇಗದ ರೈಲುಗಳು ಮತ್ತು ಆಧುನಿಕ ತಂತ್ರಜ್ಞಾನಗಳತ್ತ ಸಾಗುತ್ತಿದೆ. ಈ ದೀರ್ಘ ಇತಿಹಾಸವನ್ನು ಹತ್ತಿರದಿಂದ ತಿಳಿದುಕೊಳ್ಳಬೇಕೆಂದರೆ ನೀವು ಮೈಸೂರಿನಲ್ಲಿರುವ ರೈಲ್ವೆ ವಸ್ತುಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ನೀಡಬೇಕು. ಮ್ಯೂಸಿಯಂನಲ್ಲಿರುವ ಹಳೆಯ ರೈಲುಗಳು ದೇಶದ ಎರಡನೇ ರೈಲ್ವೆ ಮ್ಯೂಸಿಯಂ ಮೈಸೂರಿನ ರೈಲ್ವೆ ನಿಲ್ದಾಣದ ಸಮೀಪ, ಕೆಆರ್ಎಸ್ ರಸ್ತೆಯಲ್ಲಿರುವ ರೈಲ್ವೆ ಮ್ಯೂಸಿಯಂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಇದು ಭಾರತದ ಎರಡನೇ ರೈಲ್ವೆ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೊದಲನೆಯದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರೈಲ್ವೆ ಮ್ಯೂಸಿಯಂ. 1979ರಲ್ಲಿ ದಕ್ಷಿಣ ರೈಲ್ವೆಯ ವಿಭಾಗೀಯ ಮ್ಯಾನೇಜರ್ ಆಗಿದ್ದ ಪಿ.ಎಂ.ಜೋಸೆಫ್ ಅ...
ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ವಿಹಂಗಮ ನೋಟ ಸುತ್ತಲೂ ಹಸಿರು ಹೊದಿಕೆಯಂತೆ ಹರಡಿಕೊಂಡಿರುವ ಪ್ರಕೃತಿ, ಕೈಗೆ ತಾಕುವಷ್ಟು ಹತ್ತಿರದಲ್ಲಿ ಹರಿಯುವ ಮೋಡಗಳು, ತಂಪಾದ ಗಾಳಿ, ಮತ್ತು ಬೆಟ್ಟದ ತುದಿಯಲ್ಲಿ ಸಿಗುವ ಆತ್ಮೀಯ ಶಾಂತಿ- ಇವೆಲ್ಲವನ್ನೂ ಒಂದೇ ಸ್ಥಳದಲ್ಲಿ ಅನುಭವಿಸಬೇಕೆಂದರೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಬೆಟ್ಟ ನಿಮ್ಮ ಮುಂದಿರುವ ಅದ್ಭುತ ತಾಣ. ಇದು ಕೇವಲ ಒಂದು ಪ್ರವಾಸಿ ಸ್ಥಳವಲ್ಲ; ಇದು ಪ್ರಕೃತಿ, ಸಾಹಸ ಮತ್ತು ಭಕ್ತಿಯ ಸುಂದರ ಸಂಗಮವಾಗಿದೆ. ಚಾರಣಪ್ರಿಯರಿಗೆ ಇದು ಒಂದು ರೋಚಕ ಅನುಭವವಾಗಿದ್ದರೆ, ಭಕ್ತರಿಗೆ ಇದು ಪವಿತ್ರ ಕ್ಷೇತ್ರ, ಮತ್ತು ಪ್ರಕೃತಿ ಪ್ರಿಯರಿಗೆ ಇದು ಮನಸ್ಸಿಗೆ ಶಾಂತಿ ನೀಡುವ ಸ್ವರ್ಗೀಯ ಸ್ಥಳವಾಗಿದೆ. ಸ್ಥಳ ಮತ್ತು ಪ್ರಕೃತಿ ಸೌಂದರ್ಯ ಸಿಡಿಲು ಮಲ್ಲಿಕಾರ್ಜುನ ಬೆಟ್ಟವು ಮೈಸೂರಿನಿಂದ ಸುಮಾರು 70–80 ಕಿಲೋಮೀಟರ್ ದೂರದಲ್ಲಿದ್ದು, ಸುಮಾರು 1200–1300 ಅಡಿ ಎತ್ತರದಲ್ಲಿದೆ. ಈ ಬೆಟ್ಟದ ಸುತ್ತಲೂ ಹಸಿರು ಕಾಡು, ಕಲ್ಲಿನ ದಾರಿಗಳು ಮತ್ತು ಗ್ರಾಮೀಣ ಸೊಬಗು ತುಂಬಿಕೊಂಡಿದ್ದು, ವರ್ಷಪೂರ್ತಿ ತಂಪಾದ ವಾತಾವರಣವನ್ನು ಹೊಂದಿದೆ. ಮಳೆಗಾಲದಲ್ಲಿ ಈ ಪ್ರದೇಶ ಸಂಪೂರ್ಣ ಹಸಿರು ಹೊದಿಕೆಯಲ್ಲಿ ಕಂಗೊಳಿಸುತ್ತದೆ. ಚಳಿಗಾಲದಲ್ಲಿ ವಾತಾವರಣ ಚಾರಣಕ್ಕೆ ಅನುಕೂಲಕರವಾಗಿದ್ದು, ಬೇಸಿಗೆಯಲ್ಲಿ ಸ್ವಲ್ಪ ಬಿಸಿಲು ಹೆಚ್ಚಾಗಬಹುದು. ಆದರೂ, ಬೆಳಗಿನ ಸಮಯದಲ್ಲಿ ಭೇಟಿ ನೀಡಿದರೆ ಉತ್ತ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ